ಕಪಿಮುಷ್ಠಿ - 2




ಮೂಲ ಇಂಗ್ಲಿಷ್ ಕಥೆ:
ಡಬ್ಲ್ಯು ಡಬ್ಲ್ಯು ಜೇಕಬ್ಸ್ 

ಕನ್ನಡ ಅನುವಾದ:
ಸಿ ಪಿ ರವಿಕುಮಾರ್ 



ಭಾಗ - ೨


ಮರುದಿನ ಬೆಳಗ್ಗೆ ಅವರು ಉಪಾಹಾರಕ್ಕೆಂದು ಮೇಜಿನ ಮುಂದೆ ಕುಳಿತಾಗ ಚಳಿಗಾಲದ ಸೂರ್ಯರಶ್ಮಿ ಅವರ ಮೇಲೆ ಹಿತವಾಗಿ ಬೀಳುತ್ತಿತ್ತು.  ತಾನು ಹಿಂದಿನ ರಾತ್ರಿ ವೃಥಾ ಹೆದರಿಕೊಂಡಿದ್ದನ್ನು ನೆನೆದು  ಹರ್ಬರ್ಟ್ ನಕ್ಕ. ಬೆಳಗ್ಗಿನ ಹೊತ್ತಿನಲ್ಲಿ ಕೋಣೆಯಲ್ಲಿ ಒಂದು ಬಗೆಯ ಸ್ವಸ್ಥ ಭಾವನೆ ಹೊಮ್ಮುತ್ತಿತ್ತು. ಒಣಗಿ ಸುಕ್ಕಾದ ಮಂಗನ ಕೈ ಅಲ್ಲೇ ಕಪಾಟಿನ ಮೇಲೆ ಸುಮ್ಮನೇ ಬಿದ್ದಿತ್ತು; ಅದರಲ್ಲಿ ಯಾವ ವಿಶೇಷವೂ ಇದ್ದಂತೆ ತೋರುತ್ತಿರಲಿಲ್ಲ. 

"ಎಲ್ಲಾ ಯೋಧರೂ ಒಂದೇ ತರಹ ಇರುತ್ತಾರೆ ಅಂತ ಕಾಣುತ್ತೆ! ನೆನ್ನೆ ರಾತ್ರಿ ಆತ ಹೇಳಿದ್ದನ್ನೆಲ್ಲಾ ಹುಚ್ಚರ ಹಾಗೆ ಕೇಳಿಸಿಕೊಂಡೆವಲ್ಲ! ಈಗಿನ ಕಾಲದಲ್ಲಿ ಇಚ್ಛೆ ಪೂರ್ತಿ ಆಗುವುದು ಎಂದರೇನು? ಹಾಗೆ ಆದರೂ ಒಂದು ಇನ್ನೂರು ಪೌಂಡ್ ಅಂಥ ದೊಡ್ಡ ಮೊತ್ತವೇನಲ್ಲ! ಅದನ್ನು ತೆಗೆದುಕೊಂಡರೆ ಏನು ನಷ್ಟವಾಗಬೇಕಾಗಿದೆ?" ಎಂದಳು ಶ್ರೀಮತಿ ವೈಟ್. 

"ಅದು ಆಕಾಶದಿಂದ ಅಪ್ಪನ ತಲೆ ಮೇಲೆ ಬೀಳಬಹುದೇನೋ!" ಎಂದು ಹರ್ಬರ್ಟ್ ಗೇಲಿ ಮಾಡಿದ. 

"ಮೋರಿಸ್ ಹೇಳಿದ್ದು ನೆನಪಿದೆಯಾ? ಎಲ್ಲಾ ಎಷ್ಟು ಸಹಜವಾಗಿ ಆಗುತ್ತೆ ಅಂದರೆ ಅದು ಕಾಕತಾಳೀಯ ಅನ್ನಿಸುವುದೇ ಇಲ್ಲ."

"'ನಾನು ಬರುವುದಕ್ಕೆ ಮುಂಚೆ ಹಣದ ಗಂಟು ಬಿಚ್ಚಬೇಡ, ಆಯಿತೆ! ನೀನೇನಾದರೂ ಮಹಾಜಿಪುಣನೋ ಆಸೆಬುರುಕನೋ ಆಗಿಬಿಟ್ಟರೆ ನಮ್ಮ ಗತಿ ಏನು!" ಎನ್ನುತ್ತಾ ಹರ್ಬರ್ಟ್ ಕುರ್ಚಿ ಬಿಟ್ಟು ಎದ್ದ.

ಅವನ ತಾಯಿ ನಕ್ಕಳು. ಬಾಗಿಲಿನವರೆಗೂ ಅವನನ್ನು ಹಿಂಬಾಲಿಸಿ ಹೋಗಿ ಅವನು ರಸ್ತೆಯಲ್ಲಿ ಅಷ್ಟು ದೂರ ಹೋಗುವವರೆಗೂ ನೋಡುತ್ತಾ ನಿಂತಿದ್ದು ಮರಳಿ ಬಂದಳು. ಗಂಡನನ್ನು ಮಗ ಗೇಲಿ ಮಾಡಿದರೂ ಅವಳು ಹರ್ಷಚಿತ್ತಳಾಗಿದ್ದಳು.  ಅಂಚೆಯವನು ಬಂದು ಕದ ತಟ್ಟಿದಾಗ ಲಗುಬಗೆಯಿಂದ ಮೇಲೆದ್ದು ಅಂಚೆಯನ್ನು ಒಳಗೆ ತಂದಳು. ಅಂಚೆಯಲ್ಲಿ ದರ್ಜಿಯ ಬಿಲ್ ಬಂದಿತ್ತು. ಅದನ್ನು ನೋಡುತ್ತಾ ಅವಳು ಸಾರ್ಜೆಂಟ್ ಮೇಜರನ ಕುಡುಕುತನದ ಬಗ್ಗೆ ಟಿಪ್ಪಣಿ ಮಾಡಿದಳು.

ಅಂದು ಗಂಡ-ಹೆಂಡತಿ ರಾತ್ರಿಯ ಊಟಕ್ಕೆ ಕುಳಿತಾಗ ಶ್ರೀಮತಿ ವೈಟ್ "ಹರ್ಬರ್ಟ್ ಬಂದಾಗ ನಿಮ್ಮನ್ನು ಇನ್ನಷ್ಟು ಹಾಸ್ಯ ಮಾಡುತ್ತಾನೆ, ನೋಡುತ್ತಿರಿ!" ಎಂದಳು.

ತನ್ನ ಲೋಟಕ್ಕೆ ಬಿಯರ್ ಬಗ್ಗಿಸಿ ಕೊಳ್ಳುತ್ತಾ ಮಿ॥ ವೈಟ್ "ಅದು ನನ್ನ ಕೈಯಲ್ಲಿ ಹೊರಳಿತು ಅನ್ನೋದಂತೂ ನಿಜ. ನಾನು ಆಣೆ ಮಾಡಿ ಹೇಳಬಲ್ಲೆ!" ಎಂದ.

"ನಿಮಗೆ ಹಾಗಿ ಅನ್ನಿಸಿತು, ಅಷ್ಟೇ," ಎಂದು ಹೆಂಡತಿ ಸಮಾಧಾನ ಮಾಡಿದಳು.

"ಇಲ್ಲ, ಅದು ಖಂಡಿತವಾಗಿಯೂ ಹೊರಳಿತು. ಅದರಲ್ಲಿ ಏನೂ ಸಂಶಯವಿಲ್ಲ. ನಾನು ... ಯಾಕೆ? ಏನಾಯಿತು?"

ಶ್ರೀಮತಿ ವೈಟ್ ಕಿಟಕಿಯಿಂದ ತಮ್ಮ ಮನೆಯ ಮುಂದೆ ಬಂದು ನಿಂತಿದ್ದ  ವ್ಯಕ್ತಿಯ ಕಡೆ ನೋಡುತ್ತಿದ್ದಳು. ಅವನು ಇವರ ಮನೆಯ ನಂಬರ್ ಕಡೆ ನೋಡುತ್ತಾ ಒಳಗೆ ಬರುವುದೋ ಬೇಡವೋ ಎಂದು ಅನುಮಾನ ಪಡುತ್ತಿರುವಂತೆ ಕಂಡಿತು. ಅಪರಿಚಿತ ವ್ಯಕ್ತಿ ಬೆಲೆಬಾಳುವ ಉಡುಪು ತೊಟ್ಟಿದ್ದ. ಅವನು ಧರಿಸಿದ್ಧ ರೇಶ್ಮೆಯ ಹ್ಯಾಟ್ ಹೊಸದೆಂದು ತಿಳಿಯುತ್ತಿತ್ತು. ಒಂದು ಕ್ಷಣ ಶ್ರೀಮತಿ ವೈಟ್ ಮಿದುಳಿನಲ್ಲಿ ಇನ್ನೂರು ಪೌಂಡ್ ಗಳ ವಿಷಯ ಮಸುಕಾಗಿ ಮೂಡಿ ಮಾಯವಾಯಿತು.  ವ್ಯಕ್ತಿ ಇವರ ಗೇಟಿನ ಬಳಿ ಬರುವುದು, ನಂತರ ಅನುಮಾನಿಸಿ ವಾಪಸು ಹೋಗುವುದು, ನಂತರ ಮತ್ತೆ ಬರುವುದು - ಹೀಗೆ ಮೂರು ಸಲ ಮಾಡಿದ. ನಾಲ್ಕನೇ ಸಲ ಅವನು  ನಿರ್ಧಾರಕ್ಕೆ ಬಂದವನಂತೆ ಗೇಟನ್ನು ತಳ್ಳಿ ಒಳಗೆ ಬಂದ.  ಮಿಸೆಸ್ ವೈಟ್  ಮೇಲೆದ್ದು ತಾನು ಧರಿಸಿದ್ದ ಏಪ್ರನ್ ಕಳಚಿ ಅದನ್ನು ತನ್ನ ಕುರ್ಚಿಯ ದಿಂಬಿನ ಕೆಳಗೆ ಅಡಗಿಸಿಡಳು.

ಅವಳು ಬಾಗಿಲು ತೆರೆದು ಅಪರಿಚಿತನನ್ನು ಒಳಗೆ ಕರೆತಂದಳು. ಆತನ ಭಾವ  ಮುಳ್ಳಿನ ಮೇಲಿದ್ದಂತೆ ತೋರುತ್ತಿತ್ತು. ಅವಳ ಕಡೆ ಕಳ್ಳ ದೃಷ್ಟಿಯಿಂದ ನೋಡಿದ. ಕೋಣೆಯು ಅಸ್ತವ್ಯಸ್ತವಾಗಿರುವುದಕ್ಕೆ ಆಕೆ ಕ್ಷಮೆ ಯಾಚಿಸಿದಳು. ತನ್ನ ಗಂಡನ ಮಾಸಿದ  ಉಡುಪುಗಳ  ಬಗ್ಗೆ ಕೂಡಾ ಕ್ಷಮೆ ಬೇಡಿದಳು. ಈ ಉಡುಪುಗಳು ಅವರು ತೋಟದ ಕೆಲಸ ಮಾಡುವಾಗ ತೊಡುತ್ತಾರೆ  ಎಂದು ಸೇರಿಸಿದಳು.  ಬಂದ ಅತಿಥಿ ಮೌನ ಮುರಿಯಲು ಬಹಳ ಹೊತ್ತು ತೆಗೆದುಕೊಂಡ.

"ನನ್ನನ್ನು ಅವರು ಇಲ್ಲಿಗೆ ಕಳಿಸಿದ್ದಾರೆ ... " ಎಂದು ತಡವರಿಸುತ್ತಾ ಜೋಬಿನಿಂದ ಕರವಸ್ತ್ರವನ್ನು ಎಳೆದುಕೊಂಡ.  "ನಾನು ಮಾ ಅಂಡ್ ಮೆಗ್ಗಿನ್ಸ್ ಕಂಪನಿಯಿಂದ ಬಂದಿದ್ದೇನೆ."

ಅವಳು ಬೆಚ್ಚಿದಳು. ಒಂದೇ ಉಸಿರಿನಲ್ಲಿ "ಹರ್ಬರ್ಟ್ ಗೆ ಏನಾದರೂ ಆಯಿತೆ? ಏನಾಯಿತು? ಏನಾಯಿತು?" ಎಂದು ಕೂಗಿಕೊಂಡಳು.

ಅವಳ ಗಂಡ ನಡುವೆ ಬಾಯಿ ಹಾಕಿ "ಸುಮ್ಮನೇ ಯಾಕೆ ಇಲ್ಲದ್ದು ಯೋಚನೆ ಮಾಡ್ತೀಯೇ? ಕೂತುಕೋ. ಸ್ವಾಮೀ, ತಾವು ಕೆಟ್ಟ ಸಮಾಚಾರ ತಂದಿಲ್ಲ ಎಂದು ನನ್ನ ನಂಬಿಕೆ" ಎಂದು ಕಾತುರತೆಯಿಂದ ಕೇಳಿದ.

"ನನ್ನನ್ನು ಕ್ಷಮಿಸಿ - " ಎಂದು ಅಪರಿಚಿತ ಪ್ರಾರಂಭಿಸಿದ.

"ಅವನಿಗೆ ಪೆಟ್ಟಾಯಿತೆ?" ಎಂದು ತಾಯಿ ಕೇಳಿದಳು.

ಬಂದಾತ ಹೌದೆಂದು ತಲೆಯಾಡಿಸಿದ. "ಹೌದು, ಅವನಿಗೆ ತುಂಬಾ ಪೆಟ್ಟಾಗಿದೆ; ಆದರೆ ಅವನಿಗೆ ಈಗ ನೋವಾಗುತ್ತಿಲ್ಲ" ಎಂದು ಮೆಲ್ಲನೆ ನುಡಿದ.

"ಸಧ್ಯ! ದೇವರ ದಯೆ!" ಎಂದು ಅವಳು ತನ್ನ ಕೈಗಳನ್ನು ಜೋಡಿಸಿದಳು. "ದೇವರ ದಯೆ! ... "

 ಅತಿಥಿಯು ಆಡಿದ ಮಾತಿನ ಪೂರ್ಣಾರ್ಥ ತಿಳಿಯುತ್ತಲೇ ಅವಳ ಮಾತು ನಿಂತಿತು.  ತನ್ನ ಮನಸ್ಸಿನಲ್ಲಿ ಮೂಡಿದ ಅತ್ಯಂತ ಕೆಟ್ಟ ಸಂಶಯವು ನಿಜ ಎಂಬುದು ಅವಳಿಗೆ ಅತಿಥಿಯ ಮುಖಭಾವದಲ್ಲಿ ತೋರಿತು. ಅವಳು ತನ್ನ ಉಸಿರು ಬಿಗಿ ಹಿಡಿದಳು. ತನ್ನ ಮಂದಬುದ್ಧಿಯ ಗಂಡನ ಬಳಿಸಾರಿ ತನ್ನ ನಡುಗುವ ಕೈಗಳನ್ನು ಅವನ ಕೈಗಳ ಮೇಲಿಟ್ಟಳು. ಬಹುಕಾಲ ಮೌನ ಆವರಿಸಿತು.

"ಅವನು ಯಂತ್ರಕ್ಕೆ ಸಿಕ್ಕಿಹಾಕಿಕೊಂಡುಬಿಟ್ಟ," ಎಂದು ಅತಿಥಿ ಸಣ್ಣ ಧ್ವನಿಯಲ್ಲಿ ನುಡಿದ.

"ಯಂತ್ರಕ್ಕೆ ಸಿಕ್ಕಿಹಾಕಿಕೊಂಡನೇ? ಹೌದೇ?" ಎಂದು ಮಿ॥ ವೈಟ್ ಅವನ ಕಡೆ ಆಘಾತಗೊಂಡವನಂತೆ ನೋಡಿದ. ಅವನು ಕಿಟಕಿಯ ಕಡೆ ಶೂನ್ಯ ದೃಷ್ಟಿಯಿಂದ ನೋಡುತ್ತಾ ಕುಳಿತ. ತನ್ನ ಕೈಯಲ್ಲಿದ್ದ ಹೆಂಡತಿಯ ಕೈಗಳನ್ನು ನಲವತ್ತು ವರ್ಷಗಳ ಹಿಂದೆ ತಾವು ಪ್ರೇಮಿಗಳಾಗಿದ್ದಾಗ ಔಕುತ್ತಿದ್ದಂತೆ ಔಕಿದ.

"ನಮಗೆ ಅವನೊಬ್ಬನೇ ಮಗ" ಎಂದು ಅವನು ಮೆಲ್ಲನೆ ಅತಿಥಿಯ ಕಡೆ ತಿರುಗಿದ. "ಬಹಳ ಕಷ್ಟವಪ್ಪ," ಎಂದ.

ಅತಿಥಿ ಒಮ್ಮೆ ಕೆಮ್ಮಿ ಮೇಲೆದ್ದು ಕಿಟಕಿಯ ಕಡೆ ನಡೆದ. "ಕಂಪನಿಯವರು ನಿಮಗೆ ಉಂಟಾದ ದೊಡ್ಡ ನಷ್ಟಕ್ಕೆ ತಮ್ಮ ಹಾರ್ದಿಕ ಸಹಾನುಭೂತಿಯನ್ನು ತಿಳಿಸಲು ಕಳಿಸಿದ್ದಾರೆ." ಎಂದು ಅವರ ಕಡೆ ನೋಡದೆ ಹೇಳಿದ. "ನಾನು ಕೇವಲ ಒಬ್ಬ ನೌಕರ, ಅವರು ಹೇಳಿದ ಕೆಲಸ ಮಾಡಲು ಬಂದಿದ್ದೇನೆ, ಅಷ್ಟೆ."

ಯಾರೂ ಉತ್ತರಿಸಲಿಲ್ಲ. ವಯಸ್ಕಳ ಮುಖ ಬಿಳಿಚಿಕೊಂಡಿತ್ತು. ಅವಳ ಕಣ್ಣುಗಳು ಶೂನ್ಯದಲ್ಲಿ ನೆಟ್ಟಿದ್ದವು. ಅವಳ ಉಸಿರಾಟ ಕೇಳುತ್ತಿರಲಿಲ್ಲ.  ಅವಳ ಗಂಡನ ಮುಖದಲ್ಲಿದ್ದ ಭಾವವು ಹಿಂದಿನ ರಾತ್ರಿ ಬಂದಿದ್ದ ಗೆಳೆಯ ಸಾರ್ಜೆಂಟನ ಮುಖದಲ್ಲಿದ್ದ ಆಘಾತದ ಭಾವವನ್ನೇ ಹೋಲುತಿತ್ತು.

"ಇದರಲ್ಲಿ ಮಾ ಅಂಡ್ ಮೆಗ್ಗಿನ್ಸ್ ಕಂಪನಿಯವರ ಜವಾಬ್ದಾರಿ ಏನೂ ಇಲ್ಲ ಎಂದು ಹೇಳಲು ತಿಳಿಸಿದ್ದಾರೆ. ಅವರು ಯಾವ ನಷ್ಟವನ್ನೂ ಭರಿಸಲು ಸಿದ್ಧರಾಗಿಲ್ಲ. ಆದರೆ ನಿಮ್ಮ ಮಗನ ಅನೇಕ ವರ್ಷಗಳ ಸೇವೆಯನ್ನು ಪರಿಗಣಿಸಿ ನಿಮಗೆ ಪರಿಹಾರರೂಪದಲ್ಲಿ ಸ್ವಲ್ಪ ಹಣವನ್ನು ಕೊಡುತ್ತಾರೆ."

ಮಿ॥ ವೈಟ್ ತನ್ನ ಹೆಂಡತಿಯ ಕೈ ಬಿಟ್ಟು ಮೇಲೆದ್ದು ನಿಂತ. ಅತಿಥಿಯ ಕಡೆ ಬೆದರಿದ ದೃಷ್ಟಿಯಿಂದ ನೋಡುತ್ತಾ ತನ್ನ ಒಣಗಿದ ತುಟಿಗಳಿಂದ ಬಹಳ ಕಷ್ಟ ಪಟ್ಟು "ಎಷ್ಟು?" ಎಂದ.

"ಇನ್ನೂರು ಪೌಂಡ್ ಗಳು" ಎಂಬ ಉತ್ತರ ಬಂತು.

ತನ್ನ ಹೆಂಡತಿಯು ಕಿರುಚಿದ್ದು ಅವನಿಗೆ ಕೇಳಲಿಲ್ಲ. ಅವನ ಮುಖದ ಮೇಲೆ ಒಂದು ತೆಳುವಾದ ನಗೆ ಹಾದು ಹೋಯಿತು. ಕಣ್ಣು ಕಾಣದವರಂತೆ ಕೈಯನ್ನು ಮುಂದೆ ಚಾಚಿ ಒಂದು ಹೆಜ್ಜೆ ಮುಂದಿಟ್ಟು ಒಮ್ಮೆಲೇ ನೆಲಕ್ಕೆ ಕುಸಿದು ಮೂರ್ಛಿತನಾದ.

 ( ಮುಂದಿನ ಭಾಗ ಇಲ್ಲಿ ಓದಿ )

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)