ನಿನ್ನ ಸಂವೇದನೆ ಪಡೆದು ನಾನೇನು ಮಾಡಲಿ?

ಮೂಲ ಹಿಂದಿ ರಚನೆ - ಹರಿವಂಶರಾಯ್ ಬಚ್ಚನ್ 
ಕನ್ನಡಕ್ಕೆ - ಸಿ.ಪಿ. ರವಿಕುಮಾರ್ 
Image result for sympathy wiki

ನಿನ್ನ ಸಂವೇದನೆ ಪಡೆದು ನಾನೇನು ಮಾಡಲಿ ಹೇಳು?
ನಾನೇನು ಮಾಡಲಿ?

ನೋವಿನಲ್ಲಿದ್ದಾಗಲೆಲ್ಲಾ ನಾನು
ಸಂವೇದನೆ ತೋರುವೆ ಕೈ ನೀಡಿ
ನಾನೂ ತಿಳಿಸುವೆ ಕೃತಜ್ಞತೆಗಳನ್ನು
ಪೂರೈಸುವೆವು ಲೋಕಾರೂಢಿ
ಈಚೆಗೇಕೋ ಆಭಾರಿಯಾಗುತ್ತ ಭಾರವಾಗುತ್ತಿದೆ ನನ್ನ ಹೆಗಲು!
ನಿನ್ನ ಸಂವೇದನೆ ಪಡೆದು ನಾನೇನು ಮಾಡಲಿ ಹೇಳು?
ಏನು ಮಾಡಲಿ?

ನನ್ನ ಒಂದಾದರೂ ನಿಟ್ಟುಸಿರು
ನಿನ್ನದಾಗಿದ್ದು ಎಂದು?
ನಿನ್ನ ಕಣ್ಣುಗಳಿಂದ ಉದುರುವುದೇ
ನನ್ನ ಕಂಬನಿಯ ಬಿಂದು?
ಎಷ್ಟುದಿನ ಬಚ್ಚಿಟ್ಟೀತು ಸತ್ಯ, ಮಾತುಗಳ ಬಾಗಿಲು!
ನಿನ್ನ ಸಂವೇದನೆ ಪಡೆದು ನಾನೇನು ಮಾಡಲಿ ಹೇಳು!
ನಾನೇನು ಮಾಡಲಿ?

ತನ್ನ ದುಃಖ ಪರರಿಗೆ
ಕೊಡಬಲ್ಲವರಾರು?
ಪರರ ದುಃಖ ತಮ್ಮದೆಂದೇ
ಯಾರು ಸ್ವೀಕರಿಸುವರು?
ಎಷ್ಟುದಿನ ಈ ವಂಚನೆಯ ವ್ಯಾಪಾರ ಮಾಡಿಕೊಳ್ಳುವೆವು ಅದಲು ಬದಲು?
ನಿನ್ನ ಸಂವೇದನೆ ಪಡೆದು ನಾನೇನು ಮಾಡಲಿ ಹೇಳು?
ನಾನೇನು ಮಾಡಲಿ?

ಒಪ್ಪಿಕೊಳ್ಳೋಣವೇ, ಈ ಪಥದಲ್ಲಿ
ಎಲ್ಲರೂ ಒಂಟಿ ನಡೆದರೂ ಅಕ್ಕಪಕ್ಕ.
ಅವರವರ ನೋವು ಅವರವರ ಬುತ್ತಿ,
ಹಂಚಲಾರದು ಪರಸ್ಪರ ಸುಖದುಃಖ.
ಪರರ ವೇದನೆಗೆ ಸಂವೇದನೆ ಸೂಚಿಸುವ ವ್ಯಕ್ತಿ
ತನ್ನದೇ ವೇದನೆಯಿಂದ ಪಡೆಯಬಯಸುವನು ಮುಕ್ತಿ
ನೀ ದುಃಖಿಯೇ? ಇಗೋ ನಾ ಸುಖಿ! ಅಭಿಶಪ್ತ ವಿಶ್ವದ್ದಿದುವೆ ಅಳಲು!
ನಿನ್ನ ಸಂವೇದನೆ ಪಡೆದು ನಾನೇನು ಮಾಡಲಿ ಹೇಳು?
ನಾನೇನು ಮಾಡಲಿ?



ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)