ಮನುಷ್ಯನಿಗೆ ಎಷ್ಟು ಜಮೀನು ಬೇಕು? - 6

ಮೂಲ ರಷ್ಯನ್ ಕಥೆ - ಲಿಯೋ ಟಾಲ್ಸ್ ಟಾಯ್ 
ಕನ್ನಡ ಅನುವಾದ - ಸಿ ಪಿ ರವಿಕುಮಾರ್ 

(ಐದನೇ ಭಾಗವನ್ನು ಇಲ್ಲಿ ಓದಿ.) 

ಹಕ್ಕಿಗಳ ಮೆತ್ತನೆಯ ಪುಕ್ಕಗಳು ತುಂಬಿದ್ದ ಹಾಸಿಗೆಯಲ್ಲೂ ಪಹೋಮ್ ಗೆ ನಿದ್ದೆ ಬರಲಿಲ್ಲ. ಅವನಿಗೆ ಜಮೀನಿನದೇ ಯೋಚನೆ.  "ನಾನು ಆದಷ್ಟೂ ದೊಡ್ಡ ಜಮೀನಿನ ಭಾಗವನ್ನು ದಕ್ಕಿಸಿಕೊಳ್ಳುತ್ತೇನೆ! ದಿನಕ್ಕೆ ಮೂವತ್ತೈದು ಮೈಲಿಯಾದರೂ ನಾನು ನಡೆಯಬಲ್ಲೆ! ಈಗ ಬೇಸಗೆಯಾದ್ದರಿಂದ ದಿನಗಳು ದೀರ್ಘವಾಗಿರುತ್ತವೆ. ಮೂವತ್ತೈದು ಮೈಲಿಗಳ ಸುತ್ತಳತೆಯಲ್ಲಿ ಎಂಥ ದೊಡ್ಡ ಜಮೀನು ನನಗೆ ಪ್ರಾಪ್ತವಾಗುತ್ತದೆ! ಅದರಲ್ಲಿ ಅಷ್ಟೇನೂ ಒಳ್ಳೆಯದಲ್ಲದ ಜಮೀನನ್ನು ನಾನು ಮಾರಿಬಿಡುತ್ತೇನೆ. ಅಥವಾ ಬಾಡಿಗೆಗೆ ಕೊಡುತ್ತೇನೆ.  ಅತ್ಯಂತ ಒಳ್ಳೆಯ ಭೂಮಿಯನ್ನು ನಾನೇ ಉಳುಮೆ ಮಾಡುತ್ತೇನೆ. ಎರಡು ಜೊತೆ ಎತ್ತುಗಳನ್ನು ಕೊಳ್ಳುತ್ತೇನೆ. ಇಬ್ಬರು ಆಳುಗಳನ್ನು ಗೊತ್ತು ಮಾಡಿಕೊಳ್ಳುತ್ತೇನೆ. ಸುಮಾರು ನೂರಾ ಐವತ್ತು ಎಕರೆಯಲ್ಲಿ ಕೃಷಿ ಮಾಡುತ್ತೇನೆ.  ಉಳಿದ ಭೂಮಿಯನ್ನು ಜಾನುವಾರುಗಳನ್ನು ಮೇಯಿಸಲು ಇಟ್ಟುಕೊಳ್ಳುತ್ತೇನೆ!" ಎಂದು ಅವನ ಆಲೋಚನಾ ಸರಣಿ ಸಾಗಿತ್ತು.

ರಾತ್ರಿಯೆಲ್ಲಾ ನಿದ್ದೆಯಿಲ್ಲದೆ ಬೆಳಗಿನ ಜಾವದಲ್ಲಿ ಅವನಿಗೆ ಜೊಂಪು ಹತ್ತಿತು. ಕಣ್ಣು ಮುಚ್ಚಿತೋ ಇಲ್ಲವೋ ಅವನಿಗೊಂದು ಕನಸು ಬಿತ್ತು. ತಾನು ಇದೇ ಡೇರೆಯಲ್ಲಿ ಮಲಗಿದ್ದೇನೆ. ಹೊರಗಡೆ ಯಾರೋ ನಕ್ಕ ಸದ್ದು. ಅದು ಯಾರಿರಬಹುದು? ಅವನು ಮೇಲೆದ್ದು ಡೇರೆಯ ಹೊರಗೆ ಬಂದು ನೋಡುತ್ತಾನೆ. ಹೊರಗಡೆ ಬಷ್ಕಿರ್ ಮುಖ್ಯಸ್ಥ ತನ್ನ ಪಕ್ಕೆಗಳನ್ನು ಹಿಡಿದುಕೊಂಡು ನಗುತ್ತಿದ್ದಾನೆ. ನೆಲದ ಮೇಲೆ ಹೊರಳಾಡುತ್ತಿದ್ದಾನೆ. ಪಹೋಮ್ ಅವನನ್ನು ಸಮೀಪಿಸಿ "ಯಾಕೆ ನಗುತ್ತೀರಿ?" ಎಂದು ಕೇಳುತ್ತಾನೆ. ಹಾಗೆ ಕೇಳಿದಾಗ ನಗುತ್ತಿದ್ದವನು ಬಷ್ಕಿರ್ ಮುಖ್ಯಸ್ಥನಲ್ಲ, ತನಗೆ ಈ ಭೂಮಿಯ ಬಗ್ಗೆ ಹೇಳಿದ ತಲೆಹಿಡುಕ ಎಂದು ಗೊತ್ತಾಗುತ್ತದೆ.  "ನೀವು ಇಲ್ಲಿ ಯಾವಾಗ ಬಂದಿರಿ?" ಎಂದು ಪಹೋಮ್ ಕೇಳುತ್ತಾನೆ. ಆದರೆ ಪ್ರಶ್ನೆ ಮುಗಿಯುವಷ್ಟರಲ್ಲಿ ನಗುತ್ತಿದ್ದವನು ವೋಲ್ಗಾ ಪ್ರದೇಶದಿಂದ ಪಹೋಮನ ಮನೆಗೆ ಹಿಂದೆ ಬಂದಿದ್ದ ರೈತ ಎಂದು ಭಾಸವಾಗುತ್ತದೆ.  ನಗುತ್ತಿದ್ದ ವ್ಯಕ್ತಿಯ ಚಹರೆ ಮತ್ತೆ ಬದಲಾಗುತ್ತದೆ. ಕೊಂಬುಗಳುಳ್ಳ ಸೈತಾನನ ಚಹರೆ. ಸೈತಾನನ ಕಾಲ ಕೆಳಗಡೆ ಯಾರೋ ಮಲಗಿದ್ದಾರೆ. ಮಲಗಿದವನ ಕಾಲುಗಳಲ್ಲಿ ಬೂಟುಗಳಿಲ್ಲ; ಅವನು ಕೇವಲ ಷರಾಯಿ ಮತ್ತು ಅಂಗಿ ಧರಿಸಿದ್ದಾನೆ. ಸರಿಯಾಗಿ ನೋಡಿದಾಗ ಮಲಗಿದವನು ಜೀವವಿಲ್ಲದ ಶವವೆಂದು ಗೊತ್ತಾಗುತ್ತದೆ. ಅಯ್ಯೋ ಅದು ತಾನೇ ಎಂದು ಅವನಿಗೆ ಕಾಣುತ್ತದೆ!

ಪಹೋಮ್ ಬೆಚ್ಚಿ ಕನಸಿನಿಂದ ಎಚ್ಚರಗೊಂಡ.  "ಅಬ್ಬಾ! ಮನುಷ್ಯನಿಗೆ ಎಂತೆಂಥ ಕನಸುಗಳು ಬರುತ್ತವೆ!" ಎಂದು ಅವನಿಗೆ ಸೋಜಿಗವಾಯಿತು. ಮಲಗಿದಲ್ಲಿಂದ ಡೇರೆಯ ಬಾಗಿಲು ತೆರೆದಿದ್ದು ಕಾಣಿಸಿತು. ಕ್ಷೀಣವಾದ ಮುಂಬೆಳಕು ಮೂಡುತ್ತಿತ್ತು. 

"ಓ! ಬೆಳಕಾಗುತ್ತಿದೆ! ನಾವು ಹೊರಡುವುದು ಕ್ಷೇಮ!" ಎಂದು ಅವನು ಮೇಲೆದ್ದ.  ಗಾಡಿಯಲ್ಲೇ ಮಲಗಿದ್ದ ತನ್ನ ಆಳನ್ನು ಮೇಲೆಬ್ಬಿಸಿ ಕುದುರೆಗಳನ್ನು ಕಟ್ಟಲು ಹೇಳಿದ. ನಂತರ ಬಷ್ಕಿರ್ ಜನರನ್ನು ಎಬ್ಬಿಸಲು ಹೊರಟ.

"ನಡೆಯಿರಿ, ನೆಲವನ್ನು ಅಳೆಯುವ ಕೆಲಸಕ್ಕೆ ಸಮಯವಾಯಿತು" ಎಂದು ಅವರನ್ನು ಎಚ್ಚರಿಸಿದ. ಅವರು ಮೇಲೆದ್ದು ಒಂದು ಕಡೆ ಸೇರಿದರು. ಮುಖ್ಯಸ್ಥನೂ ಬಂದ. ಎಲ್ಲರೂ ಕೂಡಿ ಕ್ಯುಮಿಸ್ ಸೇವನೆಗೆ ತೊಡಗಿದರು. ಪಹೋಮನಿಗೆ ಅವರು ಚಹಾ ಕೊಡಲು ಮುಂದಾದರು. ಆದರೆ ಅವನಿಗೆ ಇದಕ್ಕೆಲ್ಲಾ ಸಮಯ ಹಾಳು ಮಾಡುವುದು ಬೇಕಾಗಿರಲಿಲ್ಲ. "ಇನ್ನು ಹೊರಡೋಣ! ತಡವಾಗುತ್ತಿದೆ!" ಎಂದು ಚಡಪಡಿಸಿದ. 



ಬಷ್ಕಿರ್ ಜನರು ಎದ್ದು ಬೆಳಕು ಹರಿಯುವ ಮುನ್ನವೇ ಹೊರಡಲು ಸಿದ್ಧರಾದರು. ಕೆಲವರು ಕುದುರೆಗಳ ಮೇಲೆ ಹೊರಟರು. ಕೆಲವರು ಗಾಡಿಗಳಲ್ಲಿ ಕುಳಿತರು. ಪಹೋಮ್ ತನ್ನ ಗಾಡಿಯಲ್ಲಿ ಆಳಿನೊಂದಿಗೆ ಹೊರಟ. ಅವನ ಬಳಿ ಒಂದು ಸನಿಕೆ ಇತ್ತು. ಅವರು ಬೆಟ್ಟದ ಬುಡವನ್ನು ತಲುಪಿದಾಗ ಮುಂಜಾನೆಯಲ್ಲಿ ಕೆಂಪು ಮೂಡತೊಡಗಿತ್ತು.  ಬಷ್ಕಿರ್ ಮಂದಿ ಶಿಖಾನ್ ಎಂದು ಕರೆಯುವ ಬೆಟ್ಟವನ್ನು ಅವರು ಏರಿದರು. ಶಿಖರದ ಮೇಲೆ ತಮ್ಮ ವಾಹನಗಳಿಂದ ಇಳಿದು ಒಂದು ಸ್ಥಳದಲ್ಲಿ ನೆರೆದರು.  ಮುಖ್ಯಸ್ಥನು ಪಹೋಮನ ಬಳಿಗೆ ಬಂದು ತನ್ನ ಕೈಗಳಿಂದ ಕೆಳಗಿನ ಸಮತಟ್ಟು ಪ್ರದೇಶವನ್ನು ತೋರಿಸುತ್ತಾ "ಅಲ್ಲಿ ನೋಡಿ - ವಿಶಾಲವಾದ ಈ ಭೂಮಿಯಲ್ಲಿ ನಿಮಗೆ ಎಷ್ಟು ಬೇಕೋ ಅಷ್ಟು ನಿಮ್ಮದು!" ಎಂದ.

ಪಹೋಮನ ಕಣ್ಣುಗಳು ಮಿಂಚಿದವು. ಕೆಳಗೆ ದೃಷ್ಟಿ ಹಾಯಿಸಿದಷ್ಟೂ ಕಡೆ ಭೂಮಿ ಕನ್ಯೆ ಕಂಗೊಳಿಸುತ್ತಿದ್ದಳು. ಮುಂಗೈನಂತೆ ಸಮತಟ್ಟಾದ ಭೂಮಿ. ಎಳ್ಳಿನಷ್ಟು ಕಪ್ಪಾದ ಮಣ್ಣು.  ತಗ್ಗುಗಳಲ್ಲಿ ಎದೆಯುದ್ದಕ್ಕೆ ಬೆಳೆದ ಕಾಡುಹುಲ್ಲು.

ಮುಖ್ಯಸ್ಥ ತನ್ನ ನರಿ ತುಪ್ಪುಟದ ಟೋಪಿಯನ್ನು ತೆಗೆದು ನೆಲದ ಮೇಲೆ ಇಟ್ಟು "ಇಗೋ, ನೀವು ಇಲ್ಲಿಂದ ಹೊರಟು ಸಂಜೆ ಮರಳಿ ಇದೇ ಸ್ಥಾನಕ್ಕೆ ಬರಬೇಕು. ನೀವು ಎಷ್ಟು ಭೂಮಿಯನ್ನು ಪ್ರದಕ್ಷಿಣೆ ಹಾಕುತ್ತೀರೋ ಅಷ್ಟೂ ನಿಮ್ಮದು" ಎಂದ.

ಪಹೋಮ್ ತನ್ನ ಕಿಸೆಯಿಂದ ಹಣವನ್ನು ತೆಗೆದು ಟೋಪಿಯಲ್ಲಿಟ್ಟ. ನಂತರ ತನ್ನ ಮೇಲಂಗಿಯನ್ನು ಕಳಚಿ ಕೆಳಗಿಟ್ಟ.  ಸೊಂಟಕ್ಕೆ ಒಂದು ಬಟ್ಟೆಯನ್ನು ಗಟ್ಟಿಯಾಗಿ ಕಟ್ಟಿಕೊಂಡ. ತನ್ನ ಒಳ ಅಂಗಿಯ ಜೋಬಿನಲ್ಲಿ ರೊಟ್ಟಿಯ ಗಂಟನ್ನು ತುರುಕಿಕೊಂಡ. ನೀರಿನ  ಪುಟ್ಟ ಹೂಜಿಯನ್ನು ಸೊಂಟಕ್ಕೆ ಕಟ್ಟಿಕೊಂಡ. ಉದ್ದದ ಬೂಟುಗಳನ್ನು ಧರಿಸಿ ತನ್ನ ಆಳಿನ ಕೈಯಿಂದ ಸನಿಕೆಯನ್ನು ಪಡೆದುಕೊಂಡು ಹೊರಡಲು ಸನ್ನದ್ಧನಾದ. ತಾನು ಯಾವ ದಿಕ್ಕಿನಲ್ಲಿ ಪ್ರಯಾಣ ಮಾಡುವುದೆಂದು ಒಂದೆರಡು ಕ್ಷಣ ಯೋಚಿಸಿದ. ಎಲ್ಲಾ ದಿಕ್ಕುಗಳೂ ಅವನ ಕಡೆ ಕೈ ಬೀಸಿ ಕರೆಯುತ್ತಿದ್ದವು.  "ಯಾವ ದಿಕ್ಕಿನಲ್ಲಿ ಹೋದರೂ ಒಂದೇ! ನಾನು ಉದಿಸುವ ಸೂರ್ಯನ ಕಡೆ ಪ್ರಯಾಣ ಮಾಡುತ್ತೇನೆ" ಎಂದು ಪೂರ್ವದ ಕಡೆ ಮುಖ ಮಾಡಿ ಮೈ ಬಗ್ಗಿಸಿ ಸೂರ್ಯ ಪೂರ್ಣವಾಗಿ ಮೂಡುವವರೆಗೆ ಕಾದ.

"ನಾನು ತಂಪಾಗಿರುವಾಗಲೇ ಆದಷ್ಟೂ ನೆಲವನ್ನು ಕ್ರಮಿಸುವುದು ಮೇಲು - ವ್ಯಯಿಸಲು ಸಮಯವಿಲ್ಲ" ಎಂದು ಚಡಪಡಿಸಿದ. ಸೂರ್ಯನ ಕಿರಣಗಳು ನೆತ್ತಿಯ ಮೇಲೆ ಮೂಡಿತೋ ಇಲ್ಲವೋ ಪಹೋಮ್ ಬೆಟ್ಟವನ್ನು ಇಳಿಯಲು ಉಪಕ್ರಮಿಸಿದ. ತೀರಾ ನಿಧಾನವೂ ಅಲ್ಲದ ತೀರಾ ಬಿರುಸೂ ಅಲ್ಲದ ಹೆಜ್ಜೆಗಳನ್ನಿಡುತ್ತಾ ನಡೆದ. ಒಂದು ಸಾವಿರ ಮಾರುಗಳಷ್ಟು ನಡೆದ ಮೇಲೆ ಸನಿಕೆಯಿಂದ ಒಂದು ಗುಂಡಿ ತೋಡಿ ಅದರ ಮೇಲೆ ಕಾಣುವಂತೆ ಒಂದಷ್ಟು ಹುಲ್ಲನ್ನು ರಾಶಿ ಹಾಕಿ ಮತ್ತೆ ನಡೆಯಲು ಪ್ರಾರಂಭಿಸಿದ. ಈಗ ಅವನ ಮೈಯಿಂದ ಆಲಸ್ಯವು ದೂರವಾಗಿ ಅವನ ನಡಿಗೆ ಚುರುಕಾಯಿತು.  ಸ್ವಲ್ಪ ಹೊತ್ತಿನ ನಂತರ ಇನ್ನೊಂದು ಗುಂಡಿ ತೋಡಿ ತಾನು ಬಂದ ದಾರಿಯ ಕಡೆಗೆ ಹಿಂತಿರುಗಿ ನೋಡಿದ.  ಸೂರ್ಯನ ಬೆಳಕಿನಲ್ಲಿ ಬೆಟ್ಟವು ಚೆನ್ನಾಗಿ ಕಾಣಿಸುತ್ತಿತ್ತು.  ಸಾರೋಟುಗಳ ಚಕ್ರಗಳು ಬಿಸಿಲಿಗೆ ಹೊಳೆಯುತ್ತಿದ್ದವು. ತಾನು ಮೂರು ಮೈಲಿಗಳಷ್ಟು ನಡೆದಿರಬಹುದು ಎಂದು ಅವನು ಅಂದಾಜು ಹಾಕಿದ. ಆಗಲೇ ಬಿಸಿಲು ಪ್ರಖರವಾಗಿತ್ತು. ಅವನು ತನ್ನ ಒಳ-ಅಂಗಿಯನ್ನೂ ಕಳಚಿ ತನ್ನ ಹೆಗಲ ಮೇಲೆ ಹಾಕಿಕೊಂಡ.



ನಡೆಯುತ್ತಾ ನಡೆಯುತ್ತಾ ಬೇಗೆ ಹೆಚ್ಚಾಯಿತು. ಸೂರ್ಯನ ಕಡೆಗೆ ನೋಡಿದ.  "ಮೊದಲ ಪಾಳಿಯ ಕೆಲಸ ಮುಗಿಯಿತು. ಇನ್ನೂ ಮೂರು ಪಾಳಿ ಕೆಲಸ ಬಾಕಿಯಿದೆ" ಎಂದುಕೊಂಡ.  ಬೆಳಗಿನ ಉಪಾಹಾರ ಮುಗಿಸಿದ. "ನನ್ನ ಬೂಟುಗಳನ್ನು ತೆಗೆದರೆ ನಡೆಯುವುದು ಸುಲಭವಾಗುತ್ತದೆ" ಎಂದು ಹಾಗೇ ಮಾಡಿದ.  "ಇನ್ನು ಮೂರು ಮೈಲಿ ನಡೆದು ಎಡಕ್ಕೆ ತಿರುಗುತ್ತೇನೆ. ಆ ಕಡೆಯ ಭೂಮಿ ಎಷ್ಟು ಫಲವತ್ತಾಗಿದೆ! ಅದನ್ನು ಬಿಡುವುದೇ? ನಾನು ದೂರ ಸಾಗಿದಂತೆಲ್ಲಾ ನೆಲವು ಇನ್ನಷ್ಟು ಉತ್ತಮವಾಗಿದೆ ಎಂದು ತೋರುತ್ತದೆ!" ಎಂದು ತನಗೆ ತಾನೇ ಹೇಳಿಕೊಂಡ.

ನೇರವಾಗಿ ಸ್ವಲ್ಪ ಹೊತ್ತು ನಡೆದ ಮೇಲೆ ಅವನು ಮತ್ತೆ ಹಿಂದಕ್ಕೆ ತಿರುಗಿ ನೋಡಿದಾಗ ಬೆಟ್ಟದ ತುದಿಯು ನಸುವೇ ಗೋಚರಿಸಿತು. ಅದರ ಮೇಲೆ ಕಾಯುತ್ತಿದ್ದ ಜನರು ಇರುವೆಗಳ ಸಾಲಿನಂತೆ ಕಂಡರು. ಮಿಂಚುವ ವಸ್ತುವೊಂದು ಸ್ವಲ್ಪವೇ ಕಾಣುತ್ತಿತ್ತು.  

"ಈ ದಿಕ್ಕಿನಲ್ಲಿ ನಾನು ನಡೆದದ್ದು ಸಾಕು. ಬೆವರಿನಿಂದ ತೊಯ್ದು ಹೋಗಿದ್ದೇನೆ. ವಿಪರೀತ ಬಾಯಾರಿಕೆ" ಎಂದುಕೊಂಡು ನಡೆಯುವುದನ್ನು ನಿಲ್ಲಿಸಿ ಅಲ್ಲೊಂದು ಗುಂಡಿಯನ್ನು ತೋಡಿ ಹುಲ್ಲಿನಿಂದ ಮುಚ್ಚಿದ.  ಹೂಜಿಯಿಂದ ಒಂದಷ್ಟು ನೀರನ್ನು ಗಟಗಟ ಕುಡಿದು ಎಡಕ್ಕೆ ತಿರುಗಿದ. 

ಪಹೋಮ್ ನಡೆದೇ ನಡೆದ. ಎದೆಯೆತ್ತರದ ಹುಲ್ಲು. ವಿಪರೀತ ಸೆಖೆ. ಅವನಿಗೆ ದಣಿವಾಗತೊಡಗಿತು. ಸೂರ್ಯ ನೆತ್ತಿಯ ಮೇಲೆ ಬಂದಿದ್ದ. ದಣಿವಾರಿಸಿಕೊಳ್ಳಲು ನೆಲದ ಮೇಲೆ ಕುಳಿತ. ತಂದಿದ್ದ ರೊಟ್ಟಿಯನ್ನು ತಿಂದು ನೀರು ಕುಡಿದ. ಎಲ್ಲಿ ನಿದ್ದೆ ಹತ್ತಿಬಿಡುತ್ತದೋ ಎಂಬ ಭಯದಿಂದ ಅವನು ನೆಲದ ಮೇಲೆ ಅಡ್ದಾಗಲಿಲ್ಲ. ಸ್ವಲ್ಪ ಹೊತ್ತು ಕುಳಿತಿದ್ದು ಮತ್ತೆ ಮೇಲೆದ್ದು ನಡೆಯತೊಡಗಿದ. 

ಮೊದಮೊದಲು ಅವನು ಸಲೀಸಾಗಿ ನಡೆದ. ತಿಂದ ಆಹಾರ ಅವನ ಕಾಲುಗಳಿಗೆ ಶಕ್ತಿ ನೀಡಿತು. ಆದರೆ ತಡೆಯಲಾರದ ಬಿಸಿಲಿನ ಝಳಕ್ಕೆ  ನಿದ್ದೆ ಬರತೊಡಗಿತು. ಆದರೂ ನಿಲ್ಲದೇ ನಡೆದ - "ಈಗ ಒಂದಿಷ್ಟು ಕಷ್ಟ ಪಟ್ಟರೆ ಏನೀಗ? ಸುಖ ಪಡಲು ಇಡೀ ಜೀವಮಾನವಿದೆ!" ಎಂದುಕೊಂಡು ನಡೆದ.  

ಈ ದಿಕ್ಕಿನಲ್ಲೂ ಸಾಕಷ್ಟು ನಡೆದ ನಂತರ ಅವನು ಮತ್ತೆ ಎಡಕ್ಕೆ ತಿರುಗಬೇಕು ಎನ್ನುವಷ್ಟರಲ್ಲಿ ಒದ್ದೆಯಾಗಿದ್ದ ತಗ್ಗು ಭೂಮಿ ಕಾಣಿಸಿತು. "ಅಯ್ಯೋ! ಇದನ್ನು ಬಿಡುವುದೇ? ಇಲ್ಲಿ ಅಗಸೆ ಬಿತ್ತಿದರೆ ಎಷ್ಟು ಒಳ್ಳೆಯ ಫಸಲು ಬಂದೀತು!" ಎಂದು ಜೌಗು ಭೂಮಿಯಲ್ಲಿ ನಡೆದ. ಜೌಗು ಪ್ರದೇಶ ದಾಟಿದ ಮೇಲೆ ಎಡಕ್ಕೆ ತಿರುಗಿದ. ಬೆಟ್ಟದ ಕಡೆಗೆ ತಿರುಗಿ ನೋಡಿದ. ಉರಿಬಿಸಿಲಿನ ಝಳಕ್ಕೆ ಗಾಳಿ ಹೊಗೆಯಾಡಿದಂತೆ ಕಾಣಿಸಿತು. ಬೆಟ್ಟ ಬಳುಕಾಡಿದಂತೆ ಕಂಡಿತು. ಅದರ ಮೇಲಿದ್ದ ಜನರು ಕಾಣುತ್ತಲೇ ಇರಲಿಲ್ಲ. 

"ಓ! ನಾನು ಈ ದಿಕ್ಕಿನಲ್ಲಿ ಸ್ವಲ್ಪ ಜಾಸ್ತಿ ನಡೆದೆನೆಂದು ತೋರುತ್ತದೆ. ಮುಂದಿನ ಸುತ್ತನ್ನು ಸ್ವಲ್ಪ ಚಿಕ್ಕದು ಮಾಡಬೇಕು" ಎಂದು ಪಹೋಮ್  ತನ್ನ ಮೂರನೇ ಪಾಳಿಯ ಕೆಲಸ ಪ್ರಾರಂಭಿಸಿದ.  ಅವನು ಬೇಗ ಬೇಗ ನಡೆದ. ಸೂರ್ಯ ಈಗಾಗಲೇ ಪಶ್ಚಿಮದ ಕಡೆಗೆ ಅರ್ಧ ದಾರಿ ಸವೆಸಿದ್ದ. ತಾನು ಈ ಪಾಳಿಯಲ್ಲಿ ಎರಡು ಮೈಲಿ ಕೂಡಾ ನಡೆದಿಲ್ಲ. ಒಂದು ಹತ್ತು ಮೈಲಿಯಾದರೂ ನಡೆಯಬೇಕೆಂಬ ಶಪಥವನ್ನು ಮುರಿದ. "ನನ್ನ ಜಮೀನಿನ  ಆಕಾರ ಸ್ವಲ್ಪ ವಕ್ರವಾದರೂ ಪರವಾಗಿಲ್ಲ - ಈಗ ನಾನು ನೇರವಾಗಿ ಬೆಟ್ಟಕ್ಕೆ ಮರಳುವುದು ಕ್ಷೇಮ - ಈಗಾಗಲೇ ನನ್ನ ಬಳಿ ಸಾಕಷ್ಟು ಭೂಮಿ ಇದೆ" ಎಂದುಕೊಂಡ. 

ಹೀಗೆ ಯೋಚಿಸಿದ ಪಹೋಮ್ ಅವಸರದಲ್ಲಿ ಒಂದು ಹಳ್ಳ ತೋಡಿ ನೇರವಾಗಿ ಬೆಟ್ಟದ ಕಡೆಗೆ ಧಾವಿಸಿದ. 

(ಮುಂದಿನ ಭಾಗವನ್ನು ಇಲ್ಲಿ ಓದಿ)


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)