ಕಥೆ ಮತ್ತು ಕಥೆಗಾರ
ನಾನು ಪಿಎಚ್ ಡಿ ಮಾಡುತ್ತಿದ್ದಾಗ ಕೊನೆಯ ಎರಡು ವರ್ಷ ನನಗೆ ಯಾವ ಕೋರ್ಸ್ ಮಾಡುವ ಅಗತ್ಯ ಇರಲಿಲ್ಲ. ಎಷ್ಟು ಕೋರ್ಸ್ ವರ್ಕ್ ಮಾಡಬೇಕಾಗಿತ್ತೋ ಅಷ್ಟನ್ನು ಮಾಡಿ ಮುಗಿಸಿದ್ದಾಗಿತ್ತು. ಕೊನೆಯ ವರ್ಷದಲ್ಲಿ ಒಂದು ಘಟನೆ ನಡೆಯಿತು. ನನ್ನ ಪಿಎಚ್ ಡಿ ಮಾರ್ಗದರ್ಶಕರಾದ ಪ್ರೊಫೆಸರ್ ನನ್ನನ್ನು ಕರೆದು "ನಿನಗೆ ರಿಸರ್ಚ್ ಅಸಿಸ್ಟೆಂಟ್ಶಿಪ್ ಕೊಡಲು ನನ್ನ ಬಳಿ ಈ ಸೆಮಿಸ್ಟರ್ ಹಣ ಇಲ್ಲ" ಎಂದು ತಿಳಿಸಿದರು. ಅದನ್ನು ಹೇಳುವಾಗ ಅವರ ಮುಖದಲ್ಲಿ ನೋವಿತ್ತು. ಅವರ ಅಸಹಾಯಕತೆ ಕಂಡು ನಾನು ಅವರಿಗೆ ಸಮಾಧಾನ ಹೇಳಿ "ಪರವಾಗಿಲ್ಲ, ನೀವು ಯೋಚಿಸಬೇಡಿ" ಎಂದು ಹೇಳಿದರೂ ಮುಂದೆ ಹೇಗೆಂದು ಯೋಚನೆಯಾಯಿತು.
ಆಗ ಯೂನಿವರ್ಸಿಟಿಯಲ್ಲಿ ಗ್ರಾಜುಯೇಟ್ ಅಡ್ವೈಸರ್ ಹುದ್ದೆಯಲ್ಲಿದ್ದ ಬಿಲ್ ಬೇಟ್ಸ್ ನನಗೆ ಪರಿಚಿತರು. ನನ್ನನ್ನು ಅಭಿಮಾನದಿಂದ.ಕಾಣುತ್ತಿದ್ದ ಮನುಷ್ಯ. ನಾನು ಟೀಚಿಂಗ್ ಅಸಿಸ್ಟೆಂಟ್ ಆಗಿದ್ದಾಗ ನನ್ನ ಬಗ್ಗೆ ಒಳ್ಳೆಯ ಮಾತುಗಳು ವಿದ್ಯಾರ್ಥಿಗಳಿಂದ. ಬರುತ್ತಿದ್ದುದು ಇದಕ್ಕೆ ಕಾರಣವಾಗಿರಬಹುದು. ಬಿಲ್ ಹಾಸ್ಯಪ್ರಿಯ. ಅವರಿಗೆ ಆಗ ಅರವತ್ತು ದಾಟಿದ ಪ್ರಾಯ ಎಂದು ನನ್ನ ಅಂದಾಜು. ಮಿಲಿಟರಿಯಲ್ಲಿ ಕೆಲಸ ಮಾಡಿ ನಿವೃತ್ತಿ ಪಡೆದು ಈಗ ವಿಶ್ವವಿದ್ಯಾಲಯದಲ್ಲಿ ಕೆಲಸ ಮಾಡುತ್ತಿದ್ದರು. ಎಲ್ಲರೊಂದಿಗೆ ಬಹಳ ಕಡಿಮೆ ಮಾತು. ಎಷ್ಟು ಬೇಕೋ ಅಷ್ಟು. ಆದರೆ ನನಗೆ ಅವರ ಆಫೀಸಿನಲ್ಲಿ ಸದಾ ಸ್ವಾಗತ! ಹೌ ಆರ್ ಯೂ ಮೈ ಫ್ರೆಂಡ್, ವಾಟ್ ಕ್ಯಾನ್ ಐ ಡೂ ಫಾರ್ ಯು? ಎಂದು ಕುಳಿತುಕೊಳ್ಳಲು ಹೇಳುತ್ತಿದ್ದರು. ಹರಟೆ ಹೊಡೆಯುತ್ತಿದ್ದರು. ತಮ್ಮ ಅನುಭವಗಳನ್ನು ಹೇಳಿಕೊಳ್ಳುತ್ತಿದ್ದರು. ಅವರಿಗೆ ಮದುವೆ ಆಗಿರಲಿಲ್ಲ. ತಮ್ಮ ಕುಟುಂಬದ ಎಲ್ಲರಿಂದಲೂ ದೂರ ಇದ್ದುಬಿಟ್ಟಿದ್ದರು. ಅವರಿಗೆ ಒಬ್ಬ ಅಣ್ಣ ಇದ್ದನಂತೆ. ಆದರೆ ಅವನ ಮನೆಯಲ್ಲಿ ತಮಗೆ ಸ್ವಾಗತವಿಲ್ಲ ಎಂದು ನಗುತ್ತಿದ್ದರು. ಅವರ ಅನುಭವಗಳು ಅವರಿಗೆ ಶುಷ್ಕ ಹಾಸ್ಯಪ್ರಜ್ಞೆಯನ್ನು ನೀಡಿದ್ದವು. ತಮ್ಮನ್ನು ಹುಡುಕಿಕೊಂಡು ಬಂದು ಇಲ್ಲದ ಹರಟೆ ಹೊಡೆದು ತಮ್ಮ ಸಮಯ ಹಾಳು ಮಾಡುವವರ ಬಗ್ಗೆ ಲೇವಡಿ ಮಾಡುತ್ತಿದ್ದರು. "ಆದರೆ ನಿನಗೆ ಇಲ್ಲಿ ಯಾವಾಗಲೂ ಸ್ವಾಗತ!" ಎಂದು ಹೇಳುತ್ತಿದ್ದರು.
ನಾನು ಬಿಲ್ ಅವರ ಬಳಿ ನನ್ನ ಸಮಸ್ಯೆ ಹೇಳಿಕೊಂಡೆ. "ನಾನು ಏನು ಮಾಡಬಲ್ಲೇನೋ ನೋಡುತ್ತೇನೆ" ಎಂದರು. ಮರುದಿನ "ನೋಡು, ಸ್ಕೂಲ್ ಆಫ್ ಜರ್ನಲಿಸಂ ಇದೆಯಲ್ಲ, ಅಲ್ಲಿ ಒಬ್ಬ ಟಿಎ (ಟೀಚಿಂಗ್ ಅಸಿಸ್ಟೆಂಟ್) ಬೇಕಾಗಿದ್ದಾರೆ. ಅಲ್ಲಿ ನನ್ನ ಹಾಗೇ ಲಾರಾ ಎಂಬ ಅಡ್ವೈಸರ್ ಇದ್ದಾಳೆ. ಅವಳು ನನಗೆ ಗೊತ್ತು. ನಾನು ಅವಳ ಜೊತೆ ಮಾತಾಡಿದ್ದೇನೆ. ನಿನಗೆ ಇಷ್ಟವಿದ್ದರೆ ನಿನಗೆ ಆ ಕೆಲಸ ಸಿಕ್ಕುತ್ತೆ" ಎಂದರು. ನನಗೆ ಏನು ಹೇಳಬೇಕೋ ತಿಳಿಯಲಿಲ್ಲ. ಧನ್ಯವಾದ ಹೇಳಿ ಮರುದಿನ ಲಾರಾ ಅವರನ್ನು ಹೋಗಿ ನೋಡಿದೆ. ಆಕೆ ಇನ್ನೂ ಚಿಕ್ಕ ವಯಸ್ಸಿನವರು. ನನ್ನನ್ನು ಬಹಳ ಆದರದಿಂದ ಕಂಡರು. ಬಹುಶಃ ಬಿಲ್ ನನ್ನನ್ನು ಬಹಳ ಹೊಗಳಿ ಮಾತಾಡಿರಬಹುದು. ಕೆಲಸ ಏನೆಂದು ನನಗೆ ಲಾರಾ ವಿವರಿಸಿದರು. ಜರ್ನಲಿಸಂ ಓದುವ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಬಳಸಲು ಸಹಾಯ ಮಾಡಬೇಕು. ಲ್ಯಾಬಿನ ಕಂಪ್ಯೂಟರ್, ಪ್ರಿಂಟರ್ ಎಲ್ಲವೂ ಸುಸ್ಥಿತಿಯಲ್ಲಿ ಇರುವಂತೆ ನೋಡಿಕೊಳ್ಳಬೇಕು. ವಾರಕ್ಕೆ ಎಂಟು ಗಂಟೆ ಕೆಲಸ. ಲ್ಯಾಬ್ ನಡೆಯುವಾಗ ನಾನು ಅಲ್ಲೇ ಇರಬೇಕು.
ನಾನು ಒಪ್ಪಿಕೊಂಡು ಈ ಕೆಲಸಕ್ಕೆ ಸೇರಿದೆ. ಜರ್ನಲಿಸಂ ವಿದ್ಯಾರ್ಥಿಗಳು ಎಲ್ಲರೂ ಹದಿನೆಂಟು - ಹತ್ತೊಂಬತ್ತರ ಪ್ರಾಯದ ಹುಡುಗರು. ಅವರಿಗೆ ಬರವಣಿಗೆಯಲ್ಲಿ ಆಸಕ್ತಿ. ಆದರೆ ಕಂಪ್ಯೂಟರ್ ತಂತ್ರಾಂಶ ಬಳಸುವುದು ಅವರಿಗೆ ಸ್ವಲ್ಪ ಕಷ್ಟದ ಕೆಲಸ. ಟೈಪ್ ಮಾಡುವಾಗ ಏನೋ ತಪ್ಪು ಕೀ ಒತ್ತಿ ಅವರ ಸ್ಕ್ರೀನ್ ಎಲ್ಲಾ ಖಾಲಿಯಾಗಿಬಿಡುವುದು. "ಓ ಮೈ ಗಾಡ್! ರಾವಿ! ಹೆಲ್ಪ್!" ಎಂದು ಕೂಗಿಕೊಳ್ಳುವರು. ನಾನು ಅವರ ತಪ್ಪು ತೋರಿಸಿ ಪುನಃ ಅವರ ಕಡತವನ್ನು ಸ್ಕ್ರೀನ್ ಮೇಲೆ ತಂದರೆ ಅವರಿಗೆ ನಾನೇನೋ ದೊಡ್ಡ ಸೂಪರ್ ಮ್ಯಾನ್ ಎಂಬಂತೆ! ಏನೇನೂ ಕಷ್ಟವಿಲ್ಲದ ಕೆಲಸಕ್ಕೆ ಇಷ್ಟೊಂದು ಕೃತಜ್ಞತೆ ಪಡೆಯಲು ನನಗೆ ಸಂಕೋಚ.
ಜರ್ನಲಿಸಂ ವಿದ್ಯಾರ್ಥಿಗಳು ನನ್ನನ್ನು ಅಭಿಮಾನದಿಂದ ಕಾಣುತ್ತಿದ್ದರು. ಅವರಲ್ಲಿ ಅನೇಕರು ಕ್ಲಾಸಿಗೆ ಏನಾದರೂ ಸಿಹಿ ತಿಂಡಿ ಇತ್ಯಾದಿ ತರುತ್ತಿದ್ದರು. ಒಮ್ಮೆ ಒಬ್ಬಳು ಒಂದು ಪ್ಲಾಸ್ಟಿಕ್ ಗಿಡ ನೆಟ್ಟಿದ್ದ ಪ್ಲಾಸ್ಟಿಕ್ ಪಾಟ್ ತಂದಳು. ಅದರಲ್ಲಿ ಮಣ್ಣಿನ ಬದಲು ಚಾಕೊಲೇಟ್ ಕೇಕ್ ಮತ್ತು ಒರಿಯೋ ಕುಕೀಸ್ ಬೆರೆಸಿದ ಸಿಹಿ ಇತ್ತು. ಅದನ್ನು ಬಡಿಸಿಕೊಳ್ಳಲು ಮಾಲಿಗಳು ಬಳಸುವ ಸ್ಪೇಡ್ ಮಾದರಿಯ ಪುಟ್ಟ ಸಾಧನವಿತ್ತು. ತಾನು ತಯಾರಿಸಿದ ಈ ವಿಶೇಷ ತಿಂಡಿ ಕುರಿತು ಅವಳು ಬಡಾಯಿ ಕೊಚ್ಚಿಕೊಂಡಳು. ಒಬ್ಬ ಹುಡುಗ ಬ್ರೌನಿ ಎಂಬ ಸಿಹಿ ತಿಂಡಿ ತಂದಿದ್ದ. ಅದನ್ನು ಅವನೇ ತಯಾರಿಸಿದ್ದ. ಈ ಸಿಹಿ ತಿಂಡಿಗಳು ನನಗೂ ಸಿಕ್ಕುತ್ತಿದ್ದವು!
ಜರ್ನಲಿಸಂ ಲ್ಯಾಬ್ ಕ್ಲಾಸಿನ ಮುಂಚೆ ಪ್ರೊಫೆಸರ್ ಬಂದು ಒಂದು ಗಂಟೆ ಲೆಕ್ಚರ್ ಕೊಡುತ್ತಿದ್ದರು. ಅನಂತರ ಒಂದು ಎಕ್ಸರ್ಸೈಸ್ ಕೊಡುತ್ತಿದ್ದರು. ಎಲ್ಲರೂ ಒಂದು ಅರ್ಧ ಗಂಟೆಯಲ್ಲಿ ನೇರವಾಗಿ ಟೈಪ್ ಮಾಡಿ ಅದನ್ನು ಪ್ರಿಂಟ್ ಮಾಡಿ ತರಬೇಕಾಗಿತ್ತು. ಅರ್ಧ ಗಂಟೆ ಎಂದರೆ ಅರ್ಧ ಗಂಟೆ. ಹೀಗಾಗಿ ಆಗ ಕಂಪ್ಯೂಟರ್ ಕೆಟ್ಟರೆ ದೊಡ್ಡ ಸಮಸ್ಯೆ! ಸಣ್ಣ ತೊಂದರೆ ಆದರೂ ಭೀತಿಯಿಂದ ನನ್ನನ್ನು ಕೂಗುತ್ತಿದ್ದರು. ಅಧ್ಯಾಪಕರ ಲೆಕ್ಚರಿನಲ್ಲಿ ಕೂಡುವುದು ಜರೂರು ಅಲ್ಲದಿದ್ದರೂ ನಾನು ಹೋಗುತ್ತಿದ್ದೆ. ಜರ್ನಲಿಸಂ ಮತ್ತು ಮಾಧ್ಯಮ ಕುರಿತಾದ ಬಹಳ ಉತ್ತಮ ಪಾಠಗಳನ್ನು ಕೇಳುವ ಅವಕಾಶ ನನಗೆ ಸಿಕ್ಕಿತು. ಅವರು ತಮ್ಮ ಪಾಠಕ್ಕಾಗಿ ಒಳ್ಳೆಯ ಸಿದ್ಧತೆ ಮಾಡಿಕೊಂಡು ಬರುತ್ತಿದ್ದರು. ನಿರರ್ಗಳವಾಗಿ ಮಾತಾಡುತ್ತಿದ್ದರು. ಸ್ವತಃ ಪತ್ರಿಕೆಗಳಲ್ಲಿ ಕೆಲಸ ಮಾಡುತ್ತಿದ್ದವರು. ಹೀಗಾಗಿ ಅವರ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದರು. ಅಧ್ಯಾಪಕರು ನಾನು ಪಾಠ ಕೇಳಲು ಬರುವುದನ್ನು ಗಮನಿಸಿದರು. ಅವರಿಗೆ ಇದು ಅನಪೇಕ್ಷಿತ. ಒಬ್ಬ ಅಧ್ಯಾಪಕರು ಎಲ್ಲ ವಿದ್ಯಾರ್ಥಿಗಳಿಗೆ ಸೆಮೆಸ್ಟರ್ ಕೊನೆಯಲ್ಲಿ ಆಯೋಜಿಸಿದ ಸಂತೋಷಕೂಟಕ್ಕೆ ನನ್ನನ್ನು ಕೂಡಾ ಕರೆದರು.
ಟೀಚಿಂಗ್ ಅಸಿಸ್ಟೆಂಟ್ ಶಿಪ್ ಸಿಕ್ಕಾಗ ಜೊತೆಗೆ ಕೆಲವು ಪಾಠದ ಯೂನಿಟ್ ಉಚಿತವಾಗಿ ಸಿಕ್ಕುತ್ತವೆ. ಒಂದು ಕೋರ್ಸ್ ಎಂದರೆ ಮೂರು ಯೂನಿಟ್. ವಾರಕ್ಕೆ ಮೂರು ಗಂಟೆಗಳ ಪಾಠ ಎಂದು ಅದರ ಅರ್ಥ. ಆಗ ಒಂದು ಯೂನಿಟ್ ಗೆ ಸುಮಾರು ನಾಲ್ಕು ನೂರು ಡಾಲರ್ ಫೀ ಇತ್ತೆಂದು ನೆನಪು. ಒಂದು ಕೋರ್ಸಿಗೆ ಸುಮಾರು ಸಾವಿರ ಡಾಲರ್ ಫೀ. ನಾನು ಇಂಥ ಮೂರು ಕೋರ್ಸ್ ಮುಕ್ತವಾಗಿ ತೆಗೆದುಕೊಳ್ಳಬಹುದು. ಆದರೆ ನನ್ನ ಕೋರ್ಸ್ ಅಗತ್ಯಗಳು ಪೂರೈಸಿವೆ!
ನಾನು ಥೀಸಿಸ್ ಕೆಲಸ ಬರೆಯಲು ಪ್ರಾರಂಭಿಸಿದ್ದ ಕಾರಣ ಯಾವುದಾದರೂ ವಿಭಿನ್ನ ಕೋರ್ಸ್ ತೆಗೆದುಕೊಳ್ಳುವ ಆಸೆ ಹುಟ್ಟಿತು. ಇದರಿಂದ ಗಮನ ಬೇರೆ ಕಡೆಗೆ ಹೊರಳುತ್ತದೆ. ನಾನು ಆಗ ತೆಗೆದುಕೊಂಡ ಕೋರ್ಸ್ ಕಂಪರೇಟಿವ್ ಲಿಟರೇಚರ್. ಅಥವಾ ತುಲನಾತ್ಮಕ ಸಾಹಿತ್ಯ ಅಧ್ಯಯನ. ಕೋರ್ಸನ್ನು ಕ್ರೆಡಿಟ್ ಮಾಡಿದರೆ ನಾನು ಹೋಂ ವರ್ಕ್ ಮಾಡಬೇಕು. ಎಕ್ಸಾಂ ಬರೆಯಬೇಕು. ಇದೆಲ್ಲ ಬೇಡ ಎಂದು ನಾನು ಆಡಿಟ್ ಮಾಡಿದೆ. ಆದರೆ ಯಾವ ತರಗತಿಯನ್ನೂ ತಪ್ಪಿಸದೆ ಹೋಗುತ್ತಿದ್ದೆ. ಅಧ್ಯಾಪಕರ ಪಾಠ ಮಾಡುವ ಶೈಲಿಗೆ ನಾನು ಮಂತ್ರಮುಗ್ಧನಾಗಿ ಕೇಳುತ್ತಿದ್ದೆ. ಅವರು ಬಳಸುತ್ತಿದ್ದ ಪಠ್ಯ ದ ಸ್ಟೋರಿ ಅಂಡ್ ಇಟ್ಸ್ ರೈಟರ್. ಇದೊಂದು ಬೃಹತ್ ಗಾತ್ರದ ಪುಸ್ತಕ. ಇದರಲ್ಲಿ ಏನಿಲ್ಲ ಎಂದರೂ ನೂರು ಸಣ್ಣಕತೆಗಳಿವೆ. ವಿಶ್ವದ ಅನೇಕ ದೇಶಗಳ ಲೇಖಕರ ಕತೆಗಳನ್ನು ಆರಿಸಿಕೊಂಡಿದ್ದಾರೆ. ಆರ್ ಕೆ ನಾರಾಯಣ್ ಅವರ ಕಥೆ ಕೂಡಾ ಇತ್ತು. ಪ್ರತಿಯೊಂದು ಕಥೆಯ ಪ್ರಾರಂಭದಲ್ಲಿ ಕತೆಗಾರನ ಪರಿಚಯ ಕೊಡಲಾಗಿದೆ. ಅಧ್ಯಾಪಕರು ಒಂದು ಸೆಮಿಸ್ಟರಿನಲ್ಲಿ ಸುಮಾರು ಹತ್ತು ಕತೆಗಳನ್ನು ಆಯ್ದುಕೊಂಡು ಪಾಠ ಮಾಡುತ್ತಾರೆ. ಎಲ್ಲರೂ ಕತೆಯನ್ನು ಓದಿಕೊಂಡು ಹೋಗಬೇಕು. ತರಗತಿಯಲ್ಲಿ ಏನಿದ್ದರೂ ಚರ್ಚೆ, ವಿಮರ್ಶೆ. ಮತ್ತು ಅದೇ ಬಗೆಯ ಇನ್ನಿತರ ಕತೆಗಳ ಬಗ್ಗೆ ಪರಿಚಯ. ಇಡೀ ತರಗತಿ ಒಂದು ರಸಗ್ರಹಣದ ಅನುಭವ.
ನಾನೂ ವಿಶ್ವವಿದ್ಯಾಲಯದ ಬುಕ್ ಸ್ಟೋರಿನಲ್ಲಿ ಪುಸ್ತಕ ಖರೀದಿಸಿದೆ. ಈ ಪುಸ್ತಕ ಈಗ ಹತ್ತು ಆವೃತ್ತಿ ದಾಟಿದೆ ಎಂದು ಅಮೆಜಾನ್ ನೋಡಿದಾಗ ತಿಳಿಯಿತು.
#ನೆನಪುಗಳು
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ