ಶ್ರೀಮಂತ ರೂಪದರ್ಶಿ - 1

 ಮೂಲ ಇಂಗ್ಲಿಷ್ ಕತೆ - ಆಸ್ಕರ್ ವೈಲ್ಡ್ 
ಕನ್ನಡ ಅನುವಾದ - ಸಿ ಪಿ ರವಿಕುಮಾರ್ 
Shallow Focus Photography of Paintbrush
ಕೈಯಲ್ಲಿ ದುಡ್ಡಿಲ್ಲದಿದ್ದರೆ ನೋಡಲು ಚೆನ್ನಾಗಿದ್ದರೇನು ಬಂತು? ಪ್ರೀತಿ-ಪ್ರೇಮ ಎಲ್ಲವೂ ದುಡ್ಡಿದ್ದವರಿಗೆ ಸರಿ; ಕೆಲಸ-ಬೊಗಸವಿಲ್ಲದವರಿಗೆ ಇದೆಲ್ಲಾ ಕಟ್ಟಿಕೊಂಡು ಏನಾಗಬೇಕಿದೆ? ಬಡವಾ ನೀನು ಮಡಗಿದಲ್ಲಿರು ಅಂತ ಸುಮ್ಮನೆ ಹೇಳುತ್ತಾರೆಯೇ? ಆಹಾ ಇವನೆಷ್ಟು ಚೆಲುವ ಎಂದು ಜನ ಹೊಗಳುವಷ್ಟು ಆಕರ್ಷಕವಾಗಿರುವ ಬದಲು ತಿಂಗಳಿಗೆ ಒಂದಿಷ್ಟು ಆದಾಯವಿರುವುದು ಎಷ್ಟೋ ಮೇಲು. ಆಧುನಿಕ ಜೀವನದ ಇಂತಹ ಮಹಾನ್ ಸತ್ಯಗಳನ್ನು ಹ್ಯೂಯಿ ಎರ್ಸ್ಕಿನ್ ಅರಿತುಕೊಂಡಿರಲಿಲ್ಲ. 

ಹ್ಯೂಯಿ ಒಬ್ಬ ಪಾಪದ ಪ್ರಾಣಿ! ಓದು-ಬರಹ ಅಷ್ಟೇನೂ ತಲೆಗೆ ಹತ್ತಲಿಲ್ಲ. ಒಳ್ಳೆಯದಾಗಲಿ, ಕೆಟ್ಟದ್ದಾಗಲಿ ಹೇಳಿಕೊಳ್ಳುವಂಥ ಸಾಧನೆಯನ್ನೇನೂ ಅವನು ಮಾಡಲಿಲ್ಲ. ಆದರೆ ದೇವರು ಅವನಿಗೆ ರೂಪವನ್ನು ಧಾರಾಳವಾಗಿ ಸುರಿದು ಕಳಿಸಿದ್ದಾನೆ. ಗರಿಗರಿಯಾದ ಕಂದು ಬಣ್ಣದ ತಲೆಗೂದಲು. ಕಡೆದಂಥ ಮಾಟದ ಶರೀರ. ಬೂದಿ ಬಣ್ಣದ ಕಣ್ಣುಗಳು. ಹೆಂಗಸರು-ಗಂಡಸರು ಎನ್ನದೆ ಎಲ್ಲರ ನಡುವೆಯೂ ಅವನು ಜನಪ್ರಿಯ ವ್ಯಕ್ತಿ.  ಅವನ ತಂದೆ ಅವನಿಗೆ ಅಂಥ ಆಸ್ತಿಯನ್ನೇನು ಬಿಟ್ಟು ಹೋಗಿರಲಿಲ್ಲ - ಯುದ್ಧದಲ್ಲಿ ಬಳಸಿದ ಒಂದು ಖಡ್ಗ ಮತ್ತು ದ್ವೀಪ ಭೂಖಂಡ ಯುದ್ಧದ ಸುದೀರ್ಘ ಇತಿಹಾಸದ ಹದಿನೈದು ಸಂಪುಟಗಳನ್ನು  ಬಿಟ್ಟರೆ! ಕತ್ತಿಯನ್ನು ಹ್ಯೂಯಿ ಮನೆಯಲ್ಲಿ ಕನ್ನಡಿಯ ಮೇಲೆ ಅಲಂಕಾರಕ್ಕಾಗಿ ನೇತುಹಾಕಿದ್ದಾನೆ. ಇತಿಹಾಸದ ಪುಸ್ತಕಗಳು ಕಪಾಟಿನಲ್ಲಿ ಗೈಡ್ ಮತ್ತು ನಿಯತಕಾಲಿಕೆಗಳ ನಡುವೆ ತಾವೂ ಹೇಗೋ ಬದುಕುಳಿದಿವೆ. 

ಹ್ಯೂಯಿಯ ಜೀವನ ಸಾಗುತ್ತಿದ್ದುದು ಅವನ ಸೋದರತ್ತೆಯೊಬ್ಬಳು ಅವನಿಗೆ ವರ್ಷದ ಖರ್ಚಿಗೆ ಕಳಿಸುತ್ತಿದ್ದ ಇನ್ನೂರು ಪೌಂಡ್ ಗಳ ಮೇಲೆ. ಪಾಪ, ಅವನು ಕೆಲಸ ಹುಡುಕದಿದ್ದ ಸ್ಥಳ ಯಾವುದು? ಆರು ತಿಂಗಳು ಸ್ಟಾಕ್ ಎಕ್ಸ್ ಚೇಂಜ್ ನಲ್ಲಿ ಕೆಲಸ ಮಾಡಲು ಪ್ರಯತ್ನಿಸಿದ. ಪಾಪ, ಭಲ್ಲೂಕ-ವೃಷಭಗಳೇ ತುಂಬಿರುವ ಸ್ಟಾಕ್ ಎಕ್ಸ್ ಚೇಂಜಿನಲ್ಲಿ ಬಣ್ಣದ ಚಿಟ್ಟೆಯ ಹಾಗಿದ್ದ ನಮ್ಮ ನಾಯಕನಿಗೆ ಸರಿ ಹೊಂದುವುದೇ? ಟೀ ಪುಡಿ ವರ್ತಕನ ಕೆಲಸವನ್ನು ಒಂದಿಷ್ಟು ದಿನ ಪ್ರಯತ್ನಿಸಿದ. ಆದರೆ ಪ್ರತಿದಿನ ಪೀಕೋ, ಸೂಚೊಂಗ್ ಎಂಬ ಚಹಾವೈವಿಧ್ಯಗಳ ಹೆಸರುಗಳನ್ನು ಕೇಳುತ್ತ ಬೇಸರವಾಗಿ ಆ ಕೆಲಸವನ್ನೂ ಬಿಟ್ಟ. ಅನಂತರ ಸ್ವಲ್ಪ ದಿನ ಮದ್ಯದ ವ್ಯಾಪಾರಕ್ಕಿಳಿದ. ಅದರಲ್ಲೂ ಅವನ ಮನಸ್ಸು ನಿಲ್ಲಲಿಲ್ಲ. ಕೊನೆಗೆ  ನಿರುದ್ಯೋಗಿಯ ಕಾಯಂ ಉದ್ಯೋಗವನ್ನು ಹಿಡಿದ; ಕಸುಬಿಲ್ಲದ ಸ್ಫುರದ್ರೂಪಿ ತರುಣನ ವೃತ್ತಿಯಲ್ಲಿ ಬಹಳ ದಿನಗಳಿಂದ ಇದ್ದಾನೆ.  

ಇಷ್ಟು ಸಾಲದು ಎಂಬಂತೆ ಅವನು ಪ್ರೇಮಪಾಶಕ್ಕೆ ಸಿಲುಕಿದ್ದಾನೆ. ಅವನು ಪ್ರೀತಿಸುತ್ತಿರುವುದು ಲಾರಾ ಮರ್ಟನ್ ಎಂಬ ಯುವತಿಯನ್ನು. ಅವಳು ಒಬ್ಬ ನಿವೃತ್ತ ಕರ್ನಲ್ ನ ಮಗಳು. ಈ ಕರ್ನಲ್ ಭಾರತದಲ್ಲಿ ಸೇವೆ ಸಲ್ಲಿಸುತ್ತಿದ್ದಾಗ ತನ್ನ ಜೀರ್ಣಶಕ್ತಿಯನ್ನೂ ಜೊತೆಗೆ ತಾಳ್ಮೆಯನ್ನೂ ಕಳೆದುಕೊಂಡಿದ್ದ ಆಸಾಮಿ. ಲಾರಾ ಕೂಡಾ ಹ್ಯೂಯಿಗೆ ಒಲಿದಿದ್ದಳು. ಇವನೋ ಅವಳು ತೊಟ್ಟ ಪಾದರಕ್ಷೆಗಳಿಗೂ ಮುತ್ತಿಡಲು ತಯಾರಾಗಿದ್ದ! ಲಂಡನ್ನಿನ ಅತ್ಯಂತ ಚೆಲುವ ಜೋಡಿ ಎಂದರೆ ಇವರದ್ದೇ. ಇಬ್ಬರ ಹತ್ತಿರವೂ ಬಿಡಿಗಾಸಿಲ್ಲ. ಕರ್ನಲ್ ಗೆ ಹ್ಯೂಯಿಯನ್ನು ಕಂಡರೆ ಅಕ್ಕರೆ ಇಲ್ಲವೆಂದಲ್ಲ. ಆದರೆ ವಿವಾಹ-ನಿಶ್ಚಿತಾರ್ಥಗಳಿಗೆ ಅವನು ಸುತರಾಂ ಒಪ್ಪುತ್ತಿಲ್ಲ. 

"ನೋಡಪ್ಪ ಮಗು, ನಿನ್ನ ಹತ್ತಿರ ಹತ್ತು ಸಾವಿರ ಪೌಂಡ್ ಯಾವತ್ತು ಶೇಖರಣೆಯಾಗುತ್ತೋ ಅವತ್ತು ಬಾ - ಮದುವೆ ವಿಷಯ ಆಗ ಆಲೋಚನೆ ಮಾಡೋಣವಂತೆ' ಎಂದು ಬಿಟ್ಟ. ಭಾವೀ ಮಾವನ ಈ ಮಾತುಗಳನ್ನು ಮೊದಲ ಸಲ ಕೇಳಿದಾಗ ಹ್ಯೂಯಿ ಸ್ವಲ್ಪದಿನ ತೀರಾ ಬೇಜಾರು ಮಾಡಿಕೊಂಡಿದ್ದ. ಆಗ ಅವನಿಗೆ ಸಮಾಧಾನ ಹೇಳುತ್ತಿದ್ದವಳು ಲಾರಾ. 
ಒಂದು ಬೆಳಗ್ಗೆ ಹ್ಯೂಯಿ ಹಾಲೆಂಡ್ ಪಾರ್ಕ್ ಬಡಾವಣೆಯ ಕಡೆ ಹೊರಟಿದ್ದ. ಕರ್ನಲ್ ಮರ್ಟನ್ ಮನೆ ಇದ್ದದ್ದು ಅಲ್ಲೇ. ಹೋಗುವಾಗ ದಾರಿಯಲ್ಲಿ ಅವನ ಮಿತ್ರ ಆಲನ್ ಟ್ರೆವರ್ ಎಂಬುವನ ಮನೆ ಎದುರಾಯಿತು. ಹ್ಯೂಯಿ ಮಿತ್ರನನ್ನು ನೋಡಿಹೋಗೋಣವೆಂದು ಅವನ ಮನೆಯ ಬಾಗಿಲು ತಟ್ಟಿದ.  ಆಲನ್ ಒಬ್ಬ ಚಿತ್ರಕಾರ. ಈನಡುವೆ ಚಿತ್ರ ಬರೆಯುವುದು ಯಾರ ಶೋಕಿಯಲ್ಲ ನೀವೇ ಹೇಳಿ! ಆದರೆ ಆಲನ್ ಒಬ್ಬ ಕಲಾವಿದ. ಚಿತ್ರ ಬರೆಯುವವರು ಸಿಕ್ಕಾರು, ಕಲಾವಿದರು ಸಿಕ್ಕುವುದು ಕಷ್ಟ. 
ಆಲನ್ ಸ್ವಲ್ಪ ವಿಚಿತ್ರ ವ್ಯಕ್ತಿ. ಒರಟ. ಅವನ ಮುಖದ ಮೇಲೂ ಕಲೆಗಳು  ರಾರಾಜಿಸುತ್ತಿದ್ದವು. ಮುಖದ ಮೇಲೆ ಬೆಳೆದಿದ್ದ ಕೆಂಚು ಗಡ್ಡ ಅವನ ಮುಖಕ್ಕೆ ಒಂದು ಕಳೆ ತಂದುಕೊಟ್ಟಿತ್ತು. ಅವನ ಚಿತ್ರಗಳಿಗೆ ಬೇಡಿಕೆ ಇತ್ತು. ಹ್ಯೂಯಿಯನ್ನು ಕಂಡರೆ ಅವನಿಗೆ ಆದರವಿತ್ತು. ಇದಕ್ಕೆ ಹ್ಯೂಯಿಯ ಆಕರ್ಷಕ ವ್ಯಕ್ತಿತ್ವವೇ ಕಾರಣ ಎಂದು ನಿಸ್ಸಂದೇಹವಾಗಿ ಹೇಳಬಹುದು. 'ಕಲಾವಿದನಿಗೆ ಪರಿಚಯವಿರಬೇಕಾದದ್ದು ಆಕರ್ಷಕ ಚೆಹರೆಯುಳ್ಳ ಜನ - ನೋಡಿದರೆ ಕಲಾವಂತ ಹೃದಯಕ್ಕೆ ಸಂತೋಷವಾಗಬೇಕು, ಮಾತಾಡಿದರೆ ಬುದ್ಧಿಜೀವಿಯ ಮನಸ್ಸು ಅರಳಬೇಕು! ಇಂಥ ಸುಂದರ ಚೆಹರೆಯುಳ್ಳವರು ಜಗತ್ತನ್ನು ಆಳಿಯಾರು - ಆಳಬೇಕು" ಎಂದು ಅವನು ಆಗಾಗ ಹೇಳುತ್ತಿದ್ದ.  ಹ್ಯೂಯಿಯ ಪರಿಚಯವಾದ ನಂತರ ಅವನ ನಗುಮುಖದ ವಾಚಾಳಿತನಕ್ಕೆ ಮಾರುಹೋಗಿ ತನ್ನ ಸ್ಟೂಡಿಯೋಗೆ ಯಾವಾಗಲಾದರೂ ಬರಲು ಅನುಮತಿ ಕೊಟ್ಟಿದ್ದ. 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)