ಮರಗಳು

ಮರಗಳು

ಮೂಲ: ಫಿಲಿಪ್ ಲಾರ್ಕಿನ್

ಕನ್ನಡಕ್ಕೆ: ಸಿ ಪಿ ರವಿಕುಮಾರ್


ಮರಗಳಲ್ಲಿ ಮತ್ತೆ ಒಡೆಯುತ್ತಿವೆ ಎಲೆ
ಏನೋ ಹೇಳಲು ಬಾಯ್ತೆರೆದಂತೆ ತರು.
ಕಣ್ತೆರೆದು ಅರಳುತ್ತವೆ ಹೊಸಚಿಗುರು
ಅವುಗಳ ಹಸಿರಿನಲ್ಲಿದೆ ನೋವಿನ ಸೆಲೆ 

ಮರುವುಟ್ಟು ಪಡೆದು ಅಮರವಾಗುವವೇ ವೃಕ್ಷ?
ಜರೆ ಮತ್ತು ಸಾವು ನಮಗೆ ಮಾತ್ರವೇ?
ಇಲ್ಲ, ಅವೂ ಸಾಯುತ್ತವೆ! ಬೇಕೇ ಪುರಾವೆ?
ಮರದ ಉಂಗುರಗಳಲ್ಲಿದೆ ಅದರ ಆಯುಷ್ಯ ರಹಸ್ಯ.

ಇಷ್ಟಾದರೂ ವೈಶಾಖ ಕಾಲಿಟ್ಟಾಗ ಮೈತುಂಬಾ ಹಸಿರು
ಹೊದ್ದು ಸಂಭ್ರಮಿಸುವಳು ವೃಕ್ಷಸ್ತ್ರೀ ಪ್ರತಿವರ್ಷ
"ಸತ್ತುಹೋಯಿತು ಹಳೆಯ ಸಂವತ್ಸರ!" ಅವಳ ಸಂದೇಶ,
"ಮತ್ತೊಮ್ಮೆ ಎಲ್ಲವನ್ನೂ ಹೊಸದಾಗಿ ಮಾಡಿ ಶುರು!"

(ಫಿಲಿಪ್ ಲಾರ್ಕಿನ್ ಒಬ್ಬ ಇಂಗ್ಲಿಷ್ ಕವಿ (೧೯೨೨-೨೦೦೧). ಇವನ ಕವಿತೆಗೂ ಬೇಂದ್ರೆ ಅವರ ಯುಗಾದಿ ಕವಿತೆಗೂ ಇರುವ ಸಾಮ್ಯ ಗಮನಿಸಿ. ಹೊಂಗೆ ಹೂವಿನ ಟೊಂಗೆಯಲ್ಲಿ ಪ್ರತಿವರ್ಷವೂ ವಸಂತದಲ್ಲಿ ಕೇಳಿ ಬರುವ ಸಂಗೀತವನ್ನು ಕೇಳಿದಾಗ, ಬೇವಿನ ಮರದಲ್ಲೂ ಹೂಗಳು ಚಿಗುರಿದಾಗ ಕವಿಯ ಮನಸ್ಸು ಯುಗಾದಿಯ ಚಮತ್ಕಾರದ ಕಡೆಗೆ ಹೊರಳುತ್ತದೆ. ಮರಗಳು ಹೀಗೆ ಮರುವುಟ್ಟು  ಪಡೆದುಕೊಳ್ಳುವುದು ಕವಿಗೆ ಆಶ್ಚರ್ಯ ಎನ್ನಿಸುತ್ತದೆ. 

ವರುಷಕೊಂದು ಹೊಸತು ಜನ್ಮ ಹರುಷಕೊಂದು ಹೊಸತು ನೆಲೆಯು ಅಖಿಲ ಜೀವಜಾಲಕೆ!
ಒಂದೆ ಒಂದು ಜನ್ಮದಲಿ ಒಂದೆ ಬಾಲ್ಯ ಒಂದೆ ಹರಯ ನಮಗದಷ್ಟೆ ಏತಕೆ?

ಎಂಬ ಬೇಂದ್ರೆ ಅವರ ಪ್ರಶ್ನೆ ಮತ್ತು ಫಿಲಿಪ್ ಲಾರ್ಕಿನ್ ಅವರ "ಮರಗಳು ಹೀಗೆ ಪ್ರತಿವರ್ಷ ಮತ್ತೆ ಹುಟ್ಟುತ್ತವಲ್ಲ ಅವುಗಳು ಅಮರವೇ! ನಮಗೆ ಮಾತ್ರ ಸಾವೇ?" ಎಂಬ ಪ್ರಶ್ನೆಗೂ ಸಾಮ್ಯವಿದೆ.

ಬೇಂದ್ರೆ ಇನ್ನೂ ಮುಂದೆ ಹೋಗಿ

ನಿದ್ದೆಗೊಮ್ಮೆ ನಿತ್ಯ ಮರಣ ಎದ್ದ ಸಲ ನವೀನ ಜನನ ನಮಗೆ ಏಕೆ ಬಾರದೋ
ಎಲೇ ಸನತ್ಕುಮಾರದೇವ ಎಲೇ ಸಾಹಸಿ ಚಿರಂಜೀವ ನಿನಗೆ ಲೀಲೆ ಸೇರದೋ
ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ
ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ ನಮ್ಮನಷ್ಟೆ ಮರೆತಿದೆ

ಎನ್ನುತ್ತಾರೆ. ನಾವು ಪ್ರತಿನಿತ್ಯ ಮಲಗಿ ಎದ್ದಾಗ ಮತ್ತೆ ಮರಗಳಂತೆ ಹೊಸದಾಗಿಬಿಡಬಹುದು! ಆದರೆ ಹಾಗಾಗುವುದಿಲ್ಲ. ನಮ್ಮ ಹಳೆಯ ನೋವುಗಳು ನಮ್ಮನ್ನು ಬಾಧಿಸುತ್ತವೆ. ಹೀಗೇಕೆ ಎಂದು ಕವಿ ಸ್ವತಃ ಚಿರಂಜೀವಿ ಹಾಗೂ ಸಾಹಸಿಯಾದ ಸನತ್ಕುಮಾರನಲ್ಲಿ ಕೇಳುತ್ತಾರೆ. ಸನತ್ಕುಮಾರ ಬ್ರಹ್ಮನ ಮಕ್ಕಳಲ್ಲಿ ಒಬ್ಬ. ನಾಲ್ಕು  ಕುಮಾರರಿಗೆ  ಬ್ರಹ್ಮನು ಸೃಷ್ಟಿಸಿದ ಋಗ್ವೇದ ಯಜುರ್ವೇದ ಮತ್ತು ಸಾಮವೇದಗಳ ಬಗ್ಗೆ ಹೆಮ್ಮೆ. ಅಥರ್ವ ಎಂಬ ಋಷಿ ಮತ್ತೊಂದು ವೇದವನ್ನು ಸೃಷ್ಟಿಸಿ ಶಿವನ ಬಳಿಗೆ ಹೋದನಂತೆ. ಶಿವನು ಅದನ್ನು ಮೆಚ್ಚಿ ಅದಕ್ಕೆ ನಾಲ್ಕನೇ ಸ್ಥಾನ ನೀಡಿದನಂತೆ. ಇದರಿಂದ ಕುಮಾರರಿಗೆ ಅಸಮಾಧಾನ ಉಂಟಾಯಿತು. ಶಿವನಿಗೆ ಅಥರ್ವನ ಸೃಷ್ಟಿಗೆ ವೇದದ ಸ್ಥಾನ ನೀಡುವ ಹಕ್ಕಿದೆಯೇ ಎಂದು ಅವರು ಪ್ರಶ್ನಿಸಿದರು. ಸರಸ್ವತಿಯನ್ನು ನ್ಯಾಯಪೀಠದಲ್ಲಿ ಕೂಡಿಸಿ ಶಿವನಿಗೆ ಅನೇಕ ಸವಾಲುಗಳನ್ನು ಒಡ್ಡಿದರು. ಶಿವ ಎಲ್ಲಾ ಸವಾಲುಗಳಿಗೆ ಸರಿಯಾದ ಉತ್ತರ ಕೊಟ್ಟಾಗ ಕುಮಾರರು ಸೋಲನ್ನು ಒಪ್ಪಿಕೊಂಡರು. ಹೀಗೆ ಕುಮಾರರು ಸಾಹಸಿಗಳು. ಶಿವನನ್ನೇ ಪ್ರಶ್ನಿಸಿದವರು.  ಬ್ರಹ್ಮ ನಮಗೆ ಮರಗಳಂತೆ ಪುನರ್ಜನ್ಮ ಪಡೆದುಕ್ಕೊಳ್ಳುವ ಶಕ್ತಿ ಕೊಡದೇ ಇರುವುದಕ್ಕೆ ಕುಮಾರರ ಕಾರಸ್ಥಾನ ಕಾರಣವೇ? ಅವರಿಗೆ ಈ ಬಗೆಯ ಲೀಲೆ ಇಷ್ಟವಾಗಲಿಲ್ಲವೇ? ಹೀಗೆ ಯೋಚಿಸಿ ಬೇಂದ್ರೆ "ಯುಗಾದಿ ನಮ್ಮನ್ನಷ್ಟೇ ಮರೆತಿದೆ!" ಎಂದು ವಿಷಾದಿಸುತ್ತಾರೆ.

ಬೇಂದ್ರೆ ಅವರಿಗೆ ಉತ್ತರ ಹೇಳುತ್ತಿರುವನೋ ಎಂಬಂತೆ ಲಾರ್ಕಿನ್ "ಮರಗಳು ಕೂಡಾ ಸಾಯುತ್ತವೆ. ಅವುಗಳ ಆಯುಸ್ಸು ಎಷ್ಟೆಂದು ಅವುಗಳ ಉಂಗುರಗಳಲ್ಲಿ ಬರೆದಿದೆ ಎನ್ನುತ್ತಾನೆ. ಮರದ ವಾರ್ಷಿಕ ಉಂಗುರಗಳು ಅವನಿಗೆ ಬ್ರಹ್ಮನ ಲಿಖಿತದಂತೆ ತೋರಿರಬಹುದು! ಆದರೆ ವಯಸ್ಸಾಗುತ್ತಿದ್ದರೂ ಮರ ತಾನು ಸತ್ತೆ ಎಂದು ಹೇಳುತ್ತಿಲ್ಲ! ಹಳೆಯ ವರ್ಷ ಸತ್ತಿತು ಎನ್ನುತ್ತಿದೆ! ತಾನು ಹೊಸವರ್ಷವನ್ನು ಪುನಃ ಪ್ರಾರಂಭಿಸುತ್ತಿದೆ. ಮರದ ಸಂದೇಶವನ್ನು ನಾವೂ ಸ್ವೀಕರಿಸೋಣ ಎಂಬುದು ಕವಿಯ ಆಶಯ.)








ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)