ಪರಂಪರೆ

 ಕವಿತೆ ಓದುವ ಮುನ್ನ ... 


ಹಿಂದಿ ಸಾಹಿತ್ಯದಲ್ಲಿ ದಿನಕರ್ ಅವರದ್ದು ದೊಡ್ಡ ಹೆಸರು.  ಸ್ವಾತಂತ್ರ್ಯಪೂರ್ವದಲ್ಲಿ ಬರೆಯಲು ಪ್ರಾರಂಭಿಸಿದ ದಿನಕರ್ ತಮ್ಮ ಕ್ರಾಂತಿಕಾರಿ ಧ್ವನಿಗೆ ಹೆಸರಾದವರು; ಅವರ ಕವಿತೆಗಳು ಸಾಮ್ರಾಜ್ಯಶಾಹಿಯ ವಿರುದ್ಧ ಜನರನ್ನು ಬಡಿದೆಬ್ಬಿಸುತ್ತಿದ್ದವು. ಅವರ ಕಾವ್ಯದಲ್ಲಿ ಭಾಷೆಯ ಪ್ರಯೋಗ ಯಾರನ್ನಾದರೂ ತಲೆದೂಗುವಂತೆ ಮಾಡುತ್ತದೆ. ಸ್ವಾತಂತ್ರ್ಯೋತ್ತರ ಭಾರತ ಸರಕಾರದಲ್ಲಿ ಅವರು ಸಚಿವರಾಗಿದ್ದರು.  ಜ್ಞಾನಪೀಠ ಪ್ರಶಸ್ತಿಗೆ ಭಾಜನರಾದರು.   
ಸ್ವಾತಂತ್ರ್ಯದ ಪೂರ್ವದಲ್ಲಿ ಭಾರತದ ಪರಂಪರೆಗಳು ಹೊರನಾಡುಗಳಿಂದ ಬಂದು ಇಲ್ಲಿ ಆಳಿದವರ ಬಲವಂತಕ್ಕೆ ಸಿಕ್ಕಿದವು.  ಸ್ವಾತಂತ್ರ್ಯದ ನಂತರದ  ದಿನಗಳಲ್ಲಿ ನಮ್ಮ ಪರಂಪರೆಗಳನ್ನು ಉಳಿಸುವ ಅಥವಾ ಅಳಿಸುವ ಬಾಧ್ಯತೆ ಭಾರತೀಯರ ಮೇಲೇ ಬಿತ್ತು. ದುರದೃಷ್ಟವಶಾತ್ ಈ ಪರಂಪರೆಗಳಿಗೆ ಈಗಾಗಲೇ ಧರ್ಮಗಳ, ಜಾತಿಗಳ, ಭಾಷೆಗಳ ಲೇಬಲ್ ಗಳು ಅಂಟಿಬಿಟ್ಟಿದ್ದವು.   ಪ್ರಸ್ತುತ ಕವಿತೆಯಲ್ಲಿ ಪರಂಪರೆಯನ್ನು ಕುರಿತಾಗಿ ಒಂದು ಜಿಜ್ಞಾಸೆ ಇದೆ. ಆಗಿನ ಕಾಲದಲ್ಲಿ ಬರುತ್ತಿದ್ದ ಸಾಹಿತ್ಯವನ್ನು ಕುರಿತು ಒಂದು ನೋಟವಿದೆ. ಪರಂಪರೆ ನಮ್ಮ ಸ್ವಂತಿಕೆಯನ್ನು ಕಾಯುತ್ತದೆ.  ಅದು "ಜನರ ನಂಬಿಕೆಯ ಆಧಾರ." ಅವುಗಳನ್ನು "ಕುರುಡು ದೊಣ್ಣೆಯಿಂದ" ಚಚ್ಚುವುದು ಸರಿಯಲ್ಲ  ಎಂಬುದು ಕವಿತೆಯ ಆಶಯ. 
ಕ್ರಾಂತಿಗೂ ಪರಂಪರೆಗೂ ಸಂಘರ್ಷಗಳು ಸದಾ ನಡೆಯುತ್ತಿರುತ್ತದೆ. ಫಿಡ್ಲರ್ ಆನ್ ದ ರೂಫ್ ಚಲನಚಿತ್ರದಲ್ಲಿ ರಷ್ಯಾದ ಹಳ್ಳಿಯೊಂದರಲ್ಲಿ ತಮ್ಮ ಪಾಡಿಗೆ ತಾವು ನೆಲೆಸಿದ್ದ ನಿರುಪದ್ರವಿ ಜ್ಯೂ ಸಂಕುಲದ ಪರಂಪರೆಗಳು ಹೇಗೆ ಬುಡಮೇಲಾದವು ಎಂಬುದನ್ನು ಮೂರು ಹೆಣ್ಣು ಮಕ್ಕಳ ತಂದೆಯಾದ ಒಬ್ಬ ಹಾಲು ಮಾರುವವನ ಜೀವನದ ಘಟನೆಗಳ ಮೂಲಕ ತೋರಿಸಲಾಗಿದೆ.   
ನಂತಮೂರ್ತಿ ಅವರ "ಸೂರ್ಯನ ಕುದುರೆ" ಕತೆಯಲ್ಲಿ ಇದೇ ಸಂಘರ್ಷದ ಉಲ್ಲೇಖವಿದೆ. ಲೇಖಕ ಬಹಳ ದಿನಗಳ ನಂತರ ತನ್ನ ಊರಿಗೆ ಮರಳಿದಾಗ ಅವನ ಗೆಳೆಯ ಸಿಗುತ್ತಾನೆ.  ಈ ಗೆಳೆಯ ಇನ್ನೂ ಹಳೆಯ ಪರಂಪರೆಗಳಿಗೆ ಬದ್ಧನಾದವನು. ಲೇಖಕನನ್ನು ಮನೆಗೆ ಕರೆದುಕೊಂಡು ಹೋಗುತ್ತಾನೆ;  ಮನೆಗೆ ಹೋಗುವ ದಾರಿಯಲ್ಲಿ ಊರಿನಲ್ಲಿ ನೋಡುವವರು ಯಾರೂ ಇಲ್ಲದ ಒಬ್ಬ ವಯಸ್ಸಾದ ವ್ಯಕ್ತಿಯ ಮನೆ ಸಿಕ್ಕುತ್ತದೆ. ಲೇಖಕನ ಗೆಳೆಯ ಹಾಸಿಗೆ ಹಿಡಿದ ಈ ವೃದ್ಧನಿಗೆ (ಯಾವ ಅಪೇಕ್ಷೆಯೂ ಇಲ್ಲದೆ) ಪ್ರತಿದಿನ ಮೆತ್ತಗಿನ ಅನ್ನವನ್ನು ಸರಬರಾಜು ಮಾಡುತ್ತಾನೆ; ಸ್ನಾನ-ಶುದ್ಧೀಕರಣದಿಂದ ಹಿಡಿದು ಈ ರೋಗಿಯನ್ನು ನೋಡಿಕೊಳ್ಳುವ ಕೆಲಸವನ್ನು ಈ ಗೆಳೆಯ ಮತ್ತು ಅವನ ಮನೆಯವರು ತಮ್ಮ ಕರ್ತವ್ಯವೇನೋ ಎಂಬಂತೆ ಮಾಡುತ್ತಿರುತ್ತಾರೆ. ಲೇಖಕನನ್ನು ಮನೆಯ ಬಚ್ಚಲಲ್ಲಿ ನಿಲ್ಲಿಸಿ  ಎಣ್ಣೆ ಹಚ್ಚಿ ಮಂತ್ರಗಳನ್ನು ಪಠಿಸಿ ಬಹಳ ಮುತುವರ್ಜಿಯಿಂದ ಎಣ್ಣೆ ಸ್ನಾನ ಮಾಡಿಸುತ್ತಾನೆ. ಅವನ ಹೆಂಡತಿ ಬಹಳ ಸಂತೋಷದಿಂದ ಇದ್ದುದ್ದರಲ್ಲೇ ಔತಣದ ಅಡುಗೆ ಮಾಡಿ ಬಡಿಸುತ್ತಾಳೆ. ಈ ಉಪಚಾರದಿಂದ ಲೇಖಕನಿಗೆ ಸುಖವಾದ ನಿದ್ರೆ ಬರುತ್ತದೆ. ಆದರೆ ಈ ಶಾಂತಿಯನ್ನು ಕದಡುವ ಘಟನೆಗೆ ಆ ಮನೆಯಲ್ಲಿ ಈಗಾಗಲೇ ಸಿದ್ಧತೆಯಾಗಿದೆ. ಅಪ್ಪನ ಪಾರಂಪರಿಕ ಜೀವನ ಶೈಲಿಯನ್ನು ಅವನ ಮಗ ವಿರೋಧಿಸುತ್ತಾನೆ; ಜಮೀನನ್ನು ಮಾರಿ ಬೇಗ ದುಡ್ಡು ಮಾಡಿಕೊಳ್ಳುವ ಆಸೆಗೆ ಅವನು ಬಿದ್ದಿದ್ದಾನೆ. ಮನೆಯಲ್ಲಿ ಹೆಂಗಸರು ಅಳುವ ಸದ್ದಿಗೆ ಲೇಖಕನ ನಿದ್ದೆಗೆ ಭಂಗ ಬರುತ್ತದೆ; ಗೆಳೆಯನ ಮಗ ಮನೆಯಲ್ಲಿದ್ದ ಒಡವೆಗಳನ್ನು ದೋಚಿಕೊಂಡು ಓಡಿ ಹೋಗಿದ್ದಾನೆ.  ತನ್ನ ಸಿಟ್ಟಿಗೆ ಮನೆಯ ಹೂವಿನ ತೋಟವನ್ನು ಧ್ವಂಸ ಮಾಡಿ ಹೋಗಿದ್ದಾನೆ. 
 ಈ ಹಿನ್ನೆಲೆಯಲ್ಲಿ "ಪರಂಪರೆ" ಕವಿತೆಯನ್ನು ಓದಿ.  


ಪರಂಪರೆ 
ಮೂಲ ಹಿಂದಿ ಕವಿತೆ: ರಾಮಧಾರಿ ಸಿಂಹ್ "ದಿನಕರ್"
ಕನ್ನಡ ಭಾಷಾಂತರ: ಸಿ.ಪಿ. ರವಿಕುಮಾರ್ 



ಚಚ್ಚಬೇಡ ಪರಂಪರೆಯನ್ನು ಹಾಗೆ ಕುರುಡುದೊಣ್ಣೆಯಿಂದ,
ಅದರಲ್ಲಿ ಇನ್ನೂ ಬೇಕಾದಷ್ಟಿದೆ,
ಒಳಗೆ ಜೀವಂತವಾಗಿದೆ ಪ್ರಾಣದಾಯಕ  ಜೀವಸೆಲೆ,
ಧ್ವಂಸ ಮಾಡದೆ ಕಾಪಾಡುವಷ್ಟಂತೂ
ಇನ್ನೂ ಉಳಿದುಕೊಂಡಿದೆ ಬೆಲೆ.

ನೀರು ಬುಡಮೇಲಾಗಿ
ಸಮತಲದಲ್ಲಿ ಹರಿಯುವುದಕ್ಕೆ
ಕ್ರಾಂತಿಯ ಹೆಸರು,
ಕಟ್ಟೆ ಕಟ್ಟಿ
ನೀರನ್ನು ಮತ್ತಷ್ಟು ಆಳಗೊಳಿಸುವುದು
ಪರಂಪರೆಯ ಉಸಿರು.

ನಡೆಯಲಿ ಬಿಡು  ಕ್ರಾಂತಿ ಮತ್ತು ಪರಂಪರೆಗಳ
ನಡುವೆ ಸಂಘರ್ಷ,
ತಿಕ್ಕಾಟದ ಬೆಂಕಿಯಲ್ಲಿ
ಉರಿದುಹೋಗಲಿ  ಒಣ ಕಾಷ್ಠ.

ಆದರೆ ಇನ್ನೂ ಎಳೆಯ ಹಸಿರು ರೆಂಬೆಗಳಿವೆಯಲ್ಲ
ಅವುಗಳ ಮೇಲೆ ಒಂದಷ್ಟು ತೋರಿಸು  ದಯೆ,
ನಿನ್ನಿಂದ  ನಾನು ಬೇಡುವುದಿಷ್ಟೇ.

ಜನರ ನಂಬಿಕೆಯ ಆಧಾರವೇ ಅಲ್ಲಾಡಿ
ಮುರಿದು ಬೀಳುತ್ತದೆ,
ಉರುಳಿ ಬೀಳುವ ವೃಕ್ಷ
ತನ್ನ ಬೇರಿನಿಂದಲೇ
ಬೇರಾಗುವ ಹಾಗೆ.

ಪರಂಪರೆ ಲುಪ್ತವಾದಾಗ
ಸಭ್ಯತೆ ಒಂಟಿತನದ ನೋವಿನಲ್ಲಿ ಸಾಯುತ್ತದೆ.
ಲೇಖನಿ ನಿನಗೆ ಒಲಿದಿದೆಯೇ?
ಹಚ್ಚು  ನಿಸ್ಸಂದೇಹ,
ಆದರೆ ಹಣ್ಣಿನಲ್ಲಿ  ಮಣ್ಣಿನ ಸ್ವಾದ ಇರುವಂತೆ

ಕೊನೆಯಲ್ಲಿ ನೆನಪಿರಲಿ ಇನ್ನೊಂದು,
ಪರಂಪರೆ ಸಕ್ಕರೆಯಲ್ಲ, ಜೇನು,
ಅದು ಹಿಂದುವೂ ಅಲ್ಲ, ಅಲ್ಲ ಮುಸಲ್ಮಾನವೂ

Kannada translation by C.P. Ravikumar of a Hindi poem परंपरा  by Ramdhari Singh "Dinakar"

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)