ತನು ನಿನ್ನದು ಜೀವನ ನಿನ್ನದು - ಎರಡು ರಚನೆಗಳು

"ತನುವು ನಿನ್ನದು ಮನವು ನಿನ್ನದು" ಎಂಬುದು ಕುವೆಂಪು ಅವರ ಕವಿತೆ. ಇದನ್ನು ಅನೇಕ ಗಾಯಕರು ಹಾಡಿದ್ದಾರೆ. ತನು ನಿನ್ನದು ಜೀವನ ನಿನ್ನದೋ ರಂಗ ಎಂಬುದು ಕನಕದಾಸರ ರಚನೆ. ಇದನ್ನೂ ಅನೇಕ ಗಾಯಕರು ಹಾಡಿದ್ದಾರೆ.

ವಿಕಿಸೋರ್ಸ್ ಸಂಗ್ರಹದಲ್ಲಿ ಕುವೆಂಪು ಅವರ ಕವಿತೆ ಸಿಕ್ಕಿತು. ಪಾಠದಲ್ಲಿ ಒಂದೂ ತಪ್ಪಿಲ್ಲದೆ ಸಂಗ್ರಹಿಸಿಟ್ಟ ಕನ್ನಡ ಬರಹಗಳು ಅಪರೂಪ. ಕನಕದಾಸರ ಕೃತಿಯನ್ನೂ ಯಾರೋ ಸಂಗ್ರಹಿಸಿದ್ದಾರೆ. ಇದನ್ನು ಟೈಪ್ ಮಾಡುವಾಗ ಸ್ವಲ್ಪ ಜಾಗರೂಕತೆ ವಹಿಸಬೇಕಾಗಿತ್ತು. ದ್ವಿತೀಯಾಕ್ಷರ ಪ್ರಾಸ ಸರಿಯಾಗಿ ಹೊಂದುವಂತೆ ಸಾಲುಗಳನ್ನು ಮುರಿಯಬೇಕಾಗಿತ್ತು. 

ಪಂಚೇಂದ್ರಿಯಗಳ ಮೂಲಕವೇ ನಮಗೆ ಜೀವನಾನುಭವ ದೊರಕುವುದು. ಐದು ಇಂದ್ರಿಯಗಳ ಜೊತೆಗೆ ಮನಸ್ಸು ಎಂಬ ಆರನೇ ಇಂದ್ರಿಯವೂ ಇದೆ. ಅದು ನಮಗೆ ಬಾಹ್ಯದಲ್ಲಿ ತೋರುವುದಕ್ಕೂ ಮೀರಿ ಏನನ್ನೋ ತೋರಿಸುತ್ತದೆ.  ನಮ್ಮ ಇಂದ್ರಿಯಾನುಭವಗಳೆಲ್ಲ ದೈವವು ನಮಗೆ ನೀಡಿದ ಉಡುಗೊರೆ ಎಂಬ ಅನುಭೂತಿ ಕೂಡಾ ಇಂಥದ್ದೇ. ಕಾಯಜಪಿತ ಎಂದು ತಮ್ಮ ದೈವ ಕಾಗಿನೆಲೆ ಆದಿಕೇಶವನನ್ನು ಕನಕದಾಸರು ಸಂಬೋಧಿಸುತ್ತಿರುವುದು ಯಾಕೆ? ನಮ್ಮ ಪೂಜಾವಿಧಾನಗಳ ಬಗ್ಗೆ ಅವರು ಹೇಳುತ್ತಿರಬಹುದು. ದೇವರಿಗೆ ಬಣ್ಣಬಣ್ಣದ ಹೂವು, ಘಮಘಮಿಸುವ ಗಂಧ, ರುಚಿಯಾದ ಹಣ್ಣು ಪಕ್ವಾನ್ನಗಳ ನೈವೇದ್ಯ, ಘಂಟಾನಾದ/ಮಂತ್ರಘೋಷ  ಇವೆಲ್ಲ ಅರ್ಪಿಸಿ ಧನ್ಯತೆಯ ಭಾವ ಪಡೆಯುವ ಕಾರಣದಿಂದ ಅವರಿಗೆ ದೇವರು ಕಾಯಜಪಿತ ಎನ್ನಿಸುತ್ತಿರಬಹುದು. ನಮ್ಮ ಆರನೇ ಇಂದ್ರಿಯದಿಂದಲೂ ದೇವರನ್ನು ಜಪಿಸುವುದು ಸಾಧ್ಯ ಎಂಬುದನ್ನು ಅವರು ಸೂಕ್ಷ್ಮವಾಗಿ ಸೂಚಿಸುತ್ತಿರಬಹುದು.  ಬಸವಣ್ಣನವರು "ಅತ್ತ ಇತ್ತ ಹೋಗದಂತೆನ್ನ ಹೆಳವನನು ಮಾಡಯ್ಯ ತಂದೆ, ..." ಎಂಬ ವಚನದಲ್ಲಿ ನಮ್ಮ ಜೀವನಾನುಭವದ ಇನ್ಪುಟ್ ಔಟ್ ಪುಟ್ ಸಾಧನಗಳನ್ನೇ ದೇವರಿಗೆ ಮರಳಿಸಿ ಬಿಡುವ ಯೋಚನೆ ಮಾಡುತ್ತಾರೆ.

ಕುವೆಂಪು ಅವರು ಇವನ್ನೆಲ್ಲ ಓದಿದವರು. ಅವರ ಕವಿತೆ ಹೇಗೆ ವಿಭಿನ್ನ? 

ಜೀವನಧನ ಎಂಬ ಪ್ರಯೋಗ ನೋಡಿ. ಧನ ಎಂದರೆ ಪಾಸಿಟಿವ್ ಎಂಬ ಅರ್ಥವಿದೆ. ನಮ್ಮ ಜೀವನ ನಮಗೆ ದೇವರು ಕೊಟ್ಟ ಧನಾತ್ಮಕ ಉಡುಗೊರೆ. ಇಲ್ಲಿ ಧನ ಎಂದರೆ ಚಿನ್ನ, ಹಣ ಅವೆಲ್ಲ ಅಲ್ಲ. "ನಾನು ನಿನ್ನವನೆಂಬ ಹೆಮ್ಮೆಯ ಋಣ" ಎಂಬ ಮಾತು ನೋಡಿ. ಋಣ ಎಂದರೆ ಇಲ್ಲಿ ನೆಗೆಟಿವ್ ಎಂಬ ಅರ್ಥ.  ಕೇವಲ ಬಾಹ್ಯ ಇಂದ್ರಿಯಗಳ ಮೂಲಕ ದೇವರನ್ನು ಅನುಭವಿಸುವ ನಮಗೆ ಈ ಹೆಮ್ಮೆ ಬರಲು ಸಾಧ್ಯ.  ಧರ್ಮದ ಜಗಳಗಳಿಗೂ ಇದೇ ಋಣ ಕಾರಣ. ನಾನು ಅನುಭವಿಸುವ ದೇವರೇ ನಿಜವಾದ ದೇವರು ಎಂದು ಹೋರಾಡುವ ಮನುಷ್ಯನ ಮೂರ್ಖತನವನ್ನು ಕವಿ ಋಣ ಎನ್ನುತ್ತಿದ್ದಾರೆ.  

ನೀನು ಹೊಳೆದರೆ ನಾನು ಹೊಳೆವೆನು ಎಂಬಲ್ಲಿ ಕುವೆಂಪು ಹೊಳೆ ಎಂಬ ಪದವನ್ನು ದ್ವಂದ್ವಾರ್ಥದಲ್ಲಿ  ಬಳಸುತ್ತಿದ್ದಾರೆ. ದೇವರು ಯಾರು ಎಂಬುದು ಹೊಳೆದಾಗ (realization) ಮನುಷ್ಯ ಹೊಳೆಯುತ್ತಾನೆ ((ಪ್ರ)ಬುದ್ಧನಾಗುತ್ತಾನೆ).  ತನ್ನಲ್ಲಿ ದೈವವನ್ನು ಬೆಳೆಸಿಕೊಂಡಾಗ ಮನುಷ್ಯ ಬೆಳೆಯುತ್ತಾನೆ. 

ಕವಿತೆಯ ಉಳಿದ ಸಾಲುಗಳಲ್ಲಿ  ವ್ಯಕ್ತವಾದ ಭಾವವು ಬಹುಮಟ್ಟಿಗೆ ಕನಕದಾಸರ ಕೃತಿಯಲ್ಲಿ ವ್ಯಕ್ತವಾದ  ಭಾವನೆಯೇ ಎನ್ನಬಹುದು. ನಮ್ಮ ಮನಸ್ಸಿನಲ್ಲಿ ಹೊಳೆಯುವ ಯುಕ್ತಿಗಳು, ನಮ್ಮಲ್ಲಿ ಹುಟ್ಟುವ ಭಕ್ತಿ ಭಾವನೆ, ನಮ್ಮನ್ನು ಲೋಕಕ್ಕೆ ಬಂಧಿಸುವ ಮೋಹದ ಶಕ್ತಿ ಮತ್ತು ನಮ್ಮನ್ನು ಲೋಕದಿಂದ ಬಿಡಿಸುವ ಶಕ್ತಿ ಎಲ್ಲವೂ ದೇವರೇ ಎಂಬ ಭಾವನೆಯನ್ನು ಇಲ್ಲಿ ಕಾಣಬಹುದು. ಯುಕ್ತಿ ಭಕ್ತಿ ಶಕ್ತಿ ಮುಕ್ತಿ ಎಂಬ ಪದಗಳ ಸುಂದರ ಬಳಕೆಯನ್ನು ಗಮನಿಸಿ.

ಹಿಂದೆ ವ್ಯಕ್ತವಾದ ಭಾವದ ಜಾಡನ್ನೇ ಹಿಡಿದು ಕುವೆಂಪು ಹೇಗೆ ಮತ್ತೊಂದು ಹೊಳಹನ್ನು ನಮಗೆ ನೀಡುತ್ತಾರೆ ಎಂಬುದನ್ನು ಗಮನಿಸಬೇಕು.





ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)