ಕಪಿಮುಷ್ಠಿ - 3
(ಚಿತ್ರ - ವಿಕಿಪೀಡಿಯ)
ಮೂಲ ಇಂಗ್ಲಿಷ್ ಕಥೆ:
ಡಬ್ಲ್ಯು ಡಬ್ಲ್ಯು ಜೇಕಬ್ಸ್
ಕನ್ನಡ ಅನುವಾದ:
ಸಿ ಪಿ ರವಿಕುಮಾರ್
ಮೂಲ ಇಂಗ್ಲಿಷ್ ಕಥೆ:
ಎರಡು ಮೈಲಿ ದೂರದಲ್ಲಿದ್ದ ಹೊಸದಾದ ದೊಡ್ಡ ಸ್ಮಶಾನದಲ್ಲಿ ಅಗಲಿದವನನ್ನು ಮಲಗಿಸಿ ವೃದ್ಧರು ಮನೆಗೆ ಹಿಂದಿರುಗಿದರು. ಗಾಢ ನೆರಳು ಮತ್ತು ಮೌನ ಮನೆಯನ್ನು ಕವಿದುಕೊಂಡಿತ್ತು. ಎಲ್ಲವೂ ಎಷ್ಟು ಬೇಗ ನಡೆದುಹೋಯಿತೆಂದರೆ ಅವರಿಗೆ ನಂಬಿಕೆಯೇ ಬರಲಿಲ್ಲ. ತಮ್ಮ ವಯಸ್ಸಾದ ಹೃದಯಗಳ ಮೇಲಿದ್ದ ಬಹಳ ದೊಡ್ಡ ಹೊರೆಯನ್ನು ಕಡಿಮೆ ಮಾಡುವಂತಹದ್ದು ಇನ್ನೂ ಏನಾದರೂ ಘಟಿಸುತ್ತದೆ ಎಂಬಂತೆ ಅಪೇಕ್ಷಾಭಾವನೆ ಇಟ್ಟುಕೊಂಡಿದ್ದರು.
ಆದರೆ ದಿನಗಳು ಕಳೆದಂತೆ ಅಂಥದ್ದೇನೂ ನಡೆಯಲಿಲ್ಲ. ಅಪೇಕ್ಷೆಯು ಕ್ರಮೇಣ ಕರಗಿ ಒಂದು ಬಗೆಯ ಉದಾಸೀನತೆ ಅವರಲ್ಲಿ ಮೊಳೆಯಿತು. ಅವರು ಈಗ ಹೆಚ್ಚು ಮಾತಾಡುತ್ತಿರಲಿಲ್ಲ. ಮಾತಾಡಲಾದರೂ ಏನಿದೆ? ದಿನವನ್ನು ಹೇಗೋ ದೂಡುವುದೇ ಅವರ ಕೆಲಸವಾಯಿತು.
ಒಂದು ವಾರದ ಅನಂತರದ ಮಾತು. ವೃದ್ಧನಿಗೆ ನಡುರಾತ್ರಿ ಎಚ್ಚರವಾದಾಗ ತಾನೊಬ್ಬನೇ ಇರುವುದರ ಅರಿವಾಯಿತು. ಕೋಣೆಯಲ್ಲಿ ಕತ್ತಲಿತ್ತು. ಕಿಟಕಿಯ ಹತ್ತಿರದಿಂದ ಅಳುವ ಸದ್ದು ಕೇಳಿಸುತ್ತಿತ್ತು. ಅವನು ಮೇಲೆದ್ದು ಕುಳಿತು ಆಲಿಸಿದ.
"ಬಾ ಮಲಗಿಕೋ - ಥಂಡಿಯಾದೀತು" ಎಂದು ನಯವಾದ ಸ್ವರದಲ್ಲಿ ನುಡಿದ.
"ನನ್ನ ಮಗ ಇದಕ್ಕಿಂತ ಥಂಡಿಯಲ್ಲಿ ಮಲಗಿದ್ದಾನೆ" ಎಂದು ವೃದ್ಧೆ ಮತ್ತಷ್ಟು ಅತ್ತಳು.
ಹಾಸಿಗೆ ಬೆಚ್ಚಗಿತ್ತು. ಅವನ ಕಣ್ಣುಗಳು ನಿದ್ದೆಯಿಂದ ಭಾರವಾಗಿದ್ದವು. ಅವಳ ಬಿಕ್ಕುಗಳು ಅವನಿಗೆ ಕೇಳಿಸದಾದವು. ಸ್ವಲ್ಪ ಹೊತ್ತು ಅವನು ಗಾಢ ನಿದ್ದೆಯಲ್ಲಿ ಮುಳುಗಿದ. ಆದರೆ ಅವನ ಹೆಂಡತಿಯ ಚೀತ್ಕಾರ ಅವನನ್ನು ಮೇಲೆಬ್ಬಿಸಿತು.
"ಮಂಗನ ಕೈಯಿ! ಮಂಗನ ಕೈಯಿ!" ಎಂದು ಅವಳು ಕೂಗಿಕೊಳ್ಳುತ್ತಿದ್ದಳು.
ಅವನು ಹೆದರಿಕೊಂಡು "ಎಲ್ಲಿ? ಎಲ್ಲಿದೆ? ಏನಾಯಿತು?" ಎಂದು ಬಡಬಡಿಸಿದ.
ಅವಳು ಅವನ ಬಳಿಗೆ ಎಡವುತ್ತಾ ಬಂದು "ಅದು ನನಗೆ ಬೇಕು! ನೀನು ಅದನ್ನು ನಾಶ ಪಡಿಸಲಿಲ್ಲ ತಾನೇ?" ಎಂದು ಶಾಂತವಾದ ಸ್ವರದಲ್ಲಿ ಕೇಳಿದಳು.
"ಇಲ್ಲ, ಅದು ಬೈಠಕ್ಕಿನಲ್ಲಿದೆ. ಒಂದು ಗೂಟಕ್ಕೆ ತೂಗುಹಾಕಿದೆ. ಯಾಕೆ?" ಎಂದು ಅವನು ವಿಸ್ಮಿತನಾಗಿ ಕೇಳಿದ.
ಅವಳು ನಕ್ಕಳೋ ಅತ್ತಳೋ ಅವನಿಗೆ ತಿಳಿಯಲಿಲ್ಲ. ಬಾಗಿ ಅವನಿಗೆ ಮುತ್ತಿಟ್ಟಳು.
"ನನಗೆ ಈಗ ಹೊಳೆಯಿತು! ಅದು ನನಗೆ ಇಷ್ಟು ದಿನ ಯಾಕೆ ಹೊಳೆಯಲಿಲ್ಲ? ನಿಮಗೆ ಯಾಕೆ ಹೊಳೆಯಲಿಲ್ಲ?" ಎಂದು ಅವಳು ಉನ್ಮಾದದಲ್ಲಿ ಕೂಗಿದಳು.
"ಏನು?" ಅವನು ಕೇಳಿದ.
"ಇನ್ನೂ ಎರಡು ಇಚ್ಛೆಗಳಿವೆ - ನಾವು ಇದುವರೆಗೂ ಒಂದನ್ನು ಮಾತ್ರ ಬೇಡಿಕೊಂಡಿದ್ದೇವೆ!" ಅವಳು ಆವೇಗದಿಂದ ಮಾತಾಡಿದಳು.
"ಅಷ್ಟು ಸಾಕಾಗಲಿಲ್ಲವೇನು?" ಅವನ ಧ್ವನಿ ಬಿರುಸಾಗಿತ್ತು.
"ಇಲ್ಲ! ನಮ್ಮ ಇನ್ನೊಂದು ಇಚ್ಛೆ ಪೂರ್ತಿಯಾಗಬೇಕು. ಹೋಗಿ - ಅದನ್ನು ಬೇಗ ತೊಗೊಂಡು ಬನ್ನಿ, ನಮ್ಮ ಮಗ ಮರಳಿ ಜೀವಂತವಾಗಿ ಬರಲಿ ಎಂದು ಕೇಳಿಕೊಳ್ಳಿ"
ಅವನು ಹಾಸಿಗೆಯಲ್ಲಿ ಎದ್ದು ಕುಳಿತು ತನ್ನ ಹೊದ್ದಿಕೆಯನ್ನು ತೆಗೆದೆಸೆದ. ಅವನ ಕೈಕಾಲುಗಳು ನಡುಗುತ್ತಿದ್ದವು. "ನಿನಗೆ ಹುಚ್ಚು ಹಿಡಿದಿದೆ!" ಎಂದು ಕೂಗಿದ.
"ಬೇಗ ತೊಗೊಂಡು ಬನ್ನಿ! ಬೇಗ ಕೇಳಿಕೊಳ್ಳಿ! ಅಯ್ಯೋ ನನ್ನ ಕಂದ! ನನ್ನ ಕಂದ!" ಎಂದು ಅವಳು ಏದುಬ್ಬುಸ ಪಡುತ್ತಾ ಮಾತಾಡಿದಳು.
ಅವಳ ಗಂಡ ಒಂದು ಬೆಂಕಿ ಕಡ್ಡಿ ಗೀರಿ ಮೋಂಬತ್ತಿ ಹಚ್ಚಿಟ್ಟ. "ನೀನು ಮಲಗಿಕೋ ಬಾ! ನೀನು ಏನು ಹೇಳುತ್ತಿದ್ದೀ ಅನ್ನೋ ಜ್ಞಾನ ನಿನಗಿಲ್ಲ," ಎಂದ.
"ನಮ್ಮ ಒಂದು ಇಚ್ಛೆ ಪೂರ್ತಿಯಾಯಿತೋ ಇಲ್ಲವೋ? ಇನ್ನೊಂದು ಇಚ್ಛೆ ಕೇಳಿಕೊಂಡರೆ ಏನು ತಪ್ಪು?" ಅವಳು ಜ್ವರ ಬಂದವರಂತೆ ಬಡಬಡಿಸಿದಳು.
"ಕಾಕತಾಳೀಯ ... ನೆನಪಿರಲಿ ... ಕಾಕತಾಳೀಯ" ವೃದ್ಧ ತೊದಲಿದ.
"ಹೋಗಿ ಅದನ್ನು ತೊಗೊಂಡು ಬಂದು ಕೇಳಿಕೊಳ್ಳಿ!" ಎಂದು ಅವಳು ಉದ್ವೇಗದಲ್ಲಿ ಅತ್ತಳು.
ವೃದ್ಧ ಅವಳ ಕಡೆ ತಿರುಗಿದ. ಅವನು ಮಾತಾಡಿದಾಗ ಅವನ ಧ್ವನಿ ನಡುಗುತ್ತಿತ್ತು. "ಅವನು ಸತ್ತು ಹತ್ತು ದಿನಗಳಾದವು. ಈ ವಿಷಯ ನಾನು ನಿನಗೆ ಹೇಳಿರಲಿಲ್ಲ. ಅವನ ದೇಹ ನೋಡಿದಾಗ ನನಗೆ ಅವನ ಗುರುತೇ ಸಿಕ್ಕಲಿಲ್ಲ. ಅವನ ಬಟ್ಟೆಯ ಆಧಾರದ ಮೇಲೆ ಗುರುತಿಸಿದೆ. ಆವಾಗ ಅವನನ್ನು ನಿನಗೆ ತೋರಿಸುವುದು ಸಾಧ್ಯವಾಗಲಿಲ್ಲ. ಈಗ ಹೇಗೆ ಸಾಧ್ಯ?"
"ಅವನನ್ನು ನೀವು ವಾಪಸ್ ಕರೆದುಕೊಂಡು ಬರಲೇಬೇಕು!" ಎಂದು ಅಳುತ್ತಾ ಅವಳು ಗಂಡನನ್ನು ಬಾಗಿಲತ್ತ ನೂಕಿದಳು. "ಯಾವ ಕಂದನಿಗೆ ಎದೆ ಹಾಲು ಕೊಟ್ಟು ಬೆಳೆಸಿದೇನೋ ಅವನನ್ನು ನೋಡಲು ಹೆದರುತ್ತೇನೆ ಅಂದುಕೊಂಡಿರಾ?"
ಅವನು ಕತ್ತಲಿನಲ್ಲಿ ತಡಕಾಡುತ್ತಾ ಬೈಠಕ್ ಖಾನೆಯ ಕಡೆ ಹೊರಟ. ಅಲ್ಲಿದ್ದ ಕಪಾಟಿನಲ್ಲಿ ಒಂದು ಮೊಳೆಗೆ ತಗುಲಿ ಹಾಕಿದ ಮಂಗನ ಮುಷ್ಠಿ ಹಾಗೇ ಇತ್ತು. ತಾನಿನ್ನೂ ಬೇಡಿಕೊಳ್ಳದ ಇಚ್ಛೆಯು ಫಲಿಸಿ ಮಗನ ರಕ್ತಸಿಕ್ತ ದೇಹವು ಮುಂದೆ ಬಂದು ನಿಂತರೆ ಎಂಬ ಆಲೋಚನೆ ಅವನನ್ನು ನಡುಗಿಸಿತು. ಕತ್ತಲಿನಲ್ಲಿ ತಾನು ದಿಕ್ಕು ಕಳೆದುಕೊಂಡಿದ್ದೇನೆ ಎಂಬ ಅರಿವಾಗಿ ಅವನು ಏದುಸಿರು ಬಿಟ್ಟ. ಅವನ ಹುಬ್ಬುಗಳ ಮೇಲೆ ಬೆವರ ಸಾಲು ಮೂಡಿ ತಣ್ಣಗಾದವು. ಅವನು ಮೇಜಿನ ತುದಿಯನ್ನು ಹಿಡಿದು ಗೋಡೆಯವರೆಗೆ ತಲುಪಿ ಗೋಡೆಯನ್ನು ತಡಕುತ್ತಾ ಕೊನೆಗೂ ಮಲಗುವ ಕೋಣೆಗೆ ಬಂದು ಸೇರಿದ.
ಅವನ ಹೆಂಡತಿಯ ಚೆಹರೆ ಕೂಡಾ ಬದಲಾದಂತೆ ತೋರಿತು. ಅವಳ ಮುಖ ಬಿಳಿಚಿತ್ತು. ಮುಖದ ಮೇಲೆ ನಿರೀಕ್ಷೆ ಕುಣಿಯುತ್ತಿತ್ತು. ಮೊದಲೇ ಹೆದರಿದ್ದವನಿಗೆ ಅವಳ ಚೆಹರೆ ವಿಲಕ್ಷಣವೆನ್ನಿಸಿತು. ಅವನಿಗೆ ಅವಳನ್ನು ಕಂಡು ಭಯವಾಯಿತು.
"ಹೂಂ, ಇಚ್ಛೆ ಹೇಳಿಕೊಳ್ಳಿ!" ಅವನ ಹೆಂಡತಿಯ ಧ್ವನಿ ವಿಚಿತ್ರವಾಗಿತ್ತು.
"ಇದು ಮೂರ್ಖತನ! ಇದು ದುಷ್ಟತನ!" ಎಂದು ಅವನು ತಡವರಿಸಿದ.
"ಇಚ್ಛೆ ಹೇಳಿಕೊಳ್ಳಿ ಅಂದೆ!" ಅವಳು ಪುನರಾವರ್ತಿಸಿದಳು.
ಅವನು ಕೈಯನ್ನು ಮೇಲೆತ್ತಿ "ನನ್ನ ಮಗ ಜೀವಂತವಾಗಿ ಬರಲೆಂದು ಕೇಳಿಕೊಳ್ಳುತ್ತೇನೆ" ಎಂದ.
ಅವನ ಕೈಯಿಂದ ಮಾಂತ್ರಿಕ ವಸ್ತು ಕೆಳಗೆ ಬಿತ್ತು. ಅವನು ಅದರ ಕಡೆ ದಿಗಿಲು ತುಂಬಿದ ಕಣ್ಣುಗಳಿಂದ ನೋಡಿದ. ಅಲ್ಲೇ ಒಂದು ಕುರ್ಚಿಯ ಮೇಲೆ ನಡುಗುತ್ತಾ ಕುಳಿತ. ಅವನ ಹೆಂಡತಿ ಕಿಟಕಿಯ ಕಡೆ ಧಾವಿಸಿ ಪರದೆಗಳನ್ನು ಸರಿಸಿದಳು. ಅವಳ ಕಣ್ಣುಗಳು ಕೆಂಪಗೆ ಉರಿಯುತ್ತಿದ್ದವು.
ಕಿಟಕಿಯಿಂದ ಹೊರಗೆ ಇಣುಕುತ್ತಿದ್ದ ಹೆಂಡತಿಯನ್ನು ನೋಡುತ್ತಾ ಅವನಿಗೆ ಥಂಡಿ ಹತ್ತಿತು. ಮುಗಿಯುತ್ತ ಬಂದಿದ್ದ ಮೋಂಬತ್ತಿಯ ಮಿಣುಕು ಬೆಳಕಿನಿಂದ ಕೋಣೆಯಲ್ಲಿ ನೆರಳುಗಳು ಅತ್ತಿಂದಿತ್ತ ತೂಗುತ್ತಿದ್ದವು. ಕೊನೆಗೂ ಮೋಂಬತ್ತಿ ಆರಿಹೋಯಿತು. ತನ್ನ ಇಚ್ಛೆ ಪೂರೈಸದೇ ಇದ್ದುದಕ್ಕೆ ಅತ್ಯಂತ ನಿರಾಳನಾಗಿ ಅವನು ಹಾಸಿಗೆಗೆ ಮರಳಿದ. ಸ್ವಲ್ಪ ಹೊತ್ತಿನ ನಂತರ ಅವನ ಹೆಂಡತಿಯೂ ಸದ್ದಿಲ್ಲದೇ ಉದಾಸೀನ ಮನೋಭಾವನೆಯಿಂದ ಬಂದು ಪಕ್ಕದಲ್ಲಿ ಮಲಗಿದಳು.
ಇಬ್ಬರೂ ಮಾತಾಡಲಿಲ್ಲ. ಗಡಿಯಾರದ ಟಿಕ್ ಟಿಕ್ ಸದ್ದನ್ನು ಕೇಳುತ್ತಾ ಸುಮ್ಮನೆ ಮಲಗಿದ್ದರು. ಮರದ ಮೆಟ್ಟಿಲು ಕಿರ್ರ್ ಎಂದು ಸದ್ದಾಯಿತು. ಒಂದು ಇಲಿ ಕೀಚ್ ಕೀಚ್ ಎಂದು ಸದ್ದು ಮಾಡುತ್ತಾ ಹಾದುಹೋಯಿತು. ಕತ್ತಲು ಅಸಹನೀಯ ಎನ್ನಿಸಿ ಅವನು ಮೇಲೆದ್ದ. ಒಂದಾದ ನಂತರ ಒಂದು ಬೆಂಕಿಕಡ್ಡಿಗಳನ್ನು ಗೀರುತ್ತಾ ಅದರ ಬೆಳಕಿನಲ್ಲಿ ಮೋಂಬತ್ತಿ ತರಲು ಕೆಳಗಿನ ಉಗ್ರಾಣಕ್ಕೆ ಹೊರಟ.
ಕೊನೆಯ ಮೆಟ್ಟಿಲು ಇಳಿಯುವಾಗ ಬೆಂಕಿಕಡ್ಡಿ ಆರಿತು. ಇನ್ನೊಂದನ್ನು ಗೀರುವ ಮುನ್ನವೇ ಯಾರೋ ಮೆಲ್ಲಗೆ ಮುಂಬಾಗಿಲು ತಟ್ಟಿದ ಸದ್ದಾಯಿತು.
ಅವನ ಕೈಗಳಿಂದ ಬೆಂಕಿಕಡ್ಡಿಗಳು ಕೆಳಗೆ ಬಿದ್ದವು. ಅವನು ಸದ್ದಿಲ್ಲದೆ ಕಲ್ಲಾಗಿ ಉಸಿರು ಬಿಗಿಹಿಡಿದು ನಿಂತ. ಮುಂಬಾಗಿಲು ತಟ್ಟಿದ ಸದ್ದು ಮತ್ತೆ ಕೇಳಿಸಿತು. ಅವನು ಕೂಡಲೇ ತನ್ನ ಶಕ್ತಿಯನ್ನೆಲ್ಲಾ ಒಗ್ಗೂಡಿಸಿಕೊಂಡು ಮೆಟ್ಟಿಲುಗಳನ್ನು ಧಡಧಡನೆ ಏರಿ ಮಲಗುವ ಕೋಣೆ ಸೇರಿ ಬಾಗಿಲು ಹಾಕಿಕೊಂಡ. ಬಾಗಿಲನ್ನು ತಟ್ಟಿದ ಸದ್ದು ಮತ್ತೆ ಕೇಳಿಸಿತು.
"ಅದೇನು?" ಎನ್ನುತ್ತಾ ವೃದ್ಧೆ ಎದ್ದು ಕುಳಿತಳು.
"ಇಲಿ, ಅಷ್ಟೆ! ನಾನು ಕೆಳಗೆ ಹೋದಾಗ ಮೆಟ್ಟಿಲ ಮೇಲೆ ಕಾಣಿಸಿತು" ಎನ್ನುವಾಗ ಅವನ ಧ್ವನಿ ನಡುಗಿತು.
ಅವನ ಹೆಂಡತಿ ಆಲಿಸುತ್ತಾ ಕುಳಿತೇ ಇದ್ದಳು. ಈಗ ಜೋರಾಗಿ ಬಾಗಿಲು ತಟ್ಟಿದ ಸದ್ದು ಇಡೀ ಮನೆಯಲ್ಲಿ ಮಾರ್ದನಿಸಿತು.
"ಹರ್ಬರ್ಟ್! ನಮ್ಮ ಹರ್ಬರ್ಟ್!" ಎಂದು ಅವಳು ಚೀತ್ಕರಿಸಿದಳು.
ಅವಳು ಬಾಗಿಲ ಕಡೆಗೆ ಓಡಿದಳು. ಆದರೆ ಅಲ್ಲಿ ಅವಳಿಗಿಂತ ಮುಂಚೆ ತಲುಪಿದ್ದ ಅವಳ ಗಂಡ ಅವಳ ತೋಳನ್ನು ಗಟ್ಟಿಯಾಗಿ ಹಿಡಿದು ನಿಲ್ಲಿಸಿದ.
"ಏನು ಮಾಡ್ತಿದ್ದೀಯಾ?" ಎಂದು ಅವನು ಪಿಸುಗುಟ್ಟಿದ.
"ನನ್ನ ಮಗು ಹರ್ಬರ್ಟ್!" ಅವಳು ಬಿಡಿಸಿಕೊಳ್ಳಲು ಪ್ರಯತ್ನಿಸುತ್ತಾ ಕೂಗಿದಳು. "ಅವನು ಎರಡು ಮೈಲಿ ದೂರದಿಂದ ಬರಬೇಕು ಅನ್ನೋದು ನನಗೆ ಮರೆತೇ ಹೋಗಿತ್ತು! ಬಿಡಿ! ನಾನು ಹೋಗಿ ಬಾಗಿಲು ತೆಗೆಯಬೇಕು!"
"ದೇವರ ಸಲುವಾಗಿ ಅವನನ್ನು ಒಳಕ್ಕೆ ಬಿಡಬೇಡ!" ಅವನು ನಡುಗುತ್ತಾ ಅವಳನ್ನು ಅಂಗಲಾಚಿದ.
"ಸ್ವಂತ ಮಗನನ್ನು ಕಂಡರೆ ನಿಮಗೆ ಹೆದರಿಕೆಯೇ! ಬಿಡಿ ನನ್ನನ್ನು! ನಾನು ಬರ್ತಿದ್ದೀನಪ್ಪ ಹರ್ಬರ್ಟ್! ಬರ್ತಿದ್ದೀನಿ ತಾಳು!"
ಇನ್ನೊಮ್ಮೆ, ಮತ್ತೊಮ್ಮೆ ಬಾಗಿಲು ತಟ್ಟಿದ ಸದ್ದಾಯಿತು. ತನ್ನ ಶಕ್ತಿಯೆಲ್ಲಾ ಒಗ್ಗೂಡಿಸಿ ವೃದ್ಧೆ ಅವನಿಂದ ಬಿಡಿಸಿಕೊಂಡು ಓಡಿದಳು. ದಯವಿಟ್ಟು ಬಾಗಿಲು ತೆರೆಯಬೇಡ ಎಂದು ಕೂಗುತ್ತಾ ಅವನು ಅವಳನ್ನು ಹಿಂಬಾಲಿಸಿದ. ಅವನಿಗೆ ಚೈನು ಎಳೆದ ಸದ್ದು ಕೇಳಿತು. ಚಿಲಕದ ಸದ್ದು ಕೇಳಿತು.
ಅವಳು ಏದುಸಿರು ಬಿಡುತ್ತಾ "ಇಲ್ಲಿ ಬನ್ನಿ! ಚಿಲಕ ನನಗೆ ನಿಲುಕುತ್ತಿಲ್ಲ!" ಎಂದು ಕೂಗಿದಳು.
ಆದರೆ ಅವಳ ಗಂಡ ತನ್ನ ಕೈಕಾಲುಗಳನ್ನು ನೆಲದ ಮೇಲೆ ಊರಿ ಮಂಗನ ಮುಷ್ಠಿಗಾಗಿ ಹುಚ್ಚನಂತೆ ಹುಡುಕಾಡುತ್ತಿದ್ದ. ಹೊರಗಿದ್ದದ್ದು ಒಳಗೆ ಬರುವ ಮುನ್ನವೇ ಸಿಕ್ಕರೆ ಸಾಕು! ಹೊರಗಡೆ ಬಾಗಿಲನ್ನು ಜೋರಾಗಿ ಮತ್ತೆ ಮತ್ತೆ ಬಡಿಯುವ ಸದ್ದು ಎದೆಯನ್ನು ಕುಟ್ಟುತ್ತಿತ್ತು. ಅವನ ಹೆಂಡತಿ ಕುರ್ಚಿಯನ್ನು ಬಾಗಿಲ ಕಡೆ ಎಳೆದ ಸದ್ದು ಕೇಳಿತು. ಚಿಲಕವನ್ನು ಸರಿಸಿದ ಸದ್ದು ಕೇಳುವುದಕ್ಕೂ ಅವನಿಗೆ ಮಂಗನ ಮುಷ್ಠಿ ಕೈಗೆ ಹತ್ತುವುದಕ್ಕೂ ಸರಿಯಾಯಿತು. ಅವನು ಕೈಯನ್ನು ಮೇಲೆತ್ತಿ ಅವಸರದಲ್ಲಿ ತನ್ನ ಕೊನೆಯ ಆಸೆಯನ್ನು ಹೇಳಿಕೊಂಡ.
ಒಮ್ಮೆಲೇ ಹೊರಗೆ ಬಾಗಿಲು ತಟ್ಟುವ ಸದ್ದು ನಿಂತಿತು. ಆದರೆ ಸದ್ದಿನ ಮಾರ್ದನಿ ಇನ್ನೂ ಕೇಳುತ್ತಿತ್ತು. ಕುರ್ಚಿಯನ್ನು ಹಿಂದಕ್ಕೆ ಸರಿಸಿ ಬಾಗಿಲು ತೆರೆದ ಸದ್ದುಗಳು ಅವನಿಗೆ ಕೇಳಿದವು. ಹೊರಗಡೆಯಿಂದ ಕುಳಿರ್ಗಾಳಿ ಮನೆಯೊಳಗೆ ನುಗ್ಗಿತು. ಅವನ ಹೆಂಡತಿಯ ನಿರಾಸೆ ಮತ್ತು ದುಃಖ ತುಂಬಿದ ವಿಲಾಪ ಕೇಳಿದಾಗ ಅವನಿಗೆ ಬಾಗಿಲತ್ತ ಹೋಗುವ ಧೈರ್ಯ ಬಂತು. ಅವನು ಓಡುತ್ತಾ ಅವಳ ಪಕ್ಕಕ್ಕೆ ಹೋಗಿ ನಿಂತ. ಇಬ್ಬರೂ ಗೇಟಿನವರೆಗೂ ನಡೆದರು. ಬೀದಿ ದೀಪವು ಮಿಣುಕು ಮಿಣುಕಾಗಿ ಉರಿಯುತ್ತಿತ್ತು. ಅದರ ಬೆಳಕಿನಲ್ಲಿ ಶಾಂತವಾದ ನಿರ್ಜನ ರಸ್ತೆ ಕಾಣಿಸಿತು.
(ಮುಗಿಯಿತು)
(c) 2014, C.P. Ravikumar
Kannada translation of 'Monkey's Paw' by W.W. Jacobs
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ