ಅಜ್ಜಿಯ ವೇಷ


 

ಉಡಿಸಮ್ಮಾ ಅಜ್ಜಿಯ ಜರಿಸೀರೆ!
ತೊಡಿಸಮ್ಮಾ  ಕನ್ನಡಕ!
ನಾನೂ ಹಾಕುವೆ ಅಜ್ಜಿಯ ವೇಷ
ಧ್ವನಿಯಲಿ ನಟಿಸುತ ನಡುಕ!

ಟವೆಲ್ ಸುತ್ತಿದರೂ ಪರವಾಗಿಲ್ಲ,
ಸೀರೆಯು ತುಂಬಾ ಉದ್ದ!
ಓಡಾಡಲು ತೊಂದರೆ ಆಗುವುದು
ಬಿದ್ದರೆ ಅಯ್ಯೋ ಸದ್ಯ!

ಮೂಗಿನ ಮೇಲೆ ಜಾರುವುದಮ್ಮಾ
ಅಜ್ಜಿಯ ಹಳೇ ಚಷ್ಮಾ!
ಮೇಲೇರಿಸಿ ದುರುಗುಟ್ಟುವೆ ನೋಡು,
ಮುಂದಿದ್ಧವರು ಭಸ್ಮ!

ಅಬ್ಬಾ ಏನು ಸೆಖೆ, ಸಾಕಾಯ್ತು,
ನಿಂಬೆಯ ಪಾನಕ ಮಾಡೇ!
ಬರುತಿದೆಯಲ್ಲೇ ಸುಟ್ಟ ವಾಸನೆ,
ಹಾಲು ಉಕ್ಕಿತೋ ನೋಡೇ!

ಮೂರು ಹೊತ್ತೂ ಈ ಹಾಳು ಮೊಬೈಲು
ಎಲ್ಲಾ ಕೆಲಸ ಹಾಳು!
ಕುಕ್ಕರ್ ಕೂಗಾಯಿತು ಮೂರು ಸಲ
ಒಲೆ ಆರಿಸು ಮೇಲೇಳು!

ಮೊಮ್ಮಗಳಿಗೆ ಮಲ್ಲಿಗೆಜಡೆ ಹಾಕಿ
ನೋಡುವ ಆಸೆ ಇತ್ತು!
ಯಾರು ಕೇಳುವರು ನಾ ಹೇಳಿದ್ದು
ಮಾಡಿಕೊಂಡೆ ಬಾಬ್ ಕಟ್ಟು!

ಉಡಿಸಮ್ಮಾ ಅಜ್ಜಿಯ ಜರಿಸೀರೆ!
ತೊಡಿಸಮ್ಮಾ  ಕನ್ನಡಕ!
ನಾನೂ ಹಾಕುವೆ ಅಜ್ಜಿಯ ವೇಷ
ಧ್ವನಿಯಲಿ ನಟಿಸುತ ನಡುಕ!

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)