ಚಳಿಗಾಲದ ಕೋಟ್

 


ಮೂಲ: ರೋಸಿತಾ ಬೋಲ್ಯಾಂಡ್ 

ಕನ್ನಡಕ್ಕೆ: ಸಿ ಪಿ ರವಿಕುಮಾರ್


ಎಸೆಯಲು ಮನಸ್ಸಿಲ್ಲದೆ ಎಷ್ಟೋ ವರ್ಷಗಳಿಂದ
ಅಮ್ಮ ಅಡಗಿಸಿ ಇಟ್ಟಿದ್ದ ಅವಳ ಹಳೆಯ ಬಟ್ಟೆಬರೆ 
ಒಂದು ದಿನ ಸಿಕ್ಕಿಬಿದ್ದವು ನನ್ನ ಕೈಗೆ.

ನಾನೀಗ ಧರಿಸುತ್ತೇನೆ ಅವಳ ಕಾಟನ್ ಉಡುಪು
ಅದರ ಒಡಲಿನ ತುಂಬಾ ಗುಲಾಬಿ ಹಳದಿಕೆಂಪು;
ಗಟ್ಟಿನಾರಿನ ಬಟ್ಟೆಯ ಹಳೇ ಮಾದರಿಯ ಸೂಟ್,
ಮತ್ತು ನನ್ನ ಅಚ್ಚುಮೆಚ್ಚಿನ 
ಕಾಶ್ಮೀರದ ಮೇಕೆ ತುಪ್ಪುಟದ  ಕೋಟ್ 
ಆಪ್ಯಾಯವಾಗಿದೆ ಈ ಚಳಿಗೆ.

ಪ್ರತಿವರ್ಷ ಈ ಕೋಟ್ ಹೋಗಿಬರುತ್ತದೆ ಡ್ರೈ ಕ್ಲೀನ್ ಅಂಗಡಿಗೆ
ಹುಡುಕಾಡುತ್ತೇನೆ ಅದರ ಬಿದ್ದುಹೋದ ಗುಂಡಿಗೆ
ಆಸ್ಥೆಯಿಂದ ಪೋಣಿಸಿ ಸೂಜಿ ದಾರ 
ಸರಿಪಡಿಸುತ್ತೇನೆ ಬಿಚ್ಚಿಹೋದ ಹೊಲಿಗೆ.

ಪಕ್ಕೆಗಳ ಹತ್ತಿರ ಬಿಟ್ಟುಕೊಳ್ಳುತ್ತಿರುವ ಬಾಯಿ
ಮತ್ತು ಒಳಗಿಂದ ಇಣುಕುತ್ತಿರುವ ಸ್ಯಾಟಿನ್ ಒಳಪದರ:
ನನ್ನ ದಿವ್ಯ ನಿರ್ಲಕ್ಷ್ಯ ನೋಟ ಇವುಗಳ ಕಡೆಗೆ. 

ಈಚೆಗಷ್ಟೇ ಅಮ್ಮ ಬಿಟ್ಟುಕೊಟ್ಟಳು ಗುಟ್ಟು
ಈ ಕೋಟ್ ಅವಳು ಕೊಂಡದ್ದು 
ನನ್ನನ್ನು ಗರ್ಭದಲ್ಲಿ ಧರಿಸಿದ್ದ ಶರತ್ಕಾಲದಲ್ಲಂತೆ.

ಅಂದಿನಿಂದಲಾಗಾಯ್ತು ಬೆಳಗಿನ ಕುಳಿರ್ಗಾಳಿಯಲ್ಲಿ
ಇನ್ನಷ್ಟು ಬಲವಾಗಿ ಅಪ್ಪಿಕೊಂಡು ಕೋಟನ್ನು 
ಬೀಗುತ್ತೇನೆ ಹೆಣೆಯುತ್ತಾ ಮನದಲ್ಲಿ ಹೊಸ ಸಾಧ್ಯತೆ.
ಥೇಟ್ ಹಾಗೇ, ಹೇಗೆ ಅಮ್ಮ ಆ ವರ್ಷ
ಇದನ್ನು ಧರಿಸಿ ಓಡಾಡುತ್ತಾ ಕಂಡಿರಬಹುದೋ ಹಾಗೆ
ಈ ಕೋಟ್ ಒಳಗೆ ಹುದುಗಿದ್ದಾಗ 
ನಮ್ಮಿಬ್ಬರದ್ದೂ ರೂಪುರೇಷೆ.




ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕತ್ತಲೆ ಬೆಳಕು - ಶ್ರೀರಂಗರ ನಾಟಕ