ಲಾಟರಿ - ಭಾಗ 3
(
(ಎರಡನೇ ಭಾಗವನ್ನು ಇಲ್ಲಿ ಓದಿ)ಲಾಟರಿ
ಭಾಗ - ೩
"ಹಾಗ್ಯಾಕಂತಿ ಟೆಸ್ಸಿ? ಸರೀನಾ ನೀನು ಅನ್ನೋದು?" ಶ್ರೀಮತಿ ಡೆಲಕ್ರಾಯ್ ಕೇಳಿದಳು.
"ಎಲ್ಲರೂ ನಿಮ್ಮ ಹಾಗೇ ಹೋದರು, ಚೀಟಿ ಎತ್ತಿದರು," ಶ್ರೀಮತಿ ಗ್ರೇವ್ಸ್ ನುಡಿದಳು.
"ಟೆಸ್ಸಿ, ಬಾಯಿ ಮುಚ್ಚು!" ಎಂದು ಬಿಲ್ ಹೆಂಡತಿಗೆ ಬೈದ.
ಮಿ। ಸಮ್ಮರ್ಸ್ "ಮೊದಲ ಕಾರ್ಯಕ್ರಮ ಸಾಕಷ್ಟು ಬೇಗ ಮುಗಿದಿದೆ. ಈಗ ಮುಂದಿನ ಕೆಲಸವನ್ನು ಬೇಗ ಮಾಡಿ ಮುಗಿಸೋಣ," ಎಂದ. ನಂತರ "ಬಿಲ್, ನೀನು ಹಚಿನ್ ಸನ್ ಪರಿವಾರದ ಪರವಾಗಿ ಚೀಟಿ ಎತ್ತಬೇಕು. ನಿಮ್ಮ ಮನೆತನದವರು ಎಲ್ಲರೂ ಇಲ್ಲೇ ಇದ್ದೀರಿ ತಾನೇ? ಇನ್ನೂ ಯಾರಾದರೂ ಇದ್ದಾರಾ?" ಎಂದು ಕೇಳಿದ.
"ಡಾನ್ ಮತ್ತು ಈವಾ ಕೂಡಾ ಇದ್ದಾರೆ!" ಎಂದು ಶ್ರೀಮತಿ ಹಚಿನ್ ಸನ್ ಕೂಗಿದಳು. "ಅವರೂ ಬಂದು ಚೀಟಿ ಎತ್ತಲಿ!"
"ಮದುವೆಯಾದ ಹೆಣ್ಣು ಮಕ್ಕಳು ತಮ್ಮ ಗಂಡಂದಿರ ಪರಿವಾರಕ್ಕೆ ಸೇರುತ್ತಾರೆ, ಟೆಸ್ಸಿ," ಎಂದು ಮಿ। ಸಮ್ಮರ್ಸ್ ತಾಳ್ಮೆಯಿಂದ ತಿಳಿಸಿ ಹೇಳಿದ. "ಇದು ನಿನಗೂ ಗೊತ್ತು."
"ಅನ್ಯಾಯ," ಎಂದಳು ಟೆಸ್ಸಿ.
"ಇಲ್ಲ, ಜೋ, ನನ್ನ ಮಗಳು ಮತ್ತು ಅಳಿಯ ಬೇರೆ ಪರಿವಾರಕ್ಕೆ ಸೇರಿದವರು. ಹಚಿನ್ ಸನ್ ಪರಿವಾರ ಎಂದರೆ ನಾನು, ಟೆಸ್ಸಿ ಮತ್ತು ನನ್ನ ಮಕ್ಕಳು" ಎಂದು ಬಿಲ್ ಹಚಿನ್ ಸನ್ ಪಶ್ಚಾತ್ತಾಪದ ಧ್ವನಿಯಲ್ಲಿ ಉತ್ತರಿಸಿದ.
"ನಿಮ್ಮ ಕುಟುಂಬದ ಪರವಾಗಿ, ನಿಮ್ಮ ಮನೆತನದ ಪರವಾಗಿ ಎರಡಕ್ಕೂ ನೀನೇ ಬಂದು ಚೀಟಿ ಎತ್ತಬೇಕು, ಸರಿ ತಾನೇ?" ಎಂದು ಮಿ। ಸಮ್ಮರ್ಸ್ ಕೇಳಿದ.
"ಹೌದು," ಎಂದು ಬಿಲ್ ಖಚಿತವಾಗಿ ನುಡಿದ.
"ಬಿಲ್, ನಿನಗೆ ಎಷ್ಟು ಜನ ಮಕ್ಕಳು?" ತನಗೆ ಉತ್ತರ ಗೊತ್ತಿದ್ದರೂ ಔಪಚಾರಿಕವಾಗಿ ಮಿ। ಸಮ್ಮರ್ಸ್ ಕೇಳಿದ.
"ಮೂರು ಜನ."
"ನನ್ನ ಮಗ ಬಿಲ್ ಜೂನಿಯರ್, ನ್ಯಾನ್ಸಿ, ಮತ್ತು ಪುಟಾಣಿ ಡೇವ್. ಇವರು ಬಿಟ್ಟರೆ ಟೆಸ್ಸಿ ಮತ್ತು ನಾನು."
"ಸರಿ, ಮತ್ತೆ. ಹ್ಯಾರಿ, ನೀನು ಇವರೆಲ್ಲರ ಚೀಟಿ ವಾಪಸ್ ತೊಗೊಂಡು ಪೆಟ್ಟಿಗೆಗೆ ಹಾಕು."
ಮಿ। ಗ್ರೇವ್ಸ್ ತಲೆಯಾಡಿಸಿದ.
"ಬಿಲ್ ಕೈಯಿಂದ ಚೀಟಿ ಇಸ್ಕೊಂಡು ಅದನ್ನೂ ಪೆಟ್ಟಿಗೆಗೆ ಹಾಕು."
"ನಾವು ಇನ್ನೊಂದು ಸಲ ಚೀಟಿ ಎತ್ತುವುದೇ ನ್ಯಾಯ. ನೀವು ನಮ್ಮವರಿಗೆ ಅವರಿಗೆ ಇಷ್ಟವಾದ ಚೀಟಿ ತೊಗೊಳ್ಳೋಕೆ ಸಾಕಷ್ಟು ಸಮಯ ಕೊಡಲಿಲ್ಲ. ಅದನ್ನು ಎಲ್ಲರೂ ನೋಡಿದ್ದಾರೆ." ಎಂದು ಶ್ರೀಮತಿ ಹಚಿನ್ ಸನ್ ಪ್ರತಿಭಟಿಸಿದಳು.
ಮಿ। ಗ್ರೇವ್ಸ್ ಐದು ಚೀಟಿಗಳನ್ನು ಪೆಟ್ಟಿಗೆಗೆ ಹಾಕಿದ. ಉಳಿದ ಚೀಟಿಗಳನ್ನು ನೆಲದ ಮೇಲೆ ಸುರಿದ. ಬೀಸಿದ ಗಾಳಿಗೆ ನೆಲದ ಮೇಲಿದ್ದ ಚೀಟಿಗಳು ಹಾರಿದವು.
"ನೋಡಿ, ಇಲ್ಲಿ ಕೇಳಿ," ಎಂದು ಶ್ರೀಮತಿ ಹಚಿನ್ ಸನ್ ತನ್ನ ಪಕ್ಕ ನಿಂತವರ ಬಳಿ ಹೇಳಿಕೊಳ್ಳುತ್ತಿದ್ದಳು.
"ಬಿಲ್, ಪ್ರಾರಂಭಿಸಬಹುದೇ?" ಎಂದು ಮಿ। ಸಮ್ಮರ್ಸ್ ಪ್ರಶ್ನಿಸಿದ. ಬಿಲ್ ಹಚಿನ್ ಸನ್ ತನ್ನ ಹೆಂಡತಿ ಮಕ್ಕಳ ಕಡೆಗೊಮ್ಮೆ ನೋಡಿ ಸಮ್ಮತಿಪೂರ್ವಕವಾಗಿ ತಲೆಯಾಡಿಸಿದ.
"ನೆನಪಿರಲಿ. ಎಲ್ಲರೂ ಚೀಟಿ ಎತ್ತುವ ತನಕ ಯಾರೂ ಅದನ್ನು ಬಿಡಿಸಬಾರದು. ಹ್ಯಾರಿ, ಪುಟ್ಟ ಡೇವ್ ಚೀಟಿ ಎತ್ತಲು ನೀನು ಸಹಾಯ ಮಾಡು" ಎಂದು ಮಿ। ಸಮ್ಮರ್ಸ್ ನುಡಿದ.
ಮಿ। ಗ್ರೇವ್ಸ್ ಪುಟ್ಟ ಹುಡುಗನ ಹತ್ತಿರ ಬಂದಾಗ ಅವನು ಯಾವ ತಕರಾರಿಲ್ಲದೆ ದೊಡ್ಡವನ ಕೈ ಹಿಡಿದು ಪೆಟ್ಟಿಗೆಯ ಬಳಿಗೆ ಹೋದ.
"ಡೇವ್, ಪೆಟ್ಟಿಗೆಯಿಂದ ಒಂದು ಚೀಟಿ ಎತ್ತಿಕೋ," ಎಂದು ಮಿ। ಸಮ್ಮರ್ಸ್ ಮಗುವಿಗೆ ದಿಗ್ದರ್ಶನ ಮಾಡಿದ. ಮಗು ಪೆಟ್ಟಿಗೆಯಲ್ಲಿ ಕೈ ಹಾಕಿ ನಕ್ಕಿತು.
"ಒಂದು ಚೀಟಿ ಮಾತ್ರ. ಹ್ಯಾರಿ, ಮಗು ಎತ್ತಿದ ಚೀಟಿಯನ್ನು ನೀನು ಇಟ್ಟುಕೊಂಡಿರು."
ಮಿ। ಗ್ರೇವ್ಸ್ ಮಗುವಿನ ಮುಂಗೈಯನ್ನು ಬಿಡಿಸಿ ಅಲ್ಲಿದ್ದ ಚೀಟಿಯನ್ನು ಕೈಯಲ್ಲಿಟ್ಟುಕೊಂಡ. ಮಗು ಅವನ ಪಕ್ಕದಲ್ಲಿ ನಿಂತು ಅವನ ಮುಖವನ್ನು ನಿರೀಕ್ಷಣಾಭಾವದಿಂದ ನೋಡಿತು.
"ಈಗ ನ್ಯಾನ್ಸಿ" ಎಂದು ಮಿ। ಸಮ್ಮರ್ಸ್ ಘೋಷಿಸಿದ. ನ್ಯಾನ್ಸಿ ಹನ್ನೆರಡು ವರ್ಷದ ಬಾಲಕಿ. ಅವಳು ಚೀಟಿ ಎತ್ತಲು ತನ್ನ ಲಂಗ ಚಿಮ್ಮುತ್ತಾ ಹೋದಾಗ ಅವಳ ಶಾಲಾ ಸಹಪಾಠಿಗಳ ಉಸಿರಾಟ ಜೋರಾಯಿತು.
"ಬಿಲ್ ಜೂನಿಯರ್" ಮಿ। ಸಮ್ಮರ್ಸ್ ಮುಂದುವರೆಸಿದ. ಕೆಂಪು ಮುಖದ, ದೊಡ್ಡ ಶರೀರದ ಬಿಲ್ಲಿ ಪೆಟ್ಟಿಗೆಯಿಂದ ಚೀಟಿ ತೆಗೆಯುವಾಗ ಅದು ಬಿದ್ದುಹೋಗುವುದರಲ್ಲಿತ್ತು. ಅವನ ಸರದಿಯಾದ ನಂತರ "ಟೆಸ್ಸಿ" ಎಂದು ಮಿ। ಸಮ್ಮರ್ಸ್ ಕೂಗಿದ. ಆಕೆ ಒಂದೆರಡು ಕ್ಷಣ ಅನುಮಾನಿಸಿದಳು. ಅನಂತರ ವಿದ್ರೋಹ ಭಾವದಿಂದ ಎಲ್ಲಾ ಕಡೆ ನೋಡುತ್ತಾ ತುಟಿ ಊದಿಸಿ ಮುಂದೆ ಹೋಗಿ ಚೀಟಿಯನ್ನು ಕಸಿದುಕೊಳ್ಳುವಂತೆ ಎತ್ತಿಕೊಂಡು ತನ್ನ ಕೈಗಳನ್ನು ಬೆನ್ನ ಹಿಂದೆ ಮಡಿಸಿಕೊಂಡು ವಾಪಸಾದಳು. ಮಿ। ಸಮ್ಮರ್ಸ್ "ಬಿಲ್" ಎಂದು ಕರೆದಾಗ ಉಳಿದ ಒಂದೇ ಒಂದು ಚೀಟಿಯನ್ನು ಬಿಲ್ ಹಚಿನ್ ಸನ್ ಎತ್ತಿಕೊಂಡ.
ಜನರ ಗುಂಪಿನಲ್ಲಿ ವಿಲಕ್ಷಣವಾದ ಮೌನ ಕವಿಯಿತು. ಒಬ್ಬ ಹುಡುಗಿ "ನ್ಯಾನ್ಸಿ ಅಲ್ಲದೇ ಹೋದರೆ ಸಾಕು" ಎಂದು ಪಿಸುಗುಟ್ಟಿದ್ದು ಸಾಕಷ್ಟು ಜನರಿಗೆ ಕೇಳಿತು. ವಾರ್ನರ್ ಅಜ್ಜನಿಗೂ ಕೇಳಿತು. ಅವನು "ಜನ ಮುಂಚಿದ್ದ ಹಾಗಿಲ್ಲ, ಬಿಡಿ!" ಎಂದು ಅಸಮಾಧಾನದಿಂದ ಜೋರಾಗಿಯೇ ಹೇಳಿದ.
"ಸರಿ, ಈಗ ಎಲ್ಲರೂ ನಿಮ್ಮ ಚೀಟಿ ತೆಗೆದು ನೋಡಿ. ಹ್ಯಾರಿ, ನೀನು ಪುಟ್ಟ ಡೇವ್ ನ ಚೀಟಿ ತೆಗೆದು ನೋಡು" ಮಿ। ಸಮ್ಮರ್ಸ್ ನುಡಿದ.
ಮಿ। ಗ್ರೇವ್ಸ್ ಮಗುವಿನ ಚೀಟಿಯನ್ನು ಬಿಚ್ಚಿ ಅದನ್ನು ಎಲ್ಲರಿಗೂ ಕಾಣುವಂತೆ ಮೇಲೆತ್ತಿ ಹಿಡಿದ. ಅದು ಖಾಲಿ ಚೀಟಿ ಎಂಬುದು ತಿಳಿಯುತ್ತಲೇ ಗುಂಪು ಸಮಾಧಾನದ ನಿಟ್ಟುಸಿರು ಬಿಟ್ಟಿತು. ನ್ಯಾನ್ಸಿ ಮತ್ತು ಬಿಲ್ ಜೂನಿಯರ್ ಅದೇ ಸಮಯಕ್ಕೆ ತಮ್ಮ ತಮ್ಮ ಚೀಟಿ ಬಿಚ್ಚಿದರು. ತಕ್ಷಣ ನಗುತ್ತಾ ತಮ್ಮ ತಮ್ಮ ಚೀಟಿಗಳನ್ನು ಬಾವುಟದಂತೆ ಹಾರಿಸುತ್ತಾ ಎಲ್ಲರಿಗೂ ಪ್ರದರ್ಶಿಸಿದರು.
"ಟೆಸ್ಸಿ?" ಮಿ। ಸಮ್ಮರ್ಸ್ ಪ್ರಶ್ನಿಸಿದ. ಒಂದು ಕ್ಷಣ ಮೌನ ಆವರಿಸಿತು. ಮಿ। ಸಮ್ಮರ್ಸ್ ಬಿಲ್ ಹಚಿನ್ ಸನ್ ಕಡೆ ನೋಡಿದ. ಬಿಲ್ ತನ್ನ ಚೀಟಿಯನ್ನು ಬಿಚ್ಚಿ ತೋರಿಸಿದ. ಅದು ಖಾಲಿ ಚೀಟಿಯಾಗಿತ್ತು.
"ಟೆಸ್ಸಿ?" ಮಿ। ಸಮ್ಮರ್ಸ್ ಪ್ರಶ್ನಿಸಿದ. ಒಂದು ಕ್ಷಣ ಮೌನ ಆವರಿಸಿತು. ಮಿ। ಸಮ್ಮರ್ಸ್ ಬಿಲ್ ಹಚಿನ್ ಸನ್ ಕಡೆ ನೋಡಿದ. ಬಿಲ್ ತನ್ನ ಚೀಟಿಯನ್ನು ಬಿಚ್ಚಿ ತೋರಿಸಿದ. ಅದು ಖಾಲಿ ಚೀಟಿಯಾಗಿತ್ತು.
"ಹಾಗಾದರೆ ಟೆಸ್ಸಿ ಎಂದು ಅರ್ಥ. ಅವಳ ಚೀಟಿ ಎಲ್ಲರಿಗೂ ತೋರಿಸು, ಬಿಲ್" ಎಂದು ತಗ್ಗಿದ ಧ್ವನಿಯಲ್ಲಿ ಮಿ। ಸಮ್ಮರ್ಸ್ ನುಡಿದ.
ಬಿಲ್ ಹಚಿನ್ ಸನ್ ತನ್ನ ಹೆಂಡತಿಯ ಕೈಯಿಂದ ಬಲವಂತವಾಗಿ ಚೀಟಿಯನ್ನು ಕಸಿದುಕೊಂಡು ಅದನ್ನು ಬಿಚ್ಚಿ ಮೇಲೆ ಹಿಡಿದ. ಅದರ ಮೇಲೆ ದೊಡ್ಡದಾದ ಕಪ್ಪು ಗುರುತಿತ್ತು. ಮಿ। ಸಮ್ಮರ್ಸ್ ನೆನ್ನೆ ರಾತ್ರಿ ತನ್ನ ಇದ್ದಿಲು ಕಾರ್ಖಾನೆಯ ಕಚೇರಿಯಲ್ಲಿ ಕುಳಿತು ಮಾಡಿದ ಕಪ್ಪು ಗುರುತು. ಅದನ್ನು ನೋಡುತ್ತಲೇ ಗುಂಪಿನಲ್ಲಿ ಸಂಚಲನವಾಯಿತು.
"ಸರಿ, ಇನ್ನು ಮುಂದಿನ ಕೆಲಸ ಬೇಗ ಮುಗಿಸೋಣ" ಎಂದು ಮಿ। ಸಮ್ಮರ್ಸ್ ಚುಟುಕಾಗಿ ನುಡಿದ.
ತಮ್ಮ ಸಂಪ್ರದಾಯವನ್ನು ಮರೆತಿದ್ದರೂ, ಮೂಲ ಕಪ್ಪು ಮರದ ಪೆಟ್ಟಿಗೆ ಕಳೆದು ಹೋಗಿದ್ದರೂ ಹಳ್ಳಿಯ ಜನರಿಗೆ ಕಲ್ಲು ಬೀರುವುದು ಮರೆತಿಲ್ಲ. ಮಕ್ಕಳು ಪೇರಿಸಿಟ್ಟ ಕಲ್ಲಿನ ರಾಶಿಯಲ್ಲದೆ ನೆಲದ ಮೇಲೆ ಹರಡಿದ ಕಲ್ಲುಗಳೂ ಇದ್ದವು. ಶ್ರೀಮತಿ ಡೆಲಕ್ರಾಯ್ ಒಂದು ದೊಡ್ಡ ಕಲ್ಲನ್ನು ಹುಡುಕಿದಳು. ಅದನ್ನು ಎತ್ತಲು ಅವಳಿಗೆ ಎರಡೂ ಕೈಗಳು ಬೇಕಾದವು. ಅವಳು ಶ್ರೀಮತಿ ಡನ್ ಬಾರ್ ಕಡೆಗೆ ತಿರುಗಿ "ಬನ್ನಿ ಬೇಗ" ಎಂದು ಅವಸರ ಪಡಿಸಿದಳು.
"ಸರಿ, ಇನ್ನು ಮುಂದಿನ ಕೆಲಸ ಬೇಗ ಮುಗಿಸೋಣ" ಎಂದು ಮಿ। ಸಮ್ಮರ್ಸ್ ಚುಟುಕಾಗಿ ನುಡಿದ.
ತಮ್ಮ ಸಂಪ್ರದಾಯವನ್ನು ಮರೆತಿದ್ದರೂ, ಮೂಲ ಕಪ್ಪು ಮರದ ಪೆಟ್ಟಿಗೆ ಕಳೆದು ಹೋಗಿದ್ದರೂ ಹಳ್ಳಿಯ ಜನರಿಗೆ ಕಲ್ಲು ಬೀರುವುದು ಮರೆತಿಲ್ಲ. ಮಕ್ಕಳು ಪೇರಿಸಿಟ್ಟ ಕಲ್ಲಿನ ರಾಶಿಯಲ್ಲದೆ ನೆಲದ ಮೇಲೆ ಹರಡಿದ ಕಲ್ಲುಗಳೂ ಇದ್ದವು. ಶ್ರೀಮತಿ ಡೆಲಕ್ರಾಯ್ ಒಂದು ದೊಡ್ಡ ಕಲ್ಲನ್ನು ಹುಡುಕಿದಳು. ಅದನ್ನು ಎತ್ತಲು ಅವಳಿಗೆ ಎರಡೂ ಕೈಗಳು ಬೇಕಾದವು. ಅವಳು ಶ್ರೀಮತಿ ಡನ್ ಬಾರ್ ಕಡೆಗೆ ತಿರುಗಿ "ಬನ್ನಿ ಬೇಗ" ಎಂದು ಅವಸರ ಪಡಿಸಿದಳು.
ಶ್ರೀಮತಿ ಡನ್ ಬಾರ್ ಎರಡೂ ಕೈಗಳಲ್ಲಿ ಪುಟ್ಟ ಪುಟ್ಟ ಕಲ್ಲುಗಳನ್ನು ಎತ್ತಿಕೊಂಡಿದ್ದಳು. ಅವಳು ಏದುಸಿರು ಬಿಡುತ್ತಾ "ನನಗೆ ಓಡುವುದಕ್ಕೆ ಆಗೊಲ್ಲಮ್ಮ - ನೀವು ಮುಂದೆ ಹೋಗಿ, ನಾನು ಬರುತ್ತೇನೆ" ಎಂದಳು.
ಮಕ್ಕಳ ಕೈಯಲ್ಲಿ ಈಗಾಗಲೇ ಕಲ್ಲುಗಳು ಸಿದ್ಧವಾಗಿದ್ದವು. ಯಾರೋ ಡೇವ್ ಹಚಿನ್ ಸನ್ ಕೈಗೆ ಪುಟ್ಟ ಪುಟ್ಟ ಕಲ್ಲುಗಳನ್ನು ಎತ್ತಿಕೊಟ್ಟರು.
ಟೆಸ್ಸಿ ಹಚಿನ್ ಸನ್ ಹಳ್ಳಿಯ ಚೌಕದ ನಡು ಭಾಗದಲ್ಲಿದ್ದ ತೆರವಾದ ಸ್ಥಳದಲ್ಲಿ ನಿಂತುಕೊಂಡು ತನ್ನ ಕೈಗಳನ್ನು ಚಾಚಿ ಮುಖವನ್ನು ಮುಚ್ಚಿಕೊಳ್ಳುತ್ತಿದ್ದಾಗ ಜನ ಅವಳ ದಿಕ್ಕಿನಲ್ಲಿ ಹೆಜ್ಜೆಯಿಟ್ಟರು. ಆಕೆ "ಇದು ಅನ್ಯಾಯ" ಎಂದಳು. ಒಂದು ಕಲ್ಲು ರೊಯ್ಯನೆ ಬೀಸಿ ಅವಳ ತಲೆಯ ಬಲಭಾಗಕ್ಕೆ ಹೊಡೆಯಿತು. ವಾರ್ನರ್ ಅಜ್ಜ "ಬನ್ನಿ, ಬನ್ನಿ, ಎಲ್ಲರೂ!" ಎನ್ನುತ್ತಿದ್ದ. ಸ್ಟೀವ್ ಆಡಮ್ಸ್ ಮುಂಚೂಣಿಯಲ್ಲಿದ್ದ. ಅವನ ಹಿಂದೆ ಶ್ರೀಮತಿ ಗ್ರೇವ್ಸ್ ನಡೆದು ಬಂದಳು.
"ಇದು ಅನ್ಯಾಯ, ಇದು ತಪ್ಪು," ಎಂದು ಶ್ರೀಮತಿ ಹಚಿನ್ ಸನ್ ಅರಚಿಕೊಳ್ಳುತ್ತಿರುವಾಗಲೇ ಅವರು ಅವಳ ಮೇಲೆ ಮುಗಿದು ಬಿದ್ದರು.
(ಮುಗಿಯಿತು)
-------------
ಕತೆ ಓದಿದ ನಂತರ - ಗೌಡನು ಕಟ್ಟಿಸುತ್ತಿದ್ದ ಕೆರೆ ನಿಲ್ಲುತ್ತಿಲ್ಲವೆಂದು ಅವನ ಸೊಸೆ ಭಾಗೀರಥಿ ಕೆರೆಗೆ ಹಾರವಾದ ಕಥೆ ನಿಮಗೆ 'ಲಾಟರಿ' ಓದಿದಾಗ ನೆನಪಿಗೆ ಬಂದಿರಬಹುದು. ಲಾಟರಿ ಪರಂಪರೆಯಿಂದಲೇ ಹಳ್ಳಿಯಲ್ಲಿ ಸಮೃದ್ಧಿಯ ಫಸಲಾಗುತ್ತದೆ ಎಂದು ಈ ಕತೆಯ ವಾರ್ನರ್ ಅಜ್ಜ ಕೂಡಾ ನಂಬಿದ್ದಾನೆ. ಓದುಗನನ್ನು ಕೊನೆಯವರೆಗೂ ಕುತೂಹಲದಲ್ಲಿಟ್ಟು ಕೊನೆಗೆ ಒಮ್ಮೆಲೇ ಕಲ್ಲಿನ ಏಟಿನಿಂದ ಬಡಿದೆಬ್ಬಿಸುವ ಪರಿಣಾಮವನ್ನು ಅಮೆರಿಕನ್ ಕತೆಗಾರ್ತಿ ಶರ್ಲಿ ಜ್ಯಾಕ್ಸನ್ ತಮ್ಮ ಕಥನಕೌಶಲದಿಂದ ಸಾಧಿಸಿದ್ದಾರೆ. 'ಲಾಟರಿ' ಕಥೆಯನ್ನು ಶ್ರೇಷ್ಠ ಅಮೇರಿಕನ್ ಸಣ್ಣಕತೆಗಳ ಸಾಲಿನಲ್ಲಿ ಸೇರಿಸಲಾಗುತ್ತದೆ.
Kannada translation of 'The Lottery' by Shirley Jackson
Nice translation! Reads well in Kannada.
ಪ್ರತ್ಯುತ್ತರಅಳಿಸಿ(H S Komalesha)
Thanks Komalesha! ಒಬ್ಬ ಉತ್ತಮ ಲೇಖಕರಾದ ನಿಮಗೆ ಇಷ್ಟವಾಗಿದ್ದು ಇನ್ನೂ ಸಂತೋಷ!
ಪ್ರತ್ಯುತ್ತರಅಳಿಸಿ