ಜಲಿಯಾನ್‍ವಾಲಾ ಬಾಗ್‍ನಲ್ಲಿ ವಸಂತ
ಮೂಲ - ಸುಭದ್ರಾ ಕುಮಾರಿ ಚೌಹಾನ್
ಕನ್ನಡಕ್ಕೆ - ಸಿ. ಪಿ. ರವಿಕುಮಾರ್
ಕೋಗಿಲೆಯಲ್ಲ, ಕಾಗೆಯು ಕೂಗಿ ಮುರಿಯುತ್ತದೆ ಮೌನ.
ಸುತ್ತ ಹಾರಾಡುತ್ತಿರುವುದು ಕಪ್ಪುಭೃಂಗವಲ್ಲ, ನೊಣ.
ಮೊಗ್ಗುಗಳು ಅರಳದಂತೆ ಕಚ್ಚಿ ಹಿಡಿದಿವೆ ಮುಳ್ಳು,
ಗಿಡ-ಹೂವುಗಳು ಎಲ್ಲ ಒಣಕಲು-ಒಣಕಲು.
ಪರಿಮಳವಿಲ್ಲದ ಪರಾಗವು ಕಲೆಯಂತೆ ಬಿದ್ದಿದೆ -
ಅಯ್ಯೋ ಸುಂದರ ಉಪವನವಿಡೀ ರಕ್ತದಲ್ಲಿ ಅದ್ದಿದೆ!
ಓ ಋತುರಾಜ ವಸಂತ! ನೀನಿಲ್ಲಿ ಮೆಲ್ಲಮೆಲ್ಲಗೆ ಕಾಲಿಡು.
ಶೋಕಸ್ಥಾನವಿದು, ಸದ್ದು ಸ್ವಲ್ಪವೂ ಕೂಡದು.
ಬೀಸುವುದಾದರೆ ಗಾಳಿ ಮಂದಮಂದವಾಗಿ ಬೀಸಲಿ
ದುಃಖದ ಆರ್ತಸ್ವರವ ಜೊತೆಗೆ ಕೊಂಡೊಯ್ಯದಿರಲಿ
ಹಾಡುವುದಾದರೆ ಹಾಡಲಿ ಶೋಕರಾಗವನ್ನು ಕೋಗಿಲೆ
ಭ್ರಮರ ಗುಂಜಿಸಲಿ ಶೋಕಕಥೆ-ಕಷ್ಟಕೋಟಲೆ
ಗಂಧ ಬೀರಿದರೂ ಮಂದವಾಗಿರಲಿ, ಕಣ್ಣೀರಿನಲಿ ನೆಂದು
ತಂದು ಎರಚದಿರು ಇಲ್ಲಿ ಉಲ್ಲಾಸಭಾವ ಖಂಡಿತ
ಪೂಜೆಗೆಷ್ಟು ಬೇಕೋ ಅಷ್ಟು, ಎಲ್ಲವೂ ಹಿತಮಿತ
ಕೋಮಲ ಬಾಲಕರು ಸತ್ತರು ಇಲ್ಲಿ ಗುಂಡು ತಿಂದು
ಚೆಲ್ಲು ಅವರಿಗಾಗಿ ಒಂದಷ್ಟು ಮೊಗ್ಗುಗಳ ತಂದು
ಆಸೆಗಳು ತುಂಬಿದ ಹೃದಯಗಳು ಇಲ್ಲಿ ಬಿದ್ದಿವೆ ಮುರಿದು
ಬಿದ್ದಿವೆ ಅನಾಥಪುಷ್ಪಗಳಂತೆ ದೇಶದ ಲತೆಯನ್ನು ತೊರೆದು
ಅರೆಬಿರಿದ ಒಂದಿಷ್ಟು ಮೊಗ್ಗು ಅವರಿಗಾಗಿ ತಂದು
ಜೊತೆಗೆ ಸಮರ್ಪಿಸು ಕಣ್ಣಿನಿಂದ ಜಾರುವ ಬಿಂದು
ವೃದ್ಧರೂ ಅದೆಷ್ಟೋ ಸತ್ತರು ಇಲ್ಲಿ ನೋವಿನಲ್ಲಿ ನರಳಿ
ಒಣಕಲು ಹೂ ಒಂದಿಷ್ಟು ಹಾಕಿಬಿಡು ಅವರ ಸ್ಮೃತಿಯಲ್ಲಿ
ಇಷ್ಟೆಲ್ಲಾ ಮಾಡುವಾಗ ನೆನಪಿರಲಿ! ಸದ್ದು ಸ್ವಲ್ಪವೂ ಕೂಡದು
ಶೋಕಸ್ಥಾನವಿದು, ಓ ಋತುರಾಜ! ಬಾ ಬಹುಮೆಲ್ಲನೆ ನಡೆದು
ಬ್ಲಾಗ್‌ನ ನಿರ್ವಾಹಕರು ಈ ಕಾಮೆಂಟ್ ಅನ್ನು ತೆಗೆದು ಹಾಕಿದ್ದಾರೆ.
ಪ್ರತ್ಯುತ್ತರಅಳಿಸಿ