ಶ್ರೀಮಂತ ರೂಪದರ್ಶಿ - 1
ಮೂಲ ಇಂಗ್ಲಿಷ್ ಕತೆ - ಆಸ್ಕರ್ ವೈಲ್ಡ್ ಕನ್ನಡ ಅನುವಾದ - ಸಿ ಪಿ ರವಿಕುಮಾರ್ ಕೈಯಲ್ಲಿ ದುಡ್ಡಿಲ್ಲದಿದ್ದರೆ ನೋಡಲು ಚೆನ್ನಾಗಿದ್ದರೇನು ಬಂತು? ಪ್ರೀತಿ-ಪ್ರೇಮ ಎಲ್ಲವೂ ದುಡ್ಡಿದ್ದವರಿಗೆ ಸರಿ; ಕೆಲಸ-ಬೊಗಸವಿಲ್ಲದವರಿಗೆ ಇದೆಲ್ಲಾ ಕಟ್ಟಿಕೊಂಡು ಏನಾಗಬೇಕಿದೆ? ಬಡವಾ ನೀನು ಮಡಗಿದಲ್ಲಿರು ಅಂತ ಸುಮ್ಮನೆ ಹೇಳುತ್ತಾರೆಯೇ? ಆಹಾ ಇವನೆಷ್ಟು ಚೆಲುವ ಎಂದು ಜನ ಹೊಗಳುವಷ್ಟು ಆಕರ್ಷಕವಾಗಿರುವ ಬದಲು ತಿಂಗಳಿಗೆ ಒಂದಿಷ್ಟು ಆದಾಯವಿರುವುದು ಎಷ್ಟೋ ಮೇಲು. ಆಧುನಿಕ ಜೀವನದ ಇಂತಹ ಮಹಾನ್ ಸತ್ಯಗಳನ್ನು ಹ್ಯೂಯಿ ಎರ್ಸ್ಕಿನ್ ಅರಿತುಕೊಂಡಿರಲಿಲ್ಲ. ಹ್ಯೂಯಿ ಒಬ್ಬ ಪಾಪದ ಪ್ರಾಣಿ! ಓದು-ಬರಹ ಅಷ್ಟೇನೂ ತಲೆಗೆ ಹತ್ತಲಿಲ್ಲ. ಒಳ್ಳೆಯದಾಗಲಿ, ಕೆಟ್ಟದ್ದಾಗಲಿ ಹೇಳಿಕೊಳ್ಳುವಂಥ ಸಾಧನೆಯನ್ನೇನೂ ಅವನು ಮಾಡಲಿಲ್ಲ. ಆದರೆ ದೇವರು ಅವನಿಗೆ ರೂಪವನ್ನು ಧಾರಾಳವಾಗಿ ಸುರಿದು ಕಳಿಸಿದ್ದಾನೆ. ಗರಿಗರಿಯಾದ ಕಂದು ಬಣ್ಣದ ತಲೆಗೂದಲು. ಕಡೆದಂಥ ಮಾಟದ ಶರೀರ. ಬೂದಿ ಬಣ್ಣದ ಕಣ್ಣುಗಳು. ಹೆಂಗಸರು-ಗಂಡಸರು ಎನ್ನದೆ ಎಲ್ಲರ ನಡುವೆಯೂ ಅವನು ಜನಪ್ರಿಯ ವ್ಯಕ್ತಿ. ಅವನ ತಂದೆ ಅವನಿಗೆ ಅಂಥ ಆಸ್ತಿಯನ್ನೇನು ಬಿಟ್ಟು ಹೋಗಿರಲಿಲ್ಲ - ಯುದ್ಧದಲ್ಲಿ ಬಳಸಿದ ಒಂದು ಖಡ್ಗ ಮತ್ತು ದ್ವೀಪ ಭೂಖಂಡ ಯುದ್ಧದ ಸುದೀರ್ಘ ಇತಿಹಾಸದ ಹದಿನೈದು ಸಂಪುಟಗಳನ್ನು ಬಿಟ್ಟರೆ! ಕತ್ತಿಯನ್ನು ಹ್ಯೂಯಿ ಮನೆಯಲ್ಲಿ ಕನ್ನಡಿಯ ಮೇಲೆ ಅಲಂಕಾರಕ್ಕಾಗಿ ನೇತುಹಾಕಿದ್ದಾನೆ. ಇತಿಹಾಸದ ಪುಸ್ತಕಗಳು ಕಪಾಟ