ಹಿಂದೆ ಬಂದರೆ ಹಾಯಬೇಡಿ
ನಡೆ ಮುಂದೆ ನಡೆ ಮುಂದೆ ನುಗ್ಗಿ ನಡೆ ಮುಂದೆ
ಅಂತೆಲ್ಲಾ ಹಾಡುಗಳು ಪ್ರಸಾರವಾಗುತ್ತಿದ್ದವು ಹಿಂದೆ.
ಅದನ್ನೆಲ್ಲ ಕೇಳಿ ಜನರಿಗೆ
ಮುಂದೆ ಹೋಗೋಣ ಅನ್ನಿಸುತ್ತಿತ್ತು.
ಬಹಳ ಜನರಿಗೆ
ಸಿನಿಮಾದಲ್ಲಿ ಮುಂದಿನ ಸೀಟ್
ಆಪ್ಯಾಯವಾಗಿತ್ತು.
ಉಳಿದ ದುಡ್ಡಿನಲ್ಲಿ
ಗಾಂಧಿಯಂತೆ
ಕಳ್ಳೇಕಾಯಿ
ತಿನ್ನಬಹುದಾಗಿತ್ತು.
ಬಸ್ಸುಗಳಲ್ಲಿ ತುಂಬಿರುತ್ತಿದ್ದರು ಜನ ಗಿಜಿಗಿಜಿ.
ಕಂಡಕ್ಟರ್ ರೇಗುತ್ತಿದ್ದ
ಮುಂದೆ ಹೋಗ್ರೀ!
ಅವನಿಗೂ ಇತ್ತು ನೀವು ಮುಂದೆ ಬರಬೇಕೆಂಬ ಕಾಳಜಿ.
ಈಗ ಮುಂದೆ ಬರಲು ಹಿಂದೇಟು.
ಮಕ್ಕಳು ಹಿಡಿಯುತ್ತಾರೆ ಹಿಂದಿನ ಸೀಟು.
ಹಿಂದಿದ್ದವರಿಗೆ ಕಾಣುತ್ತಿದೆ ಗಿಲೀಟು.
ದಾಟಲು ಹೆದರುತ್ತಿದ್ದಾರೆ ಗೀಟು.
ಹಿಂದಿದ್ದುಕೊಂಡು ಮುಂದೆ ಬಂದವರು
ಮಾಡಿಕೊಳ್ಳುತ್ತಿದ್ದಾರೆ ತಮ್ಮ ಮಕ್ಕಳಿಗೂ
ಮೊಮ್ಮಕ್ಕಳಿಗೂ
ಮರಿಮಕ್ಕಳಿಗೂ
ಹಿಂದಿನ ಸೀಟು ಪರ್ಮನೆಂಟು.
ಸಿ ಪಿ ರವಿಕುಮಾರ್
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ