ಕಾರ್ಟೂನ್ ಭೌತಶಾಸ್ತ್ರ - ಭಾಗ ೧

ಮೂಲ: ನಿಕ್ ಫ್ಲಿನ್ (ಅಮೇರಿಕಾ ಸಂಯುಕ್ತ ರಾಷ್ಟ್ರ)

ಕನ್ನಡಕ್ಕೆ: ಸಿ. ಪಿ. ರವಿಕುಮಾರ್ 




ಹತ್ತುವರ್ಷಕ್ಕಿಂತ ಚಿಕ್ಕಮಕ್ಕಳಿಗೆ ಗೊತ್ತಿರಕೂಡದು:
ನಮ್ಮ ವಿಶ್ವ ಸದಾ ಹಿಗ್ಗುತ್ತಲೇ ಇರುತ್ತದೆ,
ನಿರ್ವಾತದಲ್ಲಿ ಮುಖ ತೂರಿಸುವ ತಾರಾಗಣಗಳನ್ನು 

ಇಡಿಯಾಗಿ ಕಬಳಿಸುತ್ತವೆ ತಾರಾಗಣಗಳು,

ಸೌರ ವ್ಯವಸ್ಥೆಗಳು ಕುಸಿಯುತ್ತವೆ, ಎಲ್ಲವೂ ನಡೆಯುತ್ತದೆ 
ನಿಶ್ಶಬ್ದ ಚಲನಚಿತ್ರದಲ್ಲಿ ನಡೆಯುವ ಹಾಗೆ, ಇತ್ಯಾದಿ. 
ಹತ್ತು ವರ್ಷವಾದಾಗ ನಾವಿನ್ನೂ ತುಳಿಯುತ್ತಿರುತ್ತೇವೆ 

ಕಾರ್ಟೂನ್ ಅನಿಮೇಶನ್ ನಿಯಮಗಳ ಕಲಿಕೆಯ ಹಾದಿ

ಅಲ್ಲಿ ಯಾರೋ ಒಬ್ಬ ಬರೆದರೆ ಬಂಡೆಯ ಮೇಲೆ ಬಾಗಿಲ ಚಿತ್ರ 
ತೆರೆದು ಒಳಹೋಗಬಲ್ಲ ಅವನೊಬ್ಬ ಮಾತ್ರ. 
ಪ್ರಯತ್ನಿಸಿದರೆ ಬೇರೆ ಯಾರಾದರೂ

ಬಂಡೆಗೆ ಡಿಕ್ಕಿ ಹೊಡೆದು ಚೂರುಚೂರು. 
ಹತ್ತು ವರ್ಷದ ಮಕ್ಕಳ ಪ್ರಪಂಚದಲ್ಲಿ ಇಷ್ಟು ಸಾಕು -
ಹೊತ್ತಿ ಉರಿಯುವ ಮನೆಗಳು,  ಫೇಲಾದ ಕಾರ್ ಬ್ರೇಕು,
ಮುಳುಗುವ ಹಡಗುಗಳು, ಭೂಮಿಯ ಮೇಲೆ ಆಕ್ರಮಣ 

ನಡೆಸುವ ಅದೆಷ್ಟೋ ದುಷ್ಟ ಶಕ್ತಿ, 

ಇವರೇ ಅಲ್ಲಿ ನಾಯಕರು. ನುಗ್ಗಬಹುದು  ಓಡುತ್ತಾ ಬಂದು 
ಹೊತ್ತಿ ಉರಿಯುವ ಮನೆಯೊಳಗೆ, ಪಾರಾಗಲು 
ದೋಣಿಗಳಿವೆ ಹಡಗುಗಳಲ್ಲಿ, 

ಧಾವಿಸುತ್ತವೆ ಟ್ರಕ್ಕುಗಳು, ಏಣಿಗಳನ್ನು ಹೊತ್ತು. 
ಮೇಲಿಂದ ನೆಗೆದರೆ ಹಿಡಿದುಕೊಳ್ಳುತ್ತಾರೆ, ಜೀವ ಪಾರು.   ಮಗು 

ಸ್ಕೂಲ್ ಬಸ್ ಚಾವಣಿಯ ಮೇಲೆ ಕೈಯಿಟ್ಟು 
ನಡೆಸಬಲ್ಲಳು ಅದನ್ನು ಮರಳಿನ ನಗರಿಯಲ್ಲಿ. ಅವಳಿಗೆ ಗೊತ್ತು 

ಸರಿಯಾಗಿ ಎಲ್ಲಿ ಜಾರುತ್ತದೆ  ವಾಹನ, ಎಲ್ಲಿ 
ಸೇತುವೆ ತುಂಡಾಗುತ್ತದೆ, ಯಾರು ಈಜಿ ಪಾರಾಗುವರು 
ಮತ್ತು ಯಾರನ್ನು ಸೆಳೆದು ತಿನ್ನುವುವು ಶಾರ್ಕ್ ಮೀನು. ಅವಳು ಕಲಿಯುತ್ತಾಳೆ 

ಮನುಷ್ಯನು ಬೆಟ್ಟದ ತುತ್ತತುದಿಯಿಂದ ಹಾರಿದರೂ 

ಅವನು ಕೆಳಕ್ಕೆ ಬೀಳುವುದಿಲ್ಲ 

ಅವನಿಗೆ ತನ್ನ ತಪ್ಪಿನ ಅರಿವಾಗುವವರೆಗೂ. 


ಕವಿತೆಯ ಸ್ವಾರಸ್ಯ: ಕಾರ್ಟೂನ್ ಚಿತ್ರಗಳನ್ನು ನೋಡಿದವರೆಲ್ಲರಿಗೂ ಅಲ್ಲಿನ ವೈಚಿತ್ರ್ಯಗಳ ಪರಿಚಯವಿರುತ್ತದೆ. ಅಲ್ಲಿ ಹೈಸ್ಕೂಲಿನಲ್ಲಿ ಕಲಿಸುವ ಕ್ಲಾಸಿಕಲ್ ಭೌತಶಾಸ್ತ್ರದ ಯಾವ ನಿಯಮಗಳೂ ನಿಲ್ಲುವುದಿಲ್ಲ. ಹತ್ತು ವರ್ಷದ ಮಕ್ಕಳೇನು, ದೊಡ್ಡವರೂ ಕಾರ್ಟೂನ್ ಚಿತ್ರಗಳನ್ನು ನೋಡುತ್ತಾ ಮಂತ್ರಮುಗ್ಧರಾಗುವುದನ್ನು ನೋಡುತ್ತೇವೆ.  ಕಾರ್ಟೂನ್ ಚಿತ್ರದ ಪಾತ್ರ ಕೆಲವು ಸಲ ಎತ್ತರದ ಕಟ್ಟಡದ ಮೇಲೆ ಯಾರನ್ನೋ ಹಿಂಬಾಲಿಸುತ್ತಾ ಹೋಗುವ ಹುಮ್ಮಸ್ಸಿನಲ್ಲಿ ಚಾವಣಿಯ ಹೊರಗೆ ಕಾಲಿಟ್ಟುಬಿಡುತ್ತದೆ.  ಹಾಗೇ ನಡೆದುಕೊಂಡೇ ಹೋಗುತ್ತಿರುತ್ತದೆ.  ಒಮ್ಮೆಲೇ ತಾನು ಮಾಡಿದ ತಪ್ಪಿನ ಅರಿವಾಗಿ ಕೆಳಗೆ ನೋಡಿದಾಗಲೇ ಅದು ಕೆಳಗೆ ಬೀಳುವುದು.   ಹೈಸ್ಕೂಲ್ ಭೌತಶಾಸ್ತ್ರ ನಮಗೆ ಗುರುತ್ವ ಇತ್ಯಾದಿ ಹೇಳಿಕೊಡದೇ ಇದ್ದಿದ್ದರೆ ನಮ್ಮ ಜಗತ್ತೂ ಬೇರೆಯೇ ಆಗಿರುತ್ತಿತ್ತೇನೋ! ಇದನ್ನೇ ಸ್ವಲ್ಪ್ಪ ಮುಂದುವರೆಸಿದರೆ ನಮಗೆ ಇನ್ನೊಂದು ವಿಷಯವೂ ಹೊಳೆಯುತ್ತದೆ - ಸಮಾಜವು ನಮಗೆ ಯಾವುದು ಸರಿ, ಯಾವುದು ತಪ್ಪು ಎಂದು ಹೇಳಿಕೊಡುವವರೆಗೂ ನಾವು ನಮ್ಮದೇ "ಕಾರ್ಟೂನ್" ಪ್ರಪಂಚದಲ್ಲಿರುತ್ತೇವೆ. ಇಂಥದ್ದು ಸಾಧ್ಯ, ಇಂಥದ್ದು ಅಸಾಧ್ಯ ಎಂದು ಬೋಧಿಸುವ ಸಮಾಜಕ್ಕೆ ನಾವು ಹೋಗಿ ಸೇರಲೇ ಬೇಕೇ?!

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)