ದೇವರು ಸತ್ಯವನ್ನು ಕಾಣುತ್ತಾನೆ, ಆದರೆ ತಡ ಮಾಡುತ್ತಾನೆ - 1

ಮೂಲ (ರಷ್ಯನ್) ಕಥೆ - ಲಿಯೋ ಟಾಲ್ಸ್ ಟಾಯ್ 
ಕನ್ನಡ ಅನುವಾದ - ಸಿ ಪಿ ರವಿಕುಮಾರ್ 


ಭಾಗ - ೧

ವ್ಲಾಡಿಮಿರ್ ಪಟ್ಟಣದಲ್ಲಿ ಐವಾನ್ ಡಿಮಿಟ್ರಿಚ್ ಆಕ್ಸಿಯನೋವ್ ಎಂಬ ಯುವಕ ವ್ಯಾಪಾರಿಯಿದ್ದ. ಎರಡು ಅಂಗಡಿಗಳಲ್ಲದೆ ಸ್ವಂತ ಮನೆಯ ಒಡೆಯನೂ ಆಗಿದ್ದ.  

ಅವನು ತಲೆತುಂಬ ಗುಂಗುರು ಕೂದಲಿದ್ದ ಸ್ಫುರದ್ರೂಪಿ ತರುಣ. ಸದಾ ಮಂದಸ್ಮಿತನಾಗಿ ಎಲ್ಲರನ್ನೂ ನಗಿಸುವ ಸ್ವಭಾವದವನು. ಹಾಡುವುದು ಅವನ ಹವ್ಯಾಸ. 

ಮದುವೆಗೆ ಮುಂಚೆ ಅವನಿಗೆ ಕುಡಿತದ ಚಟವಿತ್ತು. ಹೆಚ್ಚು ಕುಡಿದಾಗ ಹುಚ್ಚಾಪಟ್ಟೆ ಆಡುತ್ತಿದ್ದ. ಮದುವೆಯಾದಮೇಲೆ ಅದೆಲ್ಲಾ ನಿಂತಿದೆ. ಈಗೇನಿದ್ದರೂ ಅಪರೂಪಕ್ಕೊಮ್ಮೆ ಮಿತವಾದ ಮದ್ಯಪಾನ. 

ಒಂದು ವರ್ಷ ಬೇಸಗೆಯ ದಿನಗಳಲ್ಲಿ ಐವಾನ್ ತನ್ನ ಕಾರ್ಯನಿಮಿತ್ತವಾಗಿ ನಿಜ್ನಿ ಎಂಬ ಪಟ್ಟಣಕ್ಕೆ ಜಾತ್ರೆಗೆ ಹೋಗಬೇಕಾಯಿತು. ಅವನು ಹೊರಟು ನಿಂತಾಗ ಹೆಂಡತಿ ಅವನ ಹತ್ತಿರ ಬಂದು "ಐವಾನ್, ಇವತ್ತು ಹೊರಡಬೇಡ; ನಿನ್ನನ್ನು ಕುರಿತು ಒಂದು ಕೆಟ್ಟ ಕನಸು ಕಂಡೆ," ಎಂದಳು. 

ಅವನು ನಕ್ಕು "ನಾನು ಮನೆಯಿಂದ ಹೊರಗಿದ್ದಾಗ ಕುಡಿದು ರಂಪ ಮಾಡುತ್ತೇನೆಂದು ತಾನೇ ನಿನ್ನ ಅಳುಕು?" ಎಂದ.

"ನನ್ನ ಗಾಬರಿಗೆ ಇಂಥ ಕಾರಣವೆಂದು ಸ್ಪಷ್ಟವಾಗಿ ಹೇಳಲಾರೆ. ನನ್ನ ಕನಸಿನಲ್ಲಿ ನೀನು ಮರಳಿ ಬಂದು ನಿನ್ನ ಟೊಪ್ಪಿಗೆ ತೆಗೆದಾಗ ನಿನ್ನ ತಲೆಗೂದಲು ಬೆಳ್ಳಗಾಗಿತ್ತು."

"ಅಯ್ಯೋ ಹುಚ್ಚಿ! ಅದು ಒಳ್ಳೆಯ ಶಕುನ!" ಎಂದು ಅವನು ಸಮಾಧಾನ ಮಾಡಿದ. "ಚಿಂತೆ ಮಾಡಬೇಡ. ನಾನು ಜಾತ್ರೆಯಲ್ಲಿ ನನ್ನ ಸರಕನ್ನೆಲ್ಲಾ ಮಾರಿ ನಿನಗೆ ಒಳ್ಳೆಯ ಉಡುಗೊರೆ ಏನಾದರೂ ತಂದುಕೊಡುತ್ತೇನೆ." ಹೀಗೆಂದು ಅವನು ಸಾರೋಟನ್ನೇರಿ ಹೊರಟುಬಿಟ್ಟ. 

ಅರ್ಧದಾರಿ ಸಾಗಿದಾಗ ಅವನಿಗೆ ಪರಿಚಿತನಾದ ಇನ್ನೊಬ್ಬ ವ್ಯಾಪಾರಿ ಎದುರಾದ. ಇಬ್ಬರೂ ಒಂದೇ ವಸತಿಗೃಹದಲ್ಲಿ ತಂಗಿದರು. ಚಹಾಪಾನದ ನಂತರ ಅಕ್ಕಪಕ್ಕದಲ್ಲಿದ್ದ ಕೋಣೆಗಳಿಗೆ ಮಲಗಲು ತೆರಳಿದರು. 

ಐವಾನ್ ಗೆ ಬೆಳಗ್ಗೆ ಬೇಗ ಏಳುವ ಅಭ್ಯಾಸ. ಇನ್ನೂ ತಂಪಾಗಿರುವಾಗಲೇ ಪ್ರಯಾಣ ಮಾಡುವ ಯೋಜನೆ ಹಾಕಿಕೊಂಡು ಗಾಡಿಯ ಸಾರಥಿಯನ್ನು ಎಬ್ಬಿಸಿ ಕುದುರೆಗಳನ್ನು ಕಟ್ಟಲು ಹೇಳಿದ. ಅನಂತರ ವಸತಿಗೃಹದ ಹಿಂಭಾಗದಲ್ಲಿ ವಾಸವಾಗಿದ್ದ ಮಾಲೀಕನನ್ನು ಸಂಧಿಸಿ ಹಣ ತೆತ್ತು ಪ್ರಯಾಣ ಮುಂದುವರೆಸಿದ. 

ಸುಮಾರು ಇಪ್ಪತ್ತೈದು ಮೈಲಿ ಸಾಗಿದ ನಂತರ ಕುದುರೆಗಳಿಗೆ ಮೇವು ಹಾಕಲೆಂದು ಅವನು ಒಂದು ವಸತಿಗೃಹದ ಮುಂದೆ ಸಾರೋಟು ನಿಲ್ಲಿಸಿದ.  ಬಿಸಿ ಪಾನೀಯವನ್ನು ತರಲು ಹೇಳಿ ತಾನು ಮುಂದಿನ ಅಂಗಳದಲ್ಲಿ ಕುಳಿತು ಗಿಟಾರ್ ಕೈಗೆತ್ತಿಕೊಂಡು ನುಡಿಸತೊಡಗಿದ. 

ಒಮ್ಮೆಲೇ ಒಂದು ಕುದುರೆಯ ಸಾರೋಟು ಗಂಟೆ ಬಾರಿಸುತ್ತಾ ಅಲ್ಲಿಗೆ ಧಾವಿಸಿ ಬಂತು.  ಒಳಗಿನಿಂದ ಒಬ್ಬ ಅಧಿಕಾರಿ ಮತ್ತು ಇಬ್ಬರು ಸೈನಿಕರು ಇಳಿದರು. ಇವರು ಐವಾನ್ ಬಳಿಗೆ ಬಂದು "ನೀವು ಯಾರು? ಎಲ್ಲಿಂದ ಬಂದಿದ್ದೀರಿ?" ಎಂದು ಪ್ರಶ್ನೆ ಹಾಕಿದರು.  ಐವಾನ್ ಸಾವಧಾನದಿಂದ ಉತ್ತರಿಸಿ "ಸ್ವಲ್ಪ ಚಹಾ ಕುಡಿಯಬಹುದಲ್ಲ?" ಎಂದು ಉಪಚರಿಸಿದ. ಆದರೆ ಅಧಿಕಾರಿ ತನ್ನ ಗಾಂಭೀರ್ಯ ಬಿಡದೆ ಪ್ರಶ್ನೆಗಳನ್ನು ಮುಂದುವರೆಸಿದ. "ನೀವು ನೆನ್ನೆ ರಾತ್ರೆ ಎಲ್ಲಿ ಕಳೆದಿರಿ? ಒಬ್ಬರೇ ಇದ್ದಿರಾ? ನಿಮ್ಮ ಜೊತೆ ಇನ್ನೊಬ್ಬ ವ್ಯಾಪಾರಿ ಇದ್ದನೇ? ಇವತ್ತು ಬೆಳಗ್ಗೆ ಆತನನ್ನು ಭೇಟಿಯಾದಿರಾ? ಇಷ್ಟು ಬೇಗ ಕತ್ತಲಲ್ಲೇ ವಸತಿಗೃಹದಿಂದ ಹೊರಟಿದ್ದೇಕೆ?"

ಈ ಪ್ರಶ್ನೆಗಳನ್ನೆಲ್ಲಾ ಯಾಕೆ ಕೇಳುತ್ತಿದ್ದಾರೆಂದು ಐವಾನ್ ಚಿಂತೆಗೊಳಗಾದರೂ ತಾಳ್ಮೆಯಿಂದ ಉತ್ತರಿಸಿದ. ನಡೆದದ್ದೆಲ್ಲವನ್ನೂ ವಿವರಿಸಿ "ನನ್ನನ್ನು ಒಬ್ಬ ಕಳ್ಳನೋ ಡಕಾಯಿತನೋ ಎಂಬಂತೆ ಯಾಕೆ ಮರುಪ್ರಶ್ನೆ ಮಾಡುತ್ತೀರಿ? ನಾನು ನನ್ನ ಪಾಡಿಗೆ ವ್ಯಾಪಾರಕ್ಕೆಂದು ಹೊರಟಿದ್ದೇನೆ. ಹೀಗೆ ನನ್ನನ್ನು ಹಿಡಿದು ಪ್ರಶ್ನಿಸುವುದು ತರವಲ್ಲ" ಎಂದ. 

ಇದಕ್ಕೆ ಉತ್ತರವಾಗಿ ಅಧಿಕಾರಿ "ನಾನು ಈ ಜಿಲ್ಲೆಗೆ ಪೋಲಿಸ್ ಅಧಿಕಾರಿ. ನೀವು ಯಾವ ವ್ಯಾಪಾರಿಯ ಜೊತೆ ನೆನ್ನೆ ರಾತ್ರೆ ಭೇಟಿ ಮಾಡಿದಿರೋ ಅವನನ್ನು ಕತ್ತು ಕೊಯ್ದು ಕೊಲೆ ಮಾಡಲಾಗಿದೆ. ನಿಮ್ಮ ಸಾಮಾನುಗಳನ್ನು ನಾನು ತನಿಖೆ ಮಾಡಬೇಕು" ಎಂದ. 

ಸೈನಿಕರು ಮತ್ತು ಅಧಿಕಾರಿ ಸೇರಿ ಐವಾನನ ಸಾಮಾನು ಸರಂಜಾಮುಗಳನ್ನು ಕೆಳಗಿಳಿಸಿ ಚೀಲಗಳಲ್ಲಿ ತಡಕಾಡಿದರು. ಒಮ್ಮೆಲೇ ಅಧಿಕಾರಿ ಒಂದು ಚೀಲದಿಂದ ಒಂದು ಚಾಕು ಹೊರತೆಗೆದು "ಇದು ಯಾರದ್ದು?" ಎಂದು ಉತ್ಸಾಹದ ಧ್ವನಿಯಲ್ಲಿ ಕೇಳಿದ. 

ಐವಾನ್ ನೋಡಿದ. ಕತ್ತಿಯ ಮೇಲೆ ರಕ್ತದ ಕಲೆ ಇದ್ದದ್ದು ಕಂಡು ಅವನು ಗಾಬರಿಯಾದ. 

"ಈ ಕತ್ತಿಯ ಮೇಲೆ ರಕ್ತದ ಕಲೆ ಹೇಗೆ ಬಂತು?"

ಐವಾನ್ ಉತ್ತರಿಸಲು ಪ್ರಯತ್ನಿಸಿದರೂ ಅವನ ಬಾಯಿ ಕಟ್ಟಿಹೋಯಿತು. ತೊದಲುತ್ತ "ಗೊತ್ತಿಲ್ಲ ... ಇದು ನನ್ನದಲ್ಲ ... " ಎಂದ. 

ಪೋಲಿಸ್ ಅಧಿಕಾರಿ "ಇವತ್ತು ಬೆಳಗ್ಗೆ ಒಬ್ಬ ವ್ಯಾಪಾರಿಯನ್ನು ನಿದ್ದೆಯಲ್ಲೇ ಕೊಲೆ ಮಾಡಲಾಗಿದೆ. ಅದನ್ನು ನೀನಲ್ಲದೆ ಬೇರೆ ಯಾರೂ ಮಾಡಿರುವುದು ಸಾಧ್ಯವಿಲ್ಲ. ವಸತಿಗೃಹದ ಬಾಗಿಲಿಗೆ ಒಳಗಿನಿಂದ ಚಿಲಕ ಹಾಕಿತ್ತು. ಅಲ್ಲಿ ಒಬ್ಬ ನರಪಿಳ್ಳೆಯೂ ಇರಲಿಲ್ಲ. ಈಗ ನಿನ್ನ ಚೀಲದಿಂದ ರಕ್ತಸಿಕ್ತವಾದ ಚಾಕು ಸಿಕ್ಕಿದೆ. ನಿನ್ನ ಮುಖದಲ್ಲಿರುವ ಗಾಬರಿ ನೋಡಿದರೆ ಕಳ್ಳನ ಮನಸ್ಸು ಹುಳ್ಳಗೆ ಎಂಬಂತಿದೆ. ಅವನನ್ನು ಹೇಗೆ ಕೊಲೆ ಮಾಡಿದೆ, ಅವನಿಂದ ಎಷ್ಟು ಹಣ ದೋಚಿದೆ, ಹೇಳು!" ಎಂದು ಜೋರು ಮಾಡಿದ. 

ತಾನು ಕೊಲೆ ಮಾಡಿಲ್ಲವೆಂದು ಐವಾನ್ ಆಣೆ ಮಾಡಿ ಹೇಳಿದ. ತಾವು ಚಹಾಪಾನ ಮಾಡಿದ ನಂತರ ವ್ಯಾಪಾರಿಯನ್ನು ತಾನು ನೋಡಲೇ ಇಲ್ಲ. ತನ್ನ ಎಂಟು ಸಾವಿರ ರೂಬಲ್ ಹೊರತು ತನ್ನ ಬಳಿ ಬೇರೆ ಹಣವಿಲ್ಲ. ರಕ್ತಸಿಕ್ತವಾದ ಚಾಕು ತನ್ನದಲ್ಲ. ಆದರೆ ಇದನ್ನೆಲ್ಲಾ ಹೇಳುವಾಗ ಅವನ ಧ್ವನಿ ನಡುಗುತ್ತಿತ್ತು. ಅವನ ಮುಖ ಬಿಳಿಚಿಕೊಂಡಿತ್ತು. ನೋಡಿದವರಿಗೆ ಅವನೇ ಅಪರಾಧಿ ಎನ್ನಿಸುವಂತಿತ್ತು. 

ಪೋಲಿಸ್ ಅಧಿಕಾರಿ ಸೈನಿಕರಿಗೆ ಐವಾನನ ಕೈಕಾಲು ಕಟ್ಟಿಹಾಕಿ ಸಾರೋಟಿನಲ್ಲಿ ದೂಡುವಂತೆ ಆದೇಶಿಸಿದ. ಹಗ್ಗದಿಂದ ಅವನ ಕೈಕಾಲು ಕಟ್ಟುವಾಗ ಐವಾನ್ ತನ್ನ ಎದೆಯ ಮೇಲೆ ಕ್ರಾಸ್ ಗುರುತು ಹಾಕಿಕೊಂಡು ಅತ್ತ. ಅವನ ಸಾಮಾನು ಮತ್ತು ಹಣವನ್ನು ವಶಪಡಿಸಿಕೊಂಡು ಸಮೀಪದ ಪಟ್ಟಣದಲ್ಲಿ ಅವನನ್ನು ಜೈಲಿಗೆ ಹಾಕಲಾಯಿತು. ವ್ಲಾಡಿಮಿರ್ ಪಟ್ಟಣದಲ್ಲಿ ಅವನ ಚಾರಿತ್ರ್ಯವನ್ನು ಕುರಿತು ತನಿಖೆ ಮಾಡಿದರು. ಪಟ್ಟಣದ ವ್ಯಾಪಾರಿಗಳು ಮತ್ತಿತರ ಜನ "ಅವನು ಒಳ್ಳೆಯ ಮನುಷ್ಯ. ಕೆಲವೊಮ್ಮೆ ಸಿಕ್ಕಾಪಟ್ಟೆ ಕುಡಿದು ರಂಪ ಮಾಡಿದ್ದುಂಟು" ಎಂದು ಹೇಳಿಕೆ ಕೊಟ್ಟರು.  ಇದಾದ ನಂತರ ಕಾನೂನು ರೀತ್ಯಾ ಅವನ ವಿಚಾರಣೆ ನಡೆಯಿತು. ರಯಾಜಾನ್ ಪಟ್ಟಣದ ವ್ಯಾಪಾರಿಯನ್ನು ಕೊಲೆ ಮಾಡಿ ಅವನಿಂದ ಇಪ್ಪತ್ತು ಸಾವಿರ ರೂಬಲ್ ಕದ್ದ ಆಪಾದನೆಯನ್ನು ಅವನ ಮೇಲೆ ಹಾಕಲಾಯಿತು. 

(ಮುಂದಿನ ಭಾಗವನ್ನು ಇಲ್ಲಿ ಓದಿ)

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)