ಋತುಗಳ ರಾಜ ವಸಂತ! ವರ್ಷ ಋತುಗಳ ರಾಣಿ!

ಋತುಗಳ ರಾಜ ವಸಂತ! ವರ್ಷ ಋತುಗಳ ರಾಣಿ!

ಮೂಲ ಹಿಂದಿ ಕವಿತೆ: ರಾಮಧಾರಿ ಸಿಂಹ್ "ದಿನಕರ್"
ಕನ್ನಡ ಭಾಷಾಂತರ: ಸಿ.ಪಿ. ರವಿಕುಮಾರ್ 




puddles,drops,rains,weather,nature,monsoons,seasons
ಕವಿತೆ ಓದುವ ಮುನ್ನ - ರಾಮಧಾರಿ ಸಿಂಹ್ ದಿನಕರ್ ಹಿಂದಿಯ ಜನಪ್ರಿಯ ಕವಿ; ಹಿಂದಿ ಕವಿಗಳ ಸಾಲಿನಲ್ಲಿ ಜ್ಞಾನಪೀಠ ಪ್ರಶಸ್ತಿ ಪಡೆದವರಲ್ಲಿ ದ್ವಿತೀಯರು.  ಇವರು ರಚಿಸಿದ ಸಾನೆಟ್ "ಋತುಗಳ ರಾಜ ವಸಂತ! ವರ್ಷ ಋತುಗಳ ರಾಣಿ" ಎಂಬುದರ ಅನುವಾದವನ್ನು ಇಲ್ಲಿ ಕೊಟ್ಟಿದ್ದೇನೆ. 
ಈ ಕವಿತೆಯಲ್ಲಿ  ಕವಿ ವಸಂತವನ್ನು ಗಂಡಿಗೆ ಮತ್ತು ಹೆಣ್ಣನ್ನು ವರ್ಷ ಋತುವಿಗೆ ಹೋಲಿಸುತ್ತಾರೆ.  ಕವಿತೆಯಲ್ಲಿ ಬಳಸಲಾಗುವ ವಿಶಿಷ್ಟ ಪದಪ್ರಯೋಗವನ್ನು ಗಮನಿಸಿ. ಉದಾಹರಣೆಗೆ "ನಗೆಮುಗುಳು ರಾಜನ ಮೊಗದಲ್ಲಿ" ಎಂಬ ಸಾಲು ವಸಂತ ಋತುವಿನಲ್ಲಿ ವನವು ಚಿಗುರಿ ಹೂವುಗಳು ಅರಳುವುದನ್ನು ಹೇಗೆ ಸೂಚಿಸುತ್ತದೋ ಹಾಗೇ ಸಮಾಜದಲ್ಲಿ ಗಂಡಿಗೆ ಸಿಗುವ ಸ್ಥಾನಮಾನದ ಬಗ್ಗೆಯೂ ಹೇಳುತ್ತದೆ. ವಸಂತ ಮಾಸದಲ್ಲಿ ಹೂವಿನ ಸುತ್ತಲೂ ಹಾರಾಡುವ ಪಾತರಗಿತ್ತಿಗಳು ಎಷ್ಟೋ! ಹಾಗೇ ಗಂಡಿನ ಸುತ್ತಲೂ ಸೇವೆಗೆ ಸಿದ್ಧರಾಗಿ ನಿಂತ ಅಪ್ಸರೆಯರು ಎಷ್ಟೋ!  ವಸಂತದ ಸಂಭ್ರಮಕ್ಕೆ ಹೋಲಿಸಿದರೆ ವರ್ಷ ಋತು ಗಾಂಭೀರ್ಯವನ್ನು ಧ್ವನಿಸುತ್ತದೆ. "ಬಿಚ್ಚಿದ ಸೆರಗು" ಎಂಬುದು ಮೋಡಕ್ಕೆ ರೂಪಕವಾಗುತ್ತದೆ.  "ಕವಿಯುವ ವ್ಯಥೆ" ಎಂಬ ಪದಪ್ರಯೋಗ ಕವಿಯುವ ಮೋಡಕ್ಕೆ ತಾಳೆಯಾಗುತ್ತದೆ.  "ಧೋ ಎಂದು ಅತ್ತಳು"  ಎಂಬ ಮಾತು ಮಳೆಗೆ ಉಪಮೆಯಂತೆ ತೋರುತ್ತದೆ. 
ಋತುಗಳ ಬಗ್ಗೆ ಯೋಚಿಸುತ್ತಾ ಕವಿಗೆ ಒಮ್ಮೆಲೇ  ರಾಮ-ಸೀತೆಯರ ಚರಿತ್ರೆ ನೆನಪಾಗುತ್ತದೆ. ಸೀತೆಗೆ ದೊರೆತ ಅನ್ಯಾಯವನ್ನು ಕವಿ ಮಾರ್ಮಿಕವಾಗಿ ಸೂಚಿಸುತ್ತಾರೆ. ಈ ಕವಿತೆಯನ್ನು ಬರೆದದ್ದು ೧೯೫೦ರ ದಶಕದಲ್ಲಿ. ಸ್ವಾತಂತ್ರ್ಯದ ನಂತರ ಭಾರತ ತನ್ನ ನೆಲೆಯನ್ನು ತಾನೇ ಕಂಡುಕೊಳ್ಳುವ ಪ್ರಾರಂಭದ ದಿನಗಳಲ್ಲಿ ಎಂಬುದು ಗಮನಾರ್ಹ.

ತುಗಳ ರಾಜ ವಸಂತ! ವರ್ಷ ಋತುಗಳ ರಾಣಿ!
ಇಬ್ಬರ ಕಥೆಗಳು ಆದರೂ ವಿಭಿನ್ನ
ನಗೆಮುಗುಳು ರಾಜನ ಮೊಗದಲ್ಲಿ, ಕೊರಳಲ್ಲಿ ಮಾಲೆ
ಕರಗಿ ನೀರಾಗಿಹಳು ರಾಣಿ, ಒರೆಸುವಳು ಕಣ್ಣ


ನಗುತಿವೆ ಹೂವು ರಾಜಗೃಹದೊಳೆಲ್ಲೆಲ್ಲೂ  
ಸೇವೆಗೆ ಹಾರುವ ಅಪ್ಸರೆಯರ ಗುಲ್ಲು;
ಬಂದಳು ರಾಣಿ, ವ್ಯಾಕುಲೆ, ಬಿಚ್ಚಿದೆ ಸೆರಗು 
ಯಾವ ವ್ಯಥೆ ಕವಿಯಿತೋ ಧೋ ಎಂದು ಅತ್ತಳು. 

ಬರೆದಿಟ್ಟರೆ ಇವಳ ಮನದಾಳದ ಮಾತು 
ಪ್ರತಿದಿನ ಒದ್ದೆ ಒರೆಸುವ ಕತೆಯಾಯ್ತು 
ಕ್ಷಮಿಸು ತ್ರೇತಾಯುಗದ ದೊರೆ ನನ್ನ ಧಾರ್ಷ್ಟ್ಯ 
ಇದು ಪುನಪುನರಾವರ್ತಿತ ವ್ಯಸನಕಾಷ್ಟ 

ಕಷ್ಟ ಪಟ್ಟದ್ದು ನೀನು, ಪಟ್ಟ ರಾಮನಿಗೆ ಕಟ್ಟಿದರು 
ಕೀರ್ತಿ ಅವನಿಗೆ, ಒಂಟಿ ನಿನ್ನನ್ನು ಕಾಡಿಗಟ್ಟಿದರು 
ಕಳಂಕಿಣಿಯಾದೆ ವೈದೇಹಿ ಪ್ರಿಯನ ಕಣ್ಗಳಲಿ 
ಕರುಣಾರಸ ಚಿಮ್ಮಿಸುವ ವಿಷಮ ಒಗಟಿನ ಬಳ್ಳಿ 

ಕಂಬನಿ ಸುರಿಸಿ ಬೆಳೆಸು ರಾಜನ ಕೀರ್ತಿಲತೆ 
ಫಲವನ್ನು ಗರ್ಭದಲಿ ಹೊತ್ತು ನಡೆ ವನಕೆ 

Kannada translation by C.P. Ravikumar of a Hindi poem राजा वसन्त वर्षा ऋतुओं की रानी by Ramdhari Singh "Dinakar"
(c) 2013, C.P. Ravikumar


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)