ಕೇಳಿಸದ ಪ್ರಶ್ನೆಗಳು

ಸಿ ಪಿ ರವಿಕುಮಾರ್ 


ಇದೀಗ ಒಬ್ಬ ನೆಂಟರ ಮನೆಯಿಂದ ಹಿಂದಿರುಗಿ ಬಂದೆವು. ಅದರ ವಿಷಯ ಯಾಕೆ ಹೇಳಲು ಹೊರಟೆ ಎಂದರೆ ಈ ಭೇಟಿ ಸ್ವಲ್ಪ ವಿಶೇಷವಾಗಿತ್ತು. ನಾವು ನಮ್ಮ ನೆಂಟರ ಜೊತೆ ಮಾತೇ ಆಡಲಿಲ್ಲ.

'ಏನು, ಅವರ ಜೊತೆ ಮುನಿಸಿಕೊಂಡಿದ್ದೀರಾ?' ಎಂದು ನೀವು ಕೇಳಬಹುದು.

ಇಲ್ಲ, ಅಲ್ಲಿ ಮಾತು ಸಾಧ್ಯವೇ ಆಗಲಿಲ್ಲ.  ನಾವು ಮಾತಾಡಿದರೆ ಅದು ಯಾರಿಗೂ ಕೇಳುತ್ತಲೇ ಇರಲಿಲ್ಲ.

ಅವರ ಮನೆಯ ರಸ್ತೆಯಲ್ಲಿ ಇಂದು ಗಣೇಶನ ವಿಸರ್ಜನೆ.  ಮಧ್ಯ್ಯಾಹ್ನ ನಾಲ್ಕೂವರೆಯಿಂದ ತಮಟೆ ವಾದ್ಯದ ಕಾರ್ಯಕ್ರಮ ನಡೆಯುತ್ತಿದೆ. ಗಣಪತಿಗೆ ಭಾರೀ ಅಲಂಕಾರ ಮಾಡಲಾಗಿದೆ. ದೇವಸ್ಥಾನದ ಮೂರ್ತಿಯಂತಹ ಇಡುಗುಂಜಿ ಗಣೇಶನ ಪ್ರತಿಮೆಯನ್ನು ಸ್ಥಾಪಿಸಿದ್ದಾರೆ. ಕಪ್ಪು ಶಿಲೆಯ ಗಣಪತಿ ಮೂರ್ತಿಯಂತೆ ಅದು ಹೊಳೆಯುತ್ತಿದೆ.  ಹುಡುಗರು ಕುಣಿಯುತ್ತಿದ್ದಾರೆ. ಇಂದು ಮೂರ್ತಿಯ ವಿಸರ್ಜನೆಗೆ ಅವರು ಹತ್ತಿರದಲ್ಲಿರುವ ಕೆರೆಗೆ ಹೋಗುತ್ತಾರೆ.

ನೆಂಟರು ನಮ್ಮನ್ನು ನೋಡಿ ಮುಗುಳ್ನಕ್ಕರು. ಮಾತಾಡಲು ಪ್ರಯತ್ನಿಸಿ ಕೊನೆಗೆ ಅಸಹಾಯಕತೆಯಿಂದ ಕೈ ಚೆಲ್ಲಿದರು.  ತಮಟೆಯ ಸದ್ದು ಕಿವಿತಮಟೆಯನ್ನು ಭೇದಿಸುವಂತೆ ಏಕಪ್ರಕಾರವಾಗಿ ಕೇಳುತ್ತಿತ್ತು. ಕಿಟಕಿ ಮುಚ್ಚಿದರೂ ಯಾವ ಪ್ರಯೋಜನವಾಗಲಿಲ್ಲ.

ಮಧ್ಯೆ ಒಂದೆರಡು ಕ್ಷಣ ಸದ್ದು ನಿಂತಾಗ 'ಅಬ್ಬ!' ಎಂದು ನಿಟ್ಟುಸಿರು ಬಿಡುವಷ್ಟರಲ್ಲಿ ತಮಟೆ ಸದ್ದು ಮತ್ತೆ ನವ-ಉತ್ಸಾಹದಿಂದ  ಪ್ರಾರಂಭವಾಗುವುದು.  ಹೀಗೆ ಒಂದೆರಡು ಸಲ ಶಬ್ದ ನಿಂತಾಗ ನಾವು ಕೆಲವು ಮಾತುಗಳನ್ನು ಆಡಲು ಸಾಧ್ಯವಾಯಿತು.  ನೆನ್ನೆ ರಾತ್ರಿಯೂ ಹನ್ನೊಂದರವರೆಗೆ ಆರ್ಕೆಸ್ಟ್ರಾ ನಡೆಯಿತಂತೆ.  ವಯಸ್ಸಾದ ತಾಯಿಯೂ ನಿದ್ದೆಗೆಡಬೇಕಾಯಿತು.

'ಹೋಗಲಿ, ಆರ್ಕೆಸ್ಟ್ರಾ ಚೆನ್ನಾಗಿತ್ತಾ?' ಎಂದು ಕೇಳಿದೆ.

'ಅಯ್ಯೋ, ಬರೀ ಕೆಟ್ಟಕೆಟ್ಟ ಸಿನಿಮಾ ಹಾಡುಗಳು' ಎಂದು ಮುಖ ಸಿಂಡರಿಸಿದರು.

ಐಟಂ ಸಾಂಗ್ ಕೇಳುತ್ತಾ ಗಣಪತಿ ಸಾಂಗ್-ಓ-ಪಾಂಗವಾಗಿ ಪೂಜೆ ಮಾಡಿಸಿಕೊಂಡು ಸಂತುಷ್ಟನಾಗಿರಬಹುದು!

ಈಗ ಹೇಳಿಕೇಳಿ ಮಕ್ಕಳಿಗೆ ಪರೀಕ್ಷೆಗಳ ಕಾಲ. ಮಕ್ಕಳ ಓದಿಗೆ ಇಂಥ ವಿಘ್ನ ತಂದಿಡಲು ಅವರು ಚೌತಿಯ ದಿನ ಚಂದ್ರದರ್ಶನ ಮಾಡಿದ್ದೇ ಇರಬೇಕು. 

ಪ್ರತಿವರ್ಷ ಈ ಪಬ್ಲಿಕ್ ಗಣಪತಿ ಪೂಜೆಯ ವಿಜೃಂಭಣೆ ಹೆಚ್ಚುತ್ತಲೇ ಇದೆ.  ಎಷ್ಟೇ ಪರಿಸರ ದೂಷಣೆ ನಡೆದರೂ ಈ ಕಾರ್ಯಕ್ರಮಗಳು ನಿರ್ವಿಘ್ನವಾಗಿ ನಡೆಯುತ್ತಲೇ ಇವೆ. ವಿಸರ್ಜಿತ ಗಣಪತಿ ಕರಗುವ ಮುಂಚೆಯೇ ರಾಜ್ಯೋತ್ಸವದ ಗದ್ದಲ! ನವೆಂಬರ್ ಒಂದರಿಂದ ಹಿಡಿದು ಜನವರಿವರೆಗೂ  ರಾಜ್ಯೋತ್ಸವ!

ಶಾಲೆಗಳಲ್ಲಿ ಪರಿಸರದ ಪಾಠ ಮಕ್ಕಳಿಗೆ ಒಂದಲ್ಲ ಹತ್ತು ಬಗೆಯಲ್ಲಿ ಹೇಳಲಾಗುತ್ತಿದೆ.  ವಿವಿಧ ಬಗೆಯ ಪರಿಸರ ದೂಷಣೆಗಳನ್ನು ಪಟ್ಟಿ ಮಾಡಿ ಅಂಕಗಳನ್ನು ಗಳಿಸುತ್ತಿದ್ದಾರೆ.

ಪ್ರತಿವರ್ಷ ಕೆರೆಗಳಲ್ಲಿ ವಿಸರ್ಜನೆಗೆ ಬಂದವರು ಬಿಟ್ಟುಹೋಗುವ ತ್ಯಾಜ್ಯಗಳ ಚಿತ್ರಗಳು ಪತ್ರಿಕೆಗಳಲ್ಲಿ ಪ್ರಕಟವಾಗುತ್ತವೆ. ಕರಗದ ಪ್ಲಾಸ್ಟರ್ ಆಫ್ ಪ್ಯಾರಿಸ್ ಮತ್ತು ತೈಲವರ್ಣದ ಮೂರ್ತಿಗಳ ಚಿತ್ರಗಳು ನಮ್ಮ ಎದೆಯನ್ನು ಕೊರೆಯುತ್ತವೆ.  ಆದರೆ ನಾವು ಎಲ್ಲವನ್ನೂ ಸಹಿಸಿಕೊಳ್ಳಬಲ್ಲವರು. 'ಆದದ್ದೆಲ್ಲಾ ಒಳಿತೇ ಆಯಿತು' ಎಂದು ಭಾರವನ್ನೆಲ್ಲಾ ದೇವರ ಮೇಲೆ ಹಾಕಿ ನಂಬಿ ಬದುಕುವವರು.  ಇಂಥ ಸಮಾರಂಭಗಳನ್ನು ಆಯೋಜಿಸಲು ಯಾವುದೇ ಕಾನೂನು-ಕಾಯಿದೆಗಳಿಲ್ಲವೇ? ಸ್ಥಳೀಯ ಆರಕ್ಷಕರು ಇಂಥ ಪರಿಸರ ದೂಷಣೆಯನ್ನು ತಡೆಯಲು ಬದ್ಧರಲ್ಲವೇ? ಇತ್ಯಾದಿ ಪ್ರಶ್ನೆಗಳನ್ನು ನಾನು ಕೇಳುವುದಿಲ್ಲ.  ಗಣೇಶ-ಗೌರಿ ಹಬ್ಬಗಳಿಗೆ ಎಲ್ಲರಿಗೂ ಶುಭ ಕೋರುವ ಫ್ಲೆಕ್ಸ್ ಕಟೌಟ್ ನೋಡಿದಾಗ ನನ್ನ ಪ್ರಶ್ನೆಗಳು ಅರ್ಥಹೀನವಾಗುತ್ತವೆ.  ತಮಟೆಯ ಸದ್ದಿನಲ್ಲಿ ಪ್ರಶ್ನೆಗಳು ಕೇಳುವುದೂ ಇಲ್ಲ.  ತಲ್ಲಣಿಸದಿರು ಎಂದು ನನಗೆ ನಾನೇ ಮತ್ತೊಂದು ಸಲ ಹೇಳಿಕೊಳ್ಳುತ್ತೇನೆ. 



ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)