ಶ್ರೀಮಂತ ರೂಪದರ್ಶಿ - ೩

ಮೂಲ ಇಂಗ್ಲಿಷ್ ಕಥೆ - ಆಸ್ಕರ್ ವೈಲ್ಡ್ 
ಕನ್ನಡ ಅನುವಾದ - ಸಿ ಪಿ ರವಿಕುಮಾರ್ 
ಭಾಗ - ೩
"ಚಿಂದಿಯಾಗಿದ್ದರೇನು, ಅದೇ ಚೆನ್ನಾಗಿ ಒಪ್ಪುತ್ತಿತ್ತು! ನಾನೇನು ಹೊಸ ಉಡುಪು ಹಾಕಿಸಿ ಚಿತ್ರ ಬರೆಯಬೇಕಾಗಿತ್ತೇ! ನೀನು ಯಾವುದನ್ನು ಚಿಂದಿ ಅಂತ ಕರೀತೀಯೋ ಅದನ್ನು ನಾನು ಭಾವತೀವ್ರತೆ ಅಂತ ಕರೆಯುತ್ತೇನೆ. ನಿನಗೆ ಯಾವುದು ಬಡತನ ಅಂತ ಕಾಣಿಸುತ್ತೋ ಅದು ನನ್ನ ಕಣ್ಣಿಗೆ ಕಲೆ ಎಂದು ತೋರುತ್ತದೆ. ಇರಲಿ, ನೀನು ನಿನ್ನ ಹಳೆಯ ಬಟ್ಟೆ ಕೊಡಲು ಸಿದ್ಧನಾಗಿದ್ದೀಯ ಅಂತ ಸುದ್ದಿ ಮುಟ್ಟಿಸುತ್ತೇನೆ, ಬಿಡು," ಎಂದು ಟ್ರೆವರ್ ನುಡಿದ. 
"ನೀವು ಕಲಾವಿದರು ಹೃದಯಹೀನರು!" ಎಂದು ಹ್ಯೂಯಿ ಗಂಭೀರವಾದ. 
"ಒಬ್ಬ ಕಲಾವಿದನ ಹೃದಯ ಅವನ ತಲೆಯಲ್ಲಿ ಇರುತ್ತೆ. ನಮ್ಮ ಕೆಲಸ ಏನಿದ್ದರೂ ಜಗತ್ತನ್ನು ಇದ್ದ ಹಾಗೆ ತೋರಿಸುವುದೇ ಹೊರತು ಅದನ್ನು ತಿದ್ದುವುದಲ್ಲ. ಚಪ್ಪಲಿ ಹೊಲಿಯುವವನು ಚಪ್ಪಲಿ ಹೊಲಿಯಬೇಕು ಅಂತ ಗಾದೆ ಇಲ್ಲವೇ? ಅಂದಹಾಗೆ  ಲಾರಾ ಹೇಗಿದ್ದಾಳೆ? ನಮ್ಮ ರೂಪದರ್ಶಿಗೆ  ಅವಳ ವಿಷಯದಲ್ಲಿ ತುಂಬಾ ಕುತೂಹಲ ಇದ್ದಂತೆ ತೋರಿತು."
"ನೀನು ಅವನಿಗೆ ಲಾರಾ ವಿಷಯ ಯಾಕೆ ಹೇಳೋದಕ್ಕೆ ಹೋದೆ?" ಎಂದು ಹ್ಯೂಯಿ ನಸುಮುನಿಸು ತೋರಿದ. 
"ಲಾರಾ ವಿಷಯ ಅಷ್ಟೇ ಅಲ್ಲ, ನಮ್ಮ ಕರ್ನಲ್ ಸಾಹೇಬರು ಮತ್ತು ಹತ್ತು ಸಾವಿರ ಪೌಂಡ್ ವಿಷಯ ಕೂಡಾ ಹೇಳಿದ್ದೇನೆ."
"ನನ್ನ ಖಾಸಗೀ ವಿಷಯವನ್ನೆಲ್ಲಾ ಅವನ ಹತ್ತಿರ ಯಾಕೆ ಹೇಳಿದೆ? ಬೇರೆ ಕೆಲಸವಿರಲಿಲ್ಲವೇ?" ಎಂದು ಹ್ಯೂಯಿ ಮುಖ ಕೆಂಪಗೆ ಮಾಡಿಕೊಂಡ. 
"ಮರಿ, ನೀನು ಯಾರನ್ನು ಮುದಿ ಭಿಕ್ಷುಕ ಅಂತ ತಿಳಿದುಕೊಂಡಿದೀಯೋ ಅವರು ಯೂರೋಪಿನಲ್ಲೇ ದೊಡ್ಡ ಶ್ರೀಮಂತರು. ಇಡೀ ಲಂಡನ್ ನಗರವನ್ನೇ ಅವರು ಖರೀದಿ ಮಾಡಿದರೂ ಅವರ ಬ್ಯಾಂಕ್ ಖಾತೆಯಲ್ಲಿ ಹಣ ಇನ್ನೂ ಉಳಿದಿರುತ್ತೆ. ಎಲ್ಲಾ ದೇಶಗಳ ರಾಜಧಾನಿಗಳಲ್ಲೂ ಅವರಿಗೆ ಮನೆಗಳಿವೆ! ಚಿನ್ನದ ತಟ್ಟೆಯಲ್ಲಿ ಊಟ ಮಾಡೋ ಮನುಷ್ಯ. ಬೇಕೆನ್ನಿಸಿದರೆ ರಷ್ಯಾ ಯುದ್ಧಕ್ಕೆ ಹೋಗುವುದನ್ನು ತಪ್ಪಿಸಬಲ್ಲರು. ಗೊತ್ತಾಯಿತೆ?"
"ಇದೇನು ಹೇಳ್ತಿದ್ದೀಯ?" ಎಂದು ಹ್ಯೂಯಿ ಉದ್ಗರಿಸಿದ. 
 "ನಿಜ ಕಣೋ ಮರಿ. ನೀನು ನೆನ್ನೆ ನೋಡಿದ ರೂಪದರ್ಶಿಯ ಹೆಸರು ಬ್ಯಾರನ್ ಹಾಸ್ ಬರ್ಗ್. ನಾನು ಅವರನ್ನು ಚೆನ್ನಾಗಿ ಬಲ್ಲೆ. ನನ್ನ ಚಿತ್ರಗಳನ್ನು ಖರೀದಿ ಮಾಡುತ್ತಾರೆ. ಹೋದ ತಿಂಗಳು ಬಂದು ತಾನು ಭಿಕ್ಷುಕನ ರೂಪದಲ್ಲಿ ನಿಂತಿರುವ ಚಿತ್ರ ಬಿಡಿಸಬೇಕು ಅಂತ ಕೇಳಿಕೊಂಡರು. ಹೂಂ, ಯಾಕೆ ಕೇಳ್ತೀಯ! ಶ್ರೀಮಂತರಿಗೆ ನಾನಾ ತೆವಲುಗಳು! ಆದರೆ ಚಿಂದಿ ಬಟ್ಟೆಯಲ್ಲಿ ಅವರು ಅದ್ಭುತವಾಗಿ ಕಾಣುತ್ತಿದ್ದರು ಅನ್ನೋದಕ್ಕೆ ದೂಸರಾ ಮಾತಿಲ್ಲ. ಅವರಿಗೆ ನೆನ್ನೆ ಹಾಕಿದ್ದು ನಾನು ಸ್ಪೇನ್ ನಲ್ಲಿ ಹಿಂದೆ ಯಾವಾಗಲೋ ಕೊಂಡಿದ್ದ ಉಡುಪು."
"ಬ್ಯಾರನ್ ಹಾಸ್ ಬರ್ಗ್! ಅಯ್ಯೋ ಭಗವಂತ! ಹೋಗಿ ಹೋಗಿ ನಾನು ಅವರಿಗೆ ಒಂದು ಸಾವರಿನ್ ಕೊಟ್ಟುಬಿಟ್ಟೆನಲ್ಲ!" ಎಂದು ಕೂಗುತ್ತಾ ವಿದ್ಯುತ್ ಆಘಾತವಾದವನಂತೆ ಅಲ್ಲೇ ಇದ್ದ ಆರಾಮಕುರ್ಚಿಯ ಮೇಲೆ ಹ್ಯೂಯಿ ಕುಸಿದು ಕುಳಿತ. 
     ***
"ಏನು! ನೀನು ಅವರಿಗೆ ಸಾವರಿನ್ ಕೊಟ್ಟೆಯಾ?" ಎಂದು ಟ್ರೆವರ್ ಗಹಗಹಿಸಿ ನಕ್ಕ. "ಡ್ಯೂಮಾ ಹೇಳಿದ್ದು ನಿಜವೇ. ವ್ಯಾಪಾರಕ್ಕೆ ಬೇರೆಯವರ ಹಣವೇ ಬಂಡವಾಳ!"
"ಅವರು ಯಾರು ಅನ್ನೋದನ್ನ ನೀನು ನನಗೆ ಹೇಳಬಹುದಾಗಿತ್ತು, ಆಲನ್! ಈಗ ನೋಡು, ನಾನು ನಗುಪಾಟಲಾದೆ!" ಎಂದು ಹ್ಯೂಯಿ ಏಟು ತಿಂದವನ ಧ್ವನಿಯಲ್ಲಿ ಹೇಳಿದ. 
"ಮಹಾರಾಯ, ನೀನು ಹೀಗೆ ನಿನ್ನ ಹಣವನ್ನು ಕಂಡಕಂಡವರಿಗೆ ದಾನ ಮಾಡುವ ಸ್ವಭಾವದವನು ಅಂತ ನನಗೇನು ಕನಸು ಬೀಳಬೇಕೆ? ಒಬ್ಬ ಸುಂದರಿ ರೂಪದರ್ಶಿ ಹೆಣ್ಣನ್ನು ನಾನು ಆ ಕಡೆ ಹೋದಾಗ ನೀನು ಚುಂಬಿಸಿದ್ದರೆ ಅದು ಬೇರೆ ಆಗುತ್ತಿತ್ತು. ಆದರೆ ಒಬ್ಬ ಹರಕಲು ಬಟ್ಟೆ ಭಿಕ್ಷುಕನಿಗೆ ಸಾವರಿನ್ ಕೊಡುತ್ತೀಯಾ ಅಂತ ನಾನು ಖಂಡಿತ  ಊಹಿಸುತ್ತಿರಲಿಲ್ಲ! ಇಷ್ಟಕ್ಕೂ ಇವತ್ತು ನಾನು ಯಾರೂ ಅತಿಥಿಗಳನ್ನು ಅಪೇಕ್ಷಿಸಿಯೇ ಇರಲಿಲ್ಲ! ನೀನು ಇದ್ದಕ್ಕಿದ್ದಂತೆ ಬಂದೆ. ಬ್ಯಾರನ್ ಹಾಸ್ ಬರ್ಗ್ ಗೆ ಅವರು ಎಂಥದ್ದೋ ಚಿಂದಿ ಬಟ್ಟೆ ತೊಟ್ಟಿರುವಾಗ ಬೇರೊಬ್ಬರ ಮುಂದೆ ಅವರ ಹೆಸರು ಹೇಳಿದರೆ ಅವರಿಗೆ ಸರಿ ಹೋಗುತ್ತೋ ಇಲ್ಲವೋ ಅಂತ ಸುಮ್ಮನಾದೆ."
     "ಅವರು ನನ್ನನ್ನ ಶತಮೂರ್ಖ ಅಂದುಕೊಂಡಿರಬೇಕು!"
"ಖಂಡಿತ ಇಲ್ಲ! ನೀನು ಹೋದಮೇಲೆ ಅವರು ತುಂಬಾ ಒಳ್ಳೆಯ ಲಹರಿಯಲ್ಲಿದ್ದರು. ಪದೇ ಪದೇ ತಮಗೆ ತಾವೇ ಮುಗುಳ್ನಗುತ್ತಿದ್ದರು, ತಮ್ಮ ಸುಕ್ಕುಗಟ್ಟಿದ ಕೈಗಳನ್ನು ಉಜ್ಜಿಕೊಳ್ಳುತ್ತಿದ್ದರು. ನಿನ್ನಲ್ಲಿ ಅವರಿಗೆ ಅಂಥದ್ದೇನು ಕಂಡಿತು ಅಂತ ನನಗೆ ಆಶ್ಚರ್ಯವಾಯಿತು. ಈಗ ಅದರ ಗುಟ್ಟು ಗೊತ್ತಾಯಿತು! ನಿನ್ನ ಸಾವರಿನ್ ನಿನ್ನ ಪರವಾಗಿ ಅವರು ಬಂಡವಾಳ  ಹೂಡಿ ಪ್ರತಿವರ್ಷ ಎರಡು ಸಲ ಅದಕ್ಕೆ ಬಡ್ಡಿ ಕೊಡುತ್ತಾರೆ, ನೋಡುತ್ತಿರು. ಊಟದ ಸಮಯದಲ್ಲಿ ಎಲ್ಲರಿಗೂ ಹೇಳಿಕೊಳ್ಳುವುದಕ್ಕೆ ನೀನು ಅವರಿಗೆ ಒಂದು ಕತೆ ಕೊಟ್ಟಿದ್ದೀಯಲ್ಲ, ಅದೇ ಅವರಿಗೆ ಅಸಲು!"
  "ನಾನೊಬ್ಬ ಹತಭಾಗ್ಯ!" ಎಂದು ಹ್ಯೂಯಿ ಮುಲುಗಿದ. "ಸರಿ, ಈಗ ನಾನು ತೆಪ್ಪಗೆ ಮನೆಗೆ ಹೋಗುವುದು ಮೇಲು. ಆಲನ್, ನೀನು ಈ ವಿಷಯ ಯಾರ ಹತ್ತಿರವೂ ಬಾಯಿ ಬಿಡಕೂಡದು. ಹಾಗೆ ಮಾಡಿದರೆ ಯಾವುದೇ ಬಾರಿನಲ್ಲಿ ನಾನು  ಮುಖ ತೋರಿಸಲಾರೆ!"
"ಛೆ! ಹಾಗೆ ಯಾಕೆ ಯೋಚನೆ ಮಾಡ್ತೀಯೋ! ನಿನ್ನ ದಾನಶೌರ್ಯಕ್ಕೆ ಇದೊಂದು ಉಜ್ವಲ ಉದಾಹರಣೆಯಾಗಿ ಎಲ್ಲರಿಗೂ ಸದಾ ನೆನಪಿರುತ್ತೆ! ಇಷ್ಟು ಬೇಗ ಮನೆಗೆ ಹೋಗಬೇಕೆ? ಕೂತುಕೋ, ಇನ್ನೊಂದು ಸಿಗರೆಟ್ ಸೇದು, ಲಾರಾ ಬಗ್ಗೆ ಹರಟೆ ಹೊಡಿ!"
ಆದರೆ ಹ್ಯೂಯಿಗೆ ಅಲ್ಲ್ಲಿರಲು ಮನಸ್ಸಿರಲಿಲ್ಲ. ಅವನು ಭಾರವಾದ ಹೆಜ್ಜೆಯಿಡುತ್ತಾ ಮನೆಯ ಕಡೆ ಹೊರಟಾಗ ಆಲನ್ ಟ್ರೆವರ್ ಗಟ್ಟಿಯಾಗಿ ನಗುತ್ತಿದ್ದುದು ಇನ್ನೂ ಕೇಳುತ್ತಿತ್ತು 
ಮರುದಿನ ಬೆಳಗ್ಗೆ ಅವನು ಉಪಾಹಾರ ಸೇವಿಸುತ್ತಿದ್ದಾಗ ಮನೆಯ ಆಳು ಅವನಿಗೆ ಯಾರೋ ಅತಿಥಿಗಳು ಬಂದಿದ್ದಾರೆ ಎಂದು ತಿಳಿಸಿದ. ಅತಿಥಿ ಕಳಿಸಿದ ಗುರುತಿನ ಚೀಟಿಯ ಮೇಲೆ ಹೀಗೆ ಬರೆದಿತ್ತು - "ಶ್ರೀ ಗುಸ್ಟಾವ್ ನಾಡಿನ್, ಶ್ರೀಮಾನ್ ಬ್ಯಾರನ್ ಹಾಸ್ ಬರ್ಗ್ ಅವರ ಪರವಾಗಿ."
    * * *
ಹ್ಯೂಯಿಗೆ ಹೃದಯವೇ ಬಾಯಿಗೆ ಬಂದಂತಾಯಿತು. "ನನ್ನಿಂದ ಕ್ಷಮಾಪಣೆ ಹೇಳಿಸಿಕೊಳ್ಳಲು ಬಂದಿರಬಹುದು" ಎಂದು ಸಮಾಧಾನ ಮಾಡಿಕೊಂಡ. ತನ್ನ ಆಳಿಗೆ "ಅವರನ್ನು ಒಳಗೆ ಕರೆದುಕೊಂಡು ಬಾ" ಎಂದು ತಿಳಿಸಿದ. 
ಒಳಗೆ ಬಂದವನು ಒಬ್ಬ ವಯಸ್ಸಾದ ನೆರೆಗೂದಲಿನ ವ್ಯಕ್ತಿ. ಚಿನ್ನದ ಕಟ್ಟಿನ ಕನ್ನಡಕ ಧರಿಸಿದ್ದ. ಫ್ರೆಂಚ್ ಧಾಟಿಯಲ್ಲಿ ಮಾತಾಡುತ್ತ "ಶ್ರೀಮಾನ್ ಎರ್ಸ್ಕಿನ್ ಅವರೊಂದಿಗೆ ಮಾತಾಡುವ ಸೌಭಾಗ್ಯ ನನಗೆ ಪ್ರಾಪ್ತವಾಗಿದೆಯೇ?" ಎಂದ. ಪ್ರತಿಯಾಗಿ ಹ್ಯೂಯಿ ಅವನಿಗೆ ಬಾಗಿ ವಂದಿಸಿದ. 
"ನಾನು ಬ್ಯಾರನ್ ಹಾಸ್ ಬರ್ಗ್ ಪರವಾಗಿ ಬಂದಿದ್ದೇನೆ. ಅವರು -"
"ಸ್ವಾಮೀ, ದಯವಿಟ್ಟು ಅವರಿಗೆ ನನ್ನ ಹೃತ್ಪೂರ್ವಕ ಕ್ಷಮಾಪಣೆ ತಿಳಿಸಿ" ಎಂದು ಹ್ಯೂಯಿ ತೊದಲಿದ. 
ವಯಸ್ಕನು ಮುಗುಳ್ನಕ್ಕು "ಬ್ಯಾರನ್ ಅವರು ನಿಮಗೆ ಈ ಪತ್ರ ಕೊಟ್ಟು ಬರಲು ಕಳಿಸಿದ್ದಾರೆ" ಎಂದು ಹ್ಯೂಯಿ ಕಡೆಗೆ ಒಂದು ಲಕೋಟೆಯನ್ನು ಮುಂದೆ ಚಾಚಿದ. 
ಲಕೋಟೆಯ ಮೇಲೆ 'ಹ್ಯೂ ಎರ್ಸ್ಕಿನ್ ಮತ್ತು ಲಾರಾ ಮರ್ಟನ್ ಅವರಿಗೆ ವಿವಾಹದ ಉಡುಗೊರೆ" ಎಂದು ಬರೆದಿತ್ತು. ಒಳಗೆ ಹತ್ತು ಸಾವಿರ ಪೌಂಡ್ ಮೊತ್ತದ ಚೆಕ್ ಇತ್ತು.  
ವಿವಾಹ ಮಹೋತ್ಸವದಲ್ಲಿ ಆಲನ್ ಟ್ರೆವರ್ ಮದುಮಗನ ಬಂಟನಾಗಿ ಬಂದಿದ್ದ. ಮದುವೆಯ ಉಪಾಹಾರದ ವೇಳೆ ಬ್ಯಾರನ್ ವಧೂವರರನ್ನು ಹರಸಿದ್ದಲ್ಲದೆ ಎಲ್ಲರನ್ನೂ ಕುರಿತು ಕೆಲವು ಮಾತುಗಳನ್ನಾಡಿದರು. 
"ಶ್ರೀಮಂತರು ಚಿತ್ರಕ್ಕೆ ಮಾದರಿಯಾಗಿ ನಿಲ್ಲುವುದು ಅಪರೂಪ, ಆದರೆ ಸಮಾಜಕ್ಕೆ ಮಾದರಿಯಾಗಿ ನಿಲ್ಲುವ ಶ್ರೀಮಂತರು ಇನ್ನೂ ಅಪರೂಪ!" ಎಂದು ಆಲನ್ ಟ್ರೆವರ್ ಉದ್ಗರಿಸಿದ. 
(ಮುಗಿಯಿತು)

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)