ಲಾಟರಿ - ಭಾಗ 1


ಮೂಲ ಅಮೇರಿಕನ್ ಕತೆ - ಶರ್ಲಿ ಜ್ಯಾಕ್ಸನ್ 

ಕನ್ನಡ ಅನುವಾದ - ಸಿ ಪಿ ರವಿಕುಮಾರ್



ಜೂನ್ ಇಪ್ಪತ್ತೇಳರ ಬೆಳಗ್ಗೆ ಆಕಾಶ ಶುಭ್ರವಾಗಿತ್ತು. ಬೇಸಗೆಯ ಬೆಳಗಿನ ಎಳೆಬಿಸಿಲಿನಲ್ಲಿ ಹೂಗಳು ನಗುತ್ತಿದ್ದವು.  ಹುಲ್ಲು ದಟ್ಟ ಹಸಿರಾಗಿತ್ತು. ಹತ್ತು ಗಂಟೆಯ ಸುಮಾರಿಗೆ ಹಳ್ಳಿಯ ಜನರು ಒಬ್ಬೊಬ್ಬರಾಗಿ ಅಂಚೆ ಕಚೇರಿ ಮತ್ತು ಬ್ಯಾಂಕ್ ನಡುವಿದ್ದ ಚೌಕದ ಬಳಿ ನೆರೆಯಲಾರಂಭಿಸಿದರು.  ಜನಸಂಖ್ಯೆ ಹೆಚ್ಚಾಗಿರುವ ಹಳ್ಳಿಗಳಲ್ಲಿ ಲಾಟರಿ ನಡೆಸಲು ಎರಡು ದಿವಸ ಬೇಕಾಗುವುದರಿಂದ ಜೂನ್ ಇಪ್ಪತ್ತನೇ ತಾರೀಕು ಅದನ್ನು ಪ್ರಾರಂಭಿಸುತ್ತಾರೆ. ಆದರೆ ಈ ಹಳ್ಳಿಯಲ್ಲಿ ಎಲ್ಲಾ ಸೇರಿ ಒಂದು ಮುನ್ನೂರು ಜನ ಇರಬಹುದು. ಲಾಟರಿ ನಡೆಸಲು ಎರಡು ತಾಸುಗಳು ಸಾಕು. ಬೆಳಗ್ಗೆ ಹತ್ತಕ್ಕೆ ಪ್ರಾರಂಭವಾದರೆ ಮುಗಿದ ನಂತರ ಜನ ಹನ್ನೆರಡಕ್ಕೆ ಮಧ್ಯಾಹ್ನದ ಊಟಕ್ಕಾಗಿ 
ಮನೆಗೆ ತೆರಳಬಹುದು. 

ಲಾಟರಿಗೆ ಬಂದವರಲ್ಲಿ ಮಕ್ಕಳು ಮೊದಲಿಗರು. ಶಾಲೆ ಇತ್ತೀಚಿಗೆ ಬೇಸಗೆ ರಜೆ ಘೋಷಿಸಿದ್ದರಿಂದ ತಮಗೆ ದೊರೆತ ಸ್ವಾತಂತ್ರ್ಯದ  ಅನುಭವ ಮಕ್ಕಳಲ್ಲಿ ಇನ್ನೂ ಹಸಿರಾಗಿತ್ತು. ಮೊದಲು ಸುಮ್ಮನಿದ್ದ ಮಕ್ಕಳು ಕ್ರಮೇಣ ತಮ್ಮ ಬಾಲ ಬಿಚ್ಚಿದರು. ಶಾಲೆಯ ನೆನಪು ಇನ್ನೂ ಮಾಸಿರಲಿಲ್ಲ - ಆದ್ದರಿಂದ ಅವರು ತಮ್ಮ ಮಾಸ್ತರರ ಬಗ್ಗೆ, ಪುಸ್ತಕಗಳ ಬಗ್ಗೆ, ತಮ್ಮ ಮಾಸ್ತರು ಹುಡುಗರನ್ನು ಹೇಗೆ ಶಿಕ್ಷಿಸಿದರು ಇತ್ಯಾದಿ ಮಾತಾಡಿಕೊಂಡರು. ಬಾಬಿ ಮಾರ್ಟಿನ್ ತನ್ನ ಜೋಬಿನಲ್ಲಿ ಆಗಲೇ ಕಲ್ಲುಗಳನ್ನು ತುಂಬಿಕೊಂಡಿದ್ದನ್ನು ನೋಡಿ ಉಳಿದವರೂ ಹೆಕ್ಕತೊಡಗಿದರು. ಆದಷ್ಟೂ ನುಣುಪಾದ, ಗುಂಡಗಿನ ಗೋಲಿಗಳಂಥ ಕಲ್ಲುಗಳಿಗಾಗಿ ಹುಡುಕಾಡಿದರು. ಬಾಬಿ, ಹ್ಯಾರಿ ಜೋನ್ಸ್ ಮತ್ತು ಡಿಕಿ ಡೆಲಕ್ರಾಯ್ ಮೂವರೂ ಸೇರಿ ಚೌಕದ ಒಂದು ಮೂಲೆಯಲ್ಲಿ ಕಲ್ಲುಗಳ ಒಂದು ಪುಟ್ಟ ಗುಡ್ಡೆ ಮಾಡಿದರು. ಇನ್ನಿತರ ಹುಡುಗರು ಕಲ್ಲುಗಳನ್ನು ಕದಿಯದ ಹಾಗೆ ಕಾವಲು ನಿಂತರು.  ಹುಡುಗಿಯರು ಸ್ವಲ್ಪ ದೂರದಲ್ಲಿ ತಮ್ಮತಮ್ಮಲ್ಲೇ ಮಾತಾಡಿಕೊಳ್ಳುತ್ತಾ ನಡುನಡುವೆ ಹುಡುಗರ ಕಡೆ ಕಳ್ಳ ನೋಟ ಬೀರುತ್ತಾ ನಿಂತರು. ತೀರಾ ಚಿಕ್ಕ ಮಕ್ಕಳಲ್ಲಿ ಕೆಲವರು ಮಣ್ಣಿನಲ್ಲಿ ಹೊರಳಾಡಿದರೆ ಉಳಿದವರು ತಮ್ಮ ಅಕ್ಕ-ಅಣ್ಣಂದಿರ ಕೈಹಿಡಿದು ನಿಂತರು.  ಕ್ರಮೇಣ ಗಂಡಸರು ಆಗಮಿಸಿದರು. ಆಗಾಗ ತಮ್ಮ ಮಕ್ಕಳ ಕಡೆ ನೋಡುತ್ತಾ ಮಳೆ, ಬಿತ್ತನೆ, ಟ್ರಾಕ್ಟರ್, ತೆರಿಗೆ ಮೊದಲಾದ ವಿಷಯ ಮಾತಾಡಿಕೊಂಡರು. ಕಲ್ಲಿನ ರಾಶಿಯಿಂದ ದೂರದ ಒಂದು ಮೂಲೆಯಲ್ಲಿ ನಿಂತಿದ್ದ ಗಂಡಸರು ನಗೆಚಾಟಿಕೆಗಳನ್ನು ವಿನಿಮಯ ಮಾಡಿಕೊಂಡರು. ಆದರೆ ಯಾರೂ ಜೋರಾಗಿ ನಗಲಿಲ್ಲ. ಏನಿದ್ದರೂ ಮುಗುಳ್ನಗು ಮಾತ್ರ. ಸ್ವಲ್ಪ ಹೊತ್ತಿನಲ್ಲಿ ಹೆಂಗಸರು ಮನೆಗೆಲಸದ ವೇಳೆ ಉಡುವ ಮಾಸಿದ ಉಡುಗೆಗಳನ್ನುಟ್ಟು ಬಂದರು.  ಪರಸ್ಪರ ಒಂದಷ್ಟು ಹರಟೆ ಹೊಡೆದು ಅಲ್ಲಿ-ಇಲ್ಲಿಯ ಮಾತಾಡಿ ತಮ್ಮ ತಮ್ಮ ಗಂಡಂದಿರ ಬಳಿಗೆ ಹೋಗಿ ನಿಂತರು. ಹೆಂಗಸರು ತಮ್ಮ ಮಕ್ಕಳನ್ನು ಹೆಸರು ಕೂಗಿ ಕರೆದರು. ಐದಾರು ಸಲ ಕರೆದ ನಂತರ ಮಕ್ಕಳು ಅರೆಮನಸ್ಸಿನಿಂದ ಬಂದರು. ಬಾಬಿ ಮಾರ್ಟಿನ್ ತನ್ನ ತಾಯಿಯ ಭದ್ರವಾದ ಕೈಹಿಡಿತವನ್ನು ಹೇಗೋ ತಪ್ಪಿಸಿಕೊಂಡು ನಗುತ್ತಾ ಕಲ್ಲುಗಳ ರಾಶಿಯ ಹತ್ತಿರಕ್ಕೆ ಓಡಿದ. ಅವನ ತಂದೆ ದನಿಯೇರಿಸಿ ಬೈದದ್ದಕ್ಕೆ ಬೆದರಿ ತಂದೆ ಮತ್ತು ಅಣ್ಣನ  ನಡುವೆ ಸ್ಥಳ ಮಾಡಿಕೊಂಡು ಮೌನವಾಗಿ ಬಂದು ನಿಂತ. 


 ಕುಣಿತ, ಮಕ್ಕಳ ಕಾರ್ಯಕ್ರಮ, ಹ್ಯಾಲೋವೀನ್ ಕಾರ್ಯಕ್ರಮ ಇವೆಲ್ಲವನ್ನೂ ನಡೆಸಿಕೊಡುತ್ತಿದ್ದ ಮಿ। ಸಮ್ಮರ್ಸ್ ಲಾಟರಿಯನ್ನೂ ನಡೆಸಿಕೊಡುವುದು ರೂಢಿ. ಆತನಿಗೆ ಇಂಥದಕ್ಕೆಲ್ಲಾ ಸಮಯವಿದೆ. ಗುಂಡು ಮುಖದ ಹಸನ್ಮುಖಿ ಮನುಷ್ಯ. ಅವನದ್ದು ಇದ್ದಿಲಿನ ವ್ಯಾಪಾರ. ಮಕ್ಕಳಿಲ್ಲ. ಹೆಂಡತಿ ಬಜಾರಿ. ಹೀಗಾಗಿ ಅವನನ್ನು ಕಂಡರೆ ಎಲ್ಲರಿಗೂ ಸ್ವಲ್ಪ ಕನಿಕರ. ಆತ ಕಪ್ಪು ಹಲಗೆಯ ಪೆಟ್ಟಿಗೆ ಹೊತ್ತುಕೊಂಡು ಬಂದಾಗ ಎಲ್ಲರೂ ತಮ್ಮತಮ್ಮಲ್ಲೇ ಗುಸುಗುಸು ಮಾತಾಡಿಕೊಂಡರು.  ಮಿ। ಸಮ್ಮರ್ಸ್ ಕೈ ಬೀಸಿ ಅವರ ಗಮನ ಸೆಳೆದ. "ಇವತ್ತು ಸ್ವಲ್ಪ ತಡವಾಯಿತು," ಎಂದ. ಅಂಚೆಮಾಸ್ತರನಾಗಿದ್ದ ಮಿ। ಗ್ರೇವ್ಸ್ ಮೂರು ಕಾಲಿನ ಮೇಜನ್ನು ಎತ್ತಿಕೊಂಡು ಬಂದು ಚೌಕದ ಮಧ್ಯೆ ಪ್ರತಿಷ್ಠಾಪಿಸಿದ. ಮಿ। ಸಮ್ಮರ್ಸ್ ಈ ಮೇಜಿನ ಮೇಲೆ ಪೆಟ್ಟಿಗೆಯನ್ನು ಎತ್ತಿಟ್ಟ. ಜನ ಮೇಜಿನಿಂದ ಸ್ವಲ್ಪ ದೂರ ಸರಿದು ನಿಂತರು. "ಎಲ್ಲಿ, ನನಗೆ ಯಾರಾದರೂ ಸಹಾಯ ಮಾಡಿ ಮತ್ತೆ?" ಎಂದಾಗ ಜನ ಅನುಮಾನಿಸಿದರು. ಕೊನೆಗೆ ಮಿ। ಮಾರ್ಟಿನ್ ಮತ್ತು ಅವನ ದೊಡ್ಡ ಮಗ ಬಾಕ್ಸ್ಟರ್ ಮುಂದೆ ಬಂದು ಪೆಟ್ಟಿಗೆಯನ್ನುಮೇಜಿನ ಮೇಲೆ ಭದ್ರವಾಗಿ ಹಿಡಿದುಕೊಂಡು ನಿಂತರು. ಒಳಗಿನ ಕಾಗದದ ಚೂರುಗಳನ್ನು ಮಿ। ಸಮ್ಮರ್ಸ್ ಕಲಸಿದ.   

ಲಾಟರಿಗಾಗಿ ಹಿಂದೆ ಉಪಯೋಗಿಸುತ್ತಿದ್ದ ಪೆಟ್ಟಿಗೆ ಇತ್ಯಾದಿ ವಸ್ತುಗಳು ಈಗ ಕಳೆದುಹೋಗಿವೆ. ಆದರೆ ಈಗ ಬಳಕೆಯಲ್ಲಿರುವ ಪೆಟ್ಟಿಗೆ ಕೂಡಾ ಸಾಕಷ್ತು ಹಳೆಯದೇ. ಹಳ್ಳಿಯ ಅತ್ಯಂತ ಹಳಬ ಮಿ। ವಾರ್ನರ್ ಹುಟ್ಟುವ ಮುಂಚಿನದಂತೆ. ಒಂದು ಹೊಸ ಪೆಟ್ಟಿಗೆ ಬೇಕೆಂದು ಮಿ। ಸಮ್ಮರ್ಸ್ ಆಗಾಗ ಹೇಳಿದರೂ ಹಳೆಯ ಕಪ್ಪು ಪೆಟ್ಟಿಗೆಯ ಪರಂಪರೆಯನ್ನು ಮುರಿಯಲು ಯಾರಿಗೂ ಉತ್ಸಾಹವಿರಲಿಲ್ಲ.  ಈಗಿರುವ ಪೆಟ್ಟಿಗೆಯ ಹಲಗೆಗಳನ್ನು ಪೂರ್ವಕಾಲದ ಪೆಟ್ಟಿಗೆಯ ಮರದಿಂದಲೇ ಮಾಡಲಾಗಿದೆ ಎನ್ನುತ್ತಾರೆ. ಹಳ್ಳಿಯಲ್ಲಿ ಪೂರ್ವಜರು ನೆಲೆಸಿದಾಗ ಬಳಸಿದ ಪೆಟ್ಟಿಗೆಯ ಆವಶೇಷ. ಪ್ರತಿವರ್ಷ ಲಾಟರಿ ಮುಗಿದ ನಂತರ ಮಿ। ಸಮ್ಮರ್ಸ್ ಹೊಸ ಪೆಟ್ಟಿಗೆ ಮಾಡಿಸಬೇಕೆಂಬ ಪ್ರಸ್ತಾಪ ಮಾಡುತ್ತಾನೆ. ಆದರೆ ಆ ಮಾತು ಅಲ್ಲಿಗೇ ಮುಗಿದುಹೋಗುತ್ತದೆ. ಹೀಗಾಗಿ ಪೆಟ್ಟಿಗೆ ಈಗ ತೀರಾ ಲಡ್ಡಾಗಿದೆ. ಕೆಲವು ಕಡೆ ಕಪ್ಪು ಬಣ್ಣ ಸಂಪೂರ್ಣ ಮಾಯವಾಗಿ ಕೆಳಗಿನ ಮರ ಕಾಣುತ್ತಿದೆ. ಹಲವಾರು ಕಡೆ ಸೀಳಿದೆ. ಹಲವಾರು ಕಡೆ ಮಾಸಿದೆ. 

ಮಿ। ಮಾರ್ಟಿನ್ ಮತ್ತು ಅವನ ಹಿರಿಯ ಮಗ ಬಾಕ್ಸ್ಟರ್ ಪೆಟ್ಟಿಗೆಯನ್ನು ಅಲ್ಲಾಡದಂತೆ ಭದ್ರವಾಗಿ ಹಿಡಿದರು. ಮಿ। ಸಮ್ಮರ್ಸ್ ಒಳಗಿದ್ದ ಕಾಗದಗಳನ್ನು ಕೈಗಳಿಂದ ಚೆನ್ನಾಗಿ ಕಲಸಿದ. ಪೂರ್ವಕಾಲದಲ್ಲಿ ಮರದ ತುಂಡುಗಳನ್ನು ಬಳಸುತ್ತಿದ್ದರು. ಅದರ ಬದಲು ಕಾಗದದ ಹಾಳೆಗಳನ್ನು ಬಳಸಬಹುದು ಎಂದು ಮಿ। ಸಮ್ಮರ್ಸ್ ಎಲ್ಲರನ್ನೂ ಒಪ್ಪಿಸಿದ್ದ.  ಹಳ್ಳಿಯ ಜನಸಂಖ್ಯೆ ಕಮ್ಮಿಯಾಗಿದ್ದಾಗ ಮರದ ತುಂಡುಗಳು ಬಳಸುವುದು ದೊಡ್ಡ ವಿಷಯವಲ್ಲ. ಆದರೆ ಈಗ ಹಳ್ಳಿಯಲ್ಲಿ ಮುನ್ನೂರಕ್ಕೂ ಮಿಕ್ಕಿ ಜನರಿದ್ದಾರೆ. ಮುಂದೆ ಜನಸಂಖ್ಯೆ ಇನ್ನೂ ದೊಡ್ಡದಾಗುತ್ತದೆ.  ಇಷ್ಟೊಂದು ಮರದ ತುಂಡುಗಳು ಪೆಟ್ಟಿಗೆಯಲ್ಲಿ ಹಿಡಿಸುವುದಿಲ್ಲ.  ಮಿ। ಸಮ್ಮರ್ಸ್ ಸಲಹೆ ಈಗ ಅಂಗೀಕಾರವಾಗಿದೆ. ಲಾಟರಿಯ ಹಿಂದಿನ ರಾತ್ರಿ ಮಿ। ಸಮ್ಮರ್ಸ್ ಮತ್ತು ಮಿ। ಗ್ರೇವ್ಸ್ ಕುಳಿತು ಚೀಟಿಗಳನ್ನು ತಯಾರು ಮಾಡುತ್ತಾರೆ. ಅನಂತರ ಮಿ। ಸಮ್ಮರ್ಸ್  ಚೀಟಿಗಳ ಪೆಟ್ಟಿಗೆಯನ್ನು ತನ್ನ ಕಚೇರಿಯಲ್ಲಿಟ್ಟು ಭದ್ರಪಡಿಸುತ್ತಾನೆ.  ಲಾಟರಿಯ ನಂತರ ಮರುವರ್ಷದ ತನಕ ಪೆಟ್ಟಿಗೆಯನ್ನು ಎಲ್ಲಾದರೂ ಸಂಗ್ರಹಿಸಿಡುತ್ತಾರೆ - ಅದಕ್ಕೆ ಇಂಥ ಸ್ಥಳ ಎಂದು ನಿಗದಿಯಾಗಿಲ್ಲ.  ಒಮ್ಮೆ ಮಿ। ಗ್ರೇವ್ಸ್ ನ ಕುದುರೆಲಾಯದಲ್ಲಿ, ಇನ್ನೊಮ್ಮೆ ಅಂಚೆಕಚೇರಿಯಲ್ಲಿ ಆತನ ಪಾದಗಳಿಗೆ ಆಸರೆಯಾಗಿ, ಇನ್ನೊಮ್ಮೆ ಮಾರ್ಟಿನ್ ಕಿರಾಣಿ ಅಂಗಡಿಯಲ್ಲಿ. 

ಪ್ರತಿವರ್ಷ ಲಾಟರಿಯ ಘೋಷಣೆಗೆ ಮುಂಚೆ ಸಾಕಷ್ಟು ತಯಾರಿ ನಡೆಯುತ್ತಿತ್ತು. ಹಳ್ಳಿಯ ಸಮಸ್ತ ಜನರ ಪಟ್ಟಿ ಸಿದ್ಧವಾಗಬೇಕು. ಪ್ರತಿಯೊಂದು ಕುಟುಂಬದ ಸದಸ್ಯರ ಹೆಸರು ಬರೆದಿರಬೇಕು. ಕುಟುಂಬದ ಮುಖ್ಯಸ್ಥನ ಹೆಸರು ಗುರುತು ಹಾಕಬೇಕು.  ಒಂದು ಕಾಲದಲ್ಲಿ ಪ್ರತಿವರ್ಷವೂ ಲಾಟರಿ ಸಂಚಾಲಕನಾಗಿ ಮಿ। ಸಮ್ಮರ್ಸ್ ನನ್ನು ಶಾಸ್ತ್ರೋಕ್ತವಾಗಿ ನೇಮಿಸಲಾಗುತ್ತಿತ್ತು ಎಂದು ಹಳಬರು ನೆನೆಸಿಕೊಳ್ಳುತ್ತಾರೆ. ಲಾಟರಿಗೆ ಮುಂಚೆ ಸಂಚಾಲಕ ಅದೆಂಥದೋ ಹಳೆಯ ವಾಕ್ಯಪುಂಜಗಳನ್ನು ಉಚ್ಚರಿಸಬೇಕು. ಹಿಂದೆ ರಾಗವಾಗಿ ಹೇಳುತ್ತಿದ್ದರಂತೆ - ಈಗ ಮಣಮಣ ಮಂತ್ರದ ಹಾಗೆ ಚುಟುಕಾಗಿ ಉಚ್ಚರಿಸಿ ಮುಗಿಸುತ್ತಾರೆ.  ಈ ಮಂತ್ರೋಚ್ಚಾರ ನಡೆಯುವಾಗ ಸಂಚಾಲಕ ಒಂದು ಕಡೆ ಸುಮ್ಮನೇ ನಿಂತಿರಬೇಕೆ ಅಥವಾ ಜನರ ನಡುವೆ ಓಡಾಡುತ್ತಿರಬೇಕೆ ಎಂಬುದರ ಬಗ್ಗೆ ಸಹಮತವಿಲ್ಲ.  ಚೀಟಿ ಎತ್ತಲು ಜನ ಬಂದಾಗ ಸಂಚಾಲಕ ಒಂದು ವಿಶಿಷ್ಟ ಬಗೆಯ ನಮಸ್ಕಾರ ಮಾಡುವ ರೂಢಿಯೂ ಇತ್ತಂತೆ. ಈಗ ಅದೂ ಇಲ್ಲ. ಚೀಟಿ ಎತ್ತಲು ಬಂದವರ ಜೊತೆ ಮಾತಾಡುವುದು ರೂಢಿಯಾಗಿದೆ. ಮಿ। ಸಮ್ಮರ್ಸ್ ಗೆ ಇದೆಲ್ಲಾ ಚೆನ್ನಾಗಿ ಕರಗತವಾಗಿದೆ. ತನ್ನ ನೀಲಿ ಜೀನ್ಸ್ ಮತ್ತು ಶುಭ್ರ ಬಿಳಿ ಮೇಲುವಸ್ತ್ರದಲ್ಲಿ ಆತ ಶ್ರೀಮದ್ ಗಾಂಭೀರ್ಯದಿಂದ ಮಿ। ಗ್ರೇವ್ಸ್ ಜೊತೆ ಮಾತಾಡುತ್ತಾ ಕೆಲಸ ಮಾಡುವುದು ನೋಡಿದರೆ ಈತ ಯಾರೋ ಬಹಳ ಮುಖ್ಯ ವ್ಯಕ್ತಿ ಎಂದು ಯಾರಿಗಾದರೂ ಅನ್ನಿಸಬೇಕು. 

ಕೊನೆಗೂ ಮಿ। ಗ್ರೇವ್ಸ್ ಜೊತೆ  ತನ್ನ ಮಾತು ಮುಗಿಸಿದ ಮಿ। ಸಮ್ಮರ್ಸ್ ಹಳ್ಳಿಗರ ಕಡೆ ತಿರುಗುವುದಕ್ಕೂ ಶ್ರೀಮತಿ ಹಚಿನ್ಸನ್ ಅವಸರದಿಂದ ಧಾವಿಸುತ್ತಾ ಚೌಕಕ್ಕೆ ಬಂದು ಮುಟ್ಟುವುದಕ್ಕೂ ಸರಿಯಾಯಿತು. ಆಕೆ ತನ್ನ ಸ್ವೆಟರ್ ಭುಜದ ಮೇಲೆ ಎಸೆದುಕೊಂಡಿದ್ದಳು. ಕೊನೆಯ ಸಾಲಿಗೆ ಬಂದು ಸೇರಿಕೊಳ್ಳುತ್ತಾ 'ಇವತ್ತು ಯಾವ ದಿನ ಅಂತ ಮರೆತೇ ಹೋಗಿತ್ತು!' ಎಂದು ಪಕ್ಕದಲ್ಲಿದ್ದ ಶ್ರೀಮತಿ ಡೆಲಕ್ರಾಯ್ ಗೆ ಅವಳು ಸಬೂಬು ಹೇಳಿಕೊಂಡಳು. ಇಬ್ಬರು ಹೆಂಗಸರೂ ಮೆಲ್ಲಗೆ ನಕ್ಕರು ಶ್ರೀಮತಿ ಹಚಿನ್ಸನ್ . 'ನಮ್ಮ ಮನೆಯವರು ಕಟ್ಟಿಗೆ ಜೋಡಿಸುತ್ತಾ ಇದ್ದಾರೆ ಅಂದುಕೊಂಡಿದ್ದೆ. ಯಾಕೋ ಎಲ್ಲಾ ಶಾಂತವಾಗಿದೆಯಲ್ಲ ಅಂತ ಕಿಟಕಿಯಿಂದ ನೋಡಿದರೆ ಮಕ್ಕಳೂ ಕಾಣಲಿಲ್ಲ, ಇವತ್ತು ಇಪ್ಪತ್ತೇಳು ತಾರೀಕು ಅಂತ ಆವಾಗ ಹೊಳೆಯಿತು, ನೋಡಿ. ಓಡೋಡುತ್ತಾ ಬಂದೆ!' ಎನ್ನುತ್ತಾ ತನ್ನ ಏಪ್ರನ್ ಗೆ ಕೈ ಒರೆಸಿಕೊಂಡಳು. ಅದಕ್ಕೆ ಶ್ರೀಮತಿ ಡೆಲಕ್ರಾಯ್ 'ಪರವಾಗಿಲ್ಲ, ಅಂಥದ್ದೇನು ತಡವಾಗಿಲ್ಲ. ನೋಡಿ, ಅಲ್ಲಿ  ಇನ್ನೂ ಮಾತಾಡುತ್ತಲೇ ಇದ್ದಾರೆ' ಎಂದಳು. 

ಶ್ರೀಮತಿ ಹಚಿನ್ಸನ್ ಕತ್ತನ್ನು ನೀಳ ಮಾಡಿಕೊಂಡು ಎಲ್ಲಾ ಕಡೆ ಕಣ್ಣಾಡಿಸಿದಳು. ಅವಳ ಗಂಡ ಮತ್ತು ಮಕ್ಕಳು ಮುಂದಿನ ಸಾಲಿನಲ್ಲಿ ನಿಂತಿದ್ದು ಕಂಡಿತು. ಶ್ರೀಮತಿ ಡೆಲಕ್ರಾಯ್ ಗೆ ವಿದಾಯ ರೂಪದಲ್ಲಿ ಬೆನ್ನು ತಟ್ಟಿ ಗುಂಪಿನ ನಡುವೆ ದಾರಿ ಮಾಡಿಕೊಂಡು ತನ್ನ ಕುಟುಂಬದವರು ನಿಂತಿದ್ದ  ಕಡೆಗೆ ಹೊರಟಳು. ಜನ ಮುನಿಸಿಲ್ಲದೆ ನಗುಮುಖದಿಂದ ದಾರಿ ಮಾಡಿಕೊಟ್ಟರು. ಒಬ್ಬಿಬ್ಬರು 'ಹಚಿನ್ಸನ್, ನಿಮ್ಮ ಹೆಂಗಸರು ಬಂದರು' ಎಂದು ಗಟ್ಟಿಯಾಗೇ ಘೋಷಿಸಿದರು.  'ಬಿಲ್, ಕೊನೆಗೂ ಬಂದಳು!' ಎಂದದ್ದು ಕೇಳಿತು. ಅವಳು ಕೊನೆಗೂ ಮುಂದೆ ಬಂದು ಗಂಡನ ಪಕ್ಕಕ್ಕೆ ನಿಂತಾಗ ಮಿ। ಸಮ್ಮರ್ಸ್ ಸುಳ್ಳು ಮುನಿಸು ನಟಿಸುತ್ತಾ  'ಟೆಸ್ಸಿ, ಇವತ್ತು ನೀನು ಇಲ್ಲದೆ ಶುರು ಮಾಡಬೇಕಾಗುತ್ತೇನೋ ಅಂದುಕೊಳ್ತಿದ್ದೆ,' ಎಂದ. ಅದಕ್ಕೆ ಆಕೆ 'ಜೋ, ಒಂದು ಹೊರೆ ಪಾತ್ರೆಯನ್ನ ತೊಳೆಯದೇ ಹಾಗೇ ಬಿಟ್ಟು ಬಾ ಅಂತೀಯಾ?' ಎಂದು ಚಟಾಕಿ ಹಾರಿಸಿದಳು.  ಗುಂಪಿನಲ್ಲಿ ಮೆಲುನಗುವಿನ ಅಲೆ ಎದ್ದು ಶಾಂತವಾಯಿತು. ಎಲ್ಲರೂ ಮತ್ತೊಮ್ಮೆ ತಮ್ಮ ತಮ್ಮ ಸ್ಥಾನಗಳಲ್ಲಿ ಸಾವರಿಸಿಕೊಂಡು ನಿಂತರು. 

(ಮುಂದಿನ ಭಾಗ ಇಲ್ಲಿ ಓದಿ)

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)