ಕಡಿಯಲು ತಂದ ಕುರಿ - ಭಾಗ 3



ಕಡಿಯಲು ತಂದ ಕುರಿ - ಭಾಗ ೩
(ಎರಡನೇ ಭಾಗವನ್ನು ಇಲ್ಲಿ ಓದಿ)

ನ್ನೂ ಆರು ಗಂಟೆ ಆಗಿರಲಿಲ್ಲ.  ಆದ್ದರಿಂದ ಕಿರಾಣಿ ಅಂಗಡಿಯ ದೀಪ ಉರಿಯುತ್ತಿತ್ತು. 

"ಹಲೋ ಸ್ಯಾಮ್!" ಅವಳು ಅಂಗಡಿಯವನತ್ತ ಮುಗುಳ್ನಗೆ ಬೀರಿದಳು. 

"ಶುಭ ಸಂಜೆ, ಶ್ರೀಮತಿ ಮಲೋನಿ! ಹೇಗಿದ್ದೀರಿ?"

"ನನಗೆ ಒಂದಷ್ಟು ಆಲೂಗೆಡ್ಡೆ ಬೇಕಾಗಿತ್ತು, ಸ್ಯಾಮ್. ಹಾಗೇ ಒಂದು ಕ್ಯಾನ್ ಬಟಾಣಿ."

ಅಂಗಡಿಯಾತ ಹಿಂದೆ ತಿರುಗಿ ಬಟಾಣಿ ಇಡುವ ಕಪಾಟಿಗೆ ಕೈ ಹಾಕಿದ. 

"ಇವತ್ತು ಪ್ಯಾಟ್ರಿಕ್ ಸುಸ್ತಾಗಿದೆ, ಹೊರಗಡೆ ಹೋಗೋದು ಬೇಡ, ಮನೆಯಲ್ಲೇ ಊಟ ಮಾಡೋಣ ಅಂದ. ನಾವು ಪ್ರತಿ ಗುರುವಾರ ಸಂಜೆ ಊಟಕ್ಕೆ ಹೊರಗಡೆ ಹೋಗುವುದು ರೂಢಿ. ಇವತ್ತು ಇದ್ದಕ್ಕಿದ್ದ ಹಾಗೇ ಅವನು ಪ್ಲಾನ್ ಬದಲಾಯಿಸಿದರೆ ಮನೆಯಲ್ಲಿ ತರಕಾರಿ ಇರುತ್ತೆ ಅನ್ನೋದೇನು ಖಾತರಿ?"

"ಮಾಂಸ ಏನಾದರೂ ಬೇಕಾಗಿತ್ತೆ, ಶ್ರೀಮತಿ ಮಲೋನಿ?"

"ಇಲ್ಲ, ಬೇಡ. ಫ್ರೀಜರ್ ನಲ್ಲಿ  ಒಂದು ಭೇಷಾದ ಕುರಿ ಕಾಲು ಇದೆ." 

"ಓಹ್."


"ಅದನ್ನ ಫ್ರೀಜರ್ ನಿಂದ ತೆಗೆದ ತಕ್ಷಣ ಬೇಯಿಸಬಹುದೋ ಇಲ್ಲವೋ ನನಗೆ ಗೊತ್ತಿಲ್ಲ. ನಿಮಗೆ ಗೊತ್ತೇ?"

"ನನಗೇನೋ ಅಂತಹ  ವ್ಯತ್ಯಾಸವಾಗೋದಿಲ್ಲ ಅನ್ನಿಸುತ್ತೆ.  ನಿಮಗೆ ಈ ಇಡಾಹೋ ಆಲೂಗೆಡ್ಡೆ ಕೊಡಲೇ?"

"ಹೂಂ. ಎರಡು ಸಾಕು."


"ಇನ್ನೇನಾದರೂ? ಊಟದ ನಂತರ ಏನಾದರೂ ಸಿಹಿ?"


"ಹಂ - ನಿನ್ನ ಸಲಹೆ ಏನಾದರೂ ಇದೆಯಾ?"


ಅಂಗಡಿಯವನು ಸುತ್ತಲೂ ದೃಷ್ಟಿ ಹಾಯಿಸಿದ. "ಒಂದು ದೊಡ್ಡ ತುಂಡು ಚೀಸ್ ಕೇಕ್ ತೊಗೊಂಡು ಹೋಗಿ. ಅವನಿಗೆ ಅದು ಇಷ್ಟ."

"ಹೌದಲ್ಲವೇ? ಅವನಿಗೆ ಚೀಸ್ ಕೇಕ್ ಬಹಳ ಇಷ್ಟ." 


ಎಲ್ಲವೂ ಕಟ್ಟಿಕೊಟ್ಟ ನಂತರ ಅವಳು ದೇಶಾವರಿ ನಗು ಬೀರುತ್ತಾ "ಧನ್ಯವಾದ, ಸ್ಯಾಮ್! ಶುಭರಾತ್ರಿ," ಎಂದಳು. 

"ಶುಭರಾತ್ರಿ, ಶ್ರೀಮತಿ ಮಲೋನಿ. ಧನ್ಯವಾದಗಳು."


ಮನೆಯ ಕಡೆ ಬಿರುಸು ಹೆಜ್ಜೆ ಹಾಕುತ್ತಾ ಅವಳು ತನಗೆ ತಾನೇ ಹೇಳಿಕೊಂಡಳು. ನಾನು ಮನೆಗೆ ಹೋಗಿ ಗಂಡನಿಗೆ ಅಡಿಗೆ ಮಾಡಬೇಕು. ಅವನು ಹಸಿದು ಕಾದಿದ್ದಾನೆ. ಪಾಪ ಇಡೀ ದಿನ ದುಡಿದು ದಣಿದಿದ್ದಾನೆ. ಒಳ್ಳೆ ರುಚಿಯಾದ ಅಡುಗೆ ಮಾಡಿ ಹಾಕಬೇಕು.   ಮನೆಗೆ ಹೋದಾಗ ಏನಾದರೂ ದುರಂತದ ದೃಶ್ಯ ಕಾಣಿಸಿದರೆ ನನಗೆ ಆಘಾತವಾಗುತ್ತದೆ. ನಾನು ಕೂಗಿಕೊಳ್ಳುತ್ತೇನೆ, ಅಪ್ರತಿಭಳಾಗುತ್ತೇನೆ. ಅಂಥ ದುರಂತವೇನನ್ನೂ ನಾನು ಅಪೇಕ್ಷಿಸುತ್ತಿಲ್ಲ - ಅದು ಬೇರೆ ಮಾತು. ನಾನು ತರಕಾರಿ ಕೊಂಡು ಮನೆಗೆ ವಾಪಸಾಗುತ್ತಿದ್ದೇನೆ, ಅಷ್ಟೆ. ನಾನು ಶ್ರೀಮತಿ ಪ್ಯಾಟ್ರಿಕ್ ಮಲೋನಿ - ಗುರುವಾರ ಸಂಜೆ ತರಕಾರಿ ಖರೀದಿಸಿ ಮನೆಗೆ ಗಂಡನಿಗೆ ಅಡಿಗೆ ಮಾಡಲು ಹೊರಟವಳು. 

ಹಾಗೆ! ಎಲ್ಲವನ್ನೂ ಸರಿಯಾಗಿ ಸಹಜವಾಗಿ ಮಾಡಬೇಕು ಎಂದು ಅವಳು ತನಗೆ ತಾನೇ ಹೇಳಿಕೊಂಡಳು. ಎಲ್ಲವನ್ನೂ ಸಂಪೂರ್ಣ ಸಹಜವಾಗಿ ಮಾಡಿದರೆ ನಟನೆಗೆ ಅವಕಾಶವೇ ಇರುವುದಿಲ್ಲ. 

ಹಾಗಾಗಿ ಅವಳು ಮನೆಯ ಹಿಂಬಾಗಿಲಿನಿಂದ ಅಡಿಗೆ ಮನೆಯನ್ನು ಪ್ರವೇಶಿಸುವಾಗ ಒಂದು ಹಾಡನ್ನು ಗುನುಗಿಕೊಳ್ಳುತ್ತಿದ್ದಳು. ಅವಳ ಮುಖದ ಮೇಲೆ ಮಂದಹಾಸವಿತ್ತು. 


"ಪ್ಯಾಟ್ರಿಕ್! ಹೇಗಿದ್ದೀಯ ಡಾರ್ಲಿಂಗ್?" ಎಂದು ಕೂಗಿದಳು. 

ಪೊಟ್ಟಣವನ್ನು ಮೇಜಿನ ಮೇಲಿಟ್ಟು ಅವಳು ಮುಖ್ಯ ಕೋಣೆಗೆ ಹೋದಳು. ಅಲ್ಲಿ ಅವನು ನೆಲದ ಮೇಲೆ ಬಿದ್ದಿದ್ದ. ಅವನ ಕಾಲುಗಳು ಮೇಲಕ್ಕೆ ತಿರುಚಿಕೊಂಡಿದ್ದವು. ಒಂದು ಕೈ ದೇಹದ ಕೆಳಗೆ ಮಡಿಸಿಕೊಂಡಿತ್ತು. ಇದನ್ನು ನೋಡಿ ಅವಳಿಗೆ ನಿಜಕ್ಕೂ ಆಘಾತವಾಯಿತು. ಅವಳ ಅಂತರಾಳದಲ್ಲಿದ್ದ ಪ್ರೀತಿ-ಮಮತೆಗಳನ್ನೆಲ್ಲಾ ಒಮ್ಮೆಲೇ ಮೇಲುಕ್ಕಿದವು. ಅವಳು ಅವನತ್ತ ಧಾವಿಸಿ ಕೆಳಗೆ ಬಗ್ಗಿ ಅಳತೊಡಗಿದಳು. ತನ್ನ ಹೃದಯ ಹಗುರಾಗುವವರೆಗೂ ಅತ್ತಳು. ನಟನೆಯ ಅಗತ್ಯವಿರಲಿಲ್ಲ. 

ಕೆಲವು ನಿಮಿಷಗಳು ಉರುಳಿದ ನಂತರ ಅವಳು ಮೇಲೆದ್ದು ಟೆಲಿಫೋನ್ ಕಡೆಗೆ ಹೋದಳು. ಅವಳಿಗೆ ಪೋಲೀಸ್ ಠಾಣೆಯ ನಂಬರ್ ಚೆನ್ನಾಗಿ ಗೊತ್ತಿತ್ತು. ಠಾಣೆಯಲ್ಲಿ ಯಾರೋ ಫೋನ್ ಎತ್ತಿಕೊಂಡಾಗ ಅವಳು "ಬೇಗ ಬನ್ನಿ! ಬೇಗ ಬನ್ನಿ! ಪ್ಯಾಟ್ರಿಕ್ ಸತ್ತು ಬಿದ್ದಿದ್ದಾನೆ!" ಎಂದು ಕೂಗಿಕೊಂಡಳು. 

" ಯಾರು ಮಾತಾಡೋದು?"


"ಶ್ರೀಮತಿ ಮಲೋನಿ. ಶ್ರೀಮತಿ ಪ್ಯಾಟ್ರಿಕ್ ಮಲೋನಿ."

"ಪ್ಯಾಟ್ರಿಕ್ ಮಲೋನಿ ಸತ್ತುಹೋದನೆ? ಏನಂತಿದೀರಿ?"


"ಹೌದು - ಅವನು ಇಲ್ಲಿ ನೆಲದ ಮೇಲೆ ಬಿದ್ದಿದ್ದಾನೆ. ಸತ್ತು ಹೋದಹಾಗೆ ಕಾಣುತ್ತೆ."

"ಸರಿ, ನಾನು ಈಗಲೇ ಬರುತ್ತೇನೆ," ಆ ಕಡೆಯಿಂದ ಒಂದು ಗಂಡು ಧ್ವನಿ ನುಡಿಯಿತು. 


(ಮುಂದಿನ ಭಾಗವನ್ನು ಇಲ್ಲಿ ಓದಿ)

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)