ದೇವರು ಸತ್ಯವನ್ನು ಕಾಣುತ್ತಾನೆ, ಆದರೆ ತಡ ಮಾಡುತ್ತಾನೆ - 2
ಮೂಲ ರಷ್ಯನ್ ಕತೆ - ಲಿಯೋ ಟಾಲ್ಸ್ ಟಾಯ್
ಕನ್ನಡ ಅನುವಾದ - ಸಿ ಪಿ ರವಿಕುಮಾರ್
ಭಾಗ - ೨
ಐವಾನನ ಹೆಂಡತಿಗೆ ದಿಕ್ಕೇ ತೋರಲಿಲ್ಲ. ಯಾರನ್ನು ನಂಬುವುದು? ಮನೆಯಲ್ಲಿ ಎಳೆಯ ಮಕ್ಕಳು; ಚಿಕ್ಕದು ಇನ್ನೂ ಎದೆ ಹಾಲು ಕುಡಿಯುವ ಹಸುಳೆ. ಸಂಸಾರವನ್ನು ಕಟ್ಟಿಕೊಂಡು ಅವಳು ಗಂಡನನ್ನು ಇಟ್ಟಿದ್ದ ಜೈಲಿಗೆ ಹೋದಳು. ಮೊದಲು ಅವನನ್ನು ಕಾಣಲು ಅವಳಿಗೆ ಅನುಮತಿ ಸಿಕ್ಕಲಿಲ್ಲ. ಆದರೆ ಸಾಕಷ್ಟು ಗೋಗರೆದ ನಂತರ ಅವಳನ್ನು ಗಂಡನ ಬಳಿಗೆ ಕರೆದೊಯ್ಯಲಾಯಿತು. ಐವಾನನಿಗೆ ಕೈದಿಗಳ ವಸ್ತ್ರ ತೊಡಿಸಿ, ಕೈಕಾಲುಗಳಿಗೆ ಕೋಳ ತೊಡಿಸಿ ಕಳ್ಳಕಾಕರೊಂದಿಗೆ ಕಾರಾಗೃಹದಲ್ಲಿ ಬಂಧಿಸಿಟ್ಟಿರುವುದನ್ನು ಕಂಡು ಅವಳು ಮೂರ್ಛೆ ಹೋದಳು. ಬಹಳ ಹೊತ್ತಿನ ನಂತರ ಅವಳಿಗೆ ಅರಿವು ತಿಳಿಯಿತು. ತನ್ನ ಮಕ್ಕಳನ್ನು ಬಳಿಗೆ ಸೆಳೆದು ಅವಳು ಐವಾನನ ಹತ್ತಿರ ಕುಳಿತಳು. ಮನೆಯ ವಿಷಯಗಳನ್ನು ಅವನಿಗೆ ವರದಿ ಮಾಡಿ ನಂತರ ಅವನ ವಿಚಾರ ಕೇಳಿದಳು. ಅವನು ಎಲ್ಲವನ್ನೂ ಚಾಚೂ ತಪ್ಪದೆ ವಿವರಿಸಿದ ಮೇಲೆ "ಈಗ ನಾವೇನು ಮಾಡುವುದು?" ಎಂದು ಕೇಳಿದಳು.
"ಜಾರ್ ದೊರೆಯ ಮೊರೆ ಹೋಗಬೇಕು - ಅವರ ಆಳ್ವಿಕೆಯಲ್ಲಿ ಒಬ್ಬ ಅಮಾಯಕನಿಗೆ ಈ ಸ್ಥಿತಿ ಬರಬಾರದು."
ತಾನು ಈಗಾಗಲೇ ಜಾರ್ ದೊರೆಗೆ ಪತ್ರ ಕಳಿಸಿದ್ದರೂ ಅದು ಸ್ವೀಕೃತವಾಗಲಿಲ್ಲವೆಂದು ತಿಳಿಸಿದಳು.
ಐವಾನ್ ಉತ್ತರಿಸಲಿಲ್ಲ. ಅವನು ಕಳೆಗುಂದಿದಂತೆ ತೋರಿತು.
ಅವನ ಹೆಂಡತಿ "ನನ್ನ ದುಃಸ್ವಪ್ನ ಸುಳ್ಳಾಗಲಿಲ್ಲ. ನೆನಪಿದೆಯೇ? ನೀನು ಅವತ್ತು ಹೊರಡಬಾರದಾಗಿತ್ತು" ಎಂದಳು. ನಂತರ ಅವನ ಗುಂಗುರು ಕೂದಲಲ್ಲಿ ಬೆರಳಾಡಿಸಿ "ನೋಡು, ನನ್ನಲ್ಲಿ ಮುಚ್ಚು ಮರೆ ಬೇಡ. ಏನಾಯಿತು ಎಂದು ಹೇಳಿಬಿಡು," ಎಂದಳು.
"ಹಾಗಾದರೆ ನೀನೂ ನನ್ನ ಮೇಲೆ ಅನುಮಾನ ಪಡುತ್ತೀಯಾ?" ಎಂದು ಐವಾನ್ ತನ್ನ ಮುಖ ಮುಚ್ಚಿಕೊಂಡು ಅಳತೊಡಗಿದ. ಅಷ್ಟರಲ್ಲಿ ಒಬ್ಬ ಸೈನಿಕ ಅಲ್ಲಿಗೆ ಬಂದು ಐವಾನನ ಹೆಂಡತಿ ಮಕ್ಕಳು ಹೊರಡುವ ಸಮಯವಾಯಿತು ಎಂದು ಎಚ್ಚರಿಸಿದ. ತನ್ನ ಕುಟುಂಬದವರಿಗೆ ಐವಾನ ಕೊನೆಯ ಸಲ ವಿದಾಯ ಹೇಳಿದ.
ಬಂದವರು ತೆರಳಿದ ಮೇಲೆ ಐವಾನ್ ಬಹಳ ಹೊತ್ತು ಯೋಚಿಸುತ್ತಾ ಕುಳಿತಿದ್ದ. ತನ್ನ ಹೆಂಡತಿಯೂ ತನ್ನ ಮೇಲೆ ಅನುಮಾನ ಪಡುತ್ತಾಳೆ - ದೇವರಲ್ಲದೆ ಬೇರೆ ಯಾರಿಗೂ ನಿಜವನ್ನು ಕಾಣಲು ಸಾಧ್ಯವಿಲ್ಲ. ದೇವರಲ್ಲದೆ ತಾನು ಬೇರೆ ಯಾರಲ್ಲಿ ಮೊರೆ ಹೋಗಲಿ? ದೇವರಲ್ಲದೆ ಬೇರೆ ಯಾರಿಂದ ತಾನು ಕರುಣೆಯನ್ನು ಅಪೇಕ್ಷಿಸಲು ಸಾಧ್ಯ?
ಇದಾದ ನಂತರ ಐವಾನ್ ಯಾರಲ್ಲೂ ನ್ಯಾಯಕ್ಕಾಗಿ ಮೊರೆ ಹೋಗಲಿಲ್ಲ. ಬೇರೆಲ್ಲಾ ಆಸೆಗಳನ್ನೂ ತೊರೆದು ಅವನು ನಿರಂತರವಾಗಿ ದೇವರಲ್ಲಿ ಪ್ರಾರ್ಥಿಸಿದ.
ಶಿಕ್ಷೆಯ ರೂಪದಲ್ಲಿ ಐವಾನನಿಗೆ ಕೊರಡಿನ ಏಟುಗಳನ್ನು ಕೊಟ್ಟು ಅವುಗಳ ಗಾಯ ಮಾಗಿದ ಮೇಲೆ ಅವನನ್ನು ಸೈಬೀರಿಯಾದ ಗಣಿಗಳಲ್ಲಿ ಕೆಲಸ ಮಾಡಲು ಇನ್ನಿತರ ಕೈದಿಗಳೊಂದಿಗೆ ಅಟ್ಟಲಾಯಿತು.
ಐವಾನ್ ಇಪ್ಪತ್ತಾರು ವರ್ಷ ಸೈಬೀರಿಯಾದಲ್ಲಿ ಕೈದಿಯಾಗಿ ಕಾಲ ಕಳೆದ. ಅವನ ತಲೆಗೂದಲು ಮಂಜಿನಂತೆ ಬೆಳ್ಳಗಾಯಿತು. ಉದ್ದವಾಗಿ ಬೆಳೆದ ಅವನ ಗಡ್ದದಲ್ಲೂ ನರೆಗೂದಲು. ಸದಾ ನಗುತ್ತಿದ್ದ ಅವನ ಸ್ವಭಾವ ಬದಲಾಯಿತು. ಅವನ ಬೆನ್ನು ಬಾಗಿತು. ಅವನ ನಡಿಗೆ ನಿಧಾನವಾಯಿತು. ಅವನು ಹೆಚ್ಚು ಮಾತಾಡುತ್ತಿರಲಿಲ್ಲ. ನಗುವುದಂತೂ ಇಲ್ಲವೇ ಇಲ್ಲ. ಸಮಯ ಸಿಕ್ಕಾಗಲೆಲ್ಲಾ ಪ್ರಾರ್ಥನೆಗೆ ತೊಡಗುತ್ತಿದ್ದ.
ಜೈಲಿನಲ್ಲಿ ಐವಾನ್ ಬೂಟು ಹೊಲಿಯುವುದನ್ನು ಕಲಿತು ಒಂದಷ್ಟು ದುಡ್ಡು ಗಳಿಸಿದ. ಈ ಹಣದಿಂದ "ಸಂತರ ಜೀವನಚರಿತ್ರೆ" ಪುಸ್ತಕವನ್ನು ಕೊಂಡು ಜೈಲಿನ ಕೋಣೆಯಲ್ಲಿ ಬೆಳಕಿದ್ದಾಗಲೆಲ್ಲಾ ಓದುತ್ತಿದ್ದ. ಭಾನುವಾರ ಜೈಲಿನ ಚರ್ಚ್ ಗೆ ತಪ್ಪದೆ ಹೋಗಿ ಅಲ್ಲಿ ಸಮೂಹಗಾನದಲ್ಲಿ ಭಾಗವಹಿಸುತ್ತಿದ್ದ. ಅವನ ಕಂಠ ಇನ್ನೂ ಚೆನ್ನಾಗಿತ್ತು.
ಜೈಲಿನ ಅಧಿಕಾರಿಗಳಿಗೆ ದೀನ ಸ್ವಭಾವದ ಐವಾನ್ ಪ್ರಿಯನಾದ. ಅವನ ಜೊತೆ ಇದ್ದ ಕೈದಿಗಳೂ ಅವನನ್ನು ಗೌರವದಿಂದ ಕಾಣುತ್ತಿದ್ದರು. ಅವನನ್ನು ಅಜ್ಜ ಎಂದು ಸಂಬೋಧಿಸುತ್ತಿದ್ದರು. ಕೆಲವರು "ಸಂತ" ಎಂದೂ ಕರೆಯುತ್ತಿದ್ದರು. ಯಾರಿಗಾದರೂ ಜೈಲಿನ ಮೇಲಧಿಕಾರಿಯ ಬಳಿಗೆ ಏನಾದರೂ ಕೋರಿಕೆ ಕೊಂಡೊಯ್ಯಬೇಕಾದರೆ ಐವಾನನನ್ನು ಮುಂದಿಟ್ಟುಕೊಂಡು ಹೋಗುತ್ತಿದ್ದರು. ಕೈದಿಗಳಲ್ಲಿ ಜಗಳವಾದಾಗ ಐವಾನನ ಬಳಿಗೆ ಬಂದು ನ್ಯಾಯ ಹೇಳುವಂತೆ ಕೇಳುತ್ತಿದ್ದರು.
ಮನೆಯಿಂದ ಐವಾನನಿಗೆ ಯಾವ ಸುದ್ದಿಯೂ ಬರುತ್ತಿರಲಿಲ್ಲ. ತನ್ನ ಮಡದಿ-ಮಕ್ಕಳು ಜೀವಂತವಾಗಿದ್ದಾರೋ ಎಂಬುದೂ ಅವನಿಗೆ ತಿಳಿದಿರಲಿಲ್ಲ.
(ಮುಂದಿನ ಭಾಗವನ್ನು ಇಲ್ಲಿ ಓದಿ )
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ