ಶ್ರೀಮಂತ ರೂಪದರ್ಶಿ -೨



ಮೂಲ ಇಂಗ್ಲಿಷ್ ಕತೆ - ಆಸ್ಕರ್ ವೈಲ್ಡ್
ಕನ್ನಡ ಅನುವಾದ - ಸಿ ಪಿ ರವಿಕುಮಾರ್


(ಮೊದಲ ಭಾಗವನ್ನು ಇಲ್ಲಿ ಓದಿ)
ಭಾಗ-೨

Photo of a Man Holding a Charcoal and White Cardboard
ಹ್ಯೂಯಿ ಒಳಗೆ ಬಂದಾಗ ಅವನ ಗೆಳೆಯ ಟ್ರೆವರ್ ತಾನು ಆಗತಾನೇ ಪೂರೈಸಿದ್ದ ಒಬ್ಬ ಭಿಕ್ಷುಕನ ಚಿತ್ರಕ್ಕೆ ಕುಂಚದಿಂದ ಕೊನೆಯ ಗೆರೆಗಳನ್ನು ಬರೆಯುತ್ತಿದ್ದ.  ನಿಜಗಾತ್ರದ ಚಿತ್ರ ಅದ್ಭುತವಾಗಿ ಮೂಡಿ ಬಂದಿತ್ತು.  ಚಿತ್ರಕ್ಕೆ ರೂಪದರ್ಶಿಯಾದ ಭಿಕ್ಷುಕ ಸ್ಟೂಡಿಯೋದಲ್ಲಿ ಒಂದು ಮೂಲೆಯಲ್ಲಿ ಸ್ವಲ್ಪ ಎತ್ತರವಾದ ಪೀಠದ ಮೇಲೆ ನಿಂತಿದ್ದ. ಸುಕ್ಕುಗಟ್ಟಿದ ಅವನ ಮುಖದಲ್ಲಿ ನೋಡಿದರೆ ಅಯ್ಯೋ ಎನ್ನಿಸುವ ದೈನ್ಯಭಾವವಿತ್ತು.  ಅವನು ಧರಿಸಿದ್ದ ಕೋಟು ಎಲ್ಲಾ ಕಡೆ ಹರಿದು ಜೂಲುಜೂಲಾಗಿತ್ತು. ಅವನ ಬೂಟುಗಳಿಗೆ ಹಲವಾರು ಕಡೆ ತೇಪೆ ಹಾಕಿತ್ತು.  ಒಂದು ಕೈಯಲ್ಲಿ ಒಂದು ಮರದ ಕೋಲು ಹಿಡಿದು ಬಗ್ಗಿ ನಿಂತಿದ್ದ. ಮುಂದೆ ಚಾಚಿದ ಇನ್ನೊಂದು ಕೈಯಲ್ಲಿ ಟೋಪಿ ಹಿಡಿದು ಭಿಕ್ಷೆ ಬೇಡಲು ಸನ್ನದ್ಧನಾಗಿ ನಿಂತಿದ್ದ. 
"ಅಬ್ಬಾ! ಎಂಥ ಅದ್ಭುತವಾದ ರೂಪದರ್ಶಿಯನ್ನು ಹಿಡಿದು ತಂದಿದ್ದೀಯಾ!" ಎಂದು ಹ್ಯೂಯಿ ಸಿಳ್ಳೆ ಹಾಕುತ್ತಾ ಸ್ನೇಹಿತನ ಕೈ ಕುಲುಕಿದ. 
"ಅದ್ಭುತ ರೂಪದರ್ಶಿ ಅಂದೆಯಾ? ನಿಜವೇ! ಇವನಂತಹ ಭಿಕ್ಷುಕರು ಹುಡುಕಿದರೂ ಸಿಕ್ಕೋದಿಲ್ಲ! ನನ್ನ ಅದೃಷ್ಟ ಚೆನ್ನಾಗಿತ್ತು.  ರೆಂಮ್ಬ್ರಾಂಗೆ ಇವನು ಸಿಕ್ಕಿದ್ದರೆ ಎಂಥ ಅದ್ಭುತ ಕೆತ್ತನೆ ಮಾಡಿರುತ್ತಿದ್ದನೋ!" ಎಂದು ಟ್ರೆವರ್ ದೊಡ್ಡ ದನಿಯಲ್ಲಿ ಉತ್ತರಿಸಿದ. 
"ಅಯ್ಯೋ ಪಾಪ! ಅವನನ್ನು ನೋಡಿದರೆ ಕರುಳು ಕಿವಿಚಿದ ಹಾಗಾಗುತ್ತೆ. ಆದರೆ ನಿನ್ನಂಥ ಕಲಾವಿದರಿಗೆ ಅವನ ದೈನ್ಯ ತುಂಬಿದ ಮುಖದಿಂದಲೇ ಅದೃಷ್ಟ ಖುಲಾಯಿಸುತ್ತೇನೋ!"
"ಮತ್ತಿನ್ನೇನು! ಸಂತೋಷವಾಗಿರೋ ಭಿಕ್ಷುಕನ ಚಿತ್ರ ಯಾರಿಗೆ ಬೇಕಾಗಿದೆ ಹೇಳು!"
"ನಿನ್ನ ರೂಪದರ್ಶಿಗೆ ನೀನು ಎಷ್ಟು ಹಣ ಕೊಡುತ್ತೀಯಾ?" ಹ್ಯೂಯಿ ಅಲ್ಲೇ ಇದ್ದ ದಿವಾನ್ ಮೇಲೆ ಆಸೀನನಾಗಿ ಕೇಳಿದ. 
"ಒಂದು ಗಂಟೆಗೆ ಒಂದು ಷಿಲಿಂಗ್."
"ಈ ಚಿತ್ರ ಎಷ್ಟಕ್ಕೆ ಹೋಗುತ್ತೆ?"
"ಎರಡು ಸಾವಿರಕ್ಕೆ ಹೋಗಬಹುದು."
"ಎರಡು ಸಾವಿರ ಪೌಂಡ್ ಗಳೇ?"
"ಗಿನಿಗಳು. ಕಲಾವಿದರಿಗೆ, ಕವಿಗಳಿಗೆ, ವೈದ್ಯರಿಗೆ ಯಾವಾಗಲೂ ಗಿನಿಗಳಲ್ಲೇ ಸಂಭಾವನೆ ಕೊಡುವುದು!"
"ನನ್ನ ಪ್ರಕಾರ ನೀನು ಮಾಡೆಲ್ ಗೆ ಅದರಲ್ಲಿ ಒಂದು ಭಾಗ ಕೊಡಬೇಕಾದದ್ದು ನ್ಯಾಯ! ನೀನು ಎಷ್ಟು ಕಷ್ಟ ಪಟ್ಟಿದ್ದೀಯೋ ಅವರೂ ಅಷ್ಟೇ ಕಷ್ಟ ಪಟ್ಟಿಲ್ಲವೇ?" ಎಂದು ಹ್ಯೂಯಿ ನಗುತ್ತಾ ಪ್ರಶ್ನಿಸಿದ. 
"ಚೆನ್ನಾಗಿ ಹೇಳಿದೆ! ಇಡೀ ದಿನ ಬಣ್ಣದಲ್ಲಿ ಹೊರಳಾಡೋದು ನಾನು. ಇಡೀ ದಿನ ನಿಂತುಕೊಂಡು ಬೆವರು ಸುರಿಸೋದು ನಾನು! ನಿನಗೇನು, ಮಾತಾಡೋದಕ್ಕೆ! ಹ್ಯೂಯಿ, ಇಲ್ಲಿ ಕೇಳು, ಒಂದೊಂದು ಸಲ ಈ ಕಲಾವಿದನ ಕೆಲಸಕ್ಕೂ ಸುಣ್ಣ ಹೊಡೆಯೋ ಕೆಲಸಕ್ಕೂ ಏನು ವ್ಯತ್ಯಾಸ ಅನ್ನಿಸಿಬಿಡುತ್ತೆ! ಇಲ್ಲಿ ನೋಡು, ನಾನು ಈಗ ಕೆಲಸದಲ್ಲಿದೀನಿ. ನನ್ನನ್ನು ಮಾತಿಗೆ ಎಳೀಬೇಡ. ತಣ್ಣಗೆ ಕೂತುಕೊಂಡು ಒಂದು ಸಿಗರೆಟ್ ಸೇದು." 
* * *
ಸ್ವಲ್ಪ ಹೊತ್ತಿನ ನಂತರ ಒಬ್ಬ ಸೇವಕ ಬಂದು ಚಿತ್ರಕ್ಕೆ ಕಟ್ಟು ಹಾಕುವವನು ಬಂದಿದ್ದಾನೆಂದು ಟ್ರೆವರ್ ಗೆ ವರದಿ ಮಾಡಿದ. 
"ಹ್ಯೂಯಿ, ಎಲ್ಲೂ ಮಾಯವಾಗಿ ಹೋಗಬೇಡ - ನಾನು ಈಗ ಬರ್ತೀನಿ" ಎಂದು ಟ್ರೆವರ್ ಕೋಣೆಯಿಂದ ಆಚೆ ಹೋದ.
ವೃದ್ಧ ಭಿಕ್ಷುಕ ಅವಕಾಶ ಸಿಕ್ಕಿದ್ದೇ ತಡ, ಅಲ್ಲೇ ಇದ್ದ ಮರದ ಬೆಂಚಿನ ಮೇಲೆ ಉಸ್ ಎಂದು ಕುಸಿದ. ಅವನ ಮುಖದಲ್ಲಿದ್ದ ಮ್ಲಾನತೆ, ಅವನ ದಯಾಮಯ ಸ್ಥಿತಿ ಇವು ಹ್ಯೂಯಿಯ ಮನಸ್ಸನ್ನು ತಟ್ಟಿದವು. ಅವನು ತನ್ನ ಷರಾಯಿ ಜೋಬಿನಲ್ಲಿ ತಡಕಾಡಿದ. ಒಂದು ಸಾವರಿನ್ ಮತ್ತು ಒಂದಿಷ್ಟು ತಾಮ್ರದ ಪುಡಿಗಾಸಿನ ಹೊರತು ಅಲ್ಲಿ ಬೇರೇನೂ ದಕ್ಕಲಿಲ್ಲ. "ಪಾಪ, ಇದರ ಆವಶ್ಯಕತೆ ನನಗಿಂತ ಹೆಚ್ಚು ಅವನಿಗಿದೆ! ಇದನ್ನು ಇವನಿಗೆ ಕೊಟ್ಟರೆ ನಾನು ಎರಡು ವಾರ ಕೋಚ್ ಗಾಡಿಯಲ್ಲಿ ಕೂಡುವ ಹಾಗಿಲ್ಲ; ನಡೆಯುವುದೇ ಗತಿ!" ಹೀಗೆನ್ನುತ್ತಾ ಅವನು ಭಿಕ್ಷುಕನ ಬಳಿಗೆ ಹೋಗಿ ಅವನ ಕೈಗೆ ಸಾವರಿನ್ ನಾಣ್ಯವನ್ನು ಹಾಕಿದ. 
 ಭಿಕ್ಷುಕ ಅಪ್ರತಿಭನಾದ. ಆದರೆ ತಕ್ಷಣ ಸಾವರಿಸಿಕೊಂಡು "ಧನ್ಯವಾದಗಳು ಸರ್! ಧನ್ಯವಾದಗಳು!" ಎಂದು ಇವನ ಕಡೆ ದೈನ್ಯದಿಂದ ನೋಡಿದ. 
ಅಷ್ಟರಲ್ಲಿ ಟ್ರೆವರ್ ವಾಪಸಾದದ್ದನ್ನು ಕಂಡು ಹ್ಯೂಯಿ ತಾನು ಮಾಡಿದ ಕೆಲಸಕ್ಕೆ ಸ್ವಲ್ಪ ನಾಚುತ್ತಾ "ಇನ್ನು ಬರುತ್ತೇನೆ" ಎಂದು ಹೇಳಿ ಅವಸರದಲ್ಲಿ ಹೊರಟ. ಲಾರಾಳೊಂದಿಗೆ ದಿನವನ್ನು ಕಳೆದ. ಅವನ ದಾನಶೂರತೆಗೆ ಅವಳಿಂದ ಒಂದಷ್ಟು ಮಂಗಳಾರತಿ ಎತ್ತಿಸಿಕೊಂಡಿದ್ದಲ್ಲದೆ ಮನೆಗೆ ಚಳಿಯಲ್ಲಿ ಕಾಲ್ನಡಿಗೆಯಲ್ಲೇ ಹಿಂದಿರುಗಿದ.    
ಅಂದು ರಾತ್ರಿ ಪ್ಯಾಲೆಟ್ ಕ್ಲಬ್ ಗೆ ರಾತ್ರಿ ಹನ್ನೊಂದು ಗಂಟೆಗೆ ಹೋದಾಗ ಟ್ರೆವರ್ ಒಬ್ಬನೇ ಕೂತು ಮದ್ಯಪಾನ ಮಾಡುತ್ತಿರುವುದು ಕಾಣಿಸಿತು. 
"ಆಲನ್, ನಿನ್ನ ಚಿತ್ರ ಪೂರ್ತಿಯಾಯಿತೆ?" ಎಂದು ಕೇಳುತ್ತಾ ಹ್ಯೂಯಿ ಒಂದು ಸಿಗರೆಟ್ ಹೊತ್ತಿಸಿದ. 
"ಪೂರ್ತಿ ಮಾಡಿ ಅದಕ್ಕೆ ಕಟ್ಟು ಹಾಕಿಸಿದ್ದೂ ಆಯಿತು!" ಎಂದು ಟ್ರೆವರ್ ಅವನತ್ತ ಜಂಬದಿಂದ ನೋಡಿ "ಅಂದಹಾಗೆ ನೀನೊಂದು ವಿಜಯ ಸಾಧಿಸಿದ್ದೀಯ! ಇವತ್ತು ನೀನು ನೋಡಿದ ರೂಪದರ್ಶಿ ನಿನಗೆ ಮರುಳಾಗಿದ್ದಾನೆ. ನಿನ್ನ ವಿಷಯ ಎಲ್ಲಾ ಕೇಳಿ ತಿಳಿದುಕೊಂಡ. ನೀನು ಯಾರು, ನಿನ್ನ ವಾಸ ಎಲ್ಲಿ, ನಿನ್ನ ಆದಾಯ ಎಷ್ಟು, ನಿನ್ನ ಮುಂದಿನ ಯೋಜನೆ ಏನು,  ... "
"ಅಯ್ಯೋ ಆಲನ್! ಇದನ್ನೆಲ್ಲಾ ಹೇಳಿದರೆ ಮುಗಿಯಿತು! ನಾನು ಮನೆಗೆ ಹೋದಾಗ ಅವನು ನನ್ನ ಬಾಗಿಲಿನ ಹತ್ತಿರವೇ ಕೂತುಕೊಂಡಿರಬಹುದು! ನಿಜ ಹೇಳುತ್ತೇನೆ, ಅವನನ್ನು ನೋಡಿದರೆ ಕರುಳು ಕಿತ್ತು ಬಂತು. ಅವನಿಗೆ ಏನಾದರೂ ಸಹಾಯ ಮಾಡುವ ಸ್ಥಿತಿಯಲ್ಲಿ ನಾನು ಇದ್ದಿದ್ದರೆ ! ಅಂತಹ ಸ್ಥಿತಿ ಯಾರಿಗೂ ಬರಬಾರದು, ನೋಡು. ಅಂದಹಾಗೆ ನನ್ನ ಹತ್ತಿರ ಹಳೇ ಬಟ್ಟೆಗಳ ರಾಶಿಯೇ ಇದೆ. ಅವನಿಗೆ ಬೇಕಾದರೆ ಕೊಡುತ್ತೇನೆ. ಪಾಪ, ಅವನ ಬಟ್ಟೆಗಳೆಲ್ಲ ಚಿಂದಿಯಾಗಿದ್ದವು!"

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)