ಫ್ರೊ ಮೆಲ್ವಿನ್ ಬ್ರೂವರ್

 ನಾನು ಪಿಎಚ್ ಡಿ ಮಾಡುತ್ತಿದ್ದಾಗ ಅನೇಕ ಶ್ರೇಷ್ಠ ಅಧ್ಯಾಪಕರ ಪಾಠ ಕೇಳುವ ಮತ್ತು ಕೆಲವರೊಂದಿಗೆ ಕೆಲಸ ಮಾಡುವ ಅವಕಾಶ ಸಿಕ್ಕಿತು. ನಾನು ವಿದ್ಯಾರ್ಥಿಯಾಗಿ ಸೇರಿದ್ದು ಡಿಪಾರ್ಟ್ಮೆಂಟ್ ಆಫ್ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಸಿಸ್ಟಮ್ಸ್ ವಿಭಾಗದಲ್ಲಿ ಮತ್ತು  ಕಂಪ್ಯೂಟರ್ ಇಂಜಿನಿಯರಿಂಗ್ ಎಂಬ ಶಾಖೆಯಲ್ಲಿ.  ಶಾಖೆಯಲ್ಲಿದ್ದ ಎಲ್ಲ ಪ್ರಾಧ್ಯಾಪಕರೂ ತಮ್ಮ ತಮ್ಮ ಸಂಶೋಧನಾ ರಂಗಗಳಲ್ಲಿ ಪ್ರಸಿದ್ಧರು. ಪ್ರೊ ಮೆಲ್ವಿನ್ ಬ್ರೂವರ್ ಅವರ ಸಂಶೋಧನಾ ಲೇಖನಗಳನ್ನು ನಾನು ಎಂ ಈ ಅಧ್ಯಯನದ ಸಂದರ್ಭದಲ್ಲಿ ಓದಿಕೊಂಡಿದ್ದೆ. ಅವರ ಜೊತೆಗೆ ಕೆಲಸ ಮಾಡಬೇಕೆಂಬ ಇಚ್ಛೆ ನನ್ನಲ್ಲಿತ್ತು. ನಾನು ಅವರಿಗೆ ಪತ್ರ ಬರೆದು ವಿನಂತಿಸಿಕೊಂಡೆ. ಆಗ ಇಂಟರ್ನೆಟ್ ಇರಲಿಲ್ಲ. ಹೀಗಾಗಿ ಪ್ರಾಧ್ಯಾಪಕರು ಸದ್ಯ ಯಾವ ರಂಗದಲ್ಲಿ ಸಕ್ರಿಯರಾಗಿ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಯುವುದು ಸುಲಭವಾಗಿರಲಿಲ್ಲ. ಪ್ರೊ.ಬ್ರೂವರ್ ವಿಎಲ್ ಎಸ್ ಐ ರಂಗದಲ್ಲಿ ಫಿಸಿಕಲ್ ಡಿಸೈನ್ ಎಂಬ ಕ್ಷೇತ್ರದಲ್ಲಿ ಮಾಡಿದ್ದ ಕೆಲಸ ನನಗೆ ತಿಳಿದಿತ್ತು. ಆದರೆ ನಾನು ಅವರಿಗೆ ಪತ್ರ ಬರೆದಾಗ ಅವರು ಈ ಕ್ಷೇತ್ರದಿಂದ ಮುಂದುವರಿದು ಟೆಸ್ಟಿಂಗ್ ಎಂಬ ಕ್ಷೇತ್ರವನ್ನು  ಪ್ರವೇಶಿಸಿ ಅಲ್ಲಿ ಸಕ್ರಿಯರಾಗಿದ್ದರು! ಹೀಗಾಗಿ ಅವರು ನನಗೆ ಮಾರೋಲೆ ಕಳಿಸಿ "ನಾನು ಈಗ ನಿಮ್ಮ ಆಸಕ್ತಿಯ ಕ್ಷೇತ್ರದಲ್ಲಿ ಸಕ್ರಿಯನಾಗಿಲ್ಲ.  ಆ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಶರ್ಮಾ ಶಾಸ್ತ್ರಿ ಎಂಬುವರಿಗೆ ನಿಮ್ಮ  ಪತ್ರ ವರ್ಗಾಯಿಸಿದ್ದೇನೆ. ನಮ್ಮ ವಿಭಾಗದಲ್ಲಿ ಟೀಚಿಂಗ್ ಅಸಿಸ್ಟೆಂಟ್ ಆಗಿ ಕೆಲಸ ಮಾಡುವ ಆಸಕ್ತಿ ಇದ್ದರೆ ನಾನು ಲಗತ್ತಿಸಿರುವ ಫಾರ್ಮ್ ತುಂಬಿ ವಿಭಾಗಕ್ಕೆ ಕಳಿಸಿ" ಎಂದು ಬರೆದರು.


ಅವರು ಇಷ್ಟೆಲ್ಲಾ ಮಾಡುವ ಅಗತ್ಯ ಇರಲಿಲ್ಲ. ನನ್ನ ಪತ್ರವನ್ನು ಕಸದ ಬುಟ್ಟಿಗೆ ಹಾಕಿಬಿಡಬಹುದಾಗಿತ್ತು. ಆದರೆ ಅವರು ಹಾಗೆ ಮಾಡಲಿಲ್ಲ. ಅವರು ಕಳಿಸಿದ ಫಾರ್ಮ್ ತುಂಬಿ ಕಳಿಸಿದೆ. ನನಗೆ ಟೀಚಿಂಗ್ ಅಸಿಸ್ಟೆಂಟ್ ಶಿಪ್ ಸಿಕ್ಕಿತು. ಜೊತೆಗೆ ಶರ್ಮಾ ಶಾಸ್ತ್ರಿ ಅವರು ನನ್ನ ಸಂಶೋಧನಾ ಮೇಲ್ವಿಚಾರಕರಾಗಲು ಒಪ್ಪಿ ನನಗೆ ರಿಸರ್ಚ್ ಅಸಿಸ್ಟೆಂಟ್ ಶಿಪ್ ಕೊಟ್ಟರು. ಹೀಗೆ ನಾನು ವಿಶ್ವವಿದ್ಯಾಲಯ ಪ್ರವೇಶಿಸಿದಾಗ ನನಗೆ ವಾರಕ್ಕೆ ಎಂಟು ಗಂಟೆಗಳ ಕೆಲಸವಿದ್ದ ನೌಕರಿ ಸಿಕ್ಕಿತು. ಸಂಶೋಧನೆ ಜೊತೆಗೆ ಈ ನೌಕರಿಗಳನ್ನು ತೂಗಿಸಿಕೊಂಡು ಹೋಗಬೇಕಾಗಿತ್ತು.


ಪ್ರೊ. ಬ್ರೂವರ್ ಅವರದ್ದು ಪ್ರಭಾವಿ ವ್ಯಕ್ತಿತ್ವ.  ಅವರ ಕೈಕೆಳಗೆ ಅನೇಕ ವಿದ್ಯಾರ್ಥಿಗಳು ಕೆಲಸ ಮಾಡುತ್ತಿದ್ದರು. ಆಗಾಗ ಅವರನ್ನು ಕಾರಿಡಾರಿನಲ್ಲಿ ಕಂಡಾಗ ಹೆಲೋ ಎಂದು ಮುಗುಳ್ನಗುತ್ತಿದ್ದೆ.  "ನೀವು ಭಾರತೀಯರು ಎಲ್ಲರೂ ಒಂದೇ ಥರ ಕಾಣಿಸುತ್ತೀರಿ" ಎಂದು ನಗುತ್ತಿದ್ದರು. ಇದೊಂದು ರೇಸಿಸ್ಟ್ ಕಾಮೆಂಟ್ ಎಂದು ನಾವು ಇಂದು ಪ್ರತಿಕ್ರಿಯಿಸಬಹುದು. ಆದರೆ ಪ್ರೊ ಬ್ರೂವರ್ ವಿಶಾಲ ಮನೋಭಾವದವರು. ಹಾಗಿಲ್ಲದಿದ್ದರೆ ಅವರು ನನಗೆ ಪತ್ರ ಬರೆದು ಸಹಾಯ ಮಾಡುವ ಅಗತ್ಯ ಇರಲಿಲ್ಲ. ಅವರ ಸಂಶೋಧನಾ ವಿದ್ಯಾರ್ಥಿಗಳಲ್ಲಿ ಭಾರತ ಮತ್ತು ಚೈನಾ ಮೂಲದ ವಿದ್ಯಾರ್ಥಿಗಳೇ ಹೆಚ್ಚಿದ್ದರು. 


ನಾನು ಸ್ಕ್ರೀನಿಂಗ್ ಎಂಬ ಪರೀಕ್ಷೆ ತೆಗೆದುಕೊಂಡಾಗ ಪ್ರೊ ಬ್ರೂವರ್ ನನ್ನ ಎಕ್ಸಾಮಿನರ್ ಆಗಿ ಬಂದರು. ಮುಂದೆ ಅವರು ಪಾಠ ಮಾಡಿದ ಟೆಸ್ಟಿಂಗ್ ಕುರಿತಾದ ಕೋರ್ಸ್ ತೆಗೆದುಕೊಳ್ಳುವ ಅವಕಾಶ ಸಿಕ್ಕಿತು. ಅವರ ಪಾಠ ಕೇಳುವುದೇ ಒಂದು ರಸಾನುಭವ.  ಯಾವುದೇ ಸಂದಿಗ್ಧಕ್ಕೂ ಕಾರಣ ಇಲ್ಲದಂತೆ ಎಲ್ಲವನ್ನೂ ಉದಾಹರಣೆಗಳ ಸಮೇತ ಸ್ಪಷ್ಟವಾಗಿ ವಿವರಿಸುತ್ತಿದ್ದರು. ಅವರ ಪಾಠ ಮಾಡುವ ಶೈಲಿಯಿಂದ ನಾನು ಪ್ರಭಾವಿತನಾದೆ.  ತರಗತಿಯ ವಿದ್ಯಾರ್ಥಿಗಳನ್ನು ಅವರು ತುಂಬಾ ಆದರದಿಂದ ನೋಡುತ್ತಿದ್ದರು. ನಮ್ಮ ತರಗತಿ ವಾರಕ್ಕೊಮ್ಮೆ ಬೆಳಗ್ಗೆ ಎಂಟರಿಂದ ಹನ್ನೊಂದು ಗಂಟೆಯ ಅವಧಿಯಲ್ಲಿ ನಡೆಯುತ್ತಿತ್ತು. ಒಮ್ಮೊಮ್ಮೆ ಪ್ರೊ ಬ್ರೂವರ್ ಇಡೀ ಕ್ಲಾಸಿಗೆ ಡೋನಟ್ ತಂದು ಹಂಚುತ್ತಿದ್ದರು. 


 ಅವರು ಆಗ ಟೆಸ್ಟಿಂಗ್ ಕುರಿತು ಪುಸ್ತಕ ಬರೆಯುವ ತಯಾರಿ ನಡೆಸುತ್ತಿದ್ದರು. ತಮ್ಮ ಪುಸ್ತಕದ ಹಲವು ಅಧ್ಯಾಯಗಳನ್ನು ನಮಗೆ ಕೊಟ್ಟು ಅದರಿಂದ ನಮಗೆ ಪಾಠ ಮಾಡಿದರು. ಸಾಲದಕ್ಕೆ "ಇದರಲ್ಲಿ ನಿಮಗೆ ಏನಾದರೂ ತಪ್ಪು ಕಂಡರೆ ನನಗೆ ತಿಳಿಸಿ. ನಿಮ್ಮ ತಿದ್ದುಪಡಿ ಸ್ವೀಕೃತವಾದರೆ ನಿಮಗೆ ಪ್ರತಿಯೊಂದು ತಿದ್ದುಪಡಿಗೂ ಒಂದು ಡಾಲರ್ ಬಹುಮಾನ" ಎಂದು ಘೋಷಿಸಿದರು. ನಾನೂ ಅನೇಕ ತಿದ್ದುಪಡಿಗಳನ್ನು ಪಟ್ಟಿ ಮಾಡಿ ಕೊಟ್ಟೆ.  ಸೆಮಿಸ್ಟರ್ ಕೊನೆ ಸಮೀಪಿಸಿದಾಗ ಅವರು ಬಹುಮಾನ ಘೋಷಿಸಿದರು. "ದಿಸ್ ಗಯ್ ಹಿಯರ್ ಈಸ್ ಮೇಕಿಂಗ್ ಎ ಫಾರ್ಚ್ಯೂನ್!" ಎಂದು ನನಗೆ ಎಂಟು ಡಾಲರ್ ಕೊಟ್ಟರು! 


ಅವರ ಕೋರ್ಸ್ ಪ್ರಭಾವ ನನ್ನ ಮೇಲೆ ಎಷ್ಟು ಉಂಟಾಯಿತು ಎಂದರೆ ನಾನು ಪಿಎಚ್ ಡಿ ಮುಗಿಸಿ ಐಐಟಿ ದೆಹಲಿಗೆ ಬಂದಾಗ ನನ್ನ ಕಾರ್ಯಕ್ಷೇತ್ರವನ್ನು ನಾನು ಬದಲಾಯಿಸಿಕೊಂಡು ಟೆಸ್ಟಿಂಗ್ ಕ್ಷೇತ್ರದಲ್ಲಿ ಕೆಲಸ ಪ್ರಾರಂಭಿಸಿದೆ. ದೆಹಲಿಯಲ್ಲಿ ನಾನು ಟೆಸ್ಟಿಂಗ್ ಕುರಿತು ಪಾಠ ಮಾಡಿದೆ.  


ಪಿಎಚ್ ಡಿ ಕೊನೆಯ ವರ್ಷದಲ್ಲಿ ನನಗೆ ನಮ್ಮ ವಿಭಾಗದವರು ನನಗೆ ಕೋರ್ಸ್ ಪಾಠ ಮಾಡುವ ಅವಕಾಶ ಕೊಟ್ಟರು. ಬೇಸಿಗೆಯಲ್ಲಿ ಮತ್ತು ಆನಂತರ ಫಾಲ್ ಸೆಮಿಸ್ಟರಿನಲ್ಲಿ ನಾನು ಎರಡು ಸಲ ವಿಎಲ್ ಎಸ್ ಐ ಡಿಸೈನ್ ವಿಷಯ ಪಾಠ ಮಾಡಿದೆ. ಇದಕ್ಕೆ ಮುಂಚೆ ಟೀಚಿಂಗ್ ಅಸಿಸ್ಟೆಂಟ್ ಆಗಿ ಪಾಠ ಮಾಡಿದ ಅನುಭವ ಇತ್ತು. ಆದರೆ ಇಡೀ ಕೋರ್ಸ್ ಪಾಠ ಮಾಡುವ ಅವಕಾಶ ಸಿಕ್ಕಿದ್ದು ನನಗೆ ಹೆಮ್ಮೆಯ ವಿಷಯವಾಗಿತ್ತು.  ಆಗ ಪ್ರೊ ಬ್ರೂವರ್ ವಿಭಾಗದ ಅಧ್ಯಕ್ಷರಾಗಿದ್ದರು.  ನನ್ನ ತರಗತಿಯಲ್ಲಿದ್ದ ಒಬ್ಬ ವಿದ್ಯಾರ್ಥಿ ಮಿಡ್ ಟರ್ಮ್ ಪರೀಕ್ಷೆಯ ನಂತರ ನನ್ನನ್ನು ಸಂಪರ್ಕಿಸಿ "ನನಗೆ ಈ ತರಗತಿಯಲ್ಲಿ ಬಿ ಗ್ರೇಡ್ ಸಿಕ್ಕುವುದೇ?" ಎಂದು ಕೇಳಿದ. ನಾನು ಅಲ್ಲಿಯವರೆಗೂ ವಿದ್ಯಾರ್ಥಿಗಳು ಪಡೆದ ಅಂಕಗಳನ್ನು ಗಮನಿಸಿ ನೀನು ಕೊನೆಯ ಪರೀಕ್ಷೆಯಲ್ಲಿ ಕನಿಷ್ಠ ಇಷ್ಟು ಅಂಕ ಗಳಿಸಿದರೆ ಸಾಧ್ಯ ಎಂದು ತಿಳಿಸಿದೆ. ಇದು ಅಮೆರಿಕಾದಲ್ಲಿ ಸಾಮಾನ್ಯ ಪದ್ಧತಿ. ಕೆಲವೊಮ್ಮೆ ಉತ್ತಮ ಗ್ರೇಡ್ ಸಿಕ್ಕದು ಎಂದು ತಿಳಿದರೆ ವಿದ್ಯಾರ್ಥಿಗಳು ಕೋರ್ಸ್ ಡ್ರಾಪ್ ಮಾಡಿ ಅದನ್ನು ಮತ್ತೆ ತೆಗೆದುಕೊಳ್ಳುತ್ತಾರೆ. ಪ್ರಸ್ತುತ ವಿದ್ಯಾರ್ಥಿ ಹಾಗೆ ಮಾಡಲಿಲ್ಲ. ಆದರೆ ದುರದೃಷ್ಟ ಎಂಬಂತೆ ಅವನು ಕೊನೆಯ ಪರೀಕ್ಷೆಯಲ್ಲಿ ಸ್ವಲ್ಪ ಕಡಿಮೆ ಅಂಕ ಗಳಿಸಿದ ಕಾರಣ ಅವನಿಗೆ ಬಿ ಗ್ರೇಡ್ ಸಿಕ್ಕಲಿಲ್ಲ. ಅವನು ನನ್ನ ಬಳಿ ಬಂದು ತನ್ನ ಕೊನೆಯ ಪರೀಕ್ಷೆಯ ಉತ್ತರ ಪತ್ರಿಕೆಯನ್ನು ಬಿಡಿಸಿ ಓದಿ ಎಲ್ಲಾದರೂ ಹೆಚ್ಚು ಅಂಕ ಗಳಿಸಬಹುದೇ ಎಂದು ಪ್ರಯತ್ನಿಸಿದ. ಆದರೆ ಅದು ಸಾಧ್ಯವಿಲ್ಲ ಎಂದು ನಾನು ಅವನ ತಪ್ಪುಗಳನ್ನು ವಿವರಿಸಿದೆ. ಅವನು ಸ್ವಲ್ಪ ಅಸಮಾಧಾನದಿಂದ ತೆರಳಿದ. 


ಸ್ವಲ್ಪ ದಿನಗಳ ನಂತರ ಪ್ರೊ ಬ್ರೂವರ್ ನನ್ನನ್ನು ತಮ್ಮ ಕಚೇರಿಗೆ ಕರೆದರು. 


"ಈ ಹೆಸರಿನ ವಿದ್ಯಾರ್ಥಿ ನಿನ್ನ ಕ್ಲಾಸಿನಲ್ಲಿ ಇದ್ದನೇ?"


"ಹೌದು"


"ಅವನಿಗೆ ನೀನು ಬೀ ಮೈನಸ್ ಗ್ರೇಡ್ ಕೊಟ್ಟಿದ್ದು ಸರಿ ತಾನೇ?"


"ಹೌದು."


"ಅವನು ವಿಭಾಗದ ಬಗ್ಗೆ ದೂರು ಕೊಟ್ಟಿದ್ದಾನೆ. "


"ಓಹ್"


"ತನಗೆ ಬಿ ಸಿಕ್ಕುತ್ತದೆ ಎಂದು ಅವನು ನಂಬಿಕೊಂಡು ಪರೀಕ್ಷೆ ಬರೆದಿದ್ದನಂತೆ"


ನಾನು ವಿದ್ಯಾರ್ಥಿಯ ಜೊತೆ ನಡೆದ ಸಂಭಾಷಣೆಯನ್ನು ವಿವರಿಸಿದೆ. ಆ ವಿದ್ಯಾರ್ಥಿ ಆಫ್ರಿಕನ್ ಅಮೆರಿಕನ್ ಜನಾಂಗದವನು ಎಂಬುದು ಇಲ್ಲಿ ಒಂದು ಸೂಕ್ಷ ಸನ್ನಿವೇಶವನ್ನು ಸೃಷ್ಟಿಸಿತ್ತು.


"ಅವನಿಗೆ ಕೊನೆಯ ಪರೀಕ್ಷೆಯಲ್ಲಿ ಸಿಕ್ಕ ಅಂಕಗಳು ಸರಿ ಎಂದು ನಿನ್ನ ನಂಬಿಕೆಯೇ?" ಎಂದು ಪ್ರೊ ಬ್ರೂವರ್ ಕೇಳಿದರು.


"ಖಂಡಿತ. ಅವನಿಗೆ ಬಿ ಸಿಕ್ಕಲಿ ಎಂಬ ಆಸೆ ನನಗೂ ಇತ್ತು. ಆದರೆ ದುರದೃಷ್ಟವಶಾತ್ ಅದು ಆಗದು. ಅವನಿಗೂ ಉತ್ತರ ಪತ್ರಿಕೆ ತೋರಿಸಿದ್ದೇನೆ."


"ಸರಿ, ನಿನಗೆ ನಂಬಿಕೆ ಇದ್ದರೆ ಸಾಕು. ನಾನು ಇದನ್ನು ನೋಡಿಕೊಳ್ಳುತ್ತೇನೆ" ಎಂದು ಪ್ರೊ ಬ್ರೂವರ್ ನನ್ನನ್ನು ಕಳಿಸಿಕೊಟ್ಟರು. ಅವರು ನನ್ನಲ್ಲಿ ಇಟ್ಟ ವಿಶ್ವಾಸಕ್ಕೆ ನಾನು ಋಣಿಯಾಗಿದ್ದೇನೆ. ವಿಭಾಗೀಯ ಅಧ್ಯಕ್ಷರೊಬ್ಬರು ತಮ್ಮ ಅಧ್ಯಾಪಕರನ್ನು ಹೇಗೆ ನಡೆಸಿಕೊಳ್ಳಬೇಕು ಎಂಬುದಕ್ಕೆ ಇದೊಂದು ಉದಾಹರಣೆ.  ನಾನು ಭಾರತಕ್ಕೆ ಹಿಂತಿರುಗುತ್ತೇನೆ ಎಂದು ತಿಳಿಸಲು ನಾನು ಅವರನ್ನು ಹೋಗಿ ನೋಡಿದೆ. ತಾವು ಭಾರತಕ್ಕೆ ಪ್ರವಾಸ ಹೋಗಿದ್ದನ್ನು ನೆನಪಿಸಿಕೊಂಡು ತಾವು ತೆಗೆದುಕೊಂಡ ಚಿತ್ರಗಳನ್ನು ತೋರಿಸಿದರು. ಅವರು ನೂರಾರು ಚಿತ್ರಗಳನ್ನು ಸಂಗ್ರಹಿಸಿ ಆಲ್ಬಮ್ ಮಾಡಿದ್ದರು.


ಮುಂದೆ ನಾನು ಇಂಟರ್ ನ್ಯಾಶನಲ್ ಟೆಸ್ಟಿಂಗ್ ಕಾನ್ಫರೆನ್ಸ್ ಎಂಬ ಸಮ್ಮೇಳನದಲ್ಲಿ ಕೆಲವು ಸಲ ಅವರ ಭೇಟಿ ಆಯಿತು. ಅವರು ಈ ಸಮ್ಮೇಳನದ ಅಧ್ವರ್ಯುಗಳಲ್ಲಿ ಒಬ್ಬರು. ಅವರು ಟೆಸ್ಟಿಂಗ್ ಕ್ಷೇತ್ರದಲ್ಲಿ ನೀಡಿದ ಕೊಡುಗೆಗಳಿಗಾಗಿ ಅವರಿಗೆ ಸಮ್ಮೇಳನದಲ್ಲಿ ವಿಶೇಷ ಸನ್ಮಾನ ನೀಡಲಾಗಿದೆ. ಒಮ್ಮೆ ಪ್ರೊ ಎಸ್ ಎಂ ರೆಡ್ಡಿ ಎಂಬ ಅಷ್ಟೇ ಸುಪ್ರಸಿದ್ಧ ಪ್ರಾಧ್ಯಾಪಕರಿಗೆ ಇಂಥದ್ದೇ ಸನ್ಮಾನ ನೀಡಲಾಯಿತು. ಸಂಜೆ ಪ್ರೊ ರೆಡ್ಡಿ ಅವರಿಗಾಗಿ ಒಂದು ಔತಣ ಕೂಟವಿತ್ತು. ಇದರಲ್ಲಿ ನನಗೂ ಆಹ್ವಾನವಿತ್ತು. ಅಮೇರಿಕಾದಲ್ಲಿ ಇಂಥ ಸಂದರ್ಭದಲ್ಲಿ ಸನ್ಮಾನಿತರನ್ನು ಹೊಗಳಿ ಅಟ್ಟಕ್ಕೇರಿಸುವ ಬದಲು ಅವರನ್ನು ಲಘುವಾಗಿ ಲೇವಡಿ ಮಾಡುವ ಪದ್ಧತಿ ಇದೆ! ಪ್ರೊ ಬ್ರೂವರ್ ಅವರನ್ನು ಮಾತಾಡಲು ಕೇಳಿಕೊಂಡಿದ್ದರು. ಪ್ರೊ ರೆಡ್ಡಿ ಬಗ್ಗೆ ಅವರು ಲೇವಡಿ ಮಾಡುತ್ತಾ ಮಾಡಿದ ಭಾಷಣ ಮರೆಯಲು ಸಾಧ್ಯವಿಲ್ಲ. ಪ್ರೊ ರೆಡ್ಡಿ ಅವರನ್ನೂ ಒಳಗೊಂಡು ಎಲ್ಲರೂ ನಕ್ಕು  ಸುಸ್ತಾದರು.  


ಮುಂದೆ ಪ್ರೊ ಬ್ರೂವರ್ ಅವರಿಗೂ ಇಂಥ ಸನ್ಮಾನ ಸಿಕ್ಕಾಗ ಅವರನ್ನು ಕುರಿತು ಮಾತಾಡುವ ಅವಕಾಶ ನನಗೂ ಬಂತು.  ಪ್ರೊ.ಸಂದೀಪ್ ಕುಂಡು ನನ್ನನ್ನು ಸಂಪರ್ಕಿಸಿ ಮಾತಾಡಬೇಕೆಂದು ಕೋರಿದರು. ನಾನು ಅವರ ವಿದ್ಯಾರ್ಥಿಯಾಗಿದ್ದಾಗ ಆದ ಅನುಭವಗಳನ್ನು ಹಂಚಿಕೊಂಡೆ. ಮಾತಾಡಿದ್ದಕ್ಕೆ ನನಗೆ ಸಿಕ್ಕಿದ್ದು ಒಂದು ಬಾಟಲ್ ವೈನ್! ನಾನು ಕುಡಿಯುವುದಿಲ್ಲವೆಂಬ ಕಾರಣ ಅದನ್ನು ಸ್ನೇಹಿತನೊಬ್ಬನಿಗೆ ಕೊಟ್ಟೆ.


ಪ್ರೊ. ಬ್ರೂವರ್ ನಿವೃತ್ತರಾದ ವಿಷಯ ತಿಳಿಯಿತು. ನಂತರ ಅವರು ವಿಧಿವಶರಾದರೆಂಬ ವಿಷಯ ತಿಳಿಯಿತು. ನಾನು ಕೃತಜ್ಞತೆಯಿಂದ ನೆನೆಸುವ ಅನೇಕ ಗುರುಗಳಲ್ಲಿ ಪ್ರೊ ಬ್ರೂವರ್ ಸೇರಿದ್ದಾರೆ.


#ನೆನಪುಗಳು

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)