ಕಡಿಯಲು ತಂದ ಕುರಿ - ಭಾಗ 1

ಮೂಲ ಇಂಗ್ಲಿಷ್ ಕಥೆ - ರೊಆಲ್ಡ್ ಡಾಲ್ 
ಕನ್ನಡ ಅನುವಾದ - ಸಿ ಪಿ ರವಿಕುಮಾರ್ 



ಕೋಣೆ ಚೊಕ್ಕಟವಾಗಿತ್ತು. ಬೆಚ್ಚಗಿತ್ತು. ಪರದೆಗಳನ್ನು ಮುಚ್ಚಿ ಮೇಜುಗಳ ಮೇಲೆ ಎರಡು ವಿದ್ಯುತ್ ದೀಪಗಳನ್ನು ಹಚ್ಚಿಡಲಾಗಿತ್ತು. ಅವಳ ಮೇಜಿನ ಮೇಲೊಂದು ಮತ್ತು ಎದುರಿಗಿದ್ದ ಮೇಜಿನ ಮೇಲೆ ಇನ್ನೊಂದು. ಅವಳು ಕುಳಿತಿದ್ದ ಮೇಜಿನ ಪಕ್ಕದ ತೆರೆದ ಕಪಾಟಿನಲ್ಲಿ ಎರಡು ಉದ್ದನೆಯ ಗಾಜಿನ ಲೋಟಗಳು, ಸೋಡಾ ಮತ್ತು ವ್ಹಿಸ್ಕಿ ಇವುಗಳನ್ನು ಅಚ್ಚುಕಟ್ಟಾಗಿ ಜೋಡಿಸಲಾಗಿತ್ತು. ಒಂದು ಥರ್ಮಾಸ್ ನಲ್ಲಿ ಐಸ್ ಚೂರುಗಳಿದ್ದವು.

ಮೇರಿ ಮಲೋನಿ ತನ್ನ ಗಂಡ ಕೆಲಸ ಮುಗಿಸಿಕೊಂಡು ಬರುವುದನ್ನೇ ಕಾಯುತ್ತಿದ್ದಳು.


ಆಗಾಗ ಅವಳು ಗಡಿಯಾರದ ಮುಖ ನೋಡುವಳು. ಆದರೆ ಅವಳ ನೋಟದಲ್ಲಿ ಆತಂಕವಿಲ್ಲ. ಒಂದೊಂದು ನಿಮಿಷ ಕಳೆದಂತೆ ಮಿಲನದ ಘಳಿಗೆ ಹತ್ತಿರ ಬಂದಿತೆಂಬ ತೃಪ್ತಿಭಾವ ಅವಳ ಮುಖದಲ್ಲಿ ಮನೆಮಾಡಿತ್ತು. ಅವಳ ಎಲ್ಲಾ ಕೆಲಸಗಳಲ್ಲೂ ಮುಗುಳ್ನಗೆ ಸೂಸುತ್ತಿತ್ತು. ಸೂಜಿ ದಾರ ಹಿಡಿದು ಹೊಲೆಯುತ್ತ ಕುಳಿತವಳ ಬಾಗಿದ ಮುಖದಲ್ಲಿ ಒಂದು ನಿಗೂಢವಾದ ನೆಮ್ಮದಿಯಿತ್ತು. ಅವಳಿಗೆ ಈಗ ಆರು ತಿಂಗಳು ತುಂಬಿದೆ. ಹೀಗಾಗಿ ಅವಳ ಚರ್ಮದಿಂದ ಅಪೂರ್ವವಾದ ಕಾಂತಿ ಸೂಸುತ್ತಿದೆ. ಅವಳ ತುಟಿಗಳು ಮೃದುವಾಗಿವೆ. ಶಾಂತಿ ತುಂಬಿದ ಕಣ್ಣುಗಳು ಎಂದಿಗಿಂತ ಕಪ್ಪಾಗಿ, ದೊಡ್ಡದಾಗಿ ಕಾಣುತ್ತಿವೆ. ಗಡಿಯಾರ ಐದಕ್ಕೆ ಹತ್ತು ನಿಮಿಷವೆಂದು ನುಡಿದಾಗ ಅವಳು ಕಿವಿ ನೆಟ್ಟಗೆ ಮಾಡಿಕೊಂಡು ಆಲಿಸಿದಳು. ಕೆಲವೇ ನಿಮಿಷಗಳಲ್ಲಿ ಎಂದಿನಂತೆ ಸಮಯಕ್ಕೆ ಸರಿಯಾಗಿ ಹೊರಗೆ ಚಕ್ರಗಳ ಸದ್ದಾಯಿತು. ಕಾರ್ ಬಾಗಿಲು ಮುಚ್ಚಿದ ಸದ್ದು. ಹೆಜ್ಜೆಗಳು ಸಮೀಪಿಸಿದ ಸದ್ದು. ಕೀಲಿಕೈ ತಿರುಗಿಸಿದ ಸದ್ದು. ಅವಳು ತನ್ನ ಕೈಯಲ್ಲಿದ್ದ ಹೊಲಿಗೆಯನ್ನು ಬದಿಗಿಟ್ಟು ಮೇಲೆದ್ದು ಅವನನ್ನು ಚುಂಬಿಸಿ ಬರಮಾಡಿಕೊಂಡಳು.

"ಹಲೋ ಡಾರ್ಲಿಂಗ್," ಎಂದಳು.

"ಹಲೋ ಡಾರ್ಲಿಂಗ್" ಅವನು ಉತ್ತರಿಸಿದ.

ಅವನ ಕೋಟನ್ನು ಕಳಚಿ ಅದನ್ನು ಗೂಡಿನಲ್ಲಿ ತೂಗುಹಾಕಿದಳು. ಕಪಾಟಿನತ್ತ ನಡೆದು ಇಬ್ಬರಿಗೂ ಪಾನೀಯಗಳನ್ನು ಸಿದ್ಧಪಡಿಸಿದಳು. ಅವನಿಗೆ ಹೆಚ್ಚು ವ್ಹಿಸ್ಕಿ, ತನಗೆ ಹೆಚ್ಚು ಸೋಡಾ ನೀರು. ಇದಾದ ನಂತರ ಅವಳು ತನ್ನ ಕುರ್ಚಿಯಲ್ಲಿ ಕುಳಿತು ಹೊಲಿಗೆ ಮುಂದುವರೆಸಿದಳು. ಅವನು ಅವಳ ಮುಂದಿದ್ದ ಕುರ್ಚಿಯಲ್ಲಿ ಉದ್ದದ ಲೋಟವನ್ನು ಎರಡೂ ಕೈಯಲ್ಲಿ ಹಿಡಿದು ಅದರೊಳಗಿದ್ದ ಐಸ್ ಚೂರುಗಳನ್ನು ಕುಲುಕುತ್ತಾ ಅವು ಗಾಜಿಗೆ ತಾಗಿ ಕಿಂಕಿಣಿಸುವುದನ್ನೇ ಕೇಳುತ್ತಾ ಕುಳಿತಿದ್ದ.

ಪ್ರತಿದಿನವೂ ಅವಳಿಗೆ ಈ ಸಮಯ ಸ್ವರ್ಗೀಯವೆಂಬಂತೆ ತೋರುವುದು. ಒಂದು ಲೋಟ ಒಳಗಿಳಿಯುವವರೆಗೂ ಅವನು ಮಾತಾಡುವುದಿಲ್ಲ ಎಂದು ಅವಳಿಗೆ ಗೊತ್ತು. ಅವಳಿಗೋ ಇಡೀ ದಿನ ಒಬ್ಬಳೇ ಮನೆಯಲ್ಲಿ ದುಡಿಯುತ್ತಾ ಕಳೆದು ಈಗ ಹೀಗೆ ಅವನೊಟ್ಟಿಗೆ ಕೂಡುವುದು ಆಪ್ಯಾಯಮಾನವಾಗಿತ್ತು. ಬಿಸಿಲಿನಲ್ಲಿ ಮಲಗಿದವರಿಗೆ ಉಂಟಾಗುವ ಬೆಚ್ಚಗಿನ ಅನುಭವದಂತೆ ಅವನ ಮೈಯಿಂದ ಹೊರಹೊಮ್ಮುತ್ತಿದ್ದ ಗಂಡುತನ ಅವಳ ಮೈಯನ್ನು ಬೆಚ್ಚಗೆ ಮಾಡುತ್ತಿತ್ತು. ಅವನು ಕುರ್ಚಿಯಲ್ಲಿ ಆರಾಮವಾಗಿ ಕುಳಿತ ರೀತಿ, ಕೋಣೆಯ ತುಂಬಾ ದೊಡ್ಡದೊಡ್ಡ ಹೆಜ್ಜೆ ಹಾಕುತ್ತಾ ಓಡಾಡುವ ರೀತಿ - ಇವೆಲ್ಲಾ ಅವಳಿಗೆ ಪ್ರಿಯವಾಗಿದ್ದವು. ತನ್ನನ್ನು ನೋಡುವಾಗ ಅವನ ಕಣ್ಣುಗಳಲ್ಲಿದ್ದ ದೂರದ ನೋಟ, ಆ ನೋಟದಲ್ಲಿದ್ದ ಏಕಾಗ್ರತೆ, ಅವನ ತುಟಿಗಳ ವಿಚಿತ್ರ ಭಂಗಿ, ಸುಸ್ತಾಗಿ ಬಂದವನು ಒಂದು ಲೋಟ ವ್ಹಿಸ್ಕಿ ಒಳಗೆ ಇಳಿಯುವವರೆಗೂ ತಳೆಯುತ್ತಿದ್ದ ಮೌನ - ಇವೆಲ್ಲಾ ಅವಳ ಮೇಲೆ ಮೋಡಿ ಮಾಡುತ್ತಿದ್ದವು.





"ಸುಸ್ತಾಗಿದೆಯೇ ಡಾರ್ಲಿಂಗ್?"

"ಹೌದು, ಸುಸ್ತಾಗಿದೆ" ಎಂದವನು ಎಂದೂ ಇಲ್ಲದಂತೆ ಲೋಟವನ್ನು ಮೇಲೆತ್ತಿ ಅದರಲ್ಲಿದ್ದ ಅರ್ಧದಷ್ಟು ವ್ಹಿಸ್ಕಿಯನ್ನು ಒಂದೇ ಗುಟುಕಿಗೆ ಕುಡಿದು ಮುಗಿಸಿದ. ಅವಳು ಅವನ ಕಡೆಗೆ ನೋಡುತ್ತಿರಲಿಲ್ಲವಾದರೂ ಅವನ ಲೋಟದಲ್ಲಿದ್ದ ಐಸ್ ಚೂರುಗಳು ಸಶಬ್ದವಾಗಿ ಕೆಳಗೆ ಬೀಳುವುದನ್ನು ಕಂಡು ಏನಾಯಿತೆಂದು ಊಹಿಸಿದಳು. ಅವನು ಮೇಲೆದ್ದು ಮತ್ತೊಂದು ಲೋಟ ಪಾನೀಯವನ್ನು ತಯಾರಿಸಲು ಹೊರಟ.

"ಅಯ್ಯೋ, ನಾನು ಮಾಡ್ತೀನಿ!" ಎಂದು ಅವಳು ಧಡಕ್ಕನೆ ಮೇಲೆದ್ದಳು.

"ನೀನು ಕೂಡು!" ಎಂದು ಅವನು ಅಪ್ಪಣೆ ಮಾಡಿದ.

ಅವನು ಬೆರೆಸಿ ತಂದ ಪಾನೀಯದಲ್ಲಿ ವ್ಹಿಸ್ಕಿಯೇ ಹೆಚ್ಚಾಗಿದ್ದರಿಂದ ಅದು ಗಾಢ ಜೇನು ಬಣ್ಣವಾಗಿದ್ದುದನ್ನು ಅವಳು ಗಮನಿಸಿದಳು.

"ಡಾರ್ಲಿಂಗ್, ನಿನ್ನ ಮನೆ ಚಪ್ಪಲಿ ತಂದುಕೊಡಲೆ?"

"ಬೇಡ."

ಅವನು ಮದ್ಯಪಾನ ಮಾಡುವುದನ್ನು ಅವಳು ನೋಡುತ್ತಾ ಕುಳಿತಳು. ಅದರಲ್ಲಿ ವ್ಹಿಸ್ಕಿಯ ಅಂಶ ಹೆಚ್ಚಾಗಿದ್ದರಿಂದ ಅದು ಎಣ್ಣೆಯ ಹಾಗೆ ಕಾಣುತ್ತಿತ್ತು.

"ನಿನ್ನಷ್ಟು ಹಿರಿಯ ಪೋಲೀಸ್ ಅಧಿಕಾರಿಯನ್ನು ಕೂಡಾ ಇಡೀ ದಿನ ಹೀಗೆ ಓಡಾಡಿಸಿ ದಣಿಸುತ್ತಾರಲ್ಲ, ಅನ್ಯಾಯ!" ಎಂದಳು.

ಅವನು ಉತ್ತರಿಸಲಿಲ್ಲ. ಅವಳು ಮೌನವಾಗಿ ತನ್ನ ಹೊಲಿಗೆ ಮುಂದುವರೆಸಿದಳು. ಆದರೆ ಅವನು ತುಟಿಗೆ ಮದ್ಯದ ಲೋಟವನ್ನು ಕೊಂಡೊಯ್ದಾಗೆಲ್ಲಾ ಐಸ್ ಚೂರುಗಳು ಖಣಖಣ ಸದ್ದು ಮಾಡುವುದನ್ನು ಅವಳು ಕೇಳಿಸಿಕೊಳ್ಳುತ್ತಿದ್ದಳು.

"ಡಾರ್ಲಿಂಗ್, ನಿನಗೆ ತಿನ್ನಲು ಒಂದಿಷ್ಟು ಗಿಣ್ಣು ತಂದುಕೊಡಲೇ? ಇವತ್ತು ಗುರುವಾರ ಅಂತ ನಾನು ಅಡಿಗೆ ಮಾಡಿಲ್ಲ," ಎಂದಳು.

"ಬೇಡ," ಅವನೆಂದ.

"ನಿನಗೆ ತೀರಾ ಸುಸ್ತಾಗಿದ್ದರೆ ಹೊರಗೆ ಊಟ ಮಾಡುವುದಕ್ಕೆ ಹೋಗುವುದು ಬೇಡ. ಫ್ರಿಜ್ ನಲ್ಲಿ ಅದೂ-ಇದೂ ಸಾಕಷ್ಟಿದೆ. ಅದನ್ನು ಇಲ್ಲೇ ಬಿಸಿ ಮಾಡಿ ತರ್ತೇನೆ - ನೀನು ಕುರ್ಚಿ ಬಿಟ್ಟು ಕದಲುವುದೂ ಬೇಡ."

ಅವನ ಉತ್ತರಕ್ಕಾಗಿ ಅವಳು ಕಾದಳು. ಅವನು ಮಾತಾಡಲೂ ಇಲ್ಲ, ಯಾವ ಸನ್ನೆಯೂ ಮಾಡಲಿಲ್ಲ.

"ಸರಿ, ಮೊದಲು ಒಂದಿಷ್ಟು ಗಿಣ್ಣು ಮತ್ತು ಉಪ್ಪಿನ ಬಿಸ್ಕತ್ತು ತರ್ತೇನೆ."

"ನನಗೆ ಬೇಡ," ಅವನೆಂದ.

ಅವಳು ಮುಜುಗರ ಪಡುತ್ತ ಕುರ್ಚಿಯಲ್ಲಿ ಕುಳಿತಲ್ಲೇ ಅಲ್ಲಾಡಿದಳು. ತನ್ನ ಬಟ್ಟಲುಗಣ್ಣುಗಳಿಂದ ಅವನ ಕಡೆಗೇ ನೋಡುತ್ತಾ "ನೀನು ಏನಾದರೂ ತಿನ್ನಲೇ ಬೇಕು. ನಾನು ಅಡಿಗೆ ಮಾಡಿ ತರ್ತೇನೆ - ಇಷ್ಟವಾದರೆ ತಿನ್ನುವೆಯಂತೆ," ಎಂದಳು.

ಮೇಲೆದ್ದು ತನ್ನ ಹೊಲಿಗೆ ಸಾಮಾನುಗಳನ್ನು ಮೇಜಿನ ಮೇಲೆ ದೀಪದ ಪಕ್ಕ ಇಟ್ಟಳು.

"ಕೂಡು, ಒಂದು ನಿಮಿಷ ಸುಮ್ಮನೆ ಕೂಡು," ಅವನೆಂದ.

ಅವಳಿಗೆ ಈಗ ಭಯವಾಗತೊಡಗಿತು.

"ಹೂಂ, ಕೂಡು," ಅವನೆಂದ.

ಅವಳು ಬಿಟ್ಟ ಕಣ್ಣುಗಳಿಂದ  ಭಯಮಿಶ್ರಿತ ನೋಟದಿಂದ ಅವನನ್ನೇ ಗಮನಿಸುತ್ತಾ ನಿಧಾನವಾಗಿ ಕುರ್ಚಿಯಲ್ಲಿ ಆಸೀನಳಾದಳು. ಅವನು ತನ್ನ ಎರಡನೇ ಲೋಟ ಖಾಲಿ ಮಾಡಿ ಲೋಟದಲ್ಲಿ ಇಣುಕಿ ನೋಡುತ್ತಿದ್ದ. ಅವನ ಹುಬ್ಬುಗಳು ಗಂಟು ಹಾಕಿಕೊಂಡಿದ್ದವು.

"ಇಲ್ಲಿ ಕೇಳು, ನಿನಗೆ ನಾನು ಏನೋ ಹೇಳಬೇಕು," ಎಂದ.

"ಏನಾಯಿತು ಡಾರ್ಲಿಂಗ್? ಏನಾದರೂ ಆಯಿತೇ?"

ಅವನು ಈಗ ಸಂಪೂರ್ಣವಾಗಿ ನಿಶ್ಚಲನಾಗಿದ್ದ. ದೀಪದ ಬೆಳಕು ಅವನ ಮೇಲೆ ಬೀಳುತ್ತಿತ್ತು. ಅವನ ಕತ್ತು ಬಾಗಿದ್ದರಿಂದ ಗದ್ದ ಮತ್ತು ಬಾಯಿಗಳ ಮೇಲೆ ನೆರಳಿತ್ತು. ಅವನ ಕಣ್ಣಿನ ಅಂಚಿನಲ್ಲಿ ಚಲನೆಯಾದದ್ದನ್ನು ಅವಳು ಗಮನಿಸಿದಳು.

"ನಿನಗೆ ಇದನ್ನು ಕೇಳಿ ಆಘಾತವಾಗಬಹುದು. ಆದರೆ ನಾನು ಇದರ ವಿಷಯ ಸಾಕಷ್ಟು ಆಲೋಚನೆ ಮಾಡಿದ್ದೇನೆ. ನಿನಗೆ ಆದಷ್ಟೂ ಬೇಗ ವಿಷಯ ಹೇಳಿಬಿಡುವುದೇ ಮೇಲು. ನನ್ನ ಮೇಲೆ ನೀನು ತೀರಾ ಸಿಟ್ಟಾಗುವುದಿಲ್ಲ ಅಂದುಕೊಂಡಿದ್ದೇನೆ."


ಅವನು ವಿಷಯವನ್ನು ಹೇಳಿದ. ಹೇಳಲು ಬಹಳ ಹೊತ್ತು ಬೇಕಾಗಲಿಲ್ಲ. ನಾಲ್ಕೋ ಐದೋ ನಿಮಿಷಗಳಲ್ಲಿ ಹೇಳುವುದೆಲ್ಲಾ ಮುಗಿಯಿತು. ಅವಳು ಅವನ ಮಾತುಗಳನ್ನು ಮೌನವಾಗಿ ಕೇಳಿಸಿಕೊಂಡಳು. ಅವಳ ಮುಖದ ಮೇಲೆ ಭೀತಿ ಕುಣಿಯುತ್ತಿತ್ತು. ಅವನಾಡಿದ ಪ್ರತಿಯೊಂದು ಮಾತೂ ಅವನನ್ನು ತನ್ನಿಂದ ದೂರ ಕರೆದೊಯ್ಯುತ್ತಿದ್ದಂತೆ ಅವಳಿಗೆ ಭಾಸವಾಯಿತು.

(ಮುಂದಿನ ಭಾಗವನ್ನು ಇಲ್ಲಿ ಓದಿ)

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)