ಕಡಿಯಲು ತಂದ ಕುರಿ - ಭಾಗ 2
ಮೂಲ ಇಂಗ್ಲಿಷ್ ಕಥೆ - ರೊಆಲ್ಡ್ ಡಾಲ್
ಕನ್ನಡ ಅನುವಾದ - ಸಿ ಪಿ ರವಿಕುಮಾರ್
(ಮೊದಲ ಬಾಗವನ್ನು ಇಲ್ಲಿ ಓದಿ)
"ನೋಡು, ಸಮಾಚಾರ ಹೀಗೆ. ನೀನು ಈ ಸ್ಥಿತಿಯಲ್ಲಿ ಇರೋವಾಗ ಇದನ್ನು ಹೇಳುವುದು ಸರಿಯಲ್ಲ ಅಂತ ಒಪ್ಪುತ್ತೇನೆ. ಆದರೆ ಬೇರೆ ವಿಧಿಯಿಲ್ಲ. ನೀನು ಯೋಚನೆ ಮಾಡಬೇಡ. ನಿನಗೆ ಹಣಕ್ಕೆ ತೊಂದರೆ ಆಗದೆ ಇರೋಹಾಗೆ ನೋಡಿಕೋತೇನೆ. ಇಲ್ಲದ ರಗಳೆ ಬೇಡ. ನೀನು ರಗಳೆ ತೆಗೆಯೋದಿಲ್ಲ ಅಂದುಕೊಂಡಿದ್ದೇನೆ. ತೆಗೆದರೆ ನನ್ನ ಕೆಲಸಕ್ಕೆ ತೊಂದರೆ ಆಗುತ್ತೆ."
ತಾನು ಕೇಳುತ್ತಿರುವುದು ಯಾವುದೂ ನಿಜವಲ್ಲ ಎಂದು ಸಾರಾಸಗಟಾಗಿ ತಳ್ಳಿಬಿಡುವುದು ಅವಳ ಮೊದಲ ಪ್ರತಿಕ್ರಿಯೆಯಾಗಿತ್ತು. ಅವನು ಮಾತೇ ಆಡಿಲ್ಲ, ಎಲ್ಲವನ್ನೂ ನಾನೇ ಕಲ್ಪಿಸಿಕೊಂಡಿದ್ದೇನೆ. ಏನೂ ಆಗಿಲ್ಲ ಎಂಬಂತೆ ತನ್ನ ಪಾಡಿಗೆ ಕೆಲಸ ಮುಂದುವರೆಸಿದರೆ ಎಚ್ಚೆತ್ತಾಗ ನಿಜಕ್ಕೂ ಏನೂ ನಡೆದಿಲ್ಲ ಎಂದು ಗೊತ್ತಾಗುತ್ತದೆ.
"ನಾನು ಊಟಕ್ಕೆ ಅಣಿ ಮಾಡುತ್ತೇನೆ," ಎಂದು ಬಹಳ ಕಷ್ಟ ಪಟ್ಟು ಪಿಸುಗುಟ್ಟುವ ದನಿಯಲ್ಲಿ ನುಡಿದು ಅವಳು ಮೇಲೆದ್ದಳು. ಈ ಸಲ ಅವನು ತಡೆಯಲಿಲ್ಲ.
ಅವಳು ನಡೆದಾಗ ತನ್ನ ಹೆಜ್ಜೆ ನೆಲಕ್ಕೆ ತಾಕುತ್ತಲೇ ಇಲ್ಲ ಎಂದು ಭಾಸವಾಯಿತು. ವಾಕರಿಕೆಯ ಹೊರತಾಗಿ ಅವಳಿಗೆ ಯಾವ ಅನುಭವವೂ ಆಗುತ್ತಿರಲಿಲ್ಲ. ಯಾಂತ್ರಿಕವಾಗಿ ನೆಲಮಾಳಿಗೆಗೆ ಹೋದಳು. ಸ್ವಿಚ್ ಒತ್ತಿದಳು. ಫ್ರೀಜರ್ ನ ಬಾಗಿಲು ತೆರೆದು ಕೈಗೆ ಸಿಕ್ಕದ್ದನ್ನು ಎಳೆದುಕೊಂಡಳು. ತನ್ನ ಕೈಗೆ ಬಂದದ್ದೇನು ಎಂದು ನೋಡಿದಳು. ಅದನ್ನು ಪೇಪರ್ ನಲ್ಲಿ ಸುತ್ತಿದ್ದರು. ಪೇಪರ್ ಬಿಚ್ಚಿ ನೋಡಿದಳು.
ಕುರಿಯ ಕಾಲು.
ಸರಿ, ಇವತ್ತು ಇದನ್ನೇ ಮಾಡೋಣ. ಮೂಳೆಯ ಭಾಗದಿಂದ ಎರಡೂ ಕೈಗಳಲ್ಲಿ ಎತ್ತಿಕೊಂಡು ಮತ್ತೆ ಮೆಟ್ಟಿಲು ಹತ್ತಿ ಅಡಿಗೆಮನೆಗೆ ಹೋಗುವಾಗ ಮುಖ್ಯ ಕೋಣೆಯಲ್ಲಿ ಅವನು ಕಾಣಿಸಿದ. ಅವಳ ಕಡೆಗೆ ಬೆನ್ನು ಮಾಡಿಕೊಂಡು ಕಿಟಕಿಯ ಹತ್ತಿರ ನಿಂತು ಹೊರಗಡೆಗೆ ನೋಡುತ್ತಿದ್ದ. ಅವಳು ಒಂದು ಕ್ಷಣ ನಿಂತಳು.
ಅವಳ ಹೆಜ್ಜೆ ಧ್ವನಿ ಕೇಳಿದರೂ ಅವನು ಅವಳ ಕಡೆಗೆ ತಿರುಗದೆ "ದಯವಿಟ್ಟು ನನಗೆ ಈಗ ಅಡುಗೆ ಏನೋ ಮಾಡಬೇಡ. ನಾನು ಹೊರಗಡೆ ಹೋಗಿ ಊಟ ಮಾಡುತ್ತೇನೆ," ಎಂದ.
ಆ ಕ್ಷಣದಲ್ಲಿ ಮೇರಿ ಮಲೋನಿ ನೇರವಾಗಿ ಅವನ ಹಿಂದೆ ಬಂದು ನಿಂತು ಒಂದು ಕ್ಷಣವೂ ಯೋಚಿಸದೆ ಮರಗಟ್ಟಿದ ಕುರಿಯ ಕಾಲನ್ನು ಮೇಲಕ್ಕೆತ್ತಿ ತನ್ನಲ್ಲಿದ್ದ ಶಕ್ತಿಯನ್ನೆಲ್ಲಾ ಒಂದುಗೂಡಿಸಿ ಅವನ ತಲೆಯ ಹಿಂಭಾಗಕ್ಕೆ ಹೊಡೆದಳು.
ಅವಳು ಅವನ ತಲೆಗೆ ಉಕ್ಕಿನ ಕೋಲಿನಿಂದ ಹೊಡೆದಿದ್ದರೂ ಪರಿಣಾಮ ಅದೇ ಆಗುತ್ತಿತ್ತು.
ಅವಳು ಒಂದು ಹೆಜ್ಜೆ ಹಿಂದೆ ಸರಿದು ಕಾಯುತ್ತಾ ನಿಂತಳು. ತಮಾಷೆ ಎಂದರೆ ಅವನು ಸುಮಾರು ನಾಲ್ಕೈದು ಕ್ಷಣ ನಿಂತೇ ಇದ್ದ. ಅನಂತರ ಅವನ ದೇಹ ಅಲುಗಾಡತೊಡಗಿ ರತ್ನಗಂಬಳಿಯ ಮೇಲೆ ಧೊಪ್ಪನೆ ಬಿತ್ತು.
ಧಡಾರನೆ ಬಿದ್ದ ಸದ್ದು, ಬಿದ್ದ ರಭಸಕ್ಕೆ ಉರುಳಿದ ಸಣ್ಣ ಮೇಜು - ಇವು ಅವಳು ಆಘಾತದಿಂದ ಹೊರಬರಲು ನೆರವಾದವು. ಅವಳು ನಿಧಾನವಾಗಿ ಎಚ್ಚೆತ್ತಳು. ಮೈಯಲ್ಲಿ ಚಳಿಚಳಿ ಎನ್ನಿಸಿತು. ತನ್ನ ಮುಂದಿರುವುದನ್ನು ಕಂಡು ಆಶ್ಚರ್ಯವಾಯಿತು. ಒಂದೆರಡು ಸಲ ಅವಳು ಕಣ್ಣು ಮಿಟುಕಿಸಿ ನೋಡಿದಳು. ಹಾಸ್ಯಾಸ್ಪದವಾದ ಕುರಿಯ ಕಾಲನ್ನು ಅವಳು ಇನ್ನೂ ಕೈಯಲ್ಲಿ ಭದ್ರವಾಗಿ ಹಿಡಿದಿದ್ದಳು.
"ಸರಿ, ನಾನು ಅವನನ್ನು ಕೊಂದುಬಿಟ್ಟೆ," ಎಂದು ತನಗೆ ತಾನೇ ಹೇಳಿಕೊಂಡಳು.
ಅದ್ಭುತ ಎಂಬಂತೆ ಅವಳ ಮನಸ್ಸು ಒಮ್ಮೆಲೇ ತಿಳಿಯಾಯಿತು. ಅವಳ ಆಲೋಚನೆ ತೀವ್ರವಾಯಿತು. ಒಬ್ಬ ಪತ್ತೆದಾರ ಪೋಲೀಸನ ಹೆಂಡತಿಯಾಗಿದ್ದರಿಂದ ಈ ತಪ್ಪಿಗೆ ಶಿಕ್ಷೆ ಏನೆಂಬುದು ಅವಳಿಗೆ ಚೆನ್ನಾಗಿ ಗೊತ್ತಿತ್ತು. ಅದರ ಬಗ್ಗೆ ಅವಳಿಗೆ ಚಿಂತೆ ಇರಲಿಲ್ಲ. ಈಗ ಏನಾದರೇನು? ಆದರೆ ತನ್ನ ಹೊಟ್ಟೆಯಲ್ಲಿದ್ದ ಮಗುವಿನ ಯೋಚನೆ ಬಂತು. ಮರಣದಂಡನೆ ಕೊಡುವವರು ಜೊತೆಗೆ ಮಗುವನ್ನೂ ಸಾಯಿಸಿಬಿಡುತ್ತಾರೆಯೇ? ಅಥವಾ ಹತ್ತು ತಿಂಗಳವರೆಗೆ ಕಾಯುತ್ತಾರೆಯೇ? ಏನು ಮಾಡುತ್ತಾರೆ?
ಮೇರಿ ಮಲೋನಿಗೆ ಇದರ ಬಗ್ಗೆ ಜ್ಞಾನವಿರಲಿಲ್ಲ. ಈಗ ಅದನ್ನೆಲ್ಲಾ ಯೋಚಿಸುವ ಸಮಯವೂ ಅಲ್ಲ.
ಅವಳು ಮಾಂಸದ ತುಂಡನ್ನು ಅಡಿಗೆಮನೆಗೆ ಕೊಂಡೊಯ್ದು ಅದನ್ನು ಪಾತ್ರೆಯಲ್ಲಿಟ್ಟು ಬೇಯಿಸುವ ಒಲೆಯಲ್ಲಿ ತಳ್ಳಿ ಉರಿ ದೊಡ್ಡದು ಮಾಡಿದಳು. ನಂತರ ಕೈ ತೊಳೆದುಕೊಂಡು ಮೇಲಿದ್ದ ಮಲಗುವ ಕೋಣೆಗೆ ಧಾವಿಸಿದಳು. ಅಲ್ಲಿ ಕನ್ನಡಿಯ ಮುಂದೆ ಕುಳಿತು ತನ್ನ ಕೂದಲು ಬಾಚಿಕೊಂಡಳು. ತುಟಿಗೆ ಬಣ್ಣ ಸವರಿಕೊಂಡು ಮುಖಕ್ಕೆ ಮೇಕಪ್ ಲೇಪಿಸಿದಳು. ಮುಗುಳ್ನಗಲು ಪ್ರಯತ್ನಿಸಿದಳು. ಅದು ವಿಚಿತ್ರವೆಂದು ಅನ್ನಿಸಿ ಮತ್ತೊಮ್ಮೆ ಪ್ರಯತ್ನಿಸಿದಳು.
"ಹೆಲೋ ಸ್ಯಾಮ್," ಎಂದು ಗೆಲುವಿನ ಧ್ವನಿಯಲ್ಲಿ ಗಟ್ಟಿಯಾಗಿ ನುಡಿದಳು.
ತನ್ನ ಧ್ವನಿ ಅಪರಿಚಿತ ಎನ್ನಿಸಿತು.
"ನನಗೆ ಒಂದಿಷ್ಟು ಆಲೂಗೆಡ್ಡೆ ಬೇಕಾಗಿತ್ತಲ್ಲ, ಸ್ಯಾಮ್, ಹಾಗೇ ಒಂದು ಕ್ಯಾನ್ ಬಟಾಣಿ."
ಇದು ಎಷ್ಟೋ ಮೇಲು. ತನ್ನ ಮುಗುಳ್ನಗು ಮತ್ತು ಧ್ವನಿ ಎರಡೂ ಈಗ ಮಾಮೂಲಿನಂತೆ ತೋರಿದವು. ಇನ್ನೂ ಹಲವಾರು ಸಲ ಅವಳು ಅಭ್ಯಾಸ ಮಾಡಿದಳು. ನಂತರ ಕೆಳಗೆ ಧಾವಿಸಿ ತನ್ನ ಕೋಟ್ ಎತ್ತಿಕೊಂಡು ಹಿತ್ತಿಲ ಬಾಗಿಲಿನಿಂದ ಹೊರಬಿದ್ದು ಕೈದೋಟದ ಮೂಲಕ ಹಾಯುತ್ತಾ ಗೇಟ್ ತೆರೆದು ರಸ್ತೆಗೆ ಬಂದಳು.
(ಮುಂದಿನ ಭಾಗವನ್ನು ಇಲ್ಲಿ ಓದಿ)
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ