ಪರಿಪಾಠ ಮತ್ತು ಪರಿಸರ ಪಾಠ
ಸಿ ಪಿ ರವಿಕುಮಾರ್
ಪರಿಸರದ ಪಾಠ ಪ್ರತಿವರ್ಷ ಓದಿದವರು
ಪರಿಸರ ದಿನಾಚರಣೆ ತಪ್ಪದೇ ಮಾಡಿದವರು
ಮಾಲಿನ್ಯದ ಬಗ್ಗೆ ರಚಿಸಿ ಸುಂದರ ಹಾಡು
ಕರತಾಡನದ ಹಿಮ್ಮೇಳಕ್ಕೆ ಹಾಡಿದವರು
ಮಂಡೂರಿನ ವ್ಯಸನಕ್ಕೆ ಕಣ್ಣೀರು ಮಿಡಿದವರು
ಸ್ವಚ್ಛತಾ ಅಭಿಯಾನಕ್ಕೆ ಚಪ್ಪಾಳೆ ಹೊಡೆದವರು
ನಾವೇ.
ಗೌರಿ ಹಬ್ಬಕ್ಕೆ ಆಯುಧಪೂಜೆಗೆ ಬಾಳೆಕಂದು ಕಡಿದವರು
ಪ್ಲಾಸ್ಟಿಕ್ ತಟ್ಟೆಯಲ್ಲಿ ಪ್ರಸಾದ ಸ್ವೀಕರಿಸಿ
ಪ್ಲಾಸ್ಟಿಕ್ ಲೋಟದಲ್ಲಿ ನೀರು ಕುಡಿದವರು
ದೀಪಾವಳಿ ಹಬ್ಬಕ್ಕೆ ಮದ್ದಾಗಿ ಸಿಡಿದವರು
ಪಟಾಕಿ ಆಸ್ಫೋಟಕ್ಕೆ ಕಿವಿ ಮುಚ್ಚಿ ನಡೆದವರು
ನಾವೇ.
ವರ್ಷಕ್ಕೆ ಒಂದೇ ಗೌರಿ-ಗಣೇಶ
ವರ್ಷಕ್ಕೆ ಒಂದು ಸಲ ದಸರಾ ಆವೇಶ
ಪ್ರತಿದಿನ ಬರುವುದೇ ದೀಪಾವಳಿ ಹರ್ಷ?
ಒಂದು ದಿನವಾದರೂ ಬೇಡವೇ ರಾಜ್ಯೋತ್ಸವಕ್ಕೆ ಸಿರಿಗನ್ನಡಂ ಘೋಷ?
ಇಷ್ಟಕ್ಕೇ ಆಗಿಬಿಡುವುದೇ ಪರಿಸರ ನಾಶ?
ಇಷ್ಟನ್ನೂ ತಡೆದುಕೊಳ್ಳಲಾರದೇ ಪರಿಸರ ಎಂಬ ರೋಷ -
ನಮ್ಮದೇ.
ಹೇ ಪ್ರಭೂ ನಮ್ಮನ್ನು ಕ್ಷಮಿಸು, ಕ್ಷಮಿಸು ಮತ್ತೊಮ್ಮೆ,
ಏಕೆಂದರೆ ನಾವು ಮಾಡುತ್ತಿರುವುದೇನೆಂದು ಗೊತ್ತಿದೆ ನಮಗೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ