ಜಗತ್ತಿನ ಕೊನೆಯ ಪ್ರೇಮಕವಿತೆ
ಜಗತ್ತಿನ ಕೊನೆಯ ಪ್ರೇಮಕವಿತೆ ಮೂಲ: ಜೋಸೆಫ್ ಫಸಾನೋ ಕನ್ನಡಕ್ಕೆ : ಸಿ ಪಿ ರವಿಕುಮಾರ್ ಜಗತ್ತಿನ ಕೊನೆಯ ಪ್ರೇಮಕವಿತೆಯಲ್ಲಿ ಒಬ್ಬ ತಾಯಿ ಮತ್ತು ಒಂದು ಮಗು ನೆಲಮಾಳಿಗೆಯಲ್ಲಿ ಬಚ್ಚಿಟ್ಟುಕೊಂಡು ಕುಳಿತಿದ್ದಾರೆ ಆಕಾಶ ಕಳಚಿ ಬೀಳುವ ಹೊತ್ತು. (ಅವರು ಕುಳಿತಿದ್ದ ಸ್ಥಳದಲ್ಲಿ ಏನು ಸಿಕ್ಕಿದೆ ನೋಡು, ಒಂದು ದಿನಚರಿ, ಒಂದು ರೊಟ್ಟಿಯ ತುಣುಕು, ಒಂದು ಆಟಿಕೆ.) ಬೂಟುಗಳ ಸಪ್ಪಳ ಸನಿಹವಾದಾಗ ತಾಯಿ ಮಗುವಿನ ಬಾಯಿಗೆ ನೀರು ಹಾಕುತ್ತಾ ಹೇಳುತ್ತಾಳೆ ಬಹಳ ಮೆಲ್ಲನೆ ಧ್ವನಿಯಲ್ಲಿ: ನಿನ್ನ ಅಪ್ಪ ನನ್ನ ಬಾಳಿನಲ್ಲಿ ಹೇಗಿದ್ದರು ಎಂದರೆ ಕಿತ್ತಳೆ ಮರಗಳ ಮೇಲೆ ಹೊಯ್ಯುವ ಸಣ್ಣ ಮಳೆಯ ವೃಷ್ಟಿ ಮರೆಯಬೇಡ ಎಂದೂ ಅಮಿತ ಆನಂದದಲ್ಲಿ ಉಂಟಾಯಿತೆಂದು ನಿನ್ನ ಸೃಷ್ಟಿ.