ಮನುಷ್ಯನಿಗೆ ಎಷ್ಟು ಜಮೀನು ಬೇಕು? - 4


ಮೂಲ ರಷ್ಯನ್ ಕತೆ - ಲಿಯೋ ಟಾಲ್ಸ್ ಟಾಯ್ 
ಕನ್ನಡ ಅನುವಾದ - ಸಿ ಪಿ ರವಿಕುಮಾರ್ 

(ಮೂರನೇ ಭಾಗವನ್ನು ಇಲ್ಲಿ ಓದಿ)

ಭಾಗ - ೪

ಪರಿವಾರ ಸಮೇತನಾಗಿ ಪಹೋಮ್ ತನ್ನ ಹೊಸ ವಾಸ್ತವ್ಯವನ್ನು ಸೇರಿದ. ಅತ್ಯಂತ ದೊಡ್ಡ ಹಳ್ಳಿಯನ್ನು ಹುಡುಕಿ ಅದರ ಸಮಾಜದ ಸದಸ್ಯತ್ವಕ್ಕಾಗಿ ಅವನು ಅರ್ಜಿ ಹಾಕಿಕೊಂಡ. ಊರಿನ ಹಿರಿಯರಿಗೆ ಸನ್ಮಾನ ಮಾಡಿ ಸದಸ್ಯತ್ವಕ್ಕೆ ಬೇಕಾದ ಕಾಗದ ಪತ್ರಗಳನ್ನು ಒಂದುಗೂಡಿಸಿಕೊಂಡ. ಅವನು ಮತ್ತು ಅವನ ನಾಲ್ಕು ಗಂಡುಮಕ್ಕಳಿಗಾಗಿ ತಲಾ ಇಪ್ಪತ್ತೈದು ಎಕರೆ ಜಮೀನನ್ನು ಕೊಟ್ಟರು. ಆದರೆ ಈ ಜಮೀನುಗಳೆಲ್ಲಾ ಒಂದಕ್ಕೊಂದು ಹತ್ತಿಕೊಂಡು ಇರಲಿಲ್ಲ; ಬೇರೆ ಬೇರೆ ಪ್ರದೇಶಗಳಲ್ಲಿದ್ದವು. ಇದಲ್ಲದೆ ಸಮಾಜಕ್ಕೆ ಸೇರಿದ ಹುಲ್ಲುಗಾವಲಿನ ಉಪಯೋಗಕ್ಕೆ ಅನುಮತಿ ಸಿಕ್ಕಿತು. 

ಪಹೋಮ್ ಜಮೀನಿನಲ್ಲಿ ಬೇಕಾದ ಕಟ್ಟಡಗಳನ್ನು ಎಬ್ಬಿಸಿದ. ಜಾನುವಾರುಗಳನ್ನು ಕ್ರಯಕ್ಕೆ ಕೊಂಡ.  ಈಗ ಅವನಿಗೆ ಸಮಾಜವು ಉಚಿತವಾಗಿ ಕೊಟ್ಟ ಭೂಮಿಯೇ ಹಿಂದೆ ಅವನ ಬಳಿಯಿದ್ದ ಭೂಮಿಗಿಂತ ಮೂರು ಪಟ್ಟು ಹೆಚ್ಚಾಗಿತ್ತು. ಇಲ್ಲಿನ ಭೂಮಿಯಲ್ಲಿ ಜೋಳದ ಫಸಲು ಚೆನ್ನಾಗಿ ಬಂತು. ಹಿಂದಿದ್ದಕ್ಕಿಂತ ಪಹೋಮ್ ಬಳಿ ಈಗ ಹತ್ತು ಪಟ್ಟು ಆಸ್ತಿ ಇತ್ತು.  ಬೇಕಾದಷ್ಟು ನೀರಾವರಿ ಜಮೀನು, ಬೇಕಾದಷ್ಟು ಜಾನುವಾರುಗಳು ಎಲ್ಲವೂ ಇದ್ದವು. 

ಹೊಸ ಜಾಗಕ್ಕೆ ಬಂದ ಹೊಸತರಲ್ಲಿ ಪಹೋಮ್ ಗೆ ತನ್ನ ಸಂಪತ್ತನ್ನು ನೆನೆದು ಸಂತೋಷವಾದರೂ ಕಾಲ ಕಳೆದಂತೆ ಅವನಿಗೆ ಇಲ್ಲೂ ತನ್ನ ಬಳಿ ಹೆಚ್ಚೇನೂ ಜಮೀನು ಇಲ್ಲವೆಂದು ಭಾಸವಾಗತೊಡಗಿತು. ಮೊದಲ ವರ್ಷ ಅವನು ಗೋಧಿಯ ಫಸಲು ಬೆಳೆದ. ಉತ್ತಮವಾದ ಬೆಳೆ ಬಂತು. ಮತ್ತೊಮ್ಮೆ ಗೋಧಿ ಬೆಳೆಯಬೇಕೆಂದು ಅವನಿಗೆ ಆಸೆಯಾಯಿತು. ಆದರೆ ಆ ಪ್ರದೇಶದಲ್ಲಿ ಗೋಧಿಯನ್ನು ಮತ್ತೆ ಬಿತ್ತಲು ಅವಕಾಶವಿಲ್ಲ. ಒಮ್ಮೆ ಗೋಧಿ ಬೆಳೆದ ನಂತರ ಜಮೀನನ್ನು ಹಾಗೇ ಬಿಡಬೇಕು; ಜಮೀನಿನಲ್ಲಿ ವರ್ಷಗಟ್ಟಲೆ ಹುಲ್ಲು ಬೆಳೆದು ನಿಲ್ಲಬೇಕು. ಅನಂತರ ಹುಲ್ಲು ಕಟಾವು ಮಾಡಿ ಮತ್ತೆ ಗೋಧಿ ಬಿತ್ತಬಹುದು. ಗೋಧಿ ಬೆಳೆಯಬಲ್ಲ ಜಮೀನಿಗೆ ಅಲ್ಲಿ ರೈತರು ಪೈಪೋಟಿ ಮಾಡುತ್ತಿದ್ದರು. 

ತನ್ನ ಜಮೀನಿನಲ್ಲಿ ಮತ್ತೆ ಗೋಧಿ ಬೆಳೆಯಲು ಒಂದು ವರ್ಷವಾದರೂ ಕಾಯಬೇಕು. ಹೀಗಾಗಿ ಪಹೋಮ್ ಬೇರೊಬ್ಬ ರೈತನ ಜಮೀನನ್ನು ಬಾಡಿಗೆ ಪಡೆದು ಮತ್ತೆ ಗೋಧಿ ಬಿತ್ತಿದ.  ಮತ್ತೊಮ್ಮೆ ಒಳ್ಳೆಯ ಫಸಲು ಬಂತು. ಅವನ ಮನೆಗೂ ಬಾಡಿಗೆ ಜಮೀನಿಗೂ ಹತ್ತಾರು ಮೈಲಿಗಳ ಅಂತರವಿತ್ತು. ಕಟಾವು ಮಾಡಿದ ನಂತರ ಗೋಧಿಯನ್ನು ಸಾಗಿಸುವುದು ಕೂಡಾ ಸಾಹಸವಾಯಿತು. ಸ್ವಲ್ಪ ಸಮಯದ ಅನಂತರ ಪಹೋಮ್ ಒಂದು ವಿಷಯವನ್ನು ಗಮನಿಸಿದ. ಕೆಲವು ರೈತರು ತಮ್ಮ ನೆಲವನ್ನು ಬಾಡಿಗೆ ಕೊಟ್ಟು ಶ್ರೀಮಂತರಾಗಿದ್ದರು.  ಅವರಿವರಿಂದ ಭೂಮಿಯನ್ನು ಬಾಡಿಗೆ ಹಿಡಿದು ಉಳಿದ ರೈತರಿಗೆ ಅದನ್ನು ಕ್ರಯಕ್ಕೆ ಕೊಡುವ ನೆಲಹಿಡುಕರೂ ಶ್ರೀಮಂತರಾಗಿದ್ದರು. "ನನ್ನ ಹತ್ತಿರವೂ ಪೂರ್ಣಸ್ವಾಮ್ಯದ ಭೂಮಿ ಇದ್ದಿದ್ದರೆ ಅದರ ಮಾತೇ ಬೇರೆಯಾಗುತ್ತಿತ್ತು!" ಎಂದು ಪಹೋಮ್ ನಿಡುಸುಯ್ದ. 

ಪೂರ್ಣಸ್ವಾಮ್ಯದ ಭೂಮಿಯನ್ನು ಕೊಳ್ಳಬೇಕೆಂಬ ಆಲೋಚನೆ ಅವನ ಮನಸ್ಸಿನಲ್ಲಿ ಮತ್ತೆ ಮತ್ತೆ ಏಳುತ್ತಿತ್ತು. ಮೂರು ವರ್ಷಗಳ ಕಾಲ ಅವನು ಬೇರೆಯವರ ಭೂಮಿಯನ್ನು ಬಾಡಿಗೆ ಹಿಡಿದು ಗೋಧಿಯ ಫಸಲು ತೆಗೆದ. ಪ್ರತಿವರ್ಷ ಫಸಲು ಚೆನ್ನಾಗಿ ಬಂದ ಕಾರಣ ಅವನ ಹತ್ತಿರ ಒಂದಷ್ಟು ಹಣ ಕೂಡತೊಡಗಿತು.  ಅವನು ಸಂತೃಪ್ತಿಯ ಜೀವನ ನಡೆಸಬಹುದಾಗಿತ್ತು. ಆದರೆ ನೆಲವನ್ನು ಬಾಡಿಗೆ ಹಿಡಿಯುವ ಕೆಲಸ ಅವನಿಗೆ ಸಾಕಾಯಿತು.  ಒಳ್ಳೆಯ ಜಮೀನು ಬಾಡಿಗೆಗೆ ಸಿಕ್ಕುತ್ತದೆ ಎಂದು ಸುಳಿವು ಸಿಕ್ಕ ತಕ್ಷಣ ರೈತರು ಅಲ್ಲಿಗೆ ಮುಗಿಬೀಳುತ್ತಿದ್ದರು. ಚುರುಕಾಗಿದ್ದು ಸುತ್ತಮುತ್ತಲ ವಿದ್ಯಮಾನಗಳನ್ನು ಗಮನಿಸುತ್ತಿರಬೇಕು. ಇಲ್ಲದಿದ್ದರೆ ನಿರಾಸೆ ಕಟ್ಟಿಟ್ಟ ಬುತ್ತಿ - ಈಗಾಗಲೇ ಬೇರೆ ಯಾರೋ ಬಾಡಿಗೆಗೆ ಮಾತಾಡಿದ್ದಾರೆ ಎಂಬ ವರ್ತಮಾನ ಕೇಳಿಕೊಂಡು ನಿರಾಸೆಯಿಂದ ಮರಳಬೇಕು.  

ಮೂರನೇ ವರ್ಷ ಅವನು ಒಬ್ಬ ನೆಲಹಿಡುಕನನ್ನು ಗೊತ್ತು ಮಾಡಿಕೊಂಡು ಕೆಲವು ರೈತರಿಗೆ ಸೇರಿದ ಒಂದು ಹುಲ್ಲುಗಾವಲನ್ನು ಬಾಡಿಗೆ ಪಡೆದು ನೆಲ ಉಳುವ ಕೆಲಸ ಪ್ರಾರಂಭಿಸಿದ. ಆದರೆ ಯಾರೋ ಏನೋ ತಗಾದೆ ತೆಗೆದು ದೊಡ್ಡ ಗಲಾಟೆಯಾಯಿತು. ಮಾತು ನ್ಯಾಯಾಲಯದವರೆಗೂ ಬೆಳೆದು ಕೊನೆಗೆ ಮಾಡಿದ್ದ ಕೆಲಸವೆಲ್ಲಾ ವ್ಯರ್ಥವಾಯಿತು. "ನನ್ನ ಬಳಿ ನನ್ನದೇ ಎನ್ನುವ ಒಂದಿಷ್ಟು ಜಮೀನು ಇದ್ದಿದ್ದರೆ ಹೀಗೆಲ್ಲಾ ಆಗುತ್ತಿತ್ತೇ?" ಎಂದು ಪಹೋಮ್ ಕೈ ಹಿಸುಕಿಕೊಂಡ. 

ಈ ಘಟನೆಯ ನಂತರ ಭೂಮಿ ಕೊಳ್ಳಲು ಪಹೋಮ್ ಗಂಭೀರ ಪ್ರಯತ್ನ ಪ್ರಾರಂಭಿಸಿದ. ಸಾವಿರದ ಮುನ್ನೂರು ಎಕರೆ ಜಮೀನಿನ ಒಡೆಯನೊಬ್ಬನ ಪರಿಚಯವಾಯಿತು. ಏನೋ ತೊಂದರೆ ಇದ್ದ ಕಾರಣ ಅವನು ತನ್ನ ಭೂಮಿಯನ್ನು ಅಗ್ಗದ ಬೆಲೆಗೆ ಮಾರಲು ತಯಾರಾಗಿದ್ದ. ಪಹೋಮ್ ಅವನೊಂದಿಗೆ ಸಾಕಷ್ಟು ಚೌಕಾಸಿ ಮಾಡಿ ಬೆಲೆಯನ್ನು ಸಾವಿರದ ಐನೂರು ರೂಬಲ್ ಎಂದು ಗೊತ್ತು ಮಾಡಿದ. ಇದರಲ್ಲಿ ಒಂದಿಷ್ಟು ನಗದು ಹಣ ಮುಂಗಡವಾಗಿ  ಕೊಡಬೇಕು, ಉಳಿದದ್ದನ್ನು ಮುಂದಿನ ವರ್ಷ ಕೊಡಬೇಕೆಂಬ ಮಾತಾಯಿತು.  

ಪಹೋಮ್ ಈ ಭೂಮಿಯನ್ನು ಇನ್ನೇನು ಕೊಂಡ ಎಂಬಷ್ಟರಲ್ಲಿ ಒಂದು ದಿನ ಅವನ ಮನೆಗೆ ಒಬ್ಬ ನೆಲಹಿಡುಕನ ಆಗಮನವಾಯಿತು. ಪ್ರಯಾಣದ ವೇಳೆ ತನ್ನ ಕುದುರೆಗೆ ಮೇವು-ನೀರು ಹಾಕಲು ಇವನು ಪಹೋಮನ ಮನೆಯ ಮುಂದೆ ಸಾರೋಟು ನಿಲ್ಲಿಸಿದ. ಅತಿಥಿಗೆ ಚಹಾಪಾನದ ಸತ್ಕಾರವಾಯಿತು. ಹರಟೆಯ ನಡುವೆ ಅತಿಥಿ ತಾನು ಬಷ್ಕಿರ್ ಎಂಬ ಜನಾಂಗದವರು ಇದ್ದ ಪ್ರದೇಶದಿಂದ ಹಿಂದಿರುಗುತ್ತಿದ್ದೇನೆ ಎಂದು ತಿಳಿಸಿದ. ಬಹಳ ದೂರದಲ್ಲಿದ್ದ ಊರು. ಅಲ್ಲಿ ಇವನು ಕೇವಲ ಸಾವಿರ ರೂಬಲ್ ಕೊಟ್ಟು ಹದಿಮೂರು ಸಾವಿರ ಎಕರೆ ಜಮೀನು ಖರೀದಿ ಮಾಡಿದ್ದನಂತೆ.   

ಪಹೋಮ್ ಅವನನ್ನು ಇನ್ನಷ್ಟು ಕೆದಕಿ ಕೆದಕಿ ಕೇಳಿದಾಗ ನೆಲಹಿಡುಕ ಬಾಯಿ ಬಿಟ್ಟ: "ಏನಿಲ್ಲ, ಮುಖ್ಯಸ್ಥರನ್ನು ಪರಿಚಯ ಮಾಡಿಕೊಳ್ಳಬೇಕು. ನಾನು ಮುಖ್ಯಸ್ಥರಿಗೆ ಉಡುಗೊರೆಗಳನ್ನು ಕೊಂಡೊಯ್ದೆ - ಉಡುಪುಗಳು, ರತ್ನಗಂಬಳಿಗಳು, ಚಹಾ ಪುಡಿಯ ಪೆಟ್ಟಿಗೆಗಳು, ಮದ್ಯದ ಸೀಸೆಗಳು. ಇವೆಲ್ಲಕ್ಕೂ ನಾನು ಒಂದು ನೂರು ರೂಬಲ್ ಖರ್ಚು ಮಾಡಿರಬಹುದು, ಅಷ್ಟೆ. ನನಗೆ ಎಕರೆಗೆ ಎರಡು ಸೆಂಟ್ ಗಿಂತ ಕಡಿಮೆ ದರದಲ್ಲಿ ಭೂಮಿ ಸಿಕ್ಕಿತು." 

ಮಾರಾಟದ ಕಾಗದ ಪತ್ರಗಳನ್ನು ಕೂಡಾ ಅತಿಥಿ ತೋರಿಸಿದ. "ನನ್ನ ಭೂಮಿ ನದಿಯ ಹತ್ತಿರದಲ್ಲೇ ಇದೆ. ಇಡೀ ಭೂಮಿ ಹುಲ್ಲುಗಾವಲು - ಅಲ್ಲಿ ಇದುವರೆಗೂ ಯಾರೂ ಏನೂ ಬೆಳೆದಿಲ್ಲ."

ಪಹೋಮ್ ಮತ್ತಷ್ಟು ಪ್ರಶ್ನೆಗಳನ್ನು ಹಾಕಿದ. ಅದಕ್ಕೆ ಉತ್ತರವಾಗಿ ಅತಿಥಿ "ಅಲ್ಲಿ ಬೇಕಾದಷ್ಟು ಜಮೀನಿದೆ. ನೀವು ಒಂದು ವರ್ಷಕಾಲ ನಡೆದರೂ ತೀರದಷ್ಟು. ಎಲ್ಲವೂ ಬಷ್ಕಿರ್ ಪಂಗಡಕ್ಕೆ ಸೇರಿದ್ದು. ಅವರು ಭೋಳೇ ಮಂದಿ; ಒಳ್ಳೆ ಗೋವುಗಳ ಹಾಗೆ. ಅವರಿಂದ ಜಮೀನು ತೀರಾ ಕಡಮೆ ಬೆಲೆಗೆ ದಕ್ಕಿಸಿಕೊಳ್ಳಬಹುದು."

ಇದೆಲ್ಲಾ ಕೇಳಿಸಿಕೊಂಡ ಪಹೋಮ್ ನ ಆಲೋಚನಾ ಸರಣಿ ಹೀಗೆ ಸಾಗಿತು: "ನನ್ನ ಹತ್ತಿರ ಇರುವ ಒಂದು ಸಾವಿರ ರೂಬಲ್ ಕೊಟ್ಟು ನಾನು ಬರೀ ಹದಿಮೂರು ನೂರು ಎಕರೆ ಪಡೆದುಕೊಳ್ಳುವುದರಲ್ಲಿ ಏನು ಜಾಣತನವಿದೆ? ಅದರ  ಜೊತೆಗೆ ಸಾಲದ ಹೊರೆಯನ್ನೂ ತಲೆಯ ಮೇಲೆ ಏರಿಸಿಕೊಳ್ಳುವುದು ಶುದ್ಧ ಮೂರ್ಖತನ. ನಾನು ಇದೇ ಹಣವನ್ನು ಇವನು ಹೇಳುವ ಸ್ಥಳಕ್ಕೆ ಕೊಂಡೊಯ್ದರೆ ಅದಕ್ಕೆ ಹತ್ತು ಪಟ್ಟು ಬೆಲೆ ಬರಬಹುದು." 


( ಮುಂದಿನ ಭಾಗವನ್ನು ಇಲ್ಲಿ ಓದಿ)

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)