ಕಡಿಯಲು ತಂದ ಕುರಿ - ಭಾಗ 4
ಕದಿಯಲು ತಂದ ಕುರಿ - ಭಾಗ ೪ (ಮೂರನೇ ಭಾಗವನ್ನು ಇಲ್ಲಿ ಓದಿ ) ಮೂಲ ಇಂಗ್ಲಿಷ್ ಕತೆ - ರೊಆಲ್ಡ್ ಡಾಲ್ ಕನ್ನಡ ಅನುವಾದ - ಸಿ ಪಿ ರವಿಕುಮಾರ್ ಕೆ ಲವೇ ನಿಮಿಷಗಳಲ್ಲಿ ಒಂದು ಕಾರು ಅವಳ ಮನೆಯ ಮುಂದೆ ಬಂದು ನಿಂತಿತು. ಅವಳು ಬಾಗಿಲು ತೆರೆದಾಗ ಇಬ್ಬರು ಸಮವಸ್ತ್ರಧಾರಿ ಪೊಲೀಸರು ಒಳಗೆ ಬಂದರು. ಅವರಿಬ್ಬರನ್ನೂ ಅವಳು ಬಲ್ಲಳು. ಹೆಚ್ಚೂ ಕಡಿಮೆ ಆ ತಾಲ್ಲೂಕಿನ ಎಲ್ಲಾ ಪೊಲೀಸರೂ ಅವಳಿಗೆ ಪರಿಚಿತರು. ಅವರು ಒಳಗೆ ಬರುತ್ತಲೇ ಅವಳು ಕುರ್ಚಿಯಲ್ಲಿ ಕುಸಿದು ಕುಳಿತಳು. ಅವರಿಬ್ಬರೂ ಹೆಣದ ಮುಂದೆ ಬಾಗಿ ನೋಡುತ್ತಿದ್ದರು. ಕೆಲವು ಕ್ಷಣಗಳ ನಂತರ ಅವಳೂ ಅಲ್ಲಿಗೆ ಬಂದಳು. "ಸತ್ತುಹೋದನೇ?" ಎಂದು ಅವಳು ಕೂಗಿಕೊಂಡಳು. "ನಿಸ್ಸಂದೇಹವಾಗಿ. ಇಲ್ಲಿ ಏನಾಯಿತು?" ಅವಳು ಕತೆಯನ್ನು ಒಪ್ಪಿಸಿದಳು. ತಾನು ಕಿರಾಣಿ ಅಂಗಡಿಗೆ ಹೋಗಿದ್ದು, ಅಲ್ಲಿಂದ ಬಂದಾಗ ಗಂಡನ ದೇಹವನ್ನು ಈ ಸ್ಥಿತಿಯಲ್ಲಿ ನೋಡಿದ್ದು ಇದೆಲ್ಲವನ್ನೂ ಹೇಳುವಾಗ ಅವಳು ಅಳುತ್ತಿದ್ದಳು. ಅವಳು ಮಾತಾಡುತ್ತಿರುವಾಗಲೇ ನೂನನ್ ಎಂಬ ಒಬ್ಬ ಪೋಲೀಸ್ ಅಧಿಕಾರಿ ಪ್ಯಾಟ್ರಿಕ್ ನ ತಲೆಯ ಕೆಳಗೆ ಮಡುಗಟ್ಟಿದ ರಕ್ತವನ್ನು ಗಮನಿಸಿ ಅದನ್ನು ತನ್ನ ಸಹೋದ್ಯೋಗಿ ಒಮೇಲಿಗೆ ತೋರಿಸಿದ. ಒಮೇಲಿ ತಕ್ಷಣ ಮೇಲೆದ್ದು ಟೆಲಿಫೋನ್ ಕಡೆ ಧಾವಿಸಿದ. ಸ್ವಲ್ಪ ಹೊತ್ತಿನಲ್ಲೇ ಇನ್ನಷ್ಟು ಜನ ಪೊಲೀಸರು ಅವಳ ಮನೆಗೆ ಬಂದರು. ಮೊದಲು ಒಬ್ಬ ಡಾಕ್ಟರ್. ಅನಂತರ ಇಬ್ಬರು ಪತ್ತೇದಾರರು. ಅವರಲ...