ಅಮೋಂತಿಜಾದೋ ಮದ್ಯದ ಪೀಪಾಯಿ - 3

ಮೂಲ ಇಂಗ್ಲಿಷ್ ಕಥೆ - ಎಡ್ಗರ್ ಆಲೆನ್ ಪೋ

ಕನ್ನಡ ಅನುವಾದ - ಸಿ ಪಿ ರವಿಕುಮಾರ್ 


ಭಾಗ - ೩
(ದ್ವಿತೀಯ  ಭಾಗವನ್ನು ಇಲ್ಲಿ ಓದಿ)


ಮದಿರೆ ಅವನ ಕಣ್ಣಿನಲ್ಲಿ ಹೊಳೆಯುತ್ತಿತ್ತು. ಅವನ ಟೋಪಿಯ ಗಂಟೆಗಳು ಕುಣಿಯುತ್ತಿದ್ದವು.  ಮೆಡೋಕ್ ನನ್ನ ಹೊಟ್ಟೆಗೆ ಇಳಿಯುತ್ತಲೇ ನನ್ನ ಖಯಾಲಿಗೂ ಕಾವು ಕೊಟ್ಟಂತಾಯಿತು.  ನಾವು ನಡೆದುಕೊಂಡು ಹೋಗುವಾಗ ಗೋಡೆಗಳ ಮುಂದೆ ಪೇರಿಸಿಟ್ಟ ಪುರಾತನರ ಅಸ್ಥಿಪಂಜರಗಳು ಗೋಚರಿಸಿದವು. ಸಣ್ಣ-ದೊಡ್ಡ ಮದ್ಯದ ಪೀಪಾಯಿಗಳು ಎಲ್ಲಾ ಕಡೆ ಕಂಡವು.  ನೆಲಮಾಳಿಗೆಯ ಗರ್ಭಕ್ಕೆ ಬಂದು ತಲುಪಿದಾಗ ನನಗೆ ಕೊನೆಗೂ ಅವನ ತೋಳನ್ನು ಹಿಡಿದುಕೊಳ್ಳುವಷ್ಟು ಧೈರ್ಯ ಬಂತು. 

"ಯವಕ್ಷಾರ! ನೋಡು, ಎಲ್ಲಾ ಕಡೆ ಹೇಗೆ ಪಾಚಿಯ ಹಾಗೆ ಗೋಡೆಯ ಮೇಲೆಲ್ಲಾ ಹಬ್ಬಿದೆ. ನಾವೀಗ ನೇರವಾಗಿ ನದೀಪಾತ್ರದ ಕೆಳಗೆ ನಿಂತಿದ್ದೇವೆ. ಮೇಲಿಂದ ಜಿನುಗುವ ನೀರು ಇಲ್ಲಿರುವ ಮೂಳೆಗಳ ಜೊತೆ ಬೆರೆತು ಹೀಗಾಗಿದೆ. ನಡಿ, ವಾಪಸು ಹೋಗೋಣ. ಸದ್ಯ ಇನ್ನೇನಾದರೂ ಆದೀತು. ನಿನ್ನ ಕೆಮ್ಮು ... "  

ಅವನು ನನ್ನ ಮಾತನ್ನು ಅರ್ಧದಲ್ಲೇ ತುಂಡರಿಸಿದ. "ಅಯ್ಯೋ, ನಡಿ, ಏನೂ ಆಗೋದಿಲ್ಲ! ಎಲ್ಲಿ, ಇನ್ನೊಂದು ಗುಟುಕು ಮೆಡೋಕ್ ಕೊಡು, ನೋಡೋಣ."

ನಾನು ಅಲ್ಲೇ ಇದ್ದ ಡಿ ಗ್ರೇವ್ ಮದ್ಯದ ಹೂಜಿಯನ್ನು ಅವನ ಮುಂದೆ ಹಿಡಿದೆ. ಅದರಿಂದ ಅವನು ಗಟಗಟ ಕುಡಿದು ನಗುತ್ತಾ ಪಾತ್ರೆಯನ್ನು ಮೇಲೆಸೆದ.  ಅವನ ಕಣ್ಣುಗಳಲ್ಲಿ ಕ್ರೂರವಾದ ಹೊಳಪು ಮೂಡಿತು. ಅವನು ಕೈಗಳಿಂದ ಯಾವುದೋ ಸನ್ನೆ ಮಾಡಿದ. ನನಗೆ  ಅರ್ಥವಾಗಲಿಲ್ಲ. ವಿಕೃತವಾದ ಸನ್ನೆಯನ್ನು ಅವನು ಮತ್ತೆ ಮಾಡಿ ನನ್ನ ಕಡೆ ಪ್ರಶ್ನಾರ್ಥಕವಾಗಿ ನೋಡಿದ.  "ಇದರ ಅರ್ಥ ಗೊತ್ತಿಲ್ಲವಾ?" ಎಂದ. 

"ಇಲ್ಲವಲ್ಲ" ಎಂದೆ. 

"ಹಾಗಾದರೆ ನೀನು ನಮ್ಮ ಸಂಘಕ್ಕೆ ಸೇರಿದವನಲ್ಲ."

"ಹಾಗೆಂದರೆ?"

"ನೀನು ಮೇಸನ್ ಸಂಘಕ್ಕೆ ಸೇರಿದವನಲ್ಲ."

"ಇಲ್ಲ, ಸೇರಿದ್ದೇನೆ, ಸೇರಿದ್ದೇನೆ. ನಾನೂ ಸೇರಿದ್ದೇನೆ. ನಾನೂ ಸೇರಿದ್ದೇನೆ."

"ನೀನು? ಮೇಸನ್?  ಅಸಾಧ್ಯ!"

"ನಾನೂ ಮೇಸನ್ ಏ."

"ಎಲ್ಲಿ, ಒಂದು ಸನ್ನೆ ಮಾಡಿ ತೋರಿಸು, ನೋಡೋಣ!"

"ಇಗೋ" ಎಂದು ನನ್ನ ಕೋಟಿನ ಕೆಳಗೆ ಇಟ್ಟುಕೊಂಡಿದ್ದ ಪುಟ್ಟ ಕರಣೆಯನ್ನು ಮುಂದು ಮಾಡಿದೆ.  (ಅಡಿ ಟಿಪ್ಪಣಿ: ಮೇಸನ್ ಎಂದರೆ ಮೇಸ್ತ್ರಿ ಎಂಬ ಅರ್ಥವಿದೆ. ಮೇಸನ್ ಎಂಬುದು ಒಂದು ರಹಸ್ಯ ಸಂಘಟನೆಯ ಹೆಸರು. ಕೂಡಾ. ಇಂಥ ರಹಸ್ಯ ಸಂಘಟನೆಗಳನ್ನು ಸೇರಲು ಯುವಕರು ಹಾತೊರೆಯುತ್ತಾರೆ. ಅವರ ಹಿನ್ನೆಲೆ, ಅವರ ಸಾಧನೆ ಇವುಗಳ ಮೇಲೆ ಸದಸ್ಯತ್ವ ದೊರೆಯುತ್ತದೆ.)



"ಹುಡುಗಾಟವೇನು!" ಅವನು ಅಸಹ್ಯ ಪಟ್ಟುಕೊಂಡು ಹಿಂದಕ್ಕೆ ಸರಿದ.  "ಇರಲಿ, ಬಿಡು. ಅಮೋಂತಿಜಾದೋ ಕಡೆ ಹೋಗೋಣ, ನಡಿ."

"ಸರಿ, ನಡಿ" ಎಂದು ನಾನು ಕರಣೆಯನ್ನು ಒಳಗೆ ಇಟ್ಟು ಕೊಂಡು ಮತ್ತೆ ಅವನ ಭುಜವನ್ನು ಹಿಡಿದುಕೊಂಡೆ. ಅವನು ಈಗ ನನ್ನ ಮೇಲೆ ಸಾಕಷ್ಟು ಭಾರ ಹಾಕಿ ನಡೆಯುತ್ತಿದ್ದ.  ನಾವು ತಗ್ಗಾದ ಕಮಾನುಗಳ ಮೂಲಕ ಹಾಯುತ್ತಾ, ಅಲ್ಲಲ್ಲಿ ಕೆಲವು ಮೆಟ್ಟಿಲುಗಳನ್ನು ಇಳಿಯುತ್ತಾ  ಅಮಾಂತಿಜಾದೋ ಶೋಧಕ್ಕೆ ಹೊರಟೆವು.  ಕೊನೆಗೆ ನಾವೊಂದು  ಸಮಾಧಿ ಸ್ಥಾನಕ್ಕೆ  ಬಂದೆವು. ಅಲ್ಲಿದ್ದ ಕಲುಷಿತ ಗಾಳಿಗೆ ನಮ್ಮ ದೊಂದಿಯ ಜ್ವಾಲೆಗಳು ಶಮನವಾಗಿ ಈಗ ಅವು ಕೆಂಡದ ಉಂಡೆಗಳಂತೆ ತೋರುತ್ತಿದ್ದವು.



ಈ ಸಮಾಧಿ ದಾಟಿ ಮುಂದೆ ಹೋದಾಗ ಅಲ್ಲಿ  ಅದಕ್ಕಿಂತ ಸ್ವಲ್ಪ ಕಿಷ್ಕಿಂಧವಾಗಿದ್ದ ಇನ್ನೊಂದು ಸಮಾಧಿ ಕಾಣಿಸಿತು; ಅದರ ಗೋಡೆಗಳ ಬದಿಗೆ ಮಾನವ ದೇಹದ ಅವಶೇಷಗಳನ್ನು ಒಟ್ಟು ಮಾಡಲಾಗಿತ್ತು. ಪ್ಯಾರಿಸ್ ನಗರದ ಪ್ರಸಿದ್ಧ ನೆಲಮಾಳಿಗೆ ಸಮಾಧಿಗಳ ಹಾಗೆ ಮೂಳೆಗಳನ್ನು ನೆಲದಿಂದ ಚಾವಣಿಯವರೆಗೂ ಪೇರಿಸಿ ಇಡಲಾಗಿತ್ತು. ಒಂದು ಗೋಡೆಯ ಬದಿಯಲ್ಲಿ ಪೇರಿಸಿಟ್ಟ ಅಸ್ಥಿಗಳು ಜಾರಿ ಬಿದ್ದು ನೆಲದ ಮೇಲೆಲ್ಲಾ ಹರಡಿಹೋಗಿದ್ದವು. ಈ ಗೋಡೆಯಲ್ಲಿದ್ದ ಬಾಗಿಲಿನ ಮೂಲಕ ಹೊಕ್ಕು ನಾವು ಇನ್ನೊಂದು ಒಳಗಣ ಗೂಡಿಗೆ ಬಂದೆವು. ಇದು ಸುಮಾರು ನಾಲ್ಕು ಅಡಿ ಉದ್ದ, ಮೂರಡಿ ಅಗಲದ ಸ್ಥಳ. ಎತ್ತರ ಆರೋ ಏಳೋ ಅಡಿ ಇದ್ದೀತು. ಈ ಸ್ಥಳಕ್ಕೆ ಇಂಥದ್ದೇ ಎಂಬ ಉಪಯುಕ್ತತೆ ಇರಲಿಲ್ಲ. ಸಮಾಧಿಯ  ಚಾವಣಿಯನ್ನು ಹೊತ್ತಿದ್ದ ಬೃಹದಾಕಾರದ ಎರಡು ಆಧಾರಸ್ತಂಭಗಳ ನಡುವಿನ ಗೂಡು ಎಂದರೆ ಹೆಚ್ಚು ಸಮರ್ಪಕವಾಗುವುದೇನೋ. ಮೂರನೇ ಕಡೆ ಗಟ್ಟಿಯಾದ ಶಿಲೆಯ ಗೋಡೆಯಿದ್ದು ನಾಲ್ಕನೆಯ ಕಡೆ ಮಾತ್ರ ತೆರೆದಿತ್ತು.

ಫಾರ್ಚುನಾತೋ ಗೂಡಿನ ಒಳಗೆ ತನ್ನ ಕಂದೀಲಿನ ಬೆಳಕಿನಲ್ಲಿ ಇಣುಕಿ ನೋಡುವ ವ್ಯರ್ಥ ಪ್ರಯತ್ನ ಮಾಡಿದ. ಗಬೋ ಎನ್ನುವ ಕತ್ತಲಿನಲ್ಲಿ ಕಂದೀಲಿನ ದುರ್ಬಲ ಬೆಳಕು ನಿಷ್ಪ್ರಯೋಜಕವಾಗಿತ್ತು.

"ಇಲ್ಲೇ ಇಟ್ಟಿರುವುದು ಅಮಾಂತಿಜಾದೋ - ಒಳಗೆ ಹೋಗು. ಲುಕ್ರೇಸಿ ... "

"ಅವನೊಬ್ಬ ಮೂರ್ಖ" ಎನ್ನುತ್ತಾ ನನ್ನ ಮಿತ್ರ ತಡವರಿಸಿಕೊಂಡು ಒಳಗೆ ಕಾಲಿಟ್ಟ. ನಾನು ಲಗುಬಗೆಯಿಂದ ಅವನನ್ನು ಹಿಂಬಾಲಿಸಿದೆ. ಗೂಡಿನ ಒಳಗೆ ಪ್ರವೇಶಿಸಿದ ಫಾರ್ಚುನಾತೋ ಅದರ ಹಿಂಭಾಗದ ಕಲ್ಲಿನ ಗೋಡೆಯನ್ನು ಮುಟ್ಟಿದಾಗ  ಅವಾಕ್ಕಾಗಿ ನಿಂತುಬಿಟ್ಟ.  ಮರುಕ್ಷಣದಲ್ಲಿ ಅವನನ್ನು ನಾನು ಗೋಡೆಗೆ ಕಟ್ಟಿಹಾಕಿದೆ.  ಕಲ್ಲಿನ ಗೋಡೆಯಲ್ಲಿ ಎರಡು ಅಡಿಗಳ ಅಂತರದಲ್ಲಿ ಎರಡು  ಕಬ್ಬಿಣದ ಗೂಟಗಳನ್ನು ಹೂಡಲಾಗಿತ್ತು. ಒಂದಕ್ಕೆ ಕಬ್ಬಿಣದ ಸರಪಳಿಯನ್ನೂ ಇನ್ನೊಂದಕ್ಕೆ ಬೀಗವನ್ನೂ ತೂಗಿಹಾಕಲಾಗಿತ್ತು. ಸರಪಳಿಯನ್ನು ಅವನ ಸೊಂಟದ ಸುತ್ತ ಸುತ್ತಿ ಬೀಗ ಜಡಿಯಲು ನನಗೆ ಕೆಲವೇ ಕ್ಷಣಗಳು ಸಾಕಾದವು. ದಿಗ್ಭ್ರಮೆಯಲ್ಲಿ ಅವನಿಗೆ ಪ್ರತಿಭಟಿಸಲು ಕೂಡಾ ಸಾಧ್ಯವಾಗಲಿಲ್ಲ. ಬೀಗದ ಕೈಯನ್ನು ಸೆಳೆದುಕೊಂಡು ನಾನು ಹಿಂದಕ್ಕೆ ಬಂದೆ.

"ನಿನ್ನ ಕೈಯನ್ನು ಕಲ್ಲಿನ ಗೋಡೆಯ ಮೇಲೆ ಆಡಿಸಿ ನೋಡು - ಯವಕ್ಷಾರ ಕೈಗೆ ಹತ್ತುತ್ತದೆ. ಇಲ್ಲಿ ತೇವ ವಿಪರೀತವಾಗಿದೆ. ಇನ್ನೊಂದು ಸಲ ನಿನ್ನನ್ನು ಕೇಳುತ್ತೇನೆ - ವಾಪಸು ಹೋಗೋಣ, ನಡಿ. ಬೇಡವೇ? ಹಾಗಾದರೆ ನಾನು ನಿನ್ನನ್ನು ಇಲ್ಲೇ ಬಿಟ್ಟು ಹೋಗದೆ ವಿಧಿಯಿಲ್ಲ. ಆದರೆ ಹೋಗುವ ಮುನ್ನ ನಿನಗೆ ನನ್ನ ಕೈಲಾಗುವ ಸೇವೆ ಸಲ್ಲಿಸಿ ಹೋಗುತ್ತೇನೆ."

"ಅಮೋಂತಿಜಾದೋ!" ಅವನು ಕಕ್ಕಾಬಿಕ್ಕಿಯಾಗಿ ಉದ್ಗರಿಸಿದ.



"ನಿಜ, ಅಮೋಂತಿಜಾದೋ!" ಎಂದು ನಾನು ಉತ್ತರಿಸಿದೆ.  ಹಾಗೆಂದವನೇ ನೆಲದ ಮೇಲೆ ರಾಶಿ ಬಿದ್ದ ಮೂಳೆಗಳ ಬಗ್ಗೆ ಹಿಂದೆ ಹೇಳಿದ್ದೆನಲ್ಲವೇ, ಅದನ್ನು ಸರಿಸಿದೆ. ಅಲ್ಲಿ ಗಾರೆ ಮತ್ತು ಕಲ್ಲುಗಳ ರಾಶಿಯೊಂದು ಕಂಡಿತು. ನನ್ನ ಬಳಿ ಇದ್ದ ಕರಣೆಯ ಸಹಾಯದಿಂದ ಗೋಡೆಯನ್ನು ನಿರ್ಮಿಸುತ್ತಾ  ಗೂಡಿನ ಏಕೈಕ ಪ್ರವೇಶದ್ವಾರವನ್ನು   ಮುಚ್ಚುವ ಸನ್ನಾಹಕ್ಕೆ ತೊಡಗಿದೆ.  ಕಲ್ಲುಗಳ ಒಂದು ಸಾಲನ್ನು ಹಾಕಿ ಮುಗಿಸುವ ಹೊತ್ತಿಗೆ ಫಾರ್ಚುನಾತೋನ ಅಮಲು ಬಹುತೇಕ ಇಳಿದುಹೋಗಿತ್ತು ಎಂಬ ಅರಿವು ನನಗಾಯಿತು. ಗೂಡಿನ ಒಳಗಿಂದ ಮೆಲ್ಲಗೆ ಅಳುವ ಸದ್ದು ಕೇಳಿಸಿದಾಗ ನನಗೆ ಈ ಅನುಮಾನ ಬಂತು. ಅದು ಕುಡಿದವರು ಅಮಲಿನಲ್ಲಿ ಅಳುವ ಅಳುವಾಗಿರಲಿಲ್ಲ.  ಇದಾದ ನಂತರ ಸುಮಾರು ಹೊತ್ತು ನಿಶ್ಶಬ್ದತೆ ಆವರಿಸಿತು. ನಾನು ಎರಡನೇ ಸಾಲಿನ ಕಲ್ಲುಗಳನ್ನು ಜೋಡಿಸಿ ಮುಗಿಸಿದೆ. ಅನಂತರ ಮೂರನೇ, ನಾಲ್ಕನೇ ಸಾಲುಗಳನ್ನು ಮುಗಿಸಿದೆ.

ಆಗ ಸರಪಳಿಯನ್ನು ರಭಸದಿಂದ ಜಗ್ಗಿದ ಸದ್ದು ಕೇಳಿಸಿತು.  ಈ ಸದ್ದು ಹಲವಾರು ನಿಮಿಷಗಳ ಕಾಲ ಕೇಳುತ್ತಿತ್ತು.  ಇದನ್ನು ಕೇಳಿ ಆನಂದಿಸಲು ನಾನು ಅಲ್ಲೇ ಮೂಳೆಗಳ ಮೇಲೆ ಸ್ವಲ್ಪ ಹೊತ್ತು ಕುಳಿತಿದ್ದೆ. ಕೊನೆಗೂ ಖಣಖಣ ಸದ್ದು ನಿಂತಾಗ ನಾನು ಕರಣೆಯನ್ನು ಕೈಗೆತ್ತಿಕೊಂಡು ಕೆಲಸ ಮುಂದುವರೆಸಿದೆ. ಐದನೇ, ಆರನೇ, ಏಳನೇ ಸಾಲಿನ ಕಲ್ಲುಗಳನ್ನು ಜೋಡಿಸಿದೆ.  ಈಗ ಗೋಡೆ ನನ್ನ ಎದೆಯ ಮಟ್ಟಕ್ಕೆ ಬಂದಿತ್ತು. ನಾನು ಕೆಲಸ ನಿಲ್ಲಿಸಿ ಕಂದೀಲನ್ನು ಗೋಡೆಯ ಮೇಲೆತ್ತಿ ಒಳಗಿದ್ದ ವ್ಯಕ್ತಿಯ ಮೇಲೆ ಬೆಳಕು ಬೀರಿದೆ. ಸಂಕೋಲೆಯಲ್ಲಿ ಬಂಧಿತನಾದ ಪ್ರಾಣಿಯ ಗಂಟಲಿನಿಂದ ಏರುಧ್ವನಿಯ ಕರ್ಕಶ ಕಿರುಚಾಟ ಹೊರಟಿತು. ಇದನ್ನು ಕೇಳಿ ನಾನು ಬೆಚ್ಚಿ ಹಿಂದೆ ಸರಿದೆ. ಒಂದೆರಡು ಕ್ಷಣ ನನ್ನ ಮನಸ್ಸು ಹೊಯ್ದಾಡಿತು. ನನ್ನ ಸೊಂಟಕ್ಕೆ ಕಟ್ಟಿದ್ದ ಕತ್ತಿಯನ್ನು ಬಿಚ್ಚಿ ಅದನ್ನು ಗೂಡಿನ ಒಳಕ್ಕೆ ಆಡಿಸಿದೆ. ಗಟ್ಟಿಯಾದ ಗೋಡೆಯನ್ನು ಮತ್ತೊಮ್ಮೆ ಮುಟ್ಟಿ ಸಮಾಧಾನ ಪಟ್ಟುಕೊಂಡೆ. ಮತ್ತೆ ಗೋಡೆಯ ಕೆಲಸಕ್ಕೆ ಹಿಂತಿರುಗಿದೆ. ಒಳಗಿನಿಂದ ಬರುತ್ತಿದ್ದ ಕಿರುಚಾಟವನ್ನು ಅಣಕಿಸಿ ನಾನೂ ಕಿರುಚಿದೆ.  ಹುರಿದುಂಬಿಸಿದೆ. ಕಿರುಚಾಟ ಜೋರಾದಾಗ ನಾನು ಅದಕ್ಕೂ  ಜೋರಾಗಿ ಅರಚಿದೆ. ಕೊನೆಗೆ ಕಿರುಚಾಡುತ್ತಿದ್ದವನು ಸುಮ್ಮನಾದ.

ಈಗ ನಡುರಾತ್ರಿಯಾಗಿತ್ತು. ನನ್ನ ಕಾರ್ಯ ಮುಗಿಯುತ್ತಾ ಬಂದಿತ್ತು. ಎಂಟನೇ, ಒಂಬತ್ತನೇ, ಹತ್ತನೇ ಸಾಲಿನ ಕಲ್ಲುಗಳನ್ನು ಜೋಡಿಸಿ ಮುಗಿಸಿದ್ದೆ. ಹನ್ನೊಂದನೇ ಸಾಲಿನಲ್ಲಿ ಒಂದನ್ನು ಹೊರತು ಬೇರೆಲ್ಲಾ ಕಲ್ಲುಗಳನ್ನು ಜೋಡಿಸಿದ್ದಾಗಿತ್ತು. ಕೊನೆಯ ಕಲ್ಲನ್ನಿಟ್ಟು ಗಾರೆ ಹಾಕಿದರೆ ಮುಗಿಯಿತು. ಬಹಳ ಕಷ್ಟ ಪಟ್ಟು ಕಲ್ಲನ್ನು ಮೇಲೆತ್ತಿದೆ. ಅದನ್ನು ಅದರ ಸ್ಥಾನದಲ್ಲಿ ಅರ್ಧ ಕೂಡಿಸಿದಾಗ ಒಳಗಿನಿಂದ ಮೆಲ್ಲನೆ ನಗುವ ಸದ್ದು ಕೇಳಿ ನನ್ನ ನರಗಳು ಸೆಟೆದು ನಿಂತವು.  ನಗುವುದು ನಿಂತುಹೋಯಿತು. ದುಃಖಪೂರ್ಣ ಧ್ವನಿಯೊಂದು ಮಾತಾಡಿದ್ದು ಕೇಳಿತು. ಅದು ನಮ್ಮ ಧೀರೋದಾತ್ತ ಫಾರ್ಚುನಾತೋನ ಧ್ವನಿಯೇ ಎಂದು ಅನುಮಾನ ಬರುವಂತಿತ್ತು.

ಧ್ವನಿಯು "ಹ ಹ ಹ ಹ! ಹೆ ಹೆ ಹೆ ಹೆ! ಇದು ಒಳ್ಳೆಯ ತಮಾಷೆ, ನಿಜಕ್ಕೂ ಒಳ್ಳೆಯ ತಮಾಷೆ! ಮುಂದೆ ಎಷ್ಟೋ ಜನ ಶ್ರೀಮಂತರು ಇದನ್ನು ಕೇಳಿ ನಗುತ್ತಾರೆ - ನಮ್ಮ ವೈನ್ ಕತೆ ಕೇಳಿ! ಹೆ ಹೆ ಹೆ!" ಎಂದಿತು.

"ನಮ್ಮ ಅಮಾಂತಿಜಾದೋ ವೈನ್ ವಿಷಯ!" ನಾನೆಂದೆ.

"ಹೆ ಹೆ ಹೆ! ಹೆ ಹೆ ಹೆ! ಹೌದು, ಅಮಾಂತಿಜಾದೋ! ಅಂದಹಾಗೆ ತೀರಾ ತಡವಾಗುತ್ತಿದೆ ಅಲ್ಲವಾ? ಬಂಗಲೆಯಲ್ಲಿ ನನ್ನ ಹೆಂಡತಿ ಮಕ್ಕಳು ನನಗಾಗಿ ಕಾದಿರುತ್ತಾರೆ. ಇನ್ನು ಹೊರಡೋಣ."

"ಓ! ಹೊರಡೋಣ" ನಾನೆಂದೆ.

"ಮಾಂಟ್ರೆಸಾರ್, ದೇವರ ಸಲುವಾಗಿ!"

"ಹೌದು, ದೇವರ ಸಲುವಾಗಿ" ನಾನು ಮಾರುತ್ತರ ಕೊಟ್ಟೆ.

ಆದರೆ ನನ್ನ ಮಾತಿಗೆ ಪ್ರತ್ಯುತ್ತರ ಬರಲಿಲ್ಲ. ನಾನು ಕಾದೆ. ಕಾದು ಬೇಸತ್ತು ಜೋರಾಗಿ "ಫಾರ್ಚುನಾತೋ!" ಎಂದು ಕೂಗಿದೆ.

ನಿಶಬ್ದ.  ನಾನು ಮತ್ತೆ ಕೂಗಿದೆ - "ಫಾರ್ಚುನಾತೋ!"

ನಿರುತ್ತರ. ನಾನು ಒಂದು ದೊಂದಿಯನ್ನು ಹೊಸ ಗೋಡೆಯ ಏಕಮಾತ್ರ ಬಿರುಕಿನಿಂದ ಒಳಗೆ ತುರುಕಿದೆ. ಉತ್ತರರೂಪವಾಗಿ ಗಂಟೆಗಳ ಧ್ವನಿ ಕೇಳಿಸಿತು. ನನ್ನ ಹೃದಯಕ್ಕೆ ಕಸಿವಿಸಿಯಾಗತೊಡಗಿತು. ಸಮಾಧಿಯಲ್ಲಿದ್ದ ತೇವವೇ ಇದಕ್ಕೆ ಕಾರಣ. ನಾನು ಬೇಗ ಕೆಲಸ ಮುಗಿಸೋಣವೆಂಬ ನಿರ್ಧಾರಕ್ಕೆ ಬಂದೆ. ಕೊನೆಯ ಕಲ್ಲನ್ನು ಅದರ ಸ್ಥಾನದಲ್ಲಿ  ಸರಿಯಾಗಿ ತಳ್ಳಿ ಗಾರೆ ಮೆತ್ತಿದೆ. ಹೊಸ ಗೋಡೆಯ ಮುಂದೆ ಹಳೆಯ ಅಸ್ಥಿಗಳನ್ನು ಪೇರಿಸಿದೆ. ಕಳೆದ ಐವತ್ತು ವರ್ಷಗಳಿಂದಲೂ ಯಾವ ನರಪಿಳ್ಳೆಯೂ ಅವುಗಳನ್ನು ಕದಲಿಸಿಲ್ಲ. ಚಿರಶಾಂತನಿದ್ರೆ!

(ಮುಗಿಯಿತು)

====
(c) 2014, C.P. Ravikumar
Kannada translation of 'The cask of Amontillado' by Edgar Allan Poe


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)