ಮನುಷ್ಯನಿಗೆ ಎಷ್ಟು ಜಮೀನು ಬೇಕು? - 2
ಮೂಲ ರಷ್ಯನ್ ಕತೆ - ಲಿಯೋ ಟಾಲ್ಸ್ ಟಾಯ್
ಕನ್ನಡ ಅನುವಾದ - ಸಿ ಪಿ ರವಿಕುಮಾರ್
(ಮೊದಲ ಭಾಗವನ್ನು ಇಲ್ಲಿ ಓದಿ)
ಭಾಗ - ೨
ಹಳ್ಳಿಗೆ ಸಮೀಪದಲ್ಲಿ ಒಬ್ಬ ಜಮೀನುದಾರಳ ಮನೆಯಿತ್ತು. ಅವಳು ಸುಮಾರು ಮುನ್ನೂರು ಎಕರೆ ಜಮೀನಿನ ಒಡತಿ. ತನ್ನ ಜಮೀನಿನಲ್ಲಿ ದುಡಿಯುವ ರೈತರನ್ನು ಚೆನ್ನಾಗಿಯೇ ನೋಡಿಕೊಳ್ಳುತ್ತಿದ್ದಳು. ಮೇಲುಸ್ತುವಾರಿ ಕೆಲಸಕ್ಕೆಂದು ಅವಳು ಒಬ್ಬ ಮನುಷ್ಯನನ್ನು ಗೊತ್ತು ಮಾಡಿಕೊಂಡಮೇಲೆ ಇದು ಬದಲಾಯಿತು. ಅವನು ಹಿಂದೆ ಸೈನ್ಯದಲ್ಲಿ ಕೆಲಸ ಮಾಡಿದ ಆಳು. ಕೆಲಸ ಮಾಡುವವರ ಮೇಲೆ ದಂಡ ಹಾಕುವುದು ಅವನ ಜಾಯಮಾನ. ಪಹೋಮ್ ಎಷ್ಟೇ ಜಾಗರೂಕನಾಗಿದ್ದರೂ ಒಂದಲ್ಲ ಒಂದು ತಪ್ಪು ನಡೆದೇ ಹೋಗುತ್ತಿತ್ತು. ಅವನ ಕುದುರೆ ಜಮೀನುದಾರಳ ಓಟ್ಸ್ ಹೊಲಕ್ಕೆ ನುಗ್ಗಿ ಬಿಡುವುದು. ಹಸು ಕಣ್ಣು ತಪ್ಪಿಸಿ ಆಕೆಯ ತೋಟಕ್ಕೆ ನುಸುಳುವುದು. ಕರುಗಳು ಆಕೆಯ ಹುಲ್ಲುಗಾವಲಿಗೆ ನುಗ್ಗಿಬಿಡುವುವು. ಹೀಗಾದಾಗಲೆಲ್ಲಾ ದಂಡ ತೆರಬೇಕಾಗುತ್ತಿತ್ತು.
ದಂಡ ತೆತ್ತ ದಿನ ಪಹೋಮ್ ಗೊಣಗುತ್ತಾ ಮನೆಗೆ ಬರುತಿದ್ದ. ಆ ದಿನ ಅವನ ಕೋಪ ಮನೆಯವರ ಮೇಲೆ ತಿರುಗುವುದು. ಈ ವರ್ಷ ಇಡೀ ಬೇಸಗೆ ಪೂರ್ತಿ ಮೇಲಧಿಕಾರಿಗೂ ಇವನಿಗೂ ಏನಾದರೂ ಕಿರಿಕಿರಿ ನಡೆದೇ ಇತ್ತು. ಚಳಿಗಾಲದಲ್ಲಿ ಜಾನುವಾರುಗಳನ್ನು ಕೊಟ್ಟಿಗೆಯಲ್ಲಿ ಕಟ್ಟಿಹಾಕುವಾಗ ಅವನಿಗೆ ಸಮಾಧಾನವೇ ಆಯಿತು. ಈಗ ಅವುಗಳಿಗೆ ತಾನೇ ಮೇವು ತಂದು ಹಾಕಬೇಕು. ಆದರೆ ದಂಡ ಕಟ್ಟಬೇಕಾಗುವುದೋ ಎಂಬ ಆತಂಕವಿಲ್ಲ!
ಚಳಿಗಾಲದ ಕುಳಿರ್ಗಾಳಿಯಲ್ಲಿ ಒಂದು ಬಿಸಿಬಿಸಿ ಸುದ್ದಿ ತೇಲಿಬಂತು. ಒಡತಿ ಜಮೀನು ಮಾರಿಬಿಡುತ್ತಾಳೆ, ಊರಿನ ವಸತಿಗೃಹದ ಮಾಲೀಕ ಅದನ್ನು ಕೊಳ್ಳಲು ಮಾತುಕತೆ ನಡೆಸಿದ್ದಾನೆ ಎಂಬ ಗಾಳಿಮಾತು. ಇದನ್ನು ಕೇಳಿ ರೈತರು ಬೆಚ್ಚಿದರು. "ಈ ಹಾಳಾದವನು ಜಮೀನು ಕೊಂಡರೆ ನಮಗೆ ದಿನಾಗಲೂ ದಂಡ ಕಟ್ಟಬೇಕಾದೀತು! ಅವನು ಈಗಿರುವ ಮೇಲಧಿಕಾರಿಗಿಂತಲೂ ದುಷ್ಟ. ನಾವೆಲ್ಲರೂ ಈ ಜಮೀನನ್ನೇ ನೆಚ್ಚಿಕೊಂಡವರು" ಎಂದು ಮಾತಾಡಿಕೊಂಡು ಒಡತಿಯ ಬಳಿಗೆ ಒಟ್ಟಾಗಿ ಹೋದರು. "ವಸತಿಗೃಹದ ಮಾಲೀಕನಿಗೆ ಜಮೀನು ಮಾರುವುದು ಬೇಡ. ನಾವೆಲ್ಲರೂ ಸೇರಿ ಜಮೀನನ್ನು ಕೊಳ್ಳುತ್ತೇವೆ. ನಿಮಗೆ ಅವನು ಕೊಡುವುದಕ್ಕಿಂತ ಹೆಚ್ಚಿನ ಬೆಲೆ ನಾವು ಕೊಡುತ್ತೇವೆ" ಎಂದು ಬೇಡಿಕೊಂಡರು. ಆಕೆ ಒಪ್ಪಿದಳು. ರೈತರೆಲ್ಲರೂ ಈ ವಿಷಯ ಚರ್ಚಿಸಲು ಸಭೆ ಸೇರಿದರು. ಎಲ್ಲರೂ ಸೇರಿ ಜಮೀನಿನ ಒಡೆತನ ಹೇಗೆ ಸಾಧಿಸುವುದು ಎಂಬ ಬಗ್ಗೆ ಚರ್ಚಿಸಲು ಒಂದಲ್ಲ ಎರಡು ಸಭೆಗಳು ನಡೆದರೂ ಇತ್ಯರ್ಥವಾಗಲಿಲ್ಲ. ಸೈತಾನನು ಅವರ ಮನಸ್ಸಿನಲ್ಲಿ ದ್ವೇಷ ಬಿತ್ತಿದನು. ಹೀಗಾಗಿ ರೈತರಲ್ಲಿ ಒಮ್ಮತ ಮೂಡಲಿಲ್ಲ. ಕೊನೆಗೆ ಎಲ್ಲರೂ ಬೇರೆ ಬೇರೆಯಾಗಿ ತಮ್ಮ ತಮ್ಮ ಶಕ್ತಿಗೆ ಅನುಸಾರವಾಗಿ ಜಮೀನನ್ನು ಕೊಳ್ಳುವುದೆಂದು ನಿರ್ಧಾರವಾಯಿತು. ಇದಕ್ಕೂ ಒಡತಿ ಒಪ್ಪಿದಳು.
ತನ್ನ ನೆರೆಯಲ್ಲಿ ವಾಸವಾಗಿದ್ದ ಇನ್ನೊಬ್ಬ ರೈತ ಐವತ್ತು ಎಕರೆ ಕೊಳ್ಳುತ್ತಾನೆ ಎಂದು ಪಹೋಮನಿಗೆ ಗೊತ್ತಾಯಿತು. ಅವನಿಂದ ಒಡತಿ ಅರ್ಧದಷ್ಟು ಹಣವನ್ನು ಮುಂಗಡವಾಗಿ ಪಡೆದು ಉಳಿದದ್ದನ್ನು ಮುಂದಿನ ವರ್ಷ ಪಾವತಿಸಲು ಸಮ್ಮತಿ ನೀಡಿದ್ದಾಳೆ ಎಂದೂ ತಿಳಿಯಿತು. ಪಹೋಮನ ಹೊಟ್ಟೆಯಲ್ಲಿ ಬೆಂಕಿ ಬಿದ್ದಂತಾಯಿತು. "ಜಮೀನು ಮಾರಾಟಕ್ಕಿದ್ದರೂ ಅದರಲ್ಲಿ ಒಂದು ಚೂರು ಕೊಳ್ಳುವುದು ನನ್ನ ಹಣೆಯಲ್ಲಿ ಬರೆದಿಲ್ಲವಲ್ಲ!" ಎಂದು ಅವನು ಹಲುಬಿದ. ತನ್ನ ಹೆಂಡತಿಯ ಹತ್ತಿರವೂ ಇದನ್ನು ಹೇಳಿಕೊಂಡ. "ಎಲ್ಲರೂ ಕೊಂಡುಕೊಳ್ಳುತ್ತಿದ್ದಾರೆ! ನಾವು ಒಂದು ಇಪ್ಪತ್ತು ಎಕರೆಯಾದರೂ ಕೊಳ್ಳದಿದ್ದರೆ! ದಿನೇದಿನೇ ಜೀವನ ಮಾಡುವುದು ಕಷ್ಟವಾಗುತ್ತಿದೆ! ಹಾಳು ಮೇಲಧಿಕಾರಿ ನಮ್ಮ ತಲೆ ಮೇಲೆ ದಂಡ ಹಾಕುತ್ತಲೇ ಇದ್ದಾನೆ!" ಎಂದು ಒದ್ದಾಡಿದ.
ತಾವು ಜಮೀನು ಕೊಳ್ಳುವುದು ಹೇಗೆ ಎಂಬುದನ್ನು ಕುರಿತು ಗಂಡ ಹೆಂಡತಿ ಇಬ್ಬರೂ ಸೇರಿ ಆಲೋಚಿಸಿದರು. ಅವರು ಇದುವರೆಗೂ ಕೂಡಿಟ್ಟ ನೂರು ರೂಬಲ್ ಕುಡಿಕೆಯಲ್ಲಿತ್ತು. ತಮ್ಮ ಒಂದು ಕುದುರೆಯನ್ನು ಮಾರಿದರು. ತಮ್ಮ ಬಳಿಯಿದ್ದ ಜೇನುನೊಣಗಳಲ್ಲಿ ಅರ್ಧ ಮಾರಿದರು. ಹಿರಿಯ ಮಗನನ್ನು ಕೂಲಿ ಕೆಲಸಕ್ಕೆ ಗೊತ್ತು ಮಾಡಿ ಅವನ ಪಗಾರವನ್ನು ಮುಂಚಿತವಾಗಿ ಪಡೆದರು. ತಮ್ಮ ನೆಂಟನ ಬಳಿ ಒಂದಷ್ಟು ಸಾಲ ಸಿಕ್ಕಿತು. ಹೀಗೆ ಅರ್ಧದಷ್ಟು ಹಣ ಕೂಡಿತು.
ನಲವತ್ತು ಎಕರೆ ಜಮೀನನ್ನು ಪಹೋಮ್ ಗುರುತು ಹಾಕಿಕೊಂಡ. ಈ ಜಮೀನಿನ ಭಾಗದಲ್ಲಿ ಅಲ್ಲಲ್ಲಿ ಕಾಡು ಬೆಳೆದಿತ್ತು. ಜಮೀನಿನ ಖರೀದಿಗಾಗಿ ಒಡತಿಯ ಮುಂದೆ ಪಹೋಮ್ ಬಂದು ನಿಂತ. ಮಾತು ಫಲಿಸಿತು. ಮುಂಗಡ ಹಣವನ್ನು ಪಡೆದು ಒಡತಿ ಅವನ ಕೈ ಕುಲುಕಿದಳು. ಇಬ್ಬರೂ ಪಟ್ಟಣದಲ್ಲಿದ್ದ ಕಚೇರಿಗೆ ತೆರಳಿ ಕಾಗದಪತ್ರಗಳಿಗೆ ಸಹಿ ಹಾಕಿದರು. ಅರ್ಧ ಹಣ ಪಾವತಿಯಾಗಿದೆ ಎಂದೂ ಉಳಿದದ್ದನ್ನು ಎರಡು ವರ್ಷಗಳಲ್ಲಿ ಕೊಡಬೇಕೆಂದೂ ಕರಾರಾಯಿತು.
ಹೀಗೆ ಪಹೋಮ್ ತನ್ನದೇ ಜಮೀನಿನ ಮಾಲೀಕನಾದ. ಬೀಜಗಳನ್ನು ಕಡದ ಮೇಲೆ ತಂದು ಹೊಲದಲ್ಲಿ ಬಿತ್ತಿದ. ಆ ವರ್ಷ ಒಳ್ಳೆಯ ಮಳೆಯಾಗಿ ಉತ್ತಮ ಫಸಲು ಬಂತು. ಕಾಳು ಮಾರಿ ಬಂದ ಹಣದಿಂದ ಅವನು ಸಾಲಗಳನ್ನು ತೀರಿಸಿ ಋಣಮುಕ್ತನಾದ. ತನ್ನ ಜಮೀನಿನಲ್ಲಿ ಕೆಲಸ ಮಾಡುವುದು ಅವನಿಗೆ ಎಲ್ಲಿಲ್ಲದ ಆನಂದ ತಂದಿತು. ನೆಲವನ್ನು ತಾನೇ ಉತ್ತುವನು, ತಾನೇ ಕೈಯಾರ ಬೀಜ ಬಿತ್ತುವನು, ಮರಗಳನ್ನು ಕಡಿಯುವನು, ತನ್ನ ನೆಲದಲ್ಲಿ ಬೆಳೆದ ಮೇವನ್ನು ತಾನೇ ದನಕರುಗಳಿಗೆ ತಿನ್ನಿಸುವನು. ಎದೆ ಮಟ್ಟ ಬೆಳೆದ ಜೋಳದ ಪೈರಿನಲ್ಲಿ ತೆನೆಗಳು ನಲಿಯುವುದನ್ನು ಕಂಡಾಗ, ಹಸಿರು ಹುಲ್ಲುಗಾವಲು ಕಂಗೊಳಿಸುವುದನ್ನು ಕಂಡಾಗ ಅವನ ಎದೆ ಉಬ್ಬುವುದು. ಇಷ್ಟು ಹಸಿರಾದ ಹುಲ್ಲು, ಇಷ್ಟು ಸುಂದರವಾದ ಹೂಗಳು ಬೇರೆಲ್ಲೂ ಇಲ್ಲ ಎನ್ನಿಸುವುದು. ಇದೇ ನೆಲದಲ್ಲಿ ಅವನು ಹಿಂದೆ ಕೂಲಿಯಾಗಿ ಕೆಲಸ ಮಾಡಿದಾಗ ಬೆಳೆಯುತ್ತಿದ್ದ ಪೈರಿಗಿಂತ ಇದು ಭಿನ್ನ ಎಂದು ತೋರುವುದು.
(ಮುಂದಿನ ಭಾಗವನ್ನು ಇಲ್ಲಿ ಓದಿ)
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ