ಲಾಟರಿ - ಭಾಗ 2

ಮೂಲ ಅಮೆರಿಕನ್ ಕತೆ - ಶರ್ಲಿ ಜ್ಯಾಕ್ಸನ್ 

ಕನ್ನಡ ಅನುವಾದ - ಸಿ ಪಿ ರವಿಕುಮಾರ್ 

(ಮೊದಲ ಭಾಗವನ್ನು ಇಲ್ಲಿ ಓದಿ)



ಭಾಗ-೨

"ರಿ ಮತ್ತೆ, ಪ್ರಾರಂಭ ಮಾಡೋಣವೆ? ಬೇಗ ಮುಗಿಸಿದರೆ ನಮ್ಮ ನಮ್ಮ ಕೆಲಸಕ್ಕೆ ವಾಪಸ್ ಹೋಗಬಹುದು," ಎಂದು ಮೀ| ಸಮ್ಮರ್ಸ್ ಪೀಠಿಕೆ ಹಾಕಿದ. ಆನಂತರ "ಗೈರು ಹಾಜರ್ ಯಾರಾದರೂ ಇದ್ದಾರಾ?" ಎಂದು ಕೇಳಿದ. 

"ಡನ್ ಬಾರ್!" ಎಂದು ಹಲವಾರು ಕಂಠಗಳು ಘೋಷಿಸಿದವು. 

ಮಿ। ಸಮ್ಮರ್ಸ್ ಹೆಸರಿನ ಪಟ್ಟಿಯನ್ನು ಪರಿಶೀಲಿಸಿದ. "ಕ್ಲೈಡ್ ಡನ್ ಬಾರ್. ನಿಜ. ಕಾಲು ಮುರಿದುಕೊಂಡಿದ್ದಾನೆ, ಅಲ್ಲವಾ? ಅವನ ಚೀಟಿ ಯಾರು ಎತ್ತುತ್ತಾರೆ?"

"ನಾನು," ಎಂದ ಹೆಂಗಸಿನ ಕಡೆ ನೋಡಿ ಮಿ। ಸಮ್ಮರ್ಸ್ "ಗಂಡನ ಪರವಾಗಿ ಹೆಂಡತಿ. ಜೆನಿ, ನಿನಗೆ ಬೆಳೆದ ಮಗ ಇರಬೇಕಲ್ಲವೇ?" ಎಂದು ಕೇಳಿದ. ಅದಕ್ಕೆ ಉತ್ತರ ಏನೆಂದು ಅವನಿಗೂ ಗೊತ್ತಿದ್ದರೂ ಹಾಗೆ ಕೇಳಬೇಕಾದದ್ದು ಅವನ ಕರ್ತವ್ಯ.

"ಹೊರೇಸ್ ಗೆ ಇನ್ನೂ ಹದಿನಾರು ತುಂಬಿಲ್ಲ. ಈ ವರ್ಷ ನಾನೇ ಎತ್ತಬೇಕಾಗುತ್ತೆ," ಎಂದಳು ಶ್ರೀಮತಿ ಡನ್ ಬಾರ್. 

"ಸರಿ" ಎಂದು ಗುರುತು ಹಾಕಿಕೊಂಡು "ವಾಟ್ಸನ್ ಮಗ ಈ ವರ್ಷ ಚೀಟಿ ಎತ್ತುತ್ತಾನೆಯೇ?" ಎಂದು ಕೇಳಿದ.

ಉದ್ದನೆಯ ಒಬ್ಬ ಹುಡುಗ ಕೈ ಮೇಲೆತ್ತಿ "ಹೌದು, ನನ್ನ ಮತ್ತು ನನ್ನ ಅಮ್ಮನ ಪರವಾಗಿ ನಾನು ಚೀಟಿ ಎತ್ತುತ್ತೀನಿ," ಎಂದು ತಲೆ ತಗ್ಗಿಸಿದ.  ಅವನ ಅಕ್ಕಪಕ್ಕದಲ್ಲಿ ನಿಂತಿದ್ದವರು "ನೋಡಿದೆಯಾ? ಮಗ ಎಂದರೆ ಹೀಗಿರಬೇಕು - ಅಮ್ಮನಿಗೆ ಆಗಿ ಬರಬೇಕು" ಎಂದು ತಲೆದೂಗಿದರು.
"ಅಷ್ಟೇ ಅಂತ ತೋರುತ್ತೆ. ವಾರ್ನರ್ ಅಜ್ಜ ಬಂದಿದ್ದಾರೆಯೇ?"

"ಇಲ್ಲಿ!" ಎಂಬ ಧ್ವನಿ ಬಂದ ಕಡೆಗೆ ತಿರುಗಿ ಮಿ। ಸಮ್ಮರ್ಸ್ ತಲೆದೂಗಿದ. ಅವನು ಪಟ್ಟಿಯ ಕಡೆ ಒಮ್ಮೆ ಕಣ್ಣು ಹಾಯಿಸಿ "ಎಲ್ಲರೂ ತಯಾರಾಗಿದ್ದೀರಾ?" ಎಂದು ಕೇಳಿದ. ಸುತ್ತಲೂ ಒಮ್ಮೆಲೇ ಮೌನ ಆವರಿಸಿತು.  "ಈಗ ನಾನು ಒಂದೊಂದಾಗಿ ಹೆಸರು ಕರೆಯುತ್ತೇನೆ. ಕುಟುಂಬದ ಮುಖ್ಯಸ್ಥರ ಹೆಸರನ್ನು ಮೊದಲು ಕರೆಯುತ್ತೇನೆ. ನಿಮ್ಮ ನಿಮ್ಮ ಹೆಸರು ಕರೆದಾಗ ಇಲ್ಲಿಗೆ ಬಂದು ಚೀಟಿ ಎತ್ತಿಕೊಂಡು ನಿಮ್ಮ ಸ್ಥಾನಕ್ಕೆ ವಾಪಸು ಹೋಗಿ ನಿಲ್ಲಬೇಕು. ಎಲ್ಲರೂ ಚೀಟಿ ಎತ್ತುವವರೆಗೆ ನಿಮ್ಮ ಚೀಟಿಯನ್ನು ಬಿಚ್ಚಿ ನೋಡುವಹಾಗಿಲ್ಲ. ಅರ್ಥವಾಯಿತೇ?"

ಹಳ್ಳಿಯ ಜನ ಈ ವಿಧಿಯನ್ನು ಅದೆಷ್ಟು ಸಲ ಕೈಗೊಂಡಿದ್ದರೋ. ಹೀಗಾಗಿ ಯಾರೂ ವಿಶೇಷವಾಗಿ ಗಮನ ಕೊಡಲಿಲ್ಲ. ಬಹುತೇಕ ಎಲ್ಲರೂ ಸುಮ್ಮನಿದ್ದರು. ಕೆಲವರು ತಮ್ಮ ತುಟಿಗಳನ್ನು ನಾಲಗೆಯಿಂದ ಸವರಿಕೊಂಡರು. ಯಾರೂ ಅತ್ತಿತ್ತ ನೋಡಲಿಲ್ಲ. ಮಿ। ಸಮ್ಮರ್ಸ್ ತನ್ನ ಒಂದು ಕೈಯನ್ನು ಮೇಲೆತ್ತಿ "ಆಡಮ್ಸ್" ಎಂದು ಪ್ರಾರಂಭಿಸಿದ. ಗುಂಪಿನಿಂದ ಒಬ್ಬ ವ್ಯಕ್ತಿ ಮುಂದೆ ಬಂದ. "ಹೇಗಿದ್ದೀಯ ಸ್ಟೀವ್?" ಎಂದು ಮಿ। ಸಮ್ಮರ್ಸ್ ಔಪಚಾರಿಕವಾಗಿ ಕೇಳಿದ. ಮುಂದೆ ಬಂದವನು "ಹೂಂ. ನೀವು?" ಎಂದು ನಿರುತ್ಸಾಹದಿಂದ ನುಡಿದ. ಅನಂತರ ಪೆಟ್ಟಿಗೆಯಲ್ಲಿ ಕೈ ಹಾಕಿ ಮಡಿಸಿದ ಒಂದು ಚೀಟಿಯನ್ನು ಕೈಗೆತ್ತಿಕೊಂಡು ಅದನ್ನು ಮುಷ್ಥಿಯಲ್ಲಿ ಭದ್ರವಾಗಿಟ್ಟುಕೊಂಡು ಸ್ವಸ್ಥಾನಕ್ಕೆ ಮರಳಿದ. ತನ್ನ ಕುಟುಂಬದವರಿಂದ ಸ್ವಲ್ಪ ದೂರದಲ್ಲಿ ತನ್ನ ಕೈಗಳ ಕಡೆ ದೃಷ್ಟಿ ಹಾಯಿಸದೆ ಸುಮ್ಮನೆ ನಿಂತ.
"ಆಲೆನ್, ಆಂಡರ್ ಸನ್, ಬೆಂಥಾಮ್, ... " ಮಿ। ಸಮ್ಮರ್ಸ್ ಕೂಗುತಿದ್ದ.

"ಹೋದ ಸಲದ ಲಾಟರಿ ಇನ್ನೂ ಮೊನ್ನೆ ತಾನೇ ನಡೆದ ಹಾಗಿದೆ," ಎಂದು ಶ್ರೀಮತಿ ಡೆಲಕ್ರಾಯ್ ತನ್ನ ಹತ್ತಿರ ನಿಂತಿದ್ದ ಶ್ರೀಮತಿ ಗ್ರೇವ್ಸ್ ಬಳಿ ಹೇಳಿಕೊಂಡಳು.

"ಹೌದು, ದಿನಗಳು ಬೇಗ ಉರುಳಿಬಿಡುತ್ತವೆ," ಎಂದು ಶ್ರೀಮತಿ ಗ್ರೇವ್ಸ್ ದನಿಗೂಡಿಸಿದಳು.

"ಕ್ಲಾರ್ಕ್ ... ಡೆಲಕ್ರಾಯ್."

"ಅಗೋ ನಮ್ಮವರು ಹೊರಟರು," ಎಂದು ಶ್ರೀಮತಿ ಡೆಲಕ್ರಾಯ್ ತನ್ನ ಪತಿ ಚೀಟಿ ಎತ್ತುವುದನ್ನು ಉಸಿರು ಬಿಗಿ ಹಿಡಿದು ನೋಡಿದಳು.

"ಡನ್ ಬಾರ್" ಎಂದು ಮಿ। ಸಮ್ಮರ್ಸ್ ಕರೆದಾಗ ಶ್ರೀಮತಿ ಡನ್ ಬಾರ್ ಮುಂದೆ ಬಂದಳು. "ಹೋಗು ಜೆನಿ," ಎಂದು ಒಬ್ಬ ಹೆಂಗಸು ಅವಳಿಗೆ ಹುರಿದುಂಬಿಸುವವಳಂತೆ ನುಡಿದಳು.  

"ನಮ್ಮದು ಮುಂದಿನ ಸರದಿ," ಎಂದು ಶ್ರೀಮತಿ ಗ್ರೇವ್ಸ್ ನುಡಿದಳು. ತನ್ನ ಪತಿ ಮುಂದೆ ಹೋಗಿ ಚೀಟಿ ಎತ್ತಿಕೊಂಡು ಮಿ। ಸಮ್ಮರ್ಸ್ ಕಡೆಗೆ ಶುಷ್ಕ ನಗೆ ಬೀರಿ ವಾಪಸಾಗುವುದನ್ನು ನೋಡಿದಳು. ಗಂಡಸರು ತಮ್ಮ ಕೈಯಲ್ಲಿದ್ದ ಚೀಟಿಗಳನ್ನು ಕೈಯಲ್ಲೇ ಅಧೀರರಾಗಿ ತಿರುಗಿಸುತ್ತಿದ್ದರು. ಶ್ರೀಮತಿ ಡನ್ ಬಾರ್ ಮತ್ತು ಅವಳ ಇಬ್ಬರು ಮಕ್ಕಳು ಒಟ್ಟಿಗೆ ನಿಂತಿದ್ದರು. ಚೀಟಿ ಶ್ರೀಮತಿ ಡನ್ ಬಾರ್ ಕೈಯಲ್ಲಿತ್ತು.  

"ಹರ್ಬರ್ಟ್ ... ಹಚಿನ್ ಸನ್ ..."

"ಬಿಲ್, ನಿನ್ನ ಸರದಿ!" ಎಂದು ಶ್ರೀಮತಿ ಹಚಿನ್ ಸನ್ ಕೂಗಿದಾಗ ಅವಳ ಬಳಿಯಲ್ಲಿದ್ದವರು ನಕ್ಕರು.

"ಜೋನ್ಸ್."

ಮಿ। ಆಡಮ್ಸ್ ತನ್ನ ಹತ್ತಿರ ನಿಂತಿದ್ದ ವಾರ್ನರ್ ಅಜ್ಜನಿಗೆ "ಉತ್ತರಹಳ್ಳಿಯಲ್ಲಿ ಲಾಟರಿ ಪದ್ಧತಿಯನ್ನು ಬಿಟ್ಟು ಬಿಡುವ ಬಗ್ಗೆ ಚರ್ಚೆ ಮಾಡುತ್ತಿದ್ದಾರಂತೆ" ಎಂದ. 


ಇದಕ್ಕೆ ಉತ್ತರವಾಗಿ ವಾರ್ನರ್ ಅಜ್ಜ ಗುಟುರು ಹಾಕಿ "ಅವರಿಗೇನು ಗೊತ್ತು, ಮೂರ್ಖರಿಗೆ! ಹೋಗಿ ಹೋಗಿ ಎಳೆ ನಿಂಬೆಕಾಯಿಗಳ ಮಾತು ಕೇಳಿ. ಅವರಿಗೆ ಎಲ್ಲಾದರಲ್ಲೂ ಹುಳುಕು ಕಾಣುತ್ತೆ.  ಅವರ ಮಾತು ಕೇಳಿಕೋತಾ ಕೂತರೆ ನಾವು ಮತ್ತೆ ಗುಹೆಗಳಲ್ಲಿ ವಾಸ ಮಾಡಬೇಕು ಅನ್ನೋ ಪೈಕಿ! ಯಾರೂ ದುಡಿಯಕೂಡದು ಅನ್ನೋ ಪೈಕಿ. ನಮ್ಮ ಅಪ್ಪ ಹೇಳುತ್ತಿದ್ದ - ಜೂನ್ ನಲ್ಲಿ ಲಾಟರಿ, ಜೋಳದ ತೆನೆ ಖಾತರಿ  ಅಂತ. ಉತ್ತರಹಳ್ಳಿ ಜನ ಏನು ಹೊಟ್ಟೆಗೆ ಹುಲ್ಲು ತಿನ್ನುತ್ತಾರಂತೇನು! ಲಾಟರಿ ಬೇಡವಂತೆ ಲಾಟರಿ! ಈಗ ಎಲ್ಲಾರಿಗೂ ಎಲ್ಲಾ ಹಗೂರ.  ಅಲ್ಲಿ ಜೋ ಸಮ್ಮರ್ಸ್ ನೋಡಿ, ತನ್ನ ಗಾಂಭೀರ್ಯ ಬಿಟ್ಟು ಎಲ್ಲರ ಜೊತೆ ನಗಸಾರ ಮಾಡಿಕೊಂಡು!" ಎಂದು ಕಹಿಯಾಗಿ ನುಡಿದ.

"ಕೆಲವು ಕಡೆ ಆಗಲೇ ಲಾಟರಿ ನಿಲ್ಲಿಸಿದ್ದಾರಂತೆ," ಎಂದು ಶ್ರೀಮತಿ ಆಡಮ್ಸ್ ಸೇರಿಸಿದಳು.

"ಶುದ್ಧ ಮೂರ್ಖತನ! ಅದರಿಂದ ಖಂಡಿತಾ ಒಳ್ಳೆಯದಾಗೋದಿಲ್ಲ."

"ಮಾರ್ಟಿನ್ ... "

ಬಾಬಿ ಮಾರ್ಟಿನ್ ತನ್ನ ತಂದೆ ಮುಂದೆ ಸಾಗುವುದನ್ನು ಏಕಾಗ್ರಚಿತ್ತನಾಗಿ ನೋಡಿದ.  "ಓವರ್ ಡೈಕ್ ... ಪರ್ಸಿ ... "

"ಕೆಲವರು ಅದೆಷ್ಟು ನಿಧಾನ ... ಬೇಗ ಮುಗಿಸಬಾರದೆ?" ಎಂದು ಶ್ರೀಮತಿ ಡನ್ ಬಾರ್ ಸಿಡುಕಿದಳು.

"ಇನ್ನೇನು ಮುಗಿಯುತ್ತಾ ಬಂತು," ಎಂದು ಅವಳ ಬಗ ಸಮಾಧಾನ ಮಾಡಿದ.

"ಅಪ್ಪನಿಗೆ ಓಡಿ ಹೋಗಿ ಹೇಳೋದಕ್ಕೆ ತಯಾರಾಗಿರು," ಅವಳೆಂದಳು.

ಮಿ। ಸಮ್ಮರ್ಸ್ ತನ್ನ ಹೆಸರನ್ನು ಕೂಗಿ ಪೆಟ್ಟಿಗೆಯಿಂದ ನಾಜೂಕಾಗಿ ಒಂದು ಚೀಟಿಯನ್ನು ಕೈಗೆತ್ತಿಕೊಂಡ.

"ವಾರ್ನರ್ ... "

“ಇದು ನನ್ನ ಎಪ್ಪತ್ತೇಳನೇ ಲಾಟರಿ! ಎಪ್ಪತ್ತೇಳನೆಯದು!" ಎಂದು ಮುದುಕ ಗರ್ವದಿಂದ ನುಡಿದ.

 "ವಾಟ್ಸನ್ ... "

ಉದ್ದನೆಯ ಹುಡುಗ ಅನುಮಾನಿಸುತ್ತಾ ಮುಂದೆ ಬಂದಾಗ ಕೆಲವರು "ಧೈರ್ಯವಾಗಿ ಹೋಗು, ಜ್ಯಾಕ್!" ಎಂದು ಹುರಿದುಂಬಿಸಿದರು.

"ನಿಧಾನವಾಗಿ ಬಾಪ್ಪ," ಎಂದು ಮಿ। ಸಮ್ಮರ್ಸ್ ಹುಡುಗನಿಗೆ ಉಪಚರಿಸಿದ.

"ಜನೀನಿ." ಅದೇ ಕೊನೆಯ ಹೆಸರು. ಅದಾದ ನಂತರ ಒಮ್ಮೆಲೇ ಉಸಿರುಗಟ್ಟಿಸುವ ಮೌನ ಕವಿಯಿತು. ಮಿ। ಸಮ್ಮರ್ಸ್ ತನ್ನ ಚೀಟಿಯನ್ನು ಕೈ ಎತ್ತಿ ಎಲ್ಲರಿಗೂ ತೋರಿಸುತ್ತಾ "ಸರಿ, ಮುಂದುವರೆಯಬಹುದು" ಎಂದ. ಒಂದು ಕ್ಷಣ ಯಾರೂ ಅಲ್ಲಾಡಲಿಲ್ಲ. ಅನಂತರ ಎಲ್ಲರೂ ಚೀಟಿಗಳನ್ನು ಬಿಚ್ಚಿ ನೋಡಿದರು.

ಹೆಂಗಸರು ಒಮ್ಮೆಲೇ ಮಾತಾಡತೊಡಗಿದರು. "ಯಾರಿಗೆ ಸಿಕ್ಕಿತಂತೆ?" "ಯಾರಿಗಂತೆ?" "ಡನ್ ಬಾರ್ ಅವರಿಗೆ?" "ವಾಟ್ಸನ್ ಅವರಿಗೆ?" ಯಾರೋ "ಹಚಿನ್ ಸನ್ ಗೆ ಬಂದಿದೆಯಂತೆ" ಎಂದು ಘೋಷಿಸಿದರು. "ಬಿಲ್ ಹಚಿನ್ ಸನ್ ಗೆ ಬಂದಿದೆ."

"ಹೋಗಿ ನಿಮ್ಮಪ್ಪನಿಗೆ ಹೇಳಿ ಬಾ." ಎಂದು ಶ್ರೀಮತಿ ಡನ್ ಬಾರ್ ತನ್ನ ದೊಡ್ಡ ಮಗನಿಗೆ ಹೇಳಿದಳು.

ಎಲ್ಲರೂ ಈಗ ಹಚಿನ್ ಸನ್ ಪರಿವಾರದ ಕಡೆ ನೋಡುತ್ತಿದ್ದರು. ಬಿಲ್ ಹಚಿನ್ ಸನ್ ಸದ್ದಿಲ್ಲದೆ ನಿಂತಿದ್ದ. ತನ್ನ ಕೈಯಲ್ಲಿದ್ದ ಚೀಟಿಯ ಕಡೆಗೆ ನೋಡುತ್ತಿದ್ದ. ಒಮ್ಮೆಲೇ ಟೆಸ್ಸಿ ಹಚಿನ್ ಸನ್ ಜೋರಾಗಿ "ಅವರಿಗೆ ಇಷ್ಟವಾದ ಚೀಟಿ ತೊಗೊಳ್ಳೋಕೆ ನೀವು ಬಿಡಲಿಲ್ಲ! ನಾನು ನೋಡುತ್ತಿದ್ದೆ. ಇದು ಅನ್ಯಾಯ!" ಎಂದು ಕೂಗಿಕೊಂಡಳು.

(ಮೂರನೇ ಭಾಗವನ್ನು ಇಲ್ಲಿ ಓದಿ)

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)