ಮನುಷ್ಯನಿಗೆ ಎಷ್ಟು ಜಮೀನು ಬೇಕು? - 3



ಮೂಲ ಕಥೆ - ಲಿಯೋ ಟಾಲ್ಸ್ ಟಾಯ್ 
ಕನ್ನಡ ಅನುವಾದ - ಸಿ ಪಿ ರವಿಕುಮಾರ್

(ಎರಡನೇ ಭಾಗವನ್ನು ಇಲ್ಲಿ ಓದಿ)

ಭಾಗ - ೩

ಹೀಗೆ ಪಹೋಮ್ ಸಂತೃಪ್ತಿಯಿಂದ ಜೀವನ ಸಾಗಿಸುತ್ತಿದ್ದ. ನೆರೆಯ ಕೆಲವು ರೈತರು ಅವನಿಗೆ ಸೇರಿದ ಜಮೀನನ್ನು ಪ್ರವೇಶಿಸದೇ ಇದ್ದಿದ್ದರೆ ಅವನ ತೃಪ್ತಿಕರ ಜೀವನಕ್ಕೆ ಬಾಧೆ ಉಂಟಾಗುತ್ತಿರಲಿಲ್ಲ. ಅವನು ಅವರಿಗೆ ಒಳ್ಳೆಯ ಮಾತಿನಲ್ಲಿ ಹೇಳಿದ. ಪ್ರಯೋಜನವಾಗಲಿಲ್ಲ. ಅವರ ಜಾನುವಾರುಗಳು ಅವನ ಜೋಳದ ಹೊಲಕ್ಕೆ, ಅವನ ಹುಲ್ಲುಗಾವಲಿಗೆ ನುಗ್ಗಿ ಬರುತ್ತಿದ್ದವು. ಅವುಗಳನ್ನು ಓಡಿಸಿ ಓಡಿಸಿ ಇವನಿಗೆ ಸಾಕಾಯಿತು. ಪಶುಗಳು ಮಾಡಿದ ಅಪರಾಧಕ್ಕೆ ಅವನೆಂದೂ ಅವುಗಳ ಒಡೆಯರ ಮೇಲೆ ಆಪಾದನೆ ಮಾಡಲಿಲ್ಲ. ಆದರೆ ಕೊನೆಗೆ ಅವನ ತಾಳ್ಮೆಯ ಕಟ್ಟೆಯೂ ಒಡೆಯಿತು. ಜಿಲ್ಲೆಯ ಕೋರ್ಟಿಗೆ ಹೋಗಿ ದೂರು ಕೊಟ್ಟ. ರೈತರ ಬಳಿ ಜಮೀನು ಇದ್ದಿದ್ದರೆ ಅವರು ಪಶುಗಳನ್ನು ಹೀಗೆ ಅಲೆದಾದಲು ಬಿಡುತ್ತಿರಲಿಲ್ಲ ಎಂದು ಅವನಿಗೆ ಗೊತ್ತು. "ಆದರೆ ನಾನು ಎಷ್ಟು ದಿವಸ ಸುಮ್ಮನಿರಲಿ? ಅವರಿಗೆ ಪಾಠ ಕಲಿಸಲೇ ಬೇಕು" ಎಂದು ತನಗೆ ತಾನೇ ಸಮಾಧಾನ ಮಾಡಿಕೊಂಡ. 

ಕೆಲವರಿಗೆ ಛೀಮಾರಿ ಹಾಕಿ ಬುದ್ಧಿ ಹೇಳಲಾಯಿತು. ಕೆಲವರಿಗೆ ದಂಡ ವಿಧಿಸಲಾಯಿತು. ಪಹೋಮನ ನೆರೆಯವರಿಗೆ ಈಗ ಅವನನ್ನು ಕಂಡರೆ ದ್ವೇಷ ಉಂಟಾಯಿತು. ಕೆಲವು ಸಲ ಅವರು ಬೇಕೆಂದೇ ತಮ್ಮ ಪಶುಗಳನ್ನು ಅವನ ಹೊಲಕ್ಕೆ ಅಟ್ಟುತ್ತಿದ್ದರು. ಒಬ್ಬ ರೈತ ಒಂದು ರಾತ್ರಿ ಪಹೋಮನ ಹೊಲಕ್ಕೆ ಹೊಕ್ಕು ಐದು ನಿಂಬೆಯ ಮರಗಳನ್ನು ಕಡಿದು ಅವುಗಳ ತೊಗಟೆಯನ್ನು ತೆಗೆದುಕೊಂಡು ಹೋದ. ಒಂದು ದಿನ ಪಹೋಮ್ ತನ್ನ ಜಮೀನಿನಲ್ಲಿದ್ದ ಕಾಡಿನ ಮೂಲಕ ನಡೆದು ಹೋಗುತ್ತಿದ್ದಾಗ ಬೆಳ್ಳಗಿನದೇನೋ ಕಾಣಿಸಿತು. ಹತ್ತಿರ ಹೋಗಿ ನೋಡಿದಾಗ ತೊಗಟೆ ಇಲ್ಲದ ಮರದ ಕಾಂಡಗಳು ನೆಲದ ಮೇಲೆ ಬಿದ್ದಿರುವುದು ಕಾಣಿಸಿತು. ಪಕ್ಕದಲ್ಲಿ ಈ ಮರಗಳ ಬೊಡ್ಡೆಗಳಿದ್ದವು. ಪಹೋಮನ ರಕ್ತ ಕುದಿಯಿತು.  "ಅಲ್ಲೊಂದು ಇಲ್ಲೊಂದು ಮರ ಕಡಿದಿದ್ದರೆ ಹಾಳಾಗಿ ಹೋಗಲಿ ಅಂತ ಸುಮ್ಮನಾಗಬಹುದಿತ್ತು.  ಆದರೆ ಮೂರ್ಖ ಇಡೀ ಮರಗಳ ಗುಂಪನ್ನೇ ನಾಶ ಮಾಡಿಹೋಗಿದ್ದಾನೆ! ಅವನು ಯಾರೆಂದು ಗೊತ್ತಾದರೆ ಅವನಿಗೆ ಗತಿ ಬಿಡಿಸುತ್ತೀನಿ," ಎಂದು ಹಲ್ಲು ಕಡಿದ.  

ಈ ಕೆಲಸ ಮಾಡಿದ್ದು ಯಾರಿರಬಹುದು ಎಂದು ಅವನು ತುಂಬಾ ಯೋಚಿಸಿದ. ಸೈಮನ್ ಅಲ್ಲದೆ ಬೇರಾರಿಗೂ ಸಾಧ್ಯವಿಲ್ಲ ಎಂದು ಅವನಿಗೆ ಅನುಮಾನವಾಯಿತು.   ನೇರವಾಗಿ ಸೈಮನ್ ಮನೆಗೆ ಹೋಗಿ ವಿಚಾರಿಸಿದ; ಇದರಿಂದ ದೊಡ್ಡ ಜಗಳವಾಯಿತೇ ಹೊರತು ಬೇರೇನೂ ಉಪಯೋಗವಾಗಲಿಲ್ಲ.  ನ್ಯಾಯಾಲಯಕ್ಕೆ ಹೋಗಿ ಸೈಮನ್ ವಿರುದ್ಧ ದೂರು ಕೊಟ್ಟು ಬಂದ. ಸೈಮನ್ ಗೆ ನ್ಯಾಯಾಲಯದಿಂದ ಕರೆ ಬಂತು.  ಎಷ್ಟೇ ವಿಚಾರಣೆ ನಡೆದರೂ ಅಪವಾದವನ್ನು ಸಿದ್ಧ ಪಡಿಸಲು ಸಾಧ್ಯವಾಗದೆ ಪುರಾವೆಗಳಿಲ್ಲ ಎಂಬ ಕಾರಣ ಕೊಟ್ಟು ಸೈಮನನನ್ನು ಬಿಡುಗಡೆ ಮಾಡಿದರು. ಪಹೋಮ್ ಗೆ ಕೋಪ ಬಂತು. ಅವನು ನ್ಯಾಯಾಧೀಶರ ಮೇಲೆ ಕೂಗಾಡಿದ. "ಅವನು ಕಳ್ಳ ಎಂದು ಗೊತ್ತಿದ್ದರೂ ನೀವು ಅವನನ್ನು ಬಿಡುಗಡೆ ಮಾಡುತ್ತಿದ್ದೀರಿ! ಅವನು ನಿಮಗೆ ಚೆನ್ನಾಗಿಯೇ ಬೆಣ್ಣೆ ತಿನ್ನಿಸಿರಬೇಕು. ನಿಮಗೆ ನಿಯತ್ತಿದ್ದರೆ ತಾನೇ ಕಳ್ಳರನ್ನು ಬಂಧಿಸಲು ನಿಮಗೆ ಧೈರ್ಯ ಬರುವುದು?" ಎಂದು ಬಡಬಡಿಸಿದ.  ಮನೆಗೆ ಹಿಂದಿರುಗಿದ ಮೇಲೂ ಅವನು ಕೂಗಾಡುತ್ತಲೇ ಇದ್ದ. ಅಕ್ಕಪಕ್ಕದವರ ಜೊತೆ ಜಗಳ ಸಾಮಾನ್ಯವಾಯಿತು. ಅವನ ಮನೆಗೆ ಬೆಂಕಿ ಹಚ್ಚುವ ಬೆದರಿಕೆಯನ್ನು ಯಾರೋ ಹಾಕಿದರು. ಹೀಗೆ ಜಮೀನುದಾರನಾಗಿ ನಲವತ್ತು ಎಕರೆಯ ಮಾಲೀಕನಾಗಿದ್ದರೂ ಸಮಾಜದಲ್ಲಿ ಅವನ ಸ್ಥಾನ ಹಿಂದಿಗಿಂತ ಕೆಳಗೆ ಕುಸಿಯಿತು. 

ಜನ ತಮ್ಮ ಹಳ್ಳಿ ಬಿಟ್ಟು ಬೇರೆ ಕಡೆ ವಲಸೆ ಹೋಗುತ್ತಿದ್ದಾರೆ ಎಂಬ ವರ್ತಮಾನ ಅವನಿಗೆ ಸಿಕ್ಕಿತು. "ಅವರು ಹೋದರೆ ಹೋಗಲಿ, ಒಂದಷ್ಟು ಜನ ಹಳ್ಳಿ ಬಿಟ್ಟು ಹೋದರೆ ಉಳಿದವರಿಗೆ ಬದುಕಲು ಇನ್ನಷ್ಟು ಸ್ಥಳ ಸಿಕ್ಕುತ್ತದೆ. ಬಿಟ್ಟು ಹೋದವರ ಜಮೀನು ನಾನೇ ಖರೀದಿಸುತ್ತೇನೆ. ಈಗ ನನಗಿರುವ ಜಮೀನು ಯಾವ ಮೂಲೆಗೂ ಸಾಲದು" ಎಂದುಕೊಂಡ. 

ಒಂದು ದಿನ ಪಹೋಮ್ ತನ್ನ ಮನೆಯಲ್ಲಿ ಕುಳಿತಿದ್ದಾಗ ಹಳ್ಳಿಯ ಮೂಲಕ ಹಾದುಹೋಗುತ್ತಿದ್ದ ಒಬ್ಬ ಪರವೂರಿನ ರೈತ ಅವನ ಮನೆಗೆ ಬಂದ. ಅವನಿಗೆ ರಾತ್ರಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಯಿತು. ಅವನ ಊಟಕ್ಕೆ ಸಿದ್ಧತೆ ನಡೆಯಿತು. ನೀವು ಯಾವ ಊರಿನವರು, ಇಲ್ಲಿಗೆ ಹೇಗೆ ಬರೋಣವಾಯಿತು ಎಂದು ಪಹೋಮ್ ವಿಚಾರಿಸಿದ. ತಾನು ವೋಲ್ಗಾ ನದಿಯ ಆಚೆಗಿನ ಊರಿನಲ್ಲಿ ಕೆಲಸ ಮಾಡುತ್ತೇನೆಂದು ಅತಿಥಿ ತಿಳಿಸಿದ. ಅಲ್ಲಿ ಈಗ ಬೇರೆ ಬೇರೆ ಸ್ಥಳಗಳಿಂದ ಜನರು ಬಂದು ನೆಲಸುತ್ತಿದ್ದಾರೆ ಎಂದು ಸುದ್ದಿ ಹೇಳಿದ. ತನ್ನ ಹಳ್ಳಿಯ ಕೆಲವರು ಈಗಾಗಲೇ ಅಲ್ಲಿಯ ಸಮಾಜವನ್ನು ಸೇರಿಕೊಂಡಿದ್ದಾರೆ, ಹಾಗೆ ಸೇರಿಕೊಂಡವರಿಗೆ ತಲಾ ಇಪ್ಪತ್ತೈದು ಎಕರೆ ಜಮೀನು ಕೊಡಲಾಗಿದೆ ಎಂದು ತಿಳಿಸಿದ. ಅಲ್ಲಿಯ ಜಮೀನು ಎಷ್ಟು ಫಲವತ್ತಾಗಿದೆ ಗೊತ್ತೇ? ರೈ ಬೆಳೆ ಬಿತ್ತಿದರೆ ಕುದುರೆಗಿಂತ ಎತ್ತರದ ಪೈರು! ಪೈರನ್ನು ಕಡಿದಾಗ ಕುಡುಗೋಲಿನ ಐದು ಏಟಿಗೆ ಒಂದು ಪಲ್ಲ! ಬರಿಗೈಯಲ್ಲಿ ಬಂದ ಒಬ್ಬ ಹಳ್ಳಿಗ ಅಲ್ಲಿ ನೆಲಸಿದ ಮೇಲೆ ಆರು ಕುದುರೆ ಮತ್ತು ಎರಡು ಹಸುಗಳ ಮಾಲೀಕನಾಗಿದ್ದಾನೆ. 

ಇದನ್ನು ಕೇಳುತ್ತಾ ಪಹೋಮನ ಹೃದಯದಲ್ಲಿ ಲಾಲಸೆ ಹೊತ್ತಿ ಉರಿಯಿತು. "ಇಂಥ ಅವಕಾಶ ಮುಂದಿರುವಾಗ ನಾನು ಯಾಕೆ ಈ ಕ್ಷುದ್ರವಾದ ಹಳ್ಳದಲ್ಲಿ ಬಿದ್ದಿರಬೇಕು? ನಾನು ಇಲ್ಲಿರುವ ನನ್ನ ಮನೆ-ಜಮೀನು ಮಾರಿ ಅಲ್ಲಿಗೆ ಹೋಗಿ ಹೊಸ ಜೀವನ ಪ್ರಾರಂಭಿಸುತ್ತೇನೆ. ಈ ಜನನಿಬಿಡ ಹಳ್ಳಿಯಲ್ಲಿ ಯಾವಾಗಲೂ ಜಗಳ ಇದ್ದಿದ್ದೇ! ಒಮ್ಮೆ ನಾನೇ ಆ ಜಾಗಕ್ಕೆ ಹೋಗಿ ಎಲ್ಲವನ್ನೂ ನೋಡಿಕೊಂಡು ಬರುವುದು ಮೇಲು," ಎಂದು ಅವನ ಆಲೋಚನೆ ಸಾಗಿತು. 

ಬೇಸಗೆ ಸಮೀಪಿಸುತ್ತಿದ್ದಂತೆ ಒಂದು ದಿನ ಅವನು ಪ್ರಯಾಣಕ್ಕೆ ಸಿದ್ಧನಾಗಿ ಹೊರಟ.  ವೋಲ್ಗಾ ನದಿಯ ಮೇಲೆ ಉಗಿದೋಣಿಯಲ್ಲಿ ಕುಳಿತು ಸಮಾರಾ ಎಂಬಲ್ಲಿಗೆ ಬಂದಿಳಿದ. ಅಲ್ಲಿಂದ ಮುನ್ನೂರು ಮೈಲಿ ದೂರ ಕಾಲ್ನಡಿಗೆಯಲ್ಲಿ ಕ್ರಮಿಸಿ ತನ್ನ ಅತಿಥಿ ತಿಳಿಸಿದ್ದ ಊರಿಗೆ ಬಂದ. ಅತಿಥಿ ಹೇಳಿದ್ದು ನಿಜವೇ ಆಗಿತ್ತು. ಇಲ್ಲಿ ಎಲ್ಲಾ ರೈತರ ಬಳಿಯೂ ಸಾಕಷ್ಟು ಜಮೀನಿತ್ತು. ಧರ್ಮಕ್ಕೆ ಕೊಟ್ಟ ಇಪ್ಪತ್ತೈದು ಎಕರೆ ಜಮೀನಲ್ಲದೆ ತಮ್ಮ ಹಣದಿಂದ ಖರೀದಿಸಿದ ಹೆಚ್ಚುವರಿ ಭೂಮಿಯನ್ನು ರೈತರು ಹೊಂದಿದ್ದರು. ಭೂಮಿಯ ಬೆಲೆಯೋ! ಒಂದು ಎಕರೆಗೆ ಕೇವಲ ಐವತ್ತು ಸೆಂಟುಗಳು! ಯಾರು ಎಷ್ಟು ಬೇಕಾದರೂ ಖರೀದಿಸಬಹುದು; ಯಾವ ನಿರ್ಬಂಧವೂ ಇಲ್ಲ. 

ಇದೆಲ್ಲಾ ವಿಚಾರಿಸಿಕೊಂಡು ಪಹೋಮ್ ಮನೆಗೆ ಮರಳಿದಾಗ ಆಗಲೇ ಶರದೃತು ಕಾಲಿಟ್ಟಿತ್ತು.  ಅವನು ತಡ ಮಾಡದೆ ಮನೆ ಮತ್ತು ಮನೆಯ ಸಾಮಾನುಗಳನ್ನು ಮಾರತೊಡಗಿದ. ಜಮೀನು ಮಾರಿದ್ದಕ್ಕೆ ಒಳ್ಳೆಯ ಲಾಭ ಬಂತು. ಮಾರಾಟ ಮುಗಿದ ನಂತರ ಊರಿನ ಸಮಾಜದ ಸದಸ್ಯತ್ವದಿಂದ ತನ್ನ ಹೆಸರನ್ನು ರದ್ದುಗೊಳಿಸಿ ವಸಂತಋತು ಆಗಮಿಸುತ್ತಿದ್ದಂತೆ ತನ್ನ ಕುಟುಂಬವನ್ನು ಕರೆದುಕೊಂಡು ಹೊಸ ಜೀವನವನ್ನು ಹುಡುಕಿಕೊಂಡು ವಲಸೆ ಹೊರಟ. 

(ಮುಂದಿನ ಭಾಗವನ್ನು ಇಲ್ಲಿ ಓದಿ)

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)