ಮನುಷ್ಯನಿಗೆ ಎಷ್ಟು ಜಮೀನು ಬೇಕು? - 5

ಮೂಲ ರಷ್ಯನ್ ಕಥೆ - ಲಿಯೋ ಟಾಲ್ಸ್ ಟಾಯ್ 
ಕನ್ನಡ ಅನುವಾದ - ಸಿ ಪಿ ರವಿಕುಮಾರ್ 

(ನಾಲ್ಕನೆ ಭಾಗವನ್ನು ಇಲ್ಲಿ ಓದಿ.) 

ಭಾಗ - ೫


ಅತಿಥಿ ಹೇಳಿದ ಸ್ಥಾನಕ್ಕೆ ಹೋಗಿ ತಲುಪುವುದು ಹೇಗೆ ಎಂಬುದನ್ನು ಪಹೋಮ್ ಕೇಳಿ ತಿಳಿದುಕೊಂಡ. ಅತಿಥಿ ಹೊರಟ ಕೂಡಲೇ ಅಲ್ಲಿಗೆ ಹೋಗಲು ತಯಾರಿ ಪ್ರಾರಂಭಿಸಿದ.  ಮನೆಯ ಜವಾಬ್ದಾರಿಯನ್ನು ಹೆಂಡತಿಗೆ ಬಿಟ್ಟು ಜೊತೆಗೊಬ್ಬ ಆಳನ್ನು ಕರೆದುಕೊಂಡು ಹೊರಟ. ದಾರಿಯಲ್ಲಿ ಒಂದು ಊರಿನಲ್ಲಿ ಪ್ರಯಾಣ ನಿಲ್ಲಿಸಿ ಅವರು ಚಹಾ ಪುಡಿಯ ಪೆಟ್ಟಿಗೆ, ಮದ್ಯದ ಸೀಸೆಗಳು ಮೊದಲಾದ ಹಲವಾರು ಉಡುಗೊರೆಗಳನ್ನು ಖರೀದಿ ಮಾಡಿದರು.  ಏಳು ದಿನಗಳ ಕಾಲ ಸತತವಾಗಿ ಸುಮಾರು ಮುನ್ನೂರು ಮೈಲಿ ಪ್ರಯಾಣ ಮಾಡಿದ ನಂತರ ಅವರಿಗೆ ಬಷ್ಕಿರ್ ಜನಾಂಗದವರು ಹಾಕಿದ್ದ ಡೇರೆಗಳು ಗೋಚರಿಸಿದವು.

ಎಲ್ಲವೂ ನೆಲಹಿಡುಕ ಹೇಳಿದಂತೆಯೇ ಇತ್ತು. ಬಷ್ಕಿರ್ ಜನ ನದಿಯ ಹತ್ತಿರ ಬೆಟ್ಟದ ಇಳಿಜಾರುಗಳಲ್ಲಿ ಕಟ್ಟಿದ ಡೇರೆಗಳಲ್ಲಿ ವಾಸವಾಗಿದ್ದರು. ಅವರು ನೆಲವನ್ನು ಉಳುತ್ತಿರಲಿಲ್ಲ. ರೊಟ್ಟಿ ಬೇಯಿಸಿ ತಿನ್ನುತ್ತಲೂ ಇರಲಿಲ್ಲ. ಅವರ ದನಕರುಗಳು ಗುಂಪುಗುಂಪಾಗಿ ಹುಲ್ಲುಗಾವಲುಗಳಲ್ಲಿ ಮೇಯುತ್ತಿದ್ದವು. ಡೇರೆಗಳ ಹಿಂಬದಿಯಲ್ಲಿ ಕುದುರೆ ಮರಿಗಳನ್ನು ಕಟ್ಟಿದ್ದರು. ದಿನಕ್ಕೆ ಎರಡು ಸಲ ತಾಯಿಕುದುರೆಗಳನ್ನು ಮರಿಗಳ ಬಳಿಗೆ ಕರೆದೊಯ್ಯುತ್ತಿದ್ದರು. ಮರಿಗಳು ಹಾಲು ಕುಡಿದ ಅನಂತರ ಹೆಣ್ಣುಕುದುರೆಗಳ ಹಾಲು ಕರೆಯುತ್ತಿದ್ದರು. ಈ ಹಾಲಿನಿಂದ ಹೆಂಗಸರು ಕ್ಯುಮಿಸ್ ಎಂಬ ಮದ್ಯವನ್ನು ಹಾಗೂ ಗಿಣ್ಣನ್ನು ತಯಾರಿಸುತ್ತಿದ್ದರು.  ಗಂಡಸರಿಗೆ ಕ್ಯುಮಿಸ್ ಮತ್ತು ಚಹಾ ಕುಡಿಯುವುದು, ಕುರಿ ಮಾಂಸ  ತಿನ್ನುವುದು, ತಮ್ಮ ಕೊಳಲಿನಂಥ ವಾದ್ಯವನ್ನು ಊದುವುದು - ಇವನ್ನು ಹೊರತು ಬೇರೆ ಯಾವುದರಲ್ಲೂ ಆಸಕ್ತಿ ಇರಲಿಲ್ಲ.  ಅವರೆಲ್ಲರೂ ಮೈಕೈ ತುಂಬಿಕೊಂಡು ಸಂತೋಷವಾಗಿದ್ದರು. ಬೇಸಗೆ ದಿನಗಳಲ್ಲಂತೂ ಅವರಿಗೆ ಕೆಲಸವೇ ಬೇಡ. ಅವರು ಹೊರಗಿನ ಪ್ರಪಂಚ ಅರಿಯದ ಮುಗ್ಧರು. ರಷ್ಯನ್ ಭಾಷೆ ಕೂಡಾ ತಿಳಿಯದವರು. ಆದರೆ ಒಳ್ಳೆಯ ಜನ.


ಪಹೋಮನನ್ನು ನೋಡಿದ ಕೂಡಲೇ ಅವರೆಲ್ಲರೂ ತಮ್ಮ ಡೇರೆಗಳಿಂದ ಹೊರಕ್ಕೆ ಬಂದು ಅವನ ಸುತ್ತ ನಿಂತರು. ದ್ವಿಭಾಷಿಯೊಬ್ಬನನ್ನು ಹುಡುಕಲಾಯಿತು. ತಾನು ಭೂಮಿಯ ಖರೀದಿಗಾಗಿ ಬಂದಿದ್ದೇನೆ ಎಂದು ಪಹೋಮ್ ತಿಳಿಸಿದ. ಇದನ್ನು ಕೇಳಿ ಬಷ್ಕಿರ್ ಜನರಿಗೆ ಸಂತೋಷವಾದಂತೆ ತೋರಿತು. ಅವರು ಪಹೋಮನನ್ನು ಅತ್ಯುತ್ತಮವಾದ ಡೇರೆಗೆ ಕರೆದುಕೊಂಡು ಹೋದರು. ಅಲ್ಲಿ ರತ್ನಗಂಬಳಿಯ ಮೇಲೆ ದಿಂಬುಗಳನ್ನು ಇರಿಸಲಾಗಿತ್ತು. ಪಹೋಮನಿಗೆ ಕುಳಿತುಕೊಳ್ಳಲು ಹೇಳಿ ಅವನ ಸತ್ಕಾರಕ್ಕಾಗಿ ಕ್ಯುಮಿಸ್ ಮತ್ತು ಚಹಾ ತಂದರು. ಆತಿಥ್ಯಕ್ಕಾಗಿ ಒಂದು ಕುರಿಯನ್ನು ವಧೆ ಮಾಡಲಾಯಿತು. ಪಹೋಮ್ ತನ್ನ ಸಾರೋಟಿನಿಂದ ಉಡುಗೊರೆಗಳನ್ನು ಇಳಿಸಿ ಅವರಿಗೆ ಹಂಚಿದ. ತನಗೆ ಅವರು ಕೊಟ್ಟ ಚಹಾ ಅವರೊಂದಿಗೆ ಹಂಚಿಕೊಂಡು ಕುಡಿದ. ಬಷ್ಕಿರ್ ಜನರಿಗೆ ಅತ್ಯಾನಂದವಾಯಿತು. ಅವರು ತಮ್ಮತಮ್ಮಲೇ ತುಂಬಾ ಹೊತ್ತು ಮಾತಾಡಿಕೊಂಡು ಅನಂತರ ದ್ವಿಭಾಷಿಗೆ ಅನುವಾದಿಸಲು ಹೇಳಿದರು. "ನಮಗೆ ನೀವು ಇಷ್ಟವಾಗಿದ್ದೀರಿ. ಅತಿಥಿಯನ್ನು ಸತ್ಕರಿಸುವುದು ಮತ್ತು ಅವನು ತಂದ ಉಡುಗೊರೆಗಳಿಗೆ ಪ್ರತಿಯಾಗಿ ಉಡುಗೊರೆ ಕೊಡುವುದು ನಮ್ಮ ಸಂಪ್ರದಾಯ. ನೀವು ನಮಗಾಗಿ ಉಡುಗೊರೆಗಳನ್ನು ತಂದಿರಿ. ದಯವಿಟ್ಟು ನಮ್ಮ ಬಳಿ ಇರುವ ಯಾವುದಾದರೂ ವಸ್ತುವನ್ನು ಆಯ್ದುಕೊಂಡು ನಮಗೆ ತಿಳಿಸಿ - ಅದನ್ನು ಆನಂದದಿಂದ ನಿಮಗೆ ಸಮರ್ಪಿಸುತ್ತೇವೆ."

"ನನಗೆ ಇಷ್ಟವಾಗಿದ್ದು ನಿಮ್ಮ ಭೂಮಿ. ನಾನು ಎಲ್ಲಿಂದ ಬಂದಿದ್ದೇನೋ ಅಲ್ಲಿ ಜನಜಂಗುಳಿ ಹೆಚ್ಚು. ನೆಲದ ಫಲವಂತಿಕೆ ಕಡಿಮೆಯಾಗಿದೆ. ಆದರೆ ನಿಮ್ಮ ಬಳಿ ಬೇಕಾದಷ್ಟು ಭೂಮಿಯಿದೆ. ಅದು ಅತ್ಯುತ್ತಮ ಭೂಮಿ. ಹಿಂದೆಂದೂ ಇಂಥ ಫಲವತ್ತಾದ ಭೂಮಿಯನ್ನು ನಾನು ನೋಡಿಲ್ಲ." ಎಂದು ಪಹೋಮ್ ಉತ್ತರಿಸಿದ. 

ದ್ವಿಭಾಷಿ  ಅನುವಾದಿಸಿದ ನಂತರ ಬಕ್ಷಿರ್ ಜನರು ತಮ್ಮತಮ್ಮಲ್ಲೇ ಬಹಳ ಹೊತ್ತು ಮಾತಾಡಿಕೊಂಡರು. ಪಹೋಮ್ ಗೆ ಅವರ ಮಾತು ಅರ್ಥವಾಗದಿದ್ದರೂ ಮಾತಿನ ಮಧ್ಯೆ ಅವರು ಜೋರಾಗಿ ಉದ್ಗರಿಸುವುದು ಮತ್ತು ನಗುವುದು ನೋಡಿದರೆ ಅವರಿಗೆ ಇದೇನೋ ಮೋಜಿನ ಸಂಗತಿಯಂತೆ ತೋರಿತೆಂದು ಭಾಸವಾಯಿತು. ಅವರು ಸುಮ್ಮನಾದ ಮೇಲೆ ದ್ವಿಭಾಷಿ ಹೀಗೆ ನುಡಿದ - "ನಿಮ್ಮ ಉಡುಗೊರೆಗಳಿಗೆ ಪ್ರತಿಯಾಗಿ ಅವರು ನಿಮಗೆ ಎಷ್ಟು ಬೇಕೋ ಅಷ್ಟು ಭೂಮಿಯನ್ನು ಕೊಡಲು ಸಂತೋಷದಿಂದ ಒಪ್ಪಿದ್ದಾರೆ. ನಿಮಗೆ ಯಾವ ಭೂಮಿ ಬೇಕೆಂದು ಬೆರಳು ಮಾಡಿ ತೋರಿಸಿದರೆ ಅದನ್ನು ನಿಮಗೆ ಕೊಡಲಾಗುತ್ತದೆ."

ಬಕ್ಷಿರ್ ಮಂದಿ ಮತ್ತೆ ತಮ್ಮತಮ್ಮಲ್ಲಿ ಮಾತಾಡಿಕೊಂಡರು. ಅವರ ನಡುವೆ ಏನೋ ಚರ್ಚೆ ನಡೆದಂತೆ ತೋರಿತು. ಇದೇನು ವಾಗ್ವಾದವೆಂದು ಪಹೋಮ್ ದ್ವಿಭಾಷಿಯನ್ನು ಪ್ರಶ್ನಿಸಿದ. "ಅವರಲ್ಲಿ ಕೆಲವರು ನಿರ್ಧಾರಕ್ಕೆ ಬರುವ ಮುನ್ನ ಮುಖ್ಯಸ್ಥನನ್ನು ಒಂದು ಮಾತು ಕೇಳಬೇಡವೇ ಎಂದು ವಾದಿಸುತ್ತಿದ್ದಾರೆ" ಎಂಬ ಉತ್ತರ ಬಂತು.

ಈ ವಾದವಿವಾದ ನಡೆಯುತ್ತಿದ್ದಾಗ ಡೇರೆಯ ಒಳಗೆ ಒಬ್ಬ ವ್ಯಕ್ತಿಯ ಆಗಮನವಾಯಿತು. ಅವನು ನರಿಯ ತುಪ್ಪಟದಿಂದ ಮಾಡಿದ್ದ ದೊಡ್ಡ ಆಕಾರದ ಟೋಪಿ ಧರಿಸಿದ್ದ. ಅವನನ್ನು ಕಂಡು ಎಲ್ಲರೂ ಮೌನವಾಗಿ ಮೇಲೆದ್ದರು. "ಇವರು ನಮ್ಮ ಮುಖ್ಯಸ್ಥರು!" ಎಂದು ದ್ವಿಭಾಷಿ ವಿವರಿಸಿದ. ಪಹೋಮ್ ಕೂಡಲೇ ತಾನು ತಂದಿದ್ದ ಉಡುಪುಗಳಲ್ಲಿ ಅತ್ಯಂತ ಬೆಲೆಬಾಳುವ ಗೌನ್ ಮತ್ತು ಐದು ಪೌಂಡ್ ತೂಕದಷ್ಟು ಚಹಾ ಪುಡಿ ಇದ್ದ ಪೆಟ್ಟಿಗೆಯನ್ನು ಮುಖ್ಯಸ್ಥನಿಗೆ ಉಡುಗೊರೆಯಾಗಿ ನೀಡಿದ. ಮುಖ್ಯಸ್ಥನು ಅವುಗಳನ್ನು ಸ್ವೀಕರಿಸಿ ತನಗೆ ನಿಗದಿಗೊಳಿಸಿದ ವಿಶಿಷ್ಟ ಸ್ಥಾನದಲ್ಲಿ ಆಸೀನನಾದ. ಉಳಿದವರು ಕೂಡಲೇ ಅವನಿಗೆ ನಡೆದದ್ದನ್ನು ವಿವರಿಸಿದರು. ಅವನು ಸಾವಕಾಶವಾಗಿ ಕೇಳಿಸಿಕೊಂಡು ಅನಂತರ ಸುಮ್ಮನಿರುವಂತೆ ತಲೆಯಿಂದ ಸನ್ನೆ ಮಾಡಿದ.  ರಷ್ಯನ್ ಭಾಷೆಯಲ್ಲಿ  ಪಹೋಮನನ್ನು ಉದ್ದೇಶಿಸಿ "ಹಾಗೇ ಆಗಲಿ; ನಿಮಗೆ ಇಷ್ಟ ಬಂದಷ್ಟು ಜಮೀನನ್ನು ನೀವು ಆರಿಸಿಕೊಳ್ಳಿ. ನಮ್ಮ ಹತ್ತಿರ ಜಮೀನು ಬೇಕಾದಷ್ಟಿದೆ" ಎಂದ. 

ಪಹೋಮ್ ಮನಸ್ಸಿನಲ್ಲೇ ಹೀಗೆ ಅಂದುಕೊಂಡ - "ನಿಮಗೆ ಬೇಕಾದಷ್ಟು ಜಮೀನು ತೆಗೆದುಕೊಳ್ಳಿ ಎಂದರೆ ಏನರ್ಥ? ಕಾಗದ ಪತ್ರಗಳು ಬೇಡವೇ? ಕರಾರು-ಸಹಿ ಬೇಡವೇ? ಇವತ್ತು ಕೊಟ್ಟೆ ಎಂದವರು ನಾಳೆ ಇಲ್ಲ ಎಂದುಬಿಟ್ಟರೆ?"

ಅವನು ಗಟ್ಟಿಯಾಗಿ ಹೀಗೆ ಹೇಳಿದ - "ನಿಮ್ಮ ವಿಶ್ವಾಸದ ಮಾತಿಗೆ ನಾನು ಋಣಿ. ನಿಮ್ಮ ಹತ್ತಿರ ನಿಜವಾಗಿ ಬಹಳಷ್ಟು ಜಮೀನಿದೆ. ಅದರಲ್ಲಿ ನನಗೆ ಬೇಕಾದದ್ದು ಅತ್ಯಲ್ಪ. ಆದರೆ ನನಗೆ ಸೇರುವ ಭೂಮಿಯನ್ನು ನನ್ನದೆಂದು  ಗುರುತು ಮಾಡಿಕೊಡಲು ಸಾಧ್ಯವೇ? ಸಾವು-ಹುಟ್ಟುಗಳು ಭಗವಂತನ ಕೈಯಲ್ಲಿದೆ. ಇವತ್ತು ನೀವು ವಿಶ್ವಾಸದಿಂದ ಕೊಟ್ಟಿದ್ದನ್ನು ನಾಳೆ ನಿಮ್ಮ ಮಕ್ಕಳು ಅಲ್ಲಗಳೆದರೆ?"

"ನೀವು ಹೇಳುವುದು ನಿಜ, ನಾವು ಜಮೀನನ್ನು ನಿಮಗೆ ಕರಾರು ಮಾಡಿಕೊಡುತ್ತೇವೆ."

"ಒಬ್ಬ ನೆಲಹಿಡುಕ ಇತ್ತೀಚಿಗೆ ಇಲ್ಲಿಗೆ ಬಂದಿದ್ದನೆಂದು ಕೇಳಿದ್ದೇನೆ. ನೀವು ಆತನಿಗೂ ಜಮೀನು ಬರೆದುಕೊಟ್ಟಿದ್ದೀರಂತೆ. ಅವನಿಗೆ ಸಹಿಯಾದ ಕಾಗದ ಪತ್ರಗಳನ್ನು ಕೊಡಲಾಯಿತಂತೆ. ನನಗೆ ಬೇಕಾದದ್ದೂ ಇಂಥ ಕಾಗದ-ಪತ್ರಗಳೇ"

ಅರ್ಥವಾಯಿತು ಎಂಬಂತೆ ಮುಖ್ಯಸ್ಥ ತಲೆಯಾಡಿಸಿದ. "ಹೌದು. ಅದೇನೂ ಕಷ್ಟವಲ್ಲ. ನಮ್ಮ ಲಿಪಿಕಾರ ಕಾಗದ ಸಿದ್ಧಪಡಿಸುತ್ತಾನೆ. ನಾವು ನಿಮ್ಮ ಜೊತೆ ಪಟ್ಟಣಕ್ಕೆ ಬಂದು ಒಪ್ಪಂದದ ಸಹಿ ಹಾಕಿ ಮೇಲೆ ಮುದ್ರೆ ಒತ್ತಿಸುತ್ತೇವೆ."

"ಜಮೀನಿಗೆ ಎಷ್ಟು ಬೆಲೆ ಎಂದು ಕೇಳಬಹುದೇ?"

"ನಮ್ಮ ಬೆಲೆ ಯಾವಾಗಲೂ ಒಂದೇ. ದಿನಕ್ಕೆ ಒಂದು ಸಾವಿರ ರೂಬಲ್ ಗಳು."

ಪಹೋಮ್ ಅರ್ಥವಾಗದೆ ಕಣ್ಣುಕಣ್ಣು ಬಿಟ್ಟ. "ದಿನಕ್ಕೆ? ಅದೆಂಥ ಅಳತೆ?"

"ನಮಗೆ ಬೇರೆ ಯಾವ ಅಳತೆಯೂ ಗೊತ್ತಿಲ್ಲ. ನೀವು ಒಂದು ದಿನದಲ್ಲಿ ಎಷ್ಟು ದೂರ ಕಾಲ್ನಡಿಗೆಯಲ್ಲಿ ಕ್ರಮಿಸಬಲ್ಲಿರೋ ಅಷ್ಟು ಭೂಮಿ ನಿಮ್ಮದು. ದಿನಕ್ಕೆ ಒಂದು ಸಾವಿರ ರೂಬಲ್ ಅದರ ಬೆಲೆ."

ಪಹೋಮ್ ಆಶ್ಚರ್ಯಚಕಿತನಾದ.  "ಒಂದು ದಿನದಲ್ಲಿ ಬೇಕಾದಷ್ಟು ನಡೆಯಬಹುದಲ್ಲವೇ?" ಎಂದು ಕೇಳಿದ. ಅದಕ್ಕೆ ಮುಖ್ಯಸ್ಥ ನಗುತ್ತಾ "ಖಂಡಿತ! ಅದಷ್ಟೂ ನೆಲ ನಿಮ್ಮದೇ! ಆದರೆ ನೀವು ಎಲ್ಲಿಂದ ಪ್ರಾರಂಭಿಸಿದಿರೋ ಅದೇ ಸ್ಥಾನಕ್ಕೆ ಸಂಜೆಯವರೆಗೆ ಮರಳಿ ಬಾರದಿದ್ದರೆ ನಿಮ್ಮ ಹಣ ಹೋದಂತೆ!" ಎಂದ.

"ನಾನು ಎಲ್ಲೆಲ್ಲಿ ನಡೆದಾಡಿದೆ ಎಂಬುದನ್ನು ನಾನು ಹೇಗೆ ಲೆಕ್ಕ ಇಡುವುದು?"

"ನೀವು ಎಲ್ಲಿಂದ ಬೇಕಾದರೂ ಪ್ರಾರಂಭಿಸಬಹುದು. ನಮ್ಮ ಕಡೆಯ ಆಳೊಬ್ಬ ನಿಮ್ಮ ಜೊತೆ ಬಂದು ನೀವು ಪ್ರಾರಂಭಿಸಿದ ಜಾಗದಲ್ಲಿ ಕಾಯುತ್ತಾನೆ. ನಿಮ್ಮ ಹತ್ತಿರ ಒಂದು ಸನಿಕೆ ಇರುತ್ತದೆ - ಅದರಿಂದ ನೀವು ನಿಮಗೆ ಇಷ್ಟ ಬಂದ ಕಡೆ ಗುರುತು ಹಾಕುತ್ತಾ ಹೋಗಬೇಕು.  ಎಲ್ಲಿ ದಿಕ್ಕು ಬದಲಾಯಿಸುತ್ತೀರೋ ಅಲ್ಲಿ ಒಂದು ಗುಂಡಿ ತೋಡಬೇಕು.  ಈ ಗುರುತುಗಳನ್ನು ಅನಂತರ ನಾವು ಜೋಡಿಸಿ ಗೆರೆ ಹಾಕುತ್ತೇವೆ.  ಎಷ್ಟು ದೊಡ್ಡ ಸುತ್ತು ಸುತ್ತುತ್ತೀರೋ ಅದು ನಿಮಗೆ ಬಿಟ್ಟಿದ್ದು. ಆದರೆ ಸೂರ್ಯಾಸ್ತಕ್ಕೆ ಮುಂಚೆ ನೀವು ನಡಿಗೆ ಪ್ರಾರಂಭಿಸಿದ ಸ್ಥಳಕ್ಕೆ ಬಂದು ಸೇರಬೇಕು ಎನ್ನುವುದು ನಮ್ಮ ಷರತ್ತು. ನೀವು ಸುತ್ತಿದ ವೃತ್ತದ ಒಳಗಿನ ಭೂಮಿಯೆಲ್ಲಾ ನಿಮ್ಮದು."

ಪಹೋಮನಿಗೆ ಪರಮಾನಂದವಾಯಿತು. ಮರುದಿನ ಮುಂಜಾನೆಯೇ ಪ್ರಾರಂಭಿಸುವುದು ಎಂದು ಮಾತುಕತೆಯಾಯಿತು. ಇದಾದ ನಂತರ ಅವರು ಸ್ವಲ್ಪ ಹೊತ್ತು ಹರಟೆ ಹೊಡೆದರು. ಮತ್ತಷ್ಟು ಕ್ಯುಮಿಸ್ ಸೇವಿಸಿದರು. ಕುರಿಯ ಮಾಂಸ ಭಕ್ಷಿಸಿದರು. ಚಹಾ ಕುಡಿದರು. ಅಷ್ಟು ಹೊತ್ತಿಗೆ ರಾತ್ರಿಯಾಯಿತು.  ಪಹೋಮ್ ಗೆ ಹಕ್ಕಿಗಳ ಪುಕ್ಕದಿಂದ ತುಂಬಿದ ಹಾಸಿಗೆಯನ್ನು ಹಾಸಿಕೊಟ್ಟರು. ಮರುದಿನ ಬೆಳಗಾಗೆದ್ದು ಡೇರೆಯ ಮುಂದೆ ಸಂಧಿಸಿ ನಿರ್ಧರಿಸಿದ ಸ್ಥಳಕ್ಕೆ ಕುದುರೆಯ ಮೇಲೆ ಹೋಗುವುದು ಎಂದು ತಿಳಿಸಿ ಬಷ್ಕಿರ್ ಮಂದಿ ಶುಭರಾತ್ರಿ ಕೋರಿದರು.

(ಮುಂದಿನ ಭಾಗವನ್ನು ಇಲ್ಲಿ ಓದಿ)

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)