ಮನುಷ್ಯನಿಗೆ ಎಷ್ಟು ಜಮೀನು ಬೇಕು? - 1



ಮೂಲ ರಷ್ಯನ್ ಕತೆ - ಲಿಯೋ ಟಾಲ್ಸ್ ಟಾಯ್ 
ಕನ್ನಡ ಅನುವಾದ - ಸಿ ಪಿ ರವಿಕುಮಾರ್ 

ಹಳ್ಳಿಯಲ್ಲಿದ್ದ ತಂಗಿಯನ್ನು ನೋಡಲು ಒಮ್ಮೆ ಅಕ್ಕ ಪಟ್ಟಣದಿಂದ ಬಂದಳು. ಅಕ್ಕನಿಗೆ ಪಟ್ಟಣದಲ್ಲಿದ್ದ ವ್ಯಾಪಾರಿಯೊಬ್ಬನನ್ನು ಕೊಟ್ಟು ಮದುವೆಯಾಗಿತ್ತು. ತಂಗಿಯನ್ನು ಹಳ್ಳಿಯಲ್ಲಿದ್ದ ಒಬ್ಬ ಕೃಷಿಕನಿಗೆ ಕೊಟ್ಟು ಮಾಡುವೆ ಮಾಡಿದ್ದರು. ಚಹಾ ಕುಡಿಯುತ್ತಾ ಹರಟುವಾಗ ಅಕ್ಕ ಪಟ್ಟಣದ ಜೀವನವನ್ನು ಹೊಗಳಿದಳು. ತಾವು ಎಷ್ಟು ಆರಾಮವಾಗಿದ್ದೇವೆ, ತಮ್ಮ ಉಡುಗೆ ತೊಡುಗೆಗಳು ಎಷ್ಟು ಚೆನ್ನಾಗಿದೆ, ತಮ್ಮ ಆಹಾರ-ವಿಹಾರಗಳು ಎಷ್ಟು ದಿವಿನಾಗಿವೆ, ನೋಡಲು-ಮಾಡಲು ಪಟ್ಟಣದಲ್ಲಿ ಎಷ್ಟೊಂದಿದೆ ಎಂದು ವರ್ಣಿಸಿದಳು ಕಿರಿಯವಳಿಗೆ ಇದನ್ನು ಕೇಳಿ ಕೆಣಕಿದಂತಾಯಿತು. ಅವಳು ಪಟ್ಟಣದ ವ್ಯಾಪಾರಿ ಜೀವನದ ಬಗ್ಗೆ ಸ್ವಲ್ಪ ಕೀಳಾಗಿ ಮಾತಾಡಿದಳು. ಹಳ್ಳಿಯ ರೈತನ ಜೀವನಶೈಲಿಯನ್ನು ಹೊಗಳಿದಳು. "ನನಗೆ ನೀನು ಏನೇ ಕೊಟ್ಟರೂ ನನಗೆ ಈ ಬದುಕಿನ ಹೊರತು ಬೇರೆ ಏನೂ ಬೇಡ. ನಮ್ಮ ಜೀವನ ಒರಟಾಗಿರಬಹುದು. ಆದರೆ ನಮಗೆ ಯಾವ ಆತಂಕವೂ ಇಲ್ಲ.  ಲಾಭ-ನಷ್ಟಗಳು ಅಣ್ಣ ತಮ್ಮಂದಿರು ಅಂತ ಗಾದೆ ಕೇಳಿದ್ದೀಯಲ್ಲ! ಪಟ್ಟಣದಲ್ಲಿ ದುಡ್ಡು ಮಾಡಿಕೊಂಡವರ ಕತೆ ನಾನೂ ಕೇಳಿದ್ದೇನೆ - ಇವತ್ತು ಐಶ್ವರ್ಯದಲ್ಲಿ ಉರುಳಾಡಿದವರು ನಾಳೆ ತಿರುಪೆ ಬೇಡಿದ ಸಂಗತಿಗಳನ್ನೂ ಕೇಳಿದ್ದೇನೆ. ಅದಕ್ಕೆ ಹೋಲಿಸಿದರೆ ನಾವೇ ಮೇಲು. ನಮ್ಮ ಜೀವನದಲ್ಲಿ  ಅಷ್ಟೊಂದು ರಂಗಿಲ್ಲದೇ ಇರಬಹುದು, ನಮ್ಮ ಹತ್ತಿರ ಹೆಚ್ಚು ಹಣಕಾಸು ಇಲ್ಲದೇ ಇರಬಹುದು, ಆದರೆ ಉಡಲಿಕ್ಕೆ-ಉಣಲಿಕ್ಕೆ ಯಾವ ಕೊರತೆಯಿಲ್ಲದೆ ನೆಮ್ಮದಿಯಾಗಿದ್ದೇವೆ." 

ಆಗ ಅಕ್ಕ ಕುಟುಕಿದಳು: "ಉಣ್ಣಲು ಬೇಕಾದಷ್ಟಿದೆ, ನಿಜ. ಆದರೆ ಅದನ್ನು ಯಾರ ಜೊತೆ ಹಂಚಿಕೊಂಡು ತಿನ್ನುತ್ತೀರಿ? ಆಕಳುಗಳ ಜೊತೆ, ಹಂದಿಗಳ ಜೊತೆ ಏನು! ಒನಪು-ವೈಯ್ಯಾರ ಎಂಬುದರ ಗಂಧವೇ ನಿಮಗಿಲ್ಲ! ಇದ್ದಾಗ ಹೇಗೆ ಸಗಣಿಯ ಮೇಲೆ ಜೀವನ ಸಾಗಿಸುತ್ತಿದ್ದೇರೋ, ಸತ್ತಾಗಲೂ ಹಾಗೇ. ನಿಮ್ಮ ಮಕ್ಕಳೂ ಹಾಗೇ ಬಾಳುತ್ತಾರೆ!"

"ಅದರಲ್ಲೇನು ತಪ್ಪು? ನಮ್ಮ ಜೀವನ ಒರಟು. ಆದರೆ ಯಾರ ಹಂಗಿಲ್ಲದ ದಿಟವಾದ ಬದುಕು. ನೀವು ಪಟ್ಟಣದವರಿಗೆ ಒಂದಲ್ಲದೆ ಹತ್ತು ಚಪಲಗಳು. ನಿನ್ನ ಗಂಡನಿಗೆ ಯಾವುದಾದರೂ ದುಶ್ಚಟ ಹತ್ತಿಕೊಳ್ಳ ಬಹುದು. ಇಸ್ಪೀಟು, ಹೆಂಡ, ಹೆಣ್ಣು, ಇವೆಲ್ಲಾ .ಕೆಡುವುದಕ್ಕೆ ಹಾದಿಗಳು. ಪಟ್ಟಣಗಳಲ್ಲಿ ಇವೆಲ್ಲಾ ಹೆಚ್ಚು ಅನ್ನುವುದು ಸುಳ್ಳೇನು?"

ಮನೆಯ ಯಜಮಾನ ಪಹೋಮ್ ಅಲ್ಲೇ ಅಗ್ನಿಕುಂಡದ ಬೆಂಕಿಯ ಹತ್ತಿರ ಮಲಗಿದ್ದುಕೊಂಡೇ ಈ ಸಂಭಾಷಣೆಯನ್ನು ಕೇಳಿಸಿಕೊಂಡ. "ಇದು ನಿಜವೇ!" ಎಂದು ಅವನಿಗೆ ಅನ್ನಿಸಿತು. "ನಾವು ರೈತಮಕ್ಕಳು ಚಿಕ್ಕಂದಿನಿಂದ ಬೆವರು ಸುರಿಸಿ ಭೂಮಿತಾಯನ್ನು ಸೇವೆ ಮಾಡೋದರಲ್ಲೇ ಸಮಯ ಕಳೆಯುತ್ತೇವೆ. ಕೆಟ್ಟ ಆಲೋಚನೆಗಳು ನಮ್ಮ ತಲೆಯಲ್ಲಿ ಬರಲು ಅವಕಾಶವೇ ಇಲ್ಲ. ನಮಗೆ ಇರುವ ಸಮಸ್ಯೆ ಒಂದೇ - ಸಾಕಷ್ಟು ಭೂಮಿ ಇಲ್ಲದೇ ಇರುವುದು. ನನ್ನ ಹತ್ತಿರ ಬೇಕಾದಷ್ಟು ಜಮೀನಿದ್ದಿದ್ದರೆ ನನಗೆ ಸೈತಾನನ ದಿಗಿಲೂ ಇರುತ್ತಿರಲಿಲ್ಲ!"

ಹೆಂಗಸರು ತಮ್ಮ ಪಾನೀಯ ಮುಗಿಸಿ ಮತ್ತಷ್ಟು ಹೊತ್ತು ಅದೂ ಇದೂ ಹರಟೆ ಹೊಡೆದರು. ಕಪ್ಪು-ಬಸಿಗಳನ್ನು ತೊಳೆದಿಟ್ಟು ಹಾಸಿಗೆಯ ಮೇಲೆ ಮಲಗಿ ನಿದ್ದೆ ಹೋದಋ. ಆದರೆ ಸೈತಾನ ಅಗ್ನಿಕುಂಡದ ಹಿಂಬದಿಯಲ್ಲೇ ಅವಿತಿಟ್ಟುಕೊಂಡು ಇವರೆಲ್ಲರನ್ನೂ ಗಮನಿಸುತ್ತ ಎಚ್ಚರವಾಗಿದ್ದ. ರೈತನ ಹೆಂಡತಿಯ ಮಾತುಗಳಿಂದ ಅವಳ ಗಂಡನ ಮನಸ್ಸಿನಲ್ಲಿ ಎದ್ದ ಜಂಬವನ್ನು ಕಂಡು ಸೈತಾನ ಹಿಗ್ಗಿದ. ಬೇಕಾದಷ್ಟು ಜಮೀನಿದ್ದರೆ ಸೈತಾನನಿಗೂ ಹೆದರುವುದಿಲ್ಲ ಎಂದನಲ್ಲವೇ!  "ಸರಿ! ಒಂದು ಕೈ ನೋಡೇ ಬಿಡೋಣ. ನಿನಗೆ ನಾನು ನಿನಗೆ ಬೇಕಾಗುವಷ್ಟು ಜಮೀನು ಕೊಡುತ್ತೇನೆ. ಆ ಮೂಲಕವೇ ನಿನ್ನನ್ನು ವಶ ಪಡಿಸಿಕೊಳ್ಳುತ್ತೇನೆ!" ಎಂದು ಸೈತಾನ ಮನಸ್ಸಿನಲ್ಲೇ ನಿರ್ಧರಿಸಿದ. 


(ಮುಂದಿನ ಭಾಗವನ್ನು ಇಲ್ಲಿ ಓದಿ)

---------
Kannada Translation of 'How much land does a man need?' by Leo Tolstoy
(c) 2014, C.P. Ravikumar.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)