ಮನುಷ್ಯನಿಗೆ ಎಷ್ಟು ಜಮೀನು ಬೇಕು? - 7

ಮೂಲ ರಷ್ಯನ್ ಕಥೆ - ಲಿಯೋ ಟಾಲ್ಸ್ ಟಾಯ್ 
ಕನ್ನಡ ಅನುವಾದ - ಸಿ ಪಿ ರವಿಕುಮಾರ್ 


(ಆರನೇ ಭಾಗವನ್ನು ಇಲ್ಲಿ ಓದಿ.) 

ಪಹೋಮ್ ನೇರವಾಗಿ ಬೆಟ್ಟದ ಕಡೆಗೆ ಸಾಗಿದ. ಆದರೆ ಅವನಿಗೆ ಈಗ ನಡೆಯುವುದು ಕಷ್ಟವಾಗುತ್ತಿತ್ತು. ಉರಿಬಿಸಿಲಿನಲ್ಲಿ ನಡೆದಿದ್ದರಿಂದ ಅವನು ನಿತ್ರಾಣನಾಗಿದ್ದ. ಪಾದರಕ್ಷೆಗಳಿಲ್ಲದೆ ಅವನ ಕಾಲುಗಳಲ್ಲಿ ಗಾಯವಾಗಿತ್ತು. ಅವನ ಕಾಲುಗಳು ಸೋಲತೊಡಗಿದವು. ಸ್ವಲ್ಪ ಹೊತ್ತು ಕೂತು ಸುಧಾರಿಸಿಕೊಳ್ಳಲು ಅವನ ಮನಸ್ಸು ಹಾತೊರೆಯಿತು. ಆದರೆ ಸೂರ್ಯಾಸ್ತಕ್ಕೆ ಮುನ್ನ ಬಂದ ಸ್ಥಳವನ್ನು ಮುಟ್ಟಬೇಕಾದರೆ ಅದಕ್ಕೆ ಅವಕಾಶವಿರಲಿಲ್ಲ. ಸೂರ್ಯನು ಯಾರಿಗೂ ಕಾಯುವುದಿಲ್ಲ. ಅವನು ಈಗಾಗಲೇ ವೇಗವಾಗಿ ಪಶ್ಚಿಮದತ್ತ ಇಳಿಯುತ್ತಿದ್ದ.  

"ಅಯ್ಯೋ! ನಾನು ಅತ್ಯಾಸೆಗೆ ಬಿದ್ದೆನೆ? ನಾನು ವಾಪಸಾಗುವುದು ತಡವಾದರೇನು ಗತಿ?" ಎಂದು ಪಹೋಮನಿಗೆ ದಿಗಿಲಾಯಿತು. ಅವನು ಬೆಟ್ಟದ ಕಡೆಗೊಮ್ಮೆ ಮತ್ತು ಸೂರ್ಯನ ಕಡೆಗೊಮ್ಮೆ ನೋಡಿದ. ಗುರಿ ಇನ್ನೂ ದೂರದಲ್ಲಿತ್ತು. ಸೂರ್ಯನಾದರೋ ತನ್ನ ಗುರಿಗೆ ತೀರಾ ಸಮೀಪನಾಗಿದ್ದ. ಪಹೋಮ್ ಲೆಕ್ಕಿಸದೆ ನಡೆದ. ಹೆಜ್ಜೆ ಎತ್ತಿ ಎತ್ತಿ ಹಾಕುತ್ತಾ ನಡೆದ. ಎಷ್ಟು ವೇಗವಾಗಿ ನಡೆದರೂ ಗುರಿಯು ಹತ್ತಿರವಾದಂತೆ ತೋರಲಿಲ್ಲ. ಅವನು ಓಡತೊಡಗಿದ. ತನ್ನ ಕೋಟು, ಬೂಟು, ಹೂಜಿ, ಟೋಪಿ ಎಲ್ಲವನ್ನೂ ಕಿತ್ತೆಸೆದ.  ಕೈಯಲ್ಲಿ ಬರೀ ಸನಿಕೆಯನ್ನು ಮಾತ್ರ ಇಟ್ಟುಕೊಂಡ. ಅದನ್ನು ಊರುಗೋಲಿನಂತೆ ಬಳಸುತ್ತಾ ಮುಂದೆ ಧಾವಿಸಿದ. 

"ಅಯ್ಯೋ! ನಾನು ಈಗೇನು ಮಾಡಲಿ? ನಾನು ಅತ್ಯಾಸೆಗೆ ಸಿಲುಕಿ ಎಲ್ಲವನ್ನೂ ನಿರ್ನಾಮ ಮಾಡಿದೆ! ಸೂರ್ಯಾಸ್ತಕ್ಕೆ ಮುನ್ನ ನಾನು ಬಂದ ಸ್ಥಾನವನ್ನು ಮುಟ್ಟಲಾರೆ!" ಎಂದು ಅವನ ಮನಸ್ಸು ಹೇಳಿತು. 

ಮನಸ್ಸಿನಲ್ಲಿ ಮೂಡಿದ ಭೀತಿಯಿಂದ ಅವನು ಮತ್ತಷ್ಟು ಕಂಗೆಟ್ಟ. ಏದುಸಿರು ಬಿಡುತ್ತಾ ಓಡಿದ. ಬೆವರಿನಲ್ಲಿ ತೊಯ್ದ ಅವನ ಉಡುಪುಗಳು ಅವನ ಚರ್ಮಕ್ಕೆ ಅಂಟಿಕೊಂಡಿದ್ದವು. ಬಾಯಿ ಪಸೆಯಾರಿತ್ತು. ಅವನ ಎದೆ ಕಬ್ಬಿಣದ ಕೆಲಸಗಾರರು ಬೆಂಕಿಗೆ ಗಾಳಿ ಹಾಕಲು ಬಳಸುವ ತಿದಿಯಂತೆ ಮೇಲೆ ಕೆಳಗೆ ಆಡುತ್ತಿತ್ತು. ಒಳಗೆ ಹೃದಯ ಹಾರೆಯಂತೆ ಕುಟ್ಟುತ್ತಿತ್ತು.  ಅವನಿಗೆ ಸೇರಿಲ್ಲವೋ ಎಂಬಂತೆ ಅವನ ಕಾಲುಗಳು ಅವನಿಗೆ ಸಹಕರಿಸಲು ನಿರಾಕರಿಸುತ್ತಿದ್ದವು. ತಾನು ಎಲ್ಲಿ ಸತ್ತು ಬೀಳುತ್ತೇನೋ ಎಂಬ ಆಲೋಚನೆ ಬಂದು ಅವನ ಜಂಘಾಬಲವೇ ಉಡುಗಿದಂತಾಯಿತು. 

ಸಾವಿನ ಭೀತಿಗೂ ಅವನನ್ನು ನಿಲ್ಲಿಸಲು ಅಸಾಧ್ಯವಾಯಿತು. "ಇಷ್ಟೆಲ್ಲಾ ದುಡಿದು ಈಗ ನಾನು ಓಡದೆ ನಿಂತರೆ ನನ್ನನ್ನು ಎಲ್ಲರೂ ಮೂರ್ಖನೆಂದು ಹೀಯಾಳಿಸುವುದಿಲ್ಲವೇ?" ಎಂದುಕೊಂಡು ಅವನು ಓಡಿದ. ಓಡುತ್ತಾ ಓಡುತ್ತಾ ಅವನಿಗೆ ಬಷ್ಕಿರ್ ಜನರು ಕೂಗಿ ಹುರಿದುಂಬಿಸುವುದು ಕೇಳಿಸಿತು. ಇದು ಅವನ ಎದೆಯಲ್ಲಿನ ಬೆಂಕಿಯನ್ನು ಇನ್ನಷ್ಟು ಉದ್ದೀಪಿಸಿತು. ತನ್ನ  ಎಲ್ಲಾ ಶಕ್ತಿಯನ್ನೂ ಒಗ್ಗೂಡಿಸಿಕೊಂಡು ಅವನು ಓಡಿದ. 

ಸಂಜೆ ಸೂರ್ಯ ಇನ್ನೇನು ಮುಳುಗುವುದರಲ್ಲಿದ್ದ. ಸೂರ್ಯನ ಸುತ್ತ ಮಂಜಿನಂತಹ ಪರದೆ ಆವರಿಸಿದ್ದರಿಂದ ಅವನು ಇನ್ನಷ್ಟು ದೊಡ್ಡದಾಗಿ ಕಾಣುತ್ತಿದ್ದ. ಸೂರ್ಯನ ಮುಖ ರಕ್ತದಂತೆ ಕೆಂಪಾಗಿತ್ತು. ಇನ್ನೇನು, ಅಯ್ಯೋ, ಇನ್ನೇನು ಸೂರ್ಯ ಮುಳುಗಲಿದ್ದಾನೆ! ಸೂರ್ಯನು ಅಷ್ಟು ಕೆಳಗಿದ್ದರೂ ಪಹೋಮನಿಗೆ ಹೋಗಿ ಮುಟ್ಟುವುದು ಅಸಾಧ್ಯವೇನಿರಲಿಲ್ಲ. ಬೆಟ್ಟದ ಮೇಲೆ ಜನರ ಸಮೂಹ ಅವನಿಗೆ ಈಗ ಕಾಣುತ್ತಿದೆ. ನೆಲದ ಮೇಲೆ ಇಟ್ಟಿದ್ದ ನರಿ ತುಪ್ಪುಟದ ಟೋಪಿಯೂ ಕಾಣುತ್ತಿದೆ. ಟೋಪಿಯ ಮೇಲೆ ಇಟ್ಟಿದ್ದ ಹಣವೂ ಗೋಚರಿಸುತ್ತಿದೆ. ಅದರ ಪಕ್ಕದಲ್ಲಿ ಮುಖ್ಯಸ್ಥನು ತನ್ನ ಪಕ್ಕೆಗಳ ಮೇಲೆ ಕೈಯಿಟ್ಟುಕೊಂಡು ಕುಳಿತಿರುವುದೂ ಕಾಣುತ್ತಿದೆ. 

ಒಮ್ಮೆಲೇ ಪಹೋಮ್ ಗೆ ತನ್ನ ಕನಸಿನ ನೆನಪಾಯಿತು. "ಬೇಕಾದಷ್ಟು ಭೂಮಿಯೇನೋ ಇದೆ! ಆದರೆ ಭಗವಂತನು ಅದನ್ನು ಅನುಭೋಗಿಸುವ ಭಾಗ್ಯವನ್ನು ನನಗೆ ಕೊಟ್ಟನೆ? ನಾನು ನನ್ನ ಪ್ರಾಣ ಕಳೆದುಕೊಂಡೆ, ನಾನು ಪ್ರಾಣ ಕಳೆದುಕೊಂಡೆ! ಇಲ್ಲ, ನನಗೆ ಆ ಸ್ಥಳಕ್ಕೆ ಹೋಗಿ ಮುಟ್ಟುವುದು ಸಾಧ್ಯವಿಲ್ಲ" ಎಂಬ ಆಲೋಚನೆ ತಲೆಯಲ್ಲಿ ಮಿಂಚಿತು. 

ಪಹೋಮ್ ಸೂರ್ಯನತ್ತ ನೋಡಿದ. ಅವನು ಆಗಲೇ ದಿಗಂತದಲ್ಲಿ ಮುಳುಗತೊಡಗಿದ್ದ. ಸೂರ್ಯನ ಅರ್ಧ ಭಾಗ ಮಾತ್ರ ಕಾಣುತ್ತಿತ್ತು. ತನ್ನಲ್ಲಿ ಅಳಿದುಳಿದ ಶಕ್ತಿಯನ್ನೆಲ್ಲಾ ಬಳಿದುಕೊಂಡು ಅವನು ಮುಂದಕ್ಕೆ ಧಾವಿಸಿದ. ಅವನ ಕಾಲುಗಳು ಅವನು ಕೆಳಗೆ ಬೀಳದೆ ಇರುವಂತೆ ಸಹಕರಿಸಿದ್ದೇ ಹೆಚ್ಚು. ಬೆಟ್ಟವನ್ನು ಹೋಗಿ ಮುಟ್ಟಿದ ಎನ್ನುವಷ್ಟರಲ್ಲಿ ಕತ್ತಲಾಯಿತು. ಸೂರ್ಯ ಅಸ್ತಂಗತನಾದ. ಅವನ ಬಾಯಿಂದ ಉದ್ಗಾರ ಹೊರಟಿತು. "ಅಯ್ಯೋ ನನ್ನ ಪ್ರಯತ್ನವೆಲ್ಲ ವ್ಯರ್ಥವಾಯಿತು!"  ಆದರೆ ಬಷ್ಕಿರ್ ಮಂದಿ ಇನ್ನೂ ಕೂಗಿಕೊಳ್ಳುತ್ತಿದ್ದರು. ತನಗೆ ಸೂರ್ಯ ಅಸ್ತಂಗತನಾದಂತೆ ಕಂಡರೂ ಬೆಟ್ಟದ ಮೇಲಿನಿಂದ ಸೂರ್ಯನು ಇನ್ನೂ ಗೋಚರಿಸುತ್ತಿದ್ದಾನೆಂದು ಅವನಿಗೆ ಹೊಳೆಯಿತು. ಕೂಡಲೇ ದೀರ್ಘ ಶ್ವಾಸವನ್ನು ಎಳೆದುಕೊಂಡು ಅವನು ಬೆಟ್ಟದ ಶಿಖರದತ್ತ  ಓಡಿದ. ಅಲ್ಲಿ ಇನ್ನೂ ಬೆಳಕಿತ್ತು. ಬೆಳಕಿನಲ್ಲಿ ಟೋಪಿ ಕಾಣಿಸಿತು. ಅದರ ಮುಂದೆ ಮುಖ್ಯಸ್ಥ ಕುಳಿತು ಪಕ್ಕೆಗಳನ್ನು ಹಿಡಿದುಕೊಂಡು ಹೊಟ್ಟೆ ಹುಣ್ಣಾಗುವಂತೆ ನಗುತ್ತಿದ್ದ.  ಪಹೋಮನಿಗೆ ಮತ್ತೆ ತನ್ನ ಕನಸು ನೆನಪಾಗಿ ಕೂಗಿಕೊಂಡ. ಅವನ ಕಾಲುಗಳು ಕುಸಿದವು. ಅವನು ಮುಂದಕ್ಕೆ ಮುಗ್ಗರಿಸಿ ಬಿದ್ದಾಗ ಅವನ ಕೈಯಲ್ಲಿ ಟೋಪಿಯಿತ್ತು. 

"ಭಲೇ! ಎಂಥ ಎದೆಗಾರ ಮನುಷ್ಯ! ಎಷ್ಟೊಂದು ಭೂಮಿಯನ್ನು ಗೆದ್ದುಕೊಂಡ!" ಎಂದು ಮುಖ್ಯಸ್ಥ ಉದ್ಗರಿಸಿದ. 

ಪಹೋಮನ ಆಳು ಓಡಿ ಬಂದು ಒಡೆಯನನ್ನು ಮೇಲೆಬ್ಬಿಸಲು ಪ್ರಯತ್ನಿಸಿದ. ಆದರೆ ಒಡೆಯನ ಬಾಯಿಂದ ರಕ್ತ ಸುರಿಯುವುದನ್ನು ಕಂಡು ಹೆದರಿ ನಿಂತ. ಪಹೋಮನ ಪ್ರಾಣಪಕ್ಷಿ ಹಾರಿಹೋಗಿತ್ತು!

ಬಷ್ಕಿರ್ ಮಂದಿ ಲೊಚಗುಟ್ಟಿ ತಮ್ಮ ಸಹಾನುಭೂತಿ ವ್ಯಕ್ತಪಡಿಸಿದರು. ಪಹೋಮನ ಆಳು ಅವನ ಕೈಯಲ್ಲಿದ್ದ ಸನಿಕೆಯನ್ನು ಎತ್ತಿಕೊಂಡು ಅವನಿಗಾಗಿ ಒಂದು ಗೋರಿಯನ್ನು ತೋಡತೊಡಗಿದ.  ಅವನ ದೇಹವನ್ನು ಎತ್ತಿ ಹಳ್ಳದಲ್ಲಿ ಮಲಗಿಸಿದಾಗ ಅವನಿಗೆ ಅಡಿಯಿಂದ ಮುಡಿಯವರೆಗೆ ಕೇವಲ ಆರು ಅಡಿಗಳಷ್ಟು ಭೂಮಿ ಮಾತ್ರ ಸಾಕಾಯಿತು. 


(ಮುಗಿಯಿತು)



ನಾನು ಬಳಸಿದ ಇಂಗ್ಲಿಷ್ ಅನುವಾದವನ್ನು ಇಲ್ಲಿ ನೋಡಿ. 

ಕಾಮೆಂಟ್‌ಗಳು

  1. ನಿಮಗೆ ಕಥೆ ಇಷ್ಟವಾಗಿದ್ದು ಸಂತೋಷ - ತಿಳಿಸಿದ್ದಕ್ಕೆ ಧನ್ಯವಾದಗಳು!

    ಪ್ರತ್ಯುತ್ತರಅಳಿಸಿ
  2. ನನ್ನ ಸಾಹಿತಿ-ಮಿತ್ರರಾದ ಕೆ ಸತ್ಯನಾರಾಯಣ ಪತ್ರ ಬರೆದು ನನಗೆ ಹೀಗೆ ಹೇಳಿದ್ದಾರೆ -
    Very well translated. Never felt that I am reading it in translation.The reading was fresh, though I have read it in original and in Kannada so many times.I can also feel youur involvement in the story.

    ತುಂಬಾ ಧನ್ಯವಾದಗಳು!

    ಪ್ರತ್ಯುತ್ತರಅಳಿಸಿ
  3. ತುಂಭಾ ಅದ್ಭುತವಾದ ಆನುವಾಧ. ಓಧಿ ಬಹಳ ಸಂತೋಷ ಪಟ್ಟೆ. ಧನ್ಯವಾಧಗಳು

    ಪ್ರತ್ಯುತ್ತರಅಳಿಸಿ
  4. ಎಸ್ಕೆ ಅವರೇ, ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು! ನಿಮಗೆ ಅನುವಾದ ಇಷ್ಟವಾದದ್ದು ತುಂಬಾ ಸಂತೋಷ!

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)