ಅಮೋಂತಿಜಾದೋ ಮದ್ಯದ ಪೀಪಾಯಿ - 1
ಮೂಲ ಇಂಗ್ಲಿಷ್ ಕಥೆ - ಎಡ್ಗರ್ ಆಲೆನ್ ಪೋ
ಕನ್ನಡ ಅನುವಾದ - ಸಿ ಪಿ ರವಿಕುಮಾರ್
ಫಾರ್ಚುನಾತೋ ನನ್ನ ಮೇಲೆ ಮಾಡಿದ ಸಾವಿರ ಜುಲುಮೆಗಳನ್ನು ನಾನು ಸಹಿಸಿಕೊಂಡೆ; ಆದರೆ ಯಾವಾಗ ಅವನು ನನಗೆ ಅಪಮಾನ ಮಾಡಿದನೋ ಪ್ರತೀಕಾರದ ಭಾವನೆ ನನ್ನಲ್ಲಿ ಹೊತ್ತಿಕೊಂಡಿತು. ಹಾಗೆಂದು ಅವನೊಂದಿಗೆ ಜಗಳವಾಡಿ ಅವನಿಗೆ ಮುನ್ನೆಚ್ಚರಿಕೆ ನೀಡುವುದು ನನ್ನ ಸ್ವಭಾವದ ವಿರುದ್ಧ. ನನ್ನ ಪ್ರತೀಕಾರ ಒಂದಲ್ಲ ಒಂದು ದಿನ ಪೂರ್ಣಗೊಳ್ಳುವುದು, ಅದರಲ್ಲಿ ಸಂಶಯವಿಲ್ಲ. ಆದರೆ ಅವನಿಗೆ ಶಾಸ್ತಿ ಮಾಡಲು ಹೋಗಿ ನಾನು ಸಿಕ್ಕಿಹಾಕಿಕೊಳ್ಳಬಾರದು. ಪ್ರತೀಕಾರ ಮಾಡಲು ಹೋದವನು ತಾನೇ ಅದರಲ್ಲಿ ಸಿಕ್ಕಿ ಹಾಕಿಕೊಂಡರೆ ಪ್ರತೀಕಾರವು ಅಪೂರ್ಣವಾಗುತ್ತದೆ. ಹಾಗೇ ಪ್ರತೀಕಾರ ಮಾಡಿದವರು ಯಾರೆಂದು ಪಾಪಿಗೆ ತಿಳಿಯದೆ ಹೋದರೂ ಪ್ರತೀಕಾರವು ಅಪೂರ್ಣವಾಗೇ ಉಳಿಯುತ್ತದೆ.
ನನ್ನ ನಡವಳಿಕೆಯಲ್ಲಿ ಎಳ್ಳಷ್ಟೂ ಅವನಿಗೆ ಸಂದೇಹ ಬಾರದಂತೆ ನಾನು ಅವನ ಜೊತೆ ಚೆನ್ನಾಗಿಯೇ ನಡೆದುಕೊಂಡು ಸಾಗಿದೆ. ಎಂದಿನಂತೆ ಅವನನ್ನು ಕಂಡಾಗೆಲ್ಲ ಮುಗುಳ್ನಗುತ್ತಿದ್ದೆ. ಅವನ ಅಂತ್ಯವನ್ನು ಕಲ್ಪಿಸಿಕೊಂಡು ನಾನು ಮುಗುಳ್ನಗುತ್ತಿದ್ದೆ ಎಂದು ಅವನಿಗೆ ತಿಳಿಯಲಿಲ್ಲ.
ಫಾರ್ಚುನಾತೋ ಕಂಡರೆ ಎಲ್ಲರಿಗೂ ಭಯಭಕ್ತಿ. ಆದರೆ ಅವನಿಗೂ ಒಂದು ದೌರ್ಬಲ್ಯವಿತ್ತು. ವೈನ್ ಮದ್ಯದ ಬಗ್ಗೆ ತಾನೊಬ್ಬ ಮಹಾಜ್ಞಾನಿ ಎಂಬ ಜಂಬ. ಇಟಾಲಿಯನ್ ಜನರಲ್ಲಿ ಇದೊಂದು ಬಗೆ. ತಾವು ಅಂತ ಜ್ಞಾನಿಗಳು ಅಲ್ಲದಿದ್ದರೂ ಬ್ರಿಟಿಷ್ ಅಥವಾ ಆಸ್ಟ್ರಿಯನ್ ಶೀಮಂತರ ಮುಂದೆ ತಾವು ಮಹಾಜ್ಞಾನಿಗಳೆಂದು ಸೋಗು ಹಾಕುವುದು. ವರ್ಣಚಿತ್ರಗಳ ಬಗ್ಗೆ ಅಥವಾ ರತ್ನಗಳ ಬಗ್ಗೆ ಫಾರ್ಚುನಾತೋ ಒಬ್ಬ ಢೋಂಗಿಯಾದರೂ ವೈನ್ ಗಳ ವಿಷಯದಲ್ಲಿ ಅವನ ಅಭಿರುಚಿಗೆ ಎರಡನೇ ಮಾತಿಲ್ಲ. ನಾನೂ ಈ ವಿಷಯದಲ್ಲಿ ಅವನಿಗಿಂತ ಭಿನ್ನನಲ್ಲ. ಸಂದರ್ಭ ಒದಗಿದಾಗ ನಾನೂ ಮದ್ಯವನ್ನು ಹೇರಳವಾಗಿ ಖರೀದಿಸಿ ಇಟ್ಟುಕೊಳ್ಳುತ್ತಿದ್ದೆ.
ಜನ ಮರುಳೋ ಜಾತ್ರೆ ಮರುಳೋ ಎನ್ನುವಂತೆ ತೋರುವ ಆನಂದೋತ್ಸವದ ದಿನಗಳಲ್ಲಿ ಒಂದು ಮುಸ್ಸಂಜೆ ಅವನು ನನಗೆ ಎದುರಾದ. ಅವನು ಆಗಲೇ ಸಾಕಷ್ಟು ಕುಡಿದಿದ್ದರಿಂದ ನನ್ನನ್ನು ನೋಡಿ ಎಲ್ಲಿಲ್ಲದ ಆದರ ತೋರಿದ. ಅವನ ವೇಷಭೂಷಣ ವಿಚಿತ್ರವಾಗಿತ್ತು. ಬಣ್ಣದ ಪಟ್ಟಂಪಟ್ಟೆ ಷರಾಯಿ ತೊಟ್ಟಿದ್ದ. ತಲೆಯ ಮೇಲೆ ಪುಟ್ಟ ಪುಟ್ಟ ಗಂಟೆಗಳನ್ನು ಕಟ್ಟಿದ ಗೋಪುರಾಕಾರದ ಟೋಪಿ. ಉತ್ಸವದ ದಿನಗಳಲ್ಲಿ ಜನ ಹೀಗೇ. ಅವನನ್ನು ನೋಡಿ ನನಗೆ ಪರಮಾನಂದವಾಯಿತು.
ನಾನು ಅವನಿಗೆ "ನನ್ನ ಪ್ರಿಯ ಮಿತ್ರ ಫಾರ್ಚುನಾತೋ, ನೀನು ಒಳ್ಳೆಯ ಸಮಯಕ್ಕೇ ಸಿಕ್ಕೆ! ನೀನು ಈ ವೇಷಭೂಷಣದಲ್ಲಿ ಎಷ್ಟು ಚೆನ್ನಾಗಿ ಕಾಣುತ್ತಿದ್ದೀಯೆ! ಇವತ್ತೇ ನನಗೆ ಒಂದು ಪೀಪಾಯಿ ವೈನ್ ಸರಬರಾಜಾಯಿತು. ಅದು ಅಮೋಂತಿಜಾದೋ ಎಂದು ಮಾರಿದವನು ಆಣೆ ಮಾಡಿ ಹೇಳುತ್ತಾನೆ. ಆದರೆ ನನಗೆ ಅಷ್ಟು ನಂಬಿಕೆಯಿಲ್ಲ" ಎಂದೆ.
"ಅದು ಹೇಗೆ ಸಾಧ್ಯ? ಅಮೋಂತಿಜಾದೋ! ಅದೂ ಒಂದು ಪೀಪಾಯಿ! ಅದೂ ಕೂಡಾ ಉತ್ಸವದ ದಿನಗಳಲ್ಲಿ!" ಎಂದು ಅವನು ಅನುಮಾನಿಸಿದ.
"ನನಗೂ ನಂಬಿಕೆ ಬರಲಿಲ್ಲ. ನಾನು ಪೆದ್ದನ ಹಾಗೆ ಅಮೋಂತಿಜಾದೋಗೆ ಸಲ್ಲಬೇಕಾದಷ್ಟು ಬೆಲೆಯನ್ನು ಆಗಲೇ ಕೊಟ್ಟುಬಿಟ್ಟಿದ್ದೇನೆ! ನಿನ್ನನ್ನು ಒಂದು ಮಾತು ಕೇಳಬೇಕೆಂದುಕೊಂಡೆ. ಆದರೆ ನೀನು ಎಲ್ಲೂ ಸಿಕ್ಕಲಿಲ್ಲ. ತಡ ಮಾಡಿದರೆ ಅವಕಾಶ ಕೈ ತಪ್ಪುತ್ತದೆ ಅಂತ ಹಣ ಹಾಕಿಬಿಟ್ಟೆ."
"ಅಮೋಂತಿಜಾದೋ!"
"ಅದೇ ಎಂದು ಹೇಳಲಾರೆ."
"ಅಮೋಂತಿಜಾದೋ!"
"ನನಗೂ ಖಾತ್ರಿ ಪಡಿಸಿಕೊಳ್ಳಬೇಕಾಗಿದೆ."
"ಅಮೋಂತಿಜಾದೋ!"
"ನೀನು ಸಿಕ್ಕಲಿಲ್ಲ ಅಂತ ನಾನು ಲುಕ್ರೇಸಿಯನ್ನು ಹುಡುಕಿಕೊಂಡು ಹೊರಟಿದ್ದೆ. ಅವನಾದರೆ ಇದನ್ನೆಲ್ಲಾ ಬಲ್ಲವನು ..."
"ಲುಕ್ರೇಸಿಗೆ ಅಮೋಂತಿಜಾದೋಗೂ ದಿನನಿತ್ಯ ಕುಡಿಯುವ ಷೆರಿಗೂ ವ್ಯತ್ಯಾಸ ಗೊತ್ತಿಲ್ಲ."
"ನೋಡಿದೆಯಾ! ಕೆಲವರು ಮೂರ್ಖರು ಅವನನ್ನು ನಿನಗೆ ಹೋಲಿಸುತ್ತಾರೆ!"
"ನಡಿ, ಹೋಗೋಣ."
"ಎಲ್ಲಿಗೆ?"
"ನಿನ್ನ ಮದ್ಯಾಗಾರಕ್ಕೆ."
"ಇಲ್ಲಪ್ಪ, ಇದು ತೀರಾ ಅತಿಯಾಯಿತು! ನೀನು ಯಾವುದೋ ಕೆಲಸದ ಮೇಲಿದ್ದೀಯ. ನಿನ್ನ ಒಳ್ಳೆಯತನವನ್ನ ನಾನು ಹಾಗೆ ದುರುಪಯೋಗ ಪಡೆಸಿಕೊಳ್ಳಲಾರೆ. ನಾನು ಲುಕ್ರೇಸಿಯನ್ನು ... "
"ನನಗೆ ಯಾವ ಕೆಲಸವೂ ಇಲ್ಲ, ನಡಿ."
"ಇಲ್ಲ, ಇಲ್ಲ! ನಿನಗೆ ಈಗ ಯಾವ ಕೆಲಸವೂ ಇಲ್ಲದೇ ಇರಬಹುದು. ಆದರೆ ನಿನಗೆ ವಿಪರೀತ ನೆಗಡಿಯಾಗಿರುವುದು ನನಗೆ ಕಾಣುತ್ತಿದೆ. ಮದ್ಯ ಇಟ್ಟಿರುವ ಜಾಗದಲ್ಲಿ ವಿಪರೀತ ತೇವ. ಅಲ್ಲಿ ಗೋಡೆಗಳಿಗೆ ಯವಕ್ಷಾರ ಮೆತ್ತಿಸಿದ್ದೇನೆ."
"ಇರಲಿ, ನಡಿ. ನೆಗಡಿ ಅಂಥದ್ದೇನೂ ಇಲ್ಲ. ಅಮೋಂತಿಜಾದೋ! ನಿನಗೆ ಯಾರೋ ಮೋಸ ಮಾಡಿರಬೇಕು. ಲುಕ್ರೇಸಿಯನ್ನು ನಂಬಬೇಡ - ಅವನಿಗೆ ಷೆರಿಗೂ ಅಮೋಂತಿಜಾದೋಗೂ ವ್ಯತ್ಯಾಸ ತಿಳಿಯುವುದಿಲ್ಲ!"
ಹೀಗೆನ್ನುತ್ತಾ ಫಾರ್ಚುನಾತೋ ನನ್ನ ಹೆಗಲ ಮೇಲೆ ಕೈಹಾಕಿದ. ನಾನು ತೊಟ್ಟಿದ್ದ ಉದ್ದದ ಕೋಟನ್ನು ಇನ್ನಷ್ಟು ಬಿಗಿಮಾಡಿಕೊಂಡು ಉತ್ಸವದಲ್ಲಿ ನಾನು ತೊಡಲು ಇಟ್ಟುಕೊಂಡಿದ್ದ ಕಪ್ಪು ಮುಖವಾಡವನ್ನು ಹಾಕಿಕೊಂಡೆ. ನನ್ನ ಬಂಗಲೆಯ ಕಡೆಗೆ ಅವನು ಅವಸರದ ಹೆಜ್ಜೆ ಹಾಕಿದ. ನಾನು ಹಿಂಬಾಲಿಸಿದೆ.
(ಎರಡನೇ ಭಾಗವನ್ನು ಇಲ್ಲಿ ಓದಿ)
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ