ಕೃಷ್ಣನ ಎಚ್ಚರಿಕೆ
ಮೂಲ ಹಿಂದಿ ಕವಿತೆ: ರಾಮಧಾರಿ ಸಿಂಹ್ "ದಿನಕರ್"
ಕನ್ನಡ ಭಾಷಾಂತರ: ಸಿ. ಪಿ. ರವಿಕುಮಾರ್
ವರುಷಗಟ್ಟಲೆ ಅಲೆದಲೆದು ಕಾಡುಮೇಡುಗಳಲ್ಲಿ
ಎಲ್ಲೆಡೆ ಕಾಲ್ತೊಡರುವ ವಿಘ್ನ ಬಾಧೆಗಳ ಬಳ್ಳಿ
ಚುಚ್ಚುವ ಕಲ್ಮುಳ್ಳು, ಬಿಸಿಲು ಮಳೆಗಾಳಿಗೆ
ಪಾಂಡವರು ಮಾಗಿದರು ವಿಧಿಯ ಈ ದಾಳಿಗೆ
ಸೌಭಾಗ್ಯವೆಂಬುದು ಸದಾ ನಿದ್ರಿಸುವುದಿಲ್ಲ
ಬನ್ನಿ ನೋಡುವ ಮುಂದಿನ ಕುತೂಹಲ!
ತಿಳಿಸಿ ಹೇಳಲು ಸ್ನೇಹಮಾರ್ಗವನ್ನು
ಸರಿದಾರಿಗೆ ಕರೆತರಲು ಎಲ್ಲರನ್ನೂ
ದುರ್ಯೋಧನನಿಗೆ ಸಮಯಕ್ಕೆ ನೀಡಿ ತಿಳುವಳಿಕೆ
ತಪ್ಪಿಸಲು ಭೀಷಣ ವಿಧ್ವಂಸ ಮುಂದಕ್ಕೆ
ಭಗವಂತನು ಕಾಲಿಟ್ಟನು ಹಸ್ತಿನಾಪುರಕೆ
ಹೊತ್ತು ಪಾಂಡವರ ಸಂದೇಶ, ಹಾರೈಕೆ
"ನ್ಯಾಯ ನೀಡುವುದಾದರೆ ನೀಡು ನಮ್ಮರ್ಧ
ಅಡ್ಡ ಬಂದರೆ ಅದಕ್ಕೂ ನಿನ್ನ ಕಡುಸ್ವಾರ್ಥ
ಕೊಟ್ಟು ತೀರಿಸು ಕೇವಲ ಐದು ಗ್ರಾಮಗಳು
ಇಟ್ಟುಕೋ ನಿನ್ನ ಬಳಿ ಬೇರೆಲ್ಲವನ್ನೂ
ಅಷ್ಟರಲ್ಲೇ ನಮಗೆ ಸಿಕ್ಕುವುದು ತೃಪ್ತಿ
ಬಂಧುಕಲಹದಲ್ಲಿಲ್ಲ ನಮಗೆ ಆಸಕ್ತಿ"
ಅದನ್ನೂ ದುರ್ಯೋಧನ ಕೊಡಲಾರದೆ ಹೋದ
ಪಡೆಯಲಾರದೆ ಹೋದ ಸಮಾಜದ ಆಶೀರ್ವಾದ
ಸಾಲದಕ್ಕೆ ಹರಿಯನ್ನೇ ಬಂಧಿಸಲು ಇತ್ತ ಆಣತಿ
ಅಸಾಧ್ಯವನು ಸಾಧಿಸಲು ಹೊರಟ ತೀಕ್ಷ್ಣ ಮತಿ
ನಾಶವೆಂಬುದು ಮನುಷ್ಯನಿಗೆ ಬರಬೇಕೆಂದಾಗ
ಸಾಯುತ್ತದೆ ಎಲ್ಲಕ್ಕೂ ಮೊದಲು ಅವನ ವಿವೇಕ
ಹರಿ ಮಾಡಿದನಾಗ ಭೀಷಣ ಹೂಂಕಾರ
ತೋರಿದನು ತನ್ನಯ ವಿಶ್ವಾಕಾರ
ಕೋಪದ ಕಿಡಿ ಎಲ್ಲೆಡೆ ಹಾರಿದವು
ದಿಗ್ಗಜರೆಲ್ಲರೂ ಅಲುಗಾಡಿದರು
"ಹಗ್ಗದಿಂದ ಕಟ್ಟುವೆಯಾ ನನ್ನನ್ನ?
ಬಾ ಬಂಧಿಸು ಬಾ ನನ್ನನು ದುರ್ಯೋಧನ!
ಗಗನ ಲೀನವಾಗಿದೆ ನೋಡಿಲ್ಲಿ
ಪವನ ಲೀನವಾಗಿದೆ ನೋಡಿಲ್ಲಿ
ನನ್ನೊಳು ವಿಲೀನ ಸಕಲ ಝೇಂಕಾರ
ನನ್ನೊಳು ವಿಲೀನ ಸಕಲ ಸಂಸಾರ
ಅಮರತ್ವವೂ ನನ್ನಿಂದಲೇ ಸೃಷ್ಟಿ
ನನ್ನಿಂದಲೇ ಸಂಹಾರವು ಪ್ರಾಪ್ತಿ
ಉದಯಾಚಲ ಎನ್ನಯ ಹೊಳೆವ ಫಾಲ
ಭೂಮಂಡಲ ಎನ್ನಯ ಎದೆ ವಿಶಾಲ
ಪರಿಧಿಯಾಚೆ ಚಾಚುತ್ತಿವೆ ತೋಳು
ಮೈನಾಕ ಮೇರು ಎನ್ನಯ ಕಾಲುಗಳು
ಹೊಳೆಯುವ ಗ್ರಹಮಂಡಲ ತಾರೆಗಳು
ಇರುವುವೆನ್ನ ಮುಖದೊಳಗೇ ನೋಡು
ಕಣ್ಣಿದ್ದರೆ ನೋಡು ಈ ದೃಶ್ಯ-ಅಕಾಂಡ
ನನ್ನೊಳಗಿಹ ಎಲ್ಲಾ ಬ್ರಹ್ಮಾಂಡ
ಚರಾಚರವು, ಜಗ, ಕ್ಷರ-ಅಕ್ಷರಗಳು
ನಶ್ವರ ಮಾನವ, ಸುರ ಅಜರಾಮರರು,
ಶತಕೋಟಿ ಸೂರ್ಯ ಶತಕೋಟಿ ಚಂದ್ರ
ಶತಕೋಟಿ ಸರಿತೆ, ಜಲಪಾತ ಸಾಗರ
ಶತಕೋಟಿ ವಿಷ್ಣು, ಬ್ರಹ್ಮ, ಮಹೇಶ
ಶತ ಕೋಟಿ ವಿಷ್ಣು ಜಲಪತಿ, ಧನೇಶ
ಶತಕೋಟಿ ರುದ್ರ, ಶತಕೋಟಿ ಕಾಲ
ಶತಕೋಟಿ ದಂಡಧರ ಲೋಕಪಾಲ
ಹಗ್ಗದಿಂದ ಬಂಧಿಸು ಇವರನ್ನು
ಬಾ ಬಂಧಿಸು ದುರ್ಯೋಧನ ನನ್ನನ್ನು!
ಭೋಲೋಕ ಅತಳ ಪಾತಾಳ ನೋಡು
ಗತಕಾಲ ಅನಾಗತ ಕಾಲ ನೋಡು
ನೋಡಿಲ್ಲಿ ಜಗತ್ತಿನ ಆದಿ ಸೃಜನ
ನೋಡಿಲ್ಲಿ ಮಹಾಭಾರತದ ರಂಗರಣ
ನೋಡಿಲ್ಲಿ ತುಂಬಿರುವ ಮೃತ ಶರೀರ
ಹುಡುಕು ಇರಬಹುದು ನೀನಿಲ್ಲಿ ಧೀರ!
ಆಕಾಶದಲ್ಲಿ ಕವಿದಿರುವ ಮೇಘ
ಪದತಳದಿ ಬಿದ್ದ ಪಾತಾಳ ಲೋಕ
ಮುಚ್ಚಿಟ್ಟ ಮುಷ್ಟಿಯಲಿ ಮೂರು ಕಾಲ
ನೋಡು ನೋಡೆನ್ನ ರೂಪ ವಿಕರಾಳ
ಹುಟ್ಟುವುದು ಎಲ್ಲ ನನ್ನಲ್ಲೆ ಹುಟ್ಟಿ
ಮರಳುವುದು ಸತ್ತು ನನ್ನಲ್ಲೆ ಮತ್ತೆ
ಬೆಂಕಿ ಉಗುಳುತಿದೆ ಚಾಚಿದ ರಸನೆ
ಎನ್ನುಸಿರಾಟವೆ ಪವನದ ಚಲನೆ
ಎಲ್ಲಿ ಬೀಳುವುದೋ ನನ್ನಯ ದೃಷ್ಟಿ
ಅಲ್ಲರಳುತ್ತದೆ ನಗುತ್ತ ಸೃಷ್ಟಿ
ಅರೆಕ್ಷಣವೂ ನಾ ಕಣ್ಮುಚ್ಚಿದರೆ
ಹರಡುವುದಾಕಡೆ ಮರಣದ ಛಾಯೆ
ಉತ್ಸುಕನಾಗಿಹೆ ಬಂಧಿಸಲೆನ್ನನ್ನು
ಉದ್ದ ಹಗ್ಗ ತಂದಿರುವೆಯ ಹೇಳು?
ಬಂಧಿಸ ಬೇಕೆಂದರೆ ನನ್ನನ್ನು
ಬಂಧಿಸು ವಿಶಾಲ ನಭವನು ಮೊದಲು
ಶೂನ್ಯವನ್ನು ತಾ ಸಾಧಿಸದವನು
ನನ್ನನೆಂತು ತಾ ಬಂಧಿಸಿಯಾನು?
ಕೇಳಲಿಲ್ಲ ಹಿತವಚನವ ನೀನು
ಮೈತ್ರಿಗೆ ಏನೂ ಬೆಲೆ ಕೊಡದವನು
ಹಾಗೇ ಆಗಲಿ! ಹೊರಡುವೆನೀಗ
ಕೇಳು ನನ್ನ ಅಂತಿಮ ಸಂಕಲ್ಪ
ಮುಂದಿನದೇನಿದ್ದರೂ ರಣರಂಗದಲಿ!
ಕೊನೆ ಜೀವನ ಯಾ ರಣಮರಣದಲಿ!
ಘಟ್ಟಿಸುವುವು ಗ್ರಹ ನಕ್ಷತ್ರಗಳು
ಜ್ವಾಲಾಮುಖಿ ಕಿಡಿಯುಗುಳುವುವು!
ಅಲ್ಲಾಡಿ ಹೋಗುವನು ಆದಿಶೇಷ
ಬಾಯ್ತೆರೆವ ಕಾಲ ವಿಕರಾಳ ರೋಷ
ನಡೆಯುತ್ತದೆ ಎಂತಹ ರಣ ಕೇಳು!
ನಡೆದಿರದೆಂದೂ ಹಿಂದೂ ಮುಂದೂ
ಸೋದರ ಸೋದರರೊಳು ಹೋರಾಟ
ಇಕ್ಕೆಡೆ ವಿಷ ಬಾಣದ ಹಾರಾಟ
ನರಿ ಡೇಗೆಗಳಿಗೆ ಔತಣ ಕೂಟ
ನರಸೌಭಾಗ್ಯಕೆ ವಜ್ರಾಘಾತ
ಯುದ್ಧದಲ್ಲಿ ಧರೆಗುರುಳುವೆ ಸತ್ತು
ಎಲ್ಲಾ ಹಿಂಸೆಗೆ ಹೊಣೆಯನು ಹೊತ್ತು"
ಸಭೆಯಲಿ ಕವಿಯಿತು ಸ್ಮಶಾನ ಮೌನ
ಮೂರ್ಛಿತ, ಮೂಕ ವಿಸ್ಮಿತರು ಎಲ್ಲ ಜನ
ಭೀತಿ ಎಲ್ಲರೊಳಗೂ ಮೂಡಿತ್ತು
ವಿದುರ ಮತ್ತು ಧೃತರಾಷ್ಟ್ರನ ಹೊರತು
ಇವರಿಬ್ಬರು ಮೇಲೆದ್ದರು ಕೈ ಮುಗಿದು
ನಿರ್ಭಯರಾಗಿ ಜಯಜಯವೆಂದು
ಅನುವಾದ ಚೆನ್ನಾಗಿದೆ.
ಪ್ರತ್ಯುತ್ತರಅಳಿಸಿ