ದೇವರು ಸತ್ಯವನ್ನು ಕಾಣುತ್ತಾನೆ, ಆದರೆ ತಡ ಮಾಡುತ್ತಾನೆ -3
(ಎರಡನೇ ಬಾಗವನ್ನು ಇಲ್ಲಿ ಓದಿ.)
ಭಾಗ - ೩
ಒಂದು ದಿನ ಹೊಸ ಕೈದಿಗಳ ಒಂದು ಗುಂಪು ಜೈಲಿಗೆ ಆಗಮಿಸಿತು. ಸಂಜೆ ಹಳೆಯ ಕೈದಿಗಳು ಹೊಸಬರನ್ನು ಸುತ್ತುವರೆದು ಅವರಿಗೆ ಯಾಕೆ ಶಿಕ್ಷೆಯಾಯಿತು ಎಂಬ ಹಿನ್ನೆಲೆಯನ್ನು ಕೇಳಿ ತಿಳಿದುಕೊಂಡರು. ತಮ್ಮ ತಮ್ಮ ಹಳ್ಳಿ ಮತ್ತು ಪಟ್ಟಣಗಳ ವಿಷಯ ಕೇಳಿದರು.
ಭಾಗ - ೩
ಒಂದು ದಿನ ಹೊಸ ಕೈದಿಗಳ ಒಂದು ಗುಂಪು ಜೈಲಿಗೆ ಆಗಮಿಸಿತು. ಸಂಜೆ ಹಳೆಯ ಕೈದಿಗಳು ಹೊಸಬರನ್ನು ಸುತ್ತುವರೆದು ಅವರಿಗೆ ಯಾಕೆ ಶಿಕ್ಷೆಯಾಯಿತು ಎಂಬ ಹಿನ್ನೆಲೆಯನ್ನು ಕೇಳಿ ತಿಳಿದುಕೊಂಡರು. ತಮ್ಮ ತಮ್ಮ ಹಳ್ಳಿ ಮತ್ತು ಪಟ್ಟಣಗಳ ವಿಷಯ ಕೇಳಿದರು.
ಎಲ್ಲರೊಂದಿಗೆ ಐವಾನ್ ಕೂಡಾ ಮೌನವಾಗಿ ಕುಳಿತು ತಲೆ ತಗ್ಗಿಸಿಕೊಂಡೇ ಈ ಸಂಭಾಷಣೆಯನ್ನು ಕೇಳಿಸಿಕೊಂಡ.
ಅರವತ್ತು ವರ್ಷವಾದರೂ ಗಟ್ಟಿಮುಟ್ಟಾಗಿದ್ದ ಒಬ್ಬ ಹೊಸ ಕೈದಿ ತನಗೆ ಜೈಲಾದದ್ದು ಹೇಗೆ ಎಂಬ ಕಥೆ ಹೇಳುತ್ತಿದ್ದ. ಅವನ ಬೆಳ್ಳಗಿನ ಗಡ್ಡವನ್ನು ಸಣ್ಣದಾಗಿ ಕತ್ತರಿಸಲಾಗಿತ್ತು.
"ಗೆಳೆಯರೇ, ನನ್ನ ಕತೆ ಕೇಳಿ. ನಾನು ಮಾಡಿದ್ದು ಇಷ್ಟೆ. ಒಂದು ಸ್ಲೆಜ್ ಗೆ ಕಟ್ಟಿದ್ದ ಕುದುರೆಯನ್ನು ಬಿಚ್ಚಿಕೊಂಡು ಅದನ್ನು ಬಳಸಿದ್ದೇ ನನ್ನ ಅಪರಾಧ. ನನ್ನ ಮೇಲೆ ಕಳ್ಳತನದ ಆರೋಪ ಹೊರಿಸಿದರು. ಮನೆಗೆ ತರಾತುರಿಯಲ್ಲಿ ಹೋಗಬೇಕಾದ್ದರಿಂದ ನಾನು ಹಾಗೆ ಮಾಡಿದೆ; ಮನೆಗೆ ಹೋದ ಮೇಲೆ ಕುದುರೆಯನ್ನು ಬಿಟ್ಟುಬಿಟ್ಟೆ ಎಂದು ಹೇಳಿದರೂ ಉಪಯೋಗವಾಗಲಿಲ್ಲ. ಇಲ್ಲ, ನೀನು ಕದ್ದಿದ್ದೀಯ ಎಂದೇ ಅವರು ವಾದಿಸಿದರು. ನಾನು ಕುದುರೆಯನ್ನು ಎಲ್ಲಿ ಕದ್ದೆ, ಹೇಗೆ ಕದ್ದೆ ಎಂದು ಅವರು ಹೇಳಲಿಲ್ಲ. ಹಿಂದೊಮ್ಮೆ ನಾನು ನಿಜವಾಗಲೂ ತಪ್ಪು ಮಾಡಿದ್ದೆ. ಆಗಲೇ ನಾನು ಇಲ್ಲಿಗೆ ಬರಬೇಕಾಗಿತ್ತು. ಆದರೆ ಆಗ ನಾನು ಸಿಕ್ಕಿಹಾಕಿಕೊಳ್ಳಲಿಲ್ಲ! ಈಗ ನಾನು ಅಂಥದ್ದೇನೂ ಮಾಡದಿದ್ದರೂ ನನ್ನನ್ನು ಜೈಲಿಗೆ ಕಳಿಸಿದ್ದಾರೆ. ಹಿಂದೆಯೂ ನಾನು ಸೈಬೀರಿಯಾಗೆ ಒಮ್ಮೆ ಬಂದಿದ್ದೆ; ಆದರೆ ಹೆಚ್ಚು ದಿನಗಳ ಕಾಲ ಇಲ್ಲಿರಲಿಲ್ಲ."
"ನೀನು ಯಾವ ಪಟ್ಟಣದವನು?" ಎಂದು ಯಾರೋ ಕೇಳಿದರು.
"ನನ್ನ ಕುಟುಂಬ ಇರುವುದು ವ್ಲಾಡಿಮಿರ್ ಪಟ್ಟಣದಲ್ಲಿ. ನನ್ನ ಹೆಸರು ಮಾಕರ್ ಸೆಮ್ಯೋನಿಚ್."
ಐವಾನ್ ಕತ್ತೆತ್ತಿ "ಏನಯ್ಯಾ ಸೆಮ್ಯೋನಿಚ್, ನಿನಗೆ ಆಕ್ಸಿಯನೋವ್ ಕುಟುಂಬದ ಬಗ್ಗೆ ಗೊತ್ತೇ? ಅವರು ಇನ್ನೂ ಜೀವಂತವಾಗಿದ್ದಾರೆಯೇ?" ಎಂದು ಕೇಳಿದ.
"ಗೊತ್ತಿಲ್ಲದೇ ಏನು? ಚೆನ್ನಾಗಿ ಗೊತ್ತು. ಅವರು ಶ್ರೀಮಂತರು. ಆದರೆ ಅವರ ತಂದೆಯೂ ಇಲ್ಲೇ ಸೈಬೀರಿಯಾದಲ್ಲಿದ್ದಾನಂತೆ. ಅವನೂ ನಮ್ಮ ಹಾಗೇ ಪಾಪಿಯಂತೆ. ಅದು ಸರಿ, ಅಜ್ಜ, ನೀನು ಇಲ್ಲಿಗೆ ಹೇಗೆ ಬಂದೆ?"
ಐವಾನ್ ತನ್ನ ದೌರ್ಭಾಗ್ಯವನ್ನು ಕುರಿತು ಏನೂ ಹೇಳಲಿಲ್ಲ. ಒಮ್ಮೆ ನಿಟ್ಟುಸಿರು ಬಿಟ್ಟು "ನನ್ನ ಪಾಪಕ್ಕಾಗಿ ಇಲ್ಲಿ ಇಪ್ಪತ್ತಾರು ವರ್ಷಗಳಿಂದ ಇದ್ದೇನೆ" ಎಂದು ಸುಮ್ಮನಾದ.
"ಯಾವ ಪಾಪಕ್ಕಾಗಿ?" ಎಂದು ಮಾಕರ್ ಸೆಮ್ಯೋನಿಚ್ ಕೆದಕಿದ.
ಐವಾನ್ "ನನ್ನ ಹಣೆಯಲ್ಲಿ ಇದೇ ಬರೆದಿತ್ತು, ಬಿಡಪ್ಪ" ಎಂದು ತೇಲಿಸಿದರೂ ಅವನ ಸಂಗಡಿಗರು ಅಲ್ಲಿಗೇ ಬಿಡದೆ ಅವನು ಸೈಬೀರಿಯಾಗೆ ಹೇಗೆ ಬಂದ ಎಂಬ ವಿವರಗಳನ್ನು ಹೊಸಬರಿಗೆ ತಿಳಿಸಿದರು. ಯಾರೋ ವ್ಯಾಪಾರಿಯನ್ನು ಕೊಂದು ಹಣ ದೋಚಿದ್ದು, ಅದರ ಅಪವಾದ ಇವನ ಮೇಲೆ ಬಂದಿದ್ದು, ಇವನನ್ನು ಅನ್ಯಾಯವಾಗಿ ಜೈಲಿನಲ್ಲಿ ತಳ್ಳಿದ್ದು, ಇವೆಲ್ಲವನ್ನೂ ವಿವರಿಸಿದರು. ಮಾಕರ್ ಸೆಮ್ಯೋನಿಚ್ ಇದನ್ನೆಲ್ಲಾ ಕೇಳಿಸಿಕೊಂಡ ನಂತರ ಐವಾನನ ಕಡೆ ನೋಡಿ "ಓ! ಇದೊಳ್ಳೆ ಸೋಜಿಗ! ನಿಜಕ್ಕೂ ಸೋಜಿಗ! ನೀನು ಎಷ್ಟು ವಯಸ್ಸಾದಂತೆ ಕಾಣುತ್ತೀಯಲ್ಲ!" ಎಂದು ಉದ್ಗರಿಸಿದ. ಉಳಿದವರು "ನಿನಗೆ ಅಷ್ಟೊಂದು ಆಶ್ಚರ್ಯವಾದದ್ದೇಕೆ? ನೀನು ಅಜ್ಜನನ್ನು ಹಿಂದೆ ಎಂದಾದರೂ ನೋಡಿದ್ದೆಯಾ?" ಎಂದು ಕೇಳಿದರು. ಅವನು ಇದಕ್ಕೆ ಉತ್ತರಿಸದೆ "ನಾವು ಇಷ್ಟು ದಿವಸದ ಮೇಲೆ ಹೀಗೆ ಸಂಧಿಸುವುದೇ ಒಂದು ಸೋಜಿಗ!" ಎಂದ.
ಇದನ್ನು ಕೇಳಿದ ಐವಾನನಿಗೆ ಅನುಮಾನ ಬಂತು - ಈ ಮನುಷ್ಯನಿಗೆ ಕೊಲೆಯ ವಿಷಯದ ಬಗ್ಗೆ ಗೊತ್ತಿದ್ದ ಹಾಗೆ ಕಾಣುತ್ತದೆ. ನಿಜವಾದ ಕೊಲೆಗಾರ ಯಾರೆಂದು ಇವನಿಗೆ ಗೊತ್ತಿರಬಹುದು. "ಸೆಮ್ಯೋನಿಚ್, ಬಹುಶಃ ನೀನು ನನ್ನ ವಿಷಯವನ್ನು ಹಿಂದೆ ಕೇಳಿದ್ದಿರಬಹುದು; ನನ್ನನ್ನು ನೋಡಿದ್ದಿರಬಹುದು, ಅಲ್ಲವೇ?" ಎಂದು ಕೇಳಿದ.
"ಕೇಳದೆ ಇರುವುದು ಸಾಧ್ಯವೇ? ಸಾಕಷ್ಟು ಗಾಳಿಮಾತುಗಳು ಈ ಘಟನೆಯ ಬಗ್ಗೆ ಹಾರಾಡುತ್ತಿದ್ದವು. ಆದರೆ ಅದು ಬಹಳ ಹಿಂದಿನ ಮಾತು; ನನಗೆ ಮರೆತಿದೆ."
"ವ್ಯಾಪಾರಿಯನ್ನು ನಿಜವಾಗಿ ಯಾರು ಕೊಂದರು ಎಂಬ ವಿಷಯವೇನಾದರೂ ನೀನು ಕೇಳಿದ್ದೀಯಾ?"
ಮಾಕರ್ ಸೆಮ್ಯೋನಿಚ್ ನಕ್ಕು "ಯಾರ ಚೀಲದಲ್ಲಿ ಚಾಕು ಸಿಕ್ಕಿತೋ ಅವನಲ್ಲದೆ ಬೇರೆ ಯಾರು ಕೊಲೆ ಮಾಡಿರಲು ಸಾಧ್ಯ? ಬೇರೆ ಯಾರಾದರೂ ಕೊಲೆ ಮಾಡಿ ಚಾಕುವನ್ನು ನಿನ್ನ ಚೇಲದಲ್ಲಿ ಬಚ್ಚಿಡುವುದು ಸಾಧ್ಯವೇ? ನಿನಗೆ ಎಚ್ಚರವಾಗುತ್ತಿರಲಿಲ್ಲವೇ?' ಎಂದ.
ಇದನ್ನು ಕೇಳಿದ ಕೂಡಲೇ ಐವಾನನಿಗೆ ಕೊಲೆಗಾರನು ಇವನೇ ಎಂಬುದು ಮನದಟ್ಟಾಯಿತು. ಅವನು ಮಾತಾಡದೆ ಮೇಲೆದ್ದು ಹೊರಟುಹೋದ. ಅಂದು ಇಡೀ ರಾತ್ರಿ ಐವಾನನಿಗೆ ನಿದ್ದೆ ಬರಲಿಲ್ಲ. ಅವನಿಗೆ ವಿಪರೀತ ದುಃಖವಾಯಿತು. ಮನಸ್ಸಿನಲ್ಲಿ ಅನೇಕ ಚಿತ್ರಗಳು ಏಳುತ್ತಿದ್ದವು. ತನ್ನನ್ನು ಕಾಣಲು ಬಂದಿದ್ದ ಹೆಂಡತಿಯ ಚಿತ್ರ. ತಾನು ಜಾತ್ರೆಗೆ ಹೊರಟಾಗ ಬೀಳ್ಕೊಡಲು ಬಂದಿದ್ದ ಅವಳ ಮುಖ ಮತ್ತು ಕಣ್ಣುಗಳು ಅವನ ಮುಂದೆ ತೇಲಿಬಂದವು. ಅವಳ ನಗು ಮತ್ತು ಮಾತುಗಳು ನೆನಪಾದವು. ಅವನ ಕಣ್ಣುಗಳ ಮುಂದೆ ಮಕ್ಕಳ ಚಿತ್ರ ಮೂಡಿತು. ಕೋಟ್ ಹಾಕಿಕೊಂಡ ಪುಟ್ಟ ಮಗನ ಮುದ್ದು ಮುಖ. ತಾಯ ಎದೆ ಹಾಲು ಕುಡಿಯುವ ಎರಡನೇ ಮಗುವಿನ ಚಿತ್ರ. ಅನಂತರ ಅವನಿಗೆ ತನ್ನದೇ ಯೌವ್ವನದ ಚಿತ್ರ ಕಾಣಿಸಿತು. ಹೇಗಿದ್ದೆ ತಾನು! ಸದಾ ಹಸನ್ಮುಖಿಯಾಗಿ ಎಲ್ಲರೊಂದಿಗೆ ಹಾಸ್ಯದ ಚಟಾಕಿ ಹಾರಿಸುತ್ತಾ! ವಸತಿಗೃಹದ ಅಂಗಳದಲ್ಲಿ ಕುಳಿತು ಗಿಟಾರ್ ನುಡಿಸುತ್ತಾ ತಾನು ಸಂತೋಷವಾಗಿದ್ದಾಗ ತನ್ನನ್ನು ಬಂಧಿಸಿದ ಚಿತ್ರ ಅವನ ಮುಂದೆ ಹಾದುಹೋಯಿತು. ತನಗೆ ಕೊರಡಿನ ಏಟು ಹಾಕಿದ ಚಿತ್ರ ನೆನಪಾಯಿತು. ಏಟು ಹಾಕಿದವನ ಮುಖ ನೆನಪಾಯಿತು; ಸುತ್ತಲೂ ನೋಡಲು ನೆರೆದವರ ಮುಖಗಳು ನೆನಪಾದವು. ಕೈಕಾಲುಗಳಿಗೆ ತೊಡಿಸಿದ್ದ ಕೋಳಗಳು, ತನ್ನ ಜೊತೆಯಲ್ಲಿದ್ದ ಕೈದಿಗಳು, ಇಪ್ಪತ್ತಾರು ವರ್ಷಗಳ ತನ್ನ ಜೀವನ, ತಾನು ವಯಸ್ಸಿಗೆ ಮುಂಚೆ ವೃದ್ಧನಾಗಿದ್ದು - ಎಲ್ಲವೂ ಅವನ ನೆನಪಿನ ತೆರೆಯ ಮೇಲೆ ಮೂಡಿ ಮಾಯವಾದವು. ಎಲ್ಲವನ್ನೂ ನೆನೆಯುತ್ತ ಅವನ ಮನಸ್ಸಿಗೆ ಅತೀವ ನೋವಾಗಿ ಆತ್ಮಹತ್ಯೆ ಮಾಡಿಕೊಳ್ಳುವ ಆಲೋಚನೆ ಬಂದಿತು.
"ಇದೆಲ್ಲಕ್ಕೂ ಆ ಪಾಪಿಯೇ ಕಾರಣ!" ಎಂಬ ಯೋಚನೆ ಹೊಳೆದಾಗ ಅವನ ದುಃಖವೆಲ್ಲಾ ಕೋಪಕ್ಕೆ ತಿರುಗಿತು. ಮಾಕರ್ ಸೆಮ್ಯೋನಿಚ್ ನ ವಿರುದ್ಧ ಸೇಡಿನ ಮನೋಭಾವ ಬಲವಾಯಿತು - ಸೇಡಿನಲ್ಲಿ ತಾನು ನಾಶವಾದರೇನಂತೆ! ಅವನು ರಾತ್ರಿಯಿಡೀ ಪ್ರಾರ್ಥಿಸುತ್ತಾ ಕಳೆದರೂ ಮನಸ್ಸಿಗೆ ಶಾಂತಿ ದೊರೆಯಲಿಲ್ಲ. ಬೆಳಗ್ಗೆ ಅವನು ಮಾಕರ್ ಸೆಮ್ಯೋನಿಚ್ ಹತ್ತಿರವೂ ಸುಳಿಯಲಿಲ್ಲ; ಅವನ ಕಡೆ ನೋಡಲೂ ಇಲ್ಲ. ಹೀಗೆ ಎರಡು ವಾರಗಳು ಕಳೆದವು. ರಾತ್ರಿ ನಿದ್ದೆ ಬಾರದೆ ಏನು ಮಾಡಲೂ ತೋರದೆ ಐವಾನ್ ಕಂಗೆಟ್ಟ.
ಒಂದು ರಾತ್ರಿ ಜೈಲಿನಲ್ಲಿ ಓಡಾಡುವಾಗ ಅವನಿಗೆ ಕೈದಿಗಳು ಮಲಗುತ್ತಿದ್ದ ಮಂಚದ ಕಾಲಿನ ಕೆಳಗೆ ಒಂದು ಮಣ್ಣಿನ ಹೆಂಟೆ ಗೋಚರಿಸಿತು. ಮಂಚದ ಕೆಳಗೆ ಯಾರೋ ಇದ್ದಾರೆಯೇ ಎಂದು ನೋಡಲು ಬಾಗಿದಾಗ ಮಾಕರ್ ಸೆಮ್ಯೋನಿಚ್ ಸಂದಿಯಿಂದ ತೂರಿಕೊಂಡು ಹೊರಗೆ ಬಂದ. ಆತ ಹೆದರಿದ ಕಣ್ಣುಗಳಿಂದ ಐವಾನನ ಕಡೆ ನೋಡಿದ. ಐವಾನ್ ಅವನನ್ನು ನಿರ್ಲಕ್ಷಿಸಿ ಮೇಲೇಳುವುದರಲ್ಲಿದ್ದ; ಆಗ ಒಮ್ಮೆಲೇ ಮಾಕರ್ ಸೆಮ್ಯೋನಿಚ್ ಐವಾನನ ಕೈಗಳನ್ನು ಭದ್ರವಾಗಿ ಹಿಡಿದುಕೊಡ. "ನಾನು ಗೋಡೆಯ ಕೆಳಗೆ ಒಂದು ರಂಧ್ರ ಕೊರೆದಿದ್ದೇನೆ. ಕೊರೆದಾಗ ಸಿಕ್ಕುವ ಮಣ್ಣನ್ನು ನನ್ನ ಬೂಟುಗಳಲ್ಲಿ ಬಚ್ಚಿಟ್ಟುಕೊಂಡು ಹೊರಗೆ ಹೋಗುತ್ತೇನೆ. ಕೈದಿಗಳನ್ನು ಕೆಲಸಕ್ಕೆ ಕರೆದುಕೊಂಡು ಹೋಗುವಾಗ ದಾರಿಯಲ್ಲಿ ಮಣ್ಣನ್ನು ಯಾರಿಗೂ ಗೊತ್ತಾಗದಂತೆ ಚೆಲ್ಲಿಬಿಡುತ್ತೇನೆ." ಎಂದ.
"ಮುದುಕ, ನೀನು ಇದರ ವಿಷಯ ಬಾಯಿ ಬಿಡಕೂಡದು. ನಾನು ನಿನ್ನನ್ನೂ ಹೊರಕ್ಕೆ ಕರೆದುಕೊಂಡು ಹೋಗುತ್ತೇನೆ. ನೀನು ಬಾಯಿ ಬಿಟ್ಟರೆ ಅವರು ನನ್ನ ಜೀವ ಹೋಗುವವರೆಗೂ ಕೊರಡಿನಿಂದ ಹೊಡೆಯುತ್ತಾರೆ. ಆದರೆ ಅದಕ್ಕಿಂತ ಮುಂಚೆ ನಾನು ನಿನ್ನನ್ನು ಕೊಂದುಹಾಕುತ್ತೇನೆ."
ಐವಾನ್ ತನ್ನ ಶತ್ರುವಿನತ್ತ ನೋಡಿದ. ಅವನ ಮೈ ಕೋಪದಿಂದ ಕಂಪಿಸಿತು. ಅವನು ತನ್ನ ಕೈಗಳನ್ನು ಬಿಡಿಸಿಕೊಳ್ಳುತ್ತಾ "ನನಗೆ ಇಲ್ಲಿಂದ ತಪ್ಪಿಸಿಕೊಳ್ಳುವ ಆಸೆ ಇಲ್ಲ. ನನ್ನನ್ನು ನೀನು ಕೊಲ್ಲುವುದೂ ಬೇಕಾಗಿಲ್ಲ. ನೀನು ನನ್ನನ್ನು ಬಹಳ ಹಿಂದೆಯೇ ಕೊಂದುಬಿಟ್ಟೆ. ನೀನು ಮಾಡಿದ ಕೆಲಸವನ್ನು ವರದಿ ಮಾಡಬೇಕೋ ಮಾಡಬಾರದೋ - ದೇವರು ಹೇಗೆ ಪ್ರೇರಣೆ ಕೊಡುತ್ತಾನೋ ಹಾಗೆ ಮಾಡುತ್ತೇನೆ" ಎಂದ.
ಮರುದಿನ ಕೈದಿಗಳನ್ನು ಕೆಲಸಕ್ಕೆ ಕರೆದೊಯ್ಯಲು ಗಾಡಿ ಬಂದಾಗ ಒಬ್ಬ ಸೈನಿಕನಿಗೆ ಕೈದಿಯೊಬ್ಬ ತನ್ನ ಬೂಟುಗಳಿಂದ ಮಣ್ಣು ಹೊರಚೆಲ್ಲುವುದು ಕಾಣಿಸಿತು. ತನಿಖೆ ಮಾಡಿದಾಗ ಗುಪ್ತ ಸುರಂಗದ ವಿಷಯ ಬಯಲಿಗೆ ಬಂತು. ಜೈಲಿನ ಗವರ್ನರ್ ಬಂದು ಪ್ರತಿಯೊಬ್ಬ ಕೈದಿಯನ್ನೂ ಪ್ರಶ್ನಿಸಿದ. ಯಾರೂ ಬಾಯಿ ಬಿಡಲಿಲ್ಲ. ಮಾಕರ್ ಸೆಮ್ಯೋನಿಚ್ ಮಾಡಿದ ಕೆಲಸ ಎಂದು ಗೊತ್ತಿದ್ದವರೂ ಅವನಿಗೆ ಸಾಯುವವರೆಗೂ ಕೊರಡಿನಿಂದ ಹೊಡೆಯುತ್ತಾರೆ ಎಂಬ ಹೆದರಿಕೆಯಿಂದ ಸುಮ್ಮನಿದ್ದರು. ಕೊನೆಗೆ ಗವರ್ನರ್ ಐವಾನನ ಹತ್ತಿರ ಬಂದು "ಅಜ್ಜಾ, ನೀನು ಸತ್ಯವಂತ; ದೇವರಿಗೆ ಹೆದರಿ ನಡೆಯುತ್ತೀಯ. ಸತ್ಯವಾಗಿ ಹೇಳು - ಈ ಕೆಲಸ ಮಾಡಿದ್ದು ಯಾರು?"
ಮಾಕರ್ ಸೆಮ್ಯೋನಿಚ್ ಏನೂ ಗೊತ್ತಿಲ್ಲದವನ ಹಾಗೆ ನಿಂತಿದ್ದ. ಅವನು ಐವಾನನ ಕಡೆಗೆ ತಿರುಗಿಯೂ ನೋಡಲಿಲ್ಲ. ಗವರ್ನರನ ಮುಖವನ್ನೇ ನೋಡುತ್ತಿದ್ದ.
ಐವಾನನ ಕೈಗಳು ಮತ್ತು ತುಟಿಗಳು ನಡುಗುತ್ತಿದ್ದವು. ಬಹಳ ಹೊತ್ತು ಅವನ ಬಾಯಿಂದ ಒಂದೂ ಶಬ್ದ ಹೊರಡಲಿಲ್ಲ. "ನನ್ನ ಜೀವನವನ್ನು ಹಾಳು ಮಾಡಿದವನನ್ನು ನಾನು ಯಾಕೆ ಕಾಪಾಡಬೇಕು? ಅವನು ಮಾಡಿದ ತಪ್ಪಿಗೆ ಶಿಕ್ಷೆಯನ್ನು ಅವನೇ ಅನುಭವಿಸಲಿ." ಎಂಬ ಯೋಚನೆ ಅವನ ಮನಸ್ಸಿನಲ್ಲಿ ಬಂತು. ಅನಂತರ "ನಾನು ಬಾಯಿಬಿಟ್ಟರೆ ಅವನ ಜೀವ ತೆಗೆಯುತ್ತಾರೆ. ಇಷ್ಟಾಗಿ ನಾನು ಅವನ ಮೇಲೆ ಸುಮ್ಮಸುಮ್ಮನೆ ಅನುಮಾನ ಪಡುತ್ತಿರಬಹುದು. ಇಷ್ಟಕ್ಕೂ ಅವನಿಗೆ ಶಿಕ್ಷೆಯಾದರೆ ಅದರಿಂದ ನನಗೇನು ಬಂತು?"
"ಅಜ್ಜಾ, ನಿಜ ಹೇಳು - ಸುರಂಗ ತೋಡಿದ್ದು ಯಾರು?" ಎಂದು ಗವರ್ನರ್ ಮತ್ತೆ ಉಚ್ಚರಿಸಿದ.
ಐವಾನ್ ಒಮ್ಮೆ ಮಾಕರ್ ಸೆಮ್ಯೋನಿಚ್ ಕಡೆಗೆ ನೋಡಿ ನಂತರ ಗವರ್ನರನನ್ನು ಉದ್ದೇಶಿಸಿ "ನಾನು ಹೇಳಲಾರೆ, ಸ್ವಾಮಿ. ನಾನು ಹೇಳಬೇಕೆಂದು ದೇವರ ಇಚ್ಛೆಯಲ್ಲಿ ಬರಲಿಲ್ಲ. ನನಗೆ ಯಾವ ಶಿಕ್ಷೆ ವಿಧಿಸುತ್ತೀರೋ ವಿಧಿಸಿ - ನಾನು ನಿಮ್ಮ ಕೈದಿ," ಎಂದ.
ಗವರ್ನರನು ಎಷ್ಟು ಪರಿಪರಿಯಾಗಿ ಕೇಳಿದರೂ ಐವಾನ್ ಇನ್ನೊಂದು ಮಾತಾಡಲಿಲ್ಲ. ಕೊನೆಗೆ ಮಾತು ಅಲ್ಲಿಗೇ ನಿಂತುಹೋಯಿತು.
ಅಂದು ರಾತ್ರಿ ಐವಾನ್ ತನ್ನ ಮಂಚದಲ್ಲಿ ಮಲಗಿದ್ದಾಗ ಇನ್ನೇನು ನಿದ್ದೆಗೆ ಜಾರುವಷ್ಟರಲ್ಲಿ ಯಾರೋ ನಿಶಬ್ದವಾಗಿ ಬಂದು ಅವನ ಮಂಚದ ಮೇಲೆ ಕುಳಿತಂತೆ ಭಾಸವಾಯಿತು. ಕತ್ತಲಿನಲ್ಲಿ ಕಣ್ಣುಗಳನ್ನು ಕಿರಿದು ಮಾಡಿಕೊಂಡು ನೋಡಿದಾಗ ಕುಳಿತವನು ಮಾಕರ್ ಸೆಮ್ಯೋನಿಚ್ ಎಂಬುದು ಗೊತ್ತಾಯಿತು.
"ನನ್ನಿಂದ ಇನ್ನೇನು ಬೇಕು? ಇಲ್ಲಿಗೆ ಯಾಕೆ ಬಂದೆ?"
ಮಾಕರ್ ಸೆಮ್ಯೋನಿಚ್ ಸುಮ್ಮನಿದ್ದ. ಐವಾನ್ ಎದ್ದು ಕುಳಿತು "ನಿನಗೇನು ಬೇಕು? ಇಲ್ಲಿಂದ ಹೊರಟುಹೋಗು! ಇಲ್ಲದಿದ್ದರೆ ಕಾವಲುಗಾರನನ್ನು ಎಚ್ಚರಿಸಬೇಕಾಗುತ್ತದೆ!" ಎಂದ.
ಮಾಕರ್ ಸೆಮ್ಯೋನಿಚ್ ಅವನ ಹತ್ತಿರ ಬಾಗಿ "ಐವಾನ್ ಡಿಮಿಟ್ರಿಚ್, ನನ್ನನ್ನು ಕ್ಷಮಿಸು!" ಎಂದು ಪಿಸುಗುಟ್ಟಿದ.
"ಕ್ಷಮಿಸುವುದೇ? ಯಾತಕ್ಕಾಗಿ?"
"ವ್ಯಾಪಾರಿಯನ್ನು ಕೊಂದು ನಿನ್ನ ಚೀಲದಲ್ಲಿ ಕತ್ತಿಯನ್ನು ಬಚ್ಚಿಟ್ಟಿದ್ದು ನಾನೇ. ನಿನ್ನನ್ನೂ ಕೊಲ್ಲುವ ಉದ್ದೇಶದಿಂದ ಬಂದಿದ್ದೆ. ಆದರೆ ಹೊರಗೆ ಏನೋ ಸದ್ದಾಯಿತು. ಹೆದರಿ ನಿನ್ನ ಚೀಲದಲ್ಲಿ ಕತ್ತಿಯನ್ನು ಅವಿತಿಟ್ಟು ನಾನು ಕಿಟಕಿಯಿಂದ ಹೊರಕ್ಕೆ ಹಾರಿಹೋದೆ."
ಐವಾನ್ ಸುಮ್ಮನಿದ್ದ. ಅವನಿಗೆ ಏನು ಹೇಳಲೂ ತೋರಲಿಲ್ಲ. ಮಾಕರ್ ಸೆಮ್ಯೋನಿಚ್ ಮಂಚದಿಂದ ಕೆಳಕ್ಕಿಳಿದು ನೆಲದ ಮೇಲೆ ಮಂಡಿಯೂರಿ ಕುಳಿತು "ಐವಾನ್ ಡಿಮಿಟ್ರಿಚ್, ನನ್ನನ್ನು ಕ್ಷಮಿಸಿಬಿಡು. ದೇವರಿಗಾಗಿ ನನ್ನನ್ನು ಕ್ಷಮಿಸು! ನಾನು ಪ್ರಾಯಶ್ಚಿತ್ತ ಮಾಡಿಕೊಳ್ಳುತ್ತೇನೆ. ವ್ಯಾಪಾರಿಯನ್ನು ಕೊಂದಿದ್ದು ನಾನೇ ಎಂದು ತಪ್ಪೊಪ್ಪಿಗೆ ಕೊಡುತ್ತೇನೆ. ನೀನು ಸ್ವತಂತ್ರನಾಗಿ ಮನೆಗೆ ಹೋಗಬಹುದು," ಎಂದ.
"ಹೀಗೆ ಹೇಳುವುದು ನಿನಗೆ ಸುಲಭ. ಆದರೆ ನಿನಗಾಗಿ ನಾನು ಇಪ್ಪತ್ತಾರು ವರ್ಷ ಎಷ್ಟು ಕಷ್ಟ ಪಟ್ಟೆ ಎಂಬುದು ನಿನಗೇನು ಗೊತ್ತು? ನಾನು ಈಗ ಎಲ್ಲಿಗೆ ಹೋಗಲಿ? ನನ್ನ ಹೆಂಡತಿ ತೀರಿಕೊಂಡಿದ್ದಾಳೆ. ನನ್ನ ಮಕ್ಕಳು ನನ್ನನ್ನು ಮರೆತುಬಿಟ್ಟಿದ್ದಾರೆ. ನನಗೆ ಹೋಗಲು ಯಾವ ಸ್ಥಳವೂ ಇಲ್ಲ."
ಮಾಕರ್ ಸೆಮ್ಯೋನಿಚ್ ಮೇಲೇಳಲಿಲ್ಲ. ಅವನು ತನ್ನ ಹಣೆಯನ್ನು ನೆಲಕ್ಕೆ ಬಡಿಯುತ್ತಾ "ಐವಾನ್ ಡಿಮಿಟ್ರಿಚ್! ನನ್ನನ್ನು ಕ್ಷಮಿಸು!" ಎಂದು ಅತ್ತ. "ಅವರು ನನಗೆ ಕೊರಡಿನಿಂದ ಏಟು ಹಾಕಿದಾಗಲೂ ಇಷ್ಟು ನೋವಾಗಲಿಲ್ಲ - ಈಗ ನಿನ್ನನ್ನು ನೋಡುವಾಗ ನನಗೆ ಉಂಟಾಗುವ ಬಾಧೆ ತಡೆಯಲಾಗುತ್ತಿಲ್ಲ. ಇಷ್ಟೆಲ್ಲಾ ಆದರೂ ನೀನು ನನ್ನ ಮೇಲೆ ಚಾಡಿ ಹೇಳಲಿಲ್ಲ. ಅಯ್ಯೋ ನನ್ನ ಜನ್ಮಕ್ಕಿಷ್ಟು ಹಾಕಿತು! ಐವಾನ್ ಡಿಮಿಟ್ರಿಚ್, ಕ್ರಿಸ್ತನ ಸಲುವಾಗಿ ನನ್ನನ್ನು ಕ್ಷಮಿಸು!" ಎಂದು ಬಿಕ್ಕಿ ಬಿಕ್ಕಿ ಅತ್ತ.
ಬಿಕ್ಕುವ ಸದ್ದು ಕೇಳಿ ಐವಾನ್ ಕೂಡಾ ಅಳತೊಡಗಿದ. "ದೇವರು ನಿನ್ನನ್ನು ಕ್ಷಮಿಸುತ್ತಾನೆ!" ಎಂದ. "ನಾನು ನಿನಗಿಂತ ನೂರುಪಟ್ಟು ದೊಡ್ಡ ಪಾಪಿಯಾಗಿರಬಹುದು."
ಹೀಗೆ ನುಡಿದ ತಕ್ಷಣ ಐವಾನನ ಹೃದಯ ಹಗುರವಾಯಿತು. ಮನೆಗೆ ಹಿಂತಿರುಗುವ ಆಸೆ ಅವನನ್ನು ಬಿಟ್ಟಿತು. ಜೈಲಿನಿಂದ ಮುಕ್ತಿ ಪಡೆಯ ಬೇಕೆಂಬ ಹಂಬಲ ಅವನಿಗೆ ಈಗ ಇರಲಿಲ್ಲ. ಅವನಿಗೆ ಇದ್ದದ್ದು ತನ್ನ ಕೊನೆಯುಸಿರಿನ ನಿರೀಕ್ಷೆ ಮಾತ್ರ.
ಹೀಗೆ ನುಡಿದ ತಕ್ಷಣ ಐವಾನನ ಹೃದಯ ಹಗುರವಾಯಿತು. ಮನೆಗೆ ಹಿಂತಿರುಗುವ ಆಸೆ ಅವನನ್ನು ಬಿಟ್ಟಿತು. ಜೈಲಿನಿಂದ ಮುಕ್ತಿ ಪಡೆಯ ಬೇಕೆಂಬ ಹಂಬಲ ಅವನಿಗೆ ಈಗ ಇರಲಿಲ್ಲ. ಅವನಿಗೆ ಇದ್ದದ್ದು ತನ್ನ ಕೊನೆಯುಸಿರಿನ ನಿರೀಕ್ಷೆ ಮಾತ್ರ.
ಐವಾನ್ ಏನೇ ಹೇಳಲಿ,ಮಾಕರ್ ಸೆಮ್ಯೋನಿಚ್ ತನ್ನ ತಪ್ಪನ್ನು ಒಪ್ಪಿಕೊಂಡ. ಐವಾನನ ಬಿಡುಗಡೆ ಪತ್ರವೂ ಬಂತು. ಆದರೆ ಅದಕ್ಕಿಂತ ಮುಂಚೆ ಐವಾನ್ ತನ್ನ ಕೊನೆಯುಸಿರೆಳೆದ.
(ಮುಗಿಯಿತು)
================================================
(c) 2014, C.P. Ravikumar
Kannada Translation of 'God sees the truth but waits' by Leo Tolstoy.
ಚಂದದ ಅನುವಾದ, ಅತ್ಯಂತ ಪರಿಣಾಮಕಾರಿಯಾಗಿ ಮೂಡಿ ಬಂದಿರುವುದು. ಅಭಿನಂದನೆಗಳು
ಪ್ರತ್ಯುತ್ತರಅಳಿಸಿ