ಕಡಿಯಲು ತಂದ ಕುರಿ - ಭಾಗ 4
ಕದಿಯಲು ತಂದ ಕುರಿ - ಭಾಗ ೪
(ಮೂರನೇ ಭಾಗವನ್ನು ಇಲ್ಲಿ ಓದಿ)
ಮೂಲ ಇಂಗ್ಲಿಷ್ ಕತೆ - ರೊಆಲ್ಡ್ ಡಾಲ್
ಕನ್ನಡ ಅನುವಾದ - ಸಿ ಪಿ ರವಿಕುಮಾರ್
ಕೆಲವೇ ನಿಮಿಷಗಳಲ್ಲಿ ಒಂದು ಕಾರು ಅವಳ ಮನೆಯ ಮುಂದೆ ಬಂದು ನಿಂತಿತು. ಅವಳು ಬಾಗಿಲು ತೆರೆದಾಗ ಇಬ್ಬರು ಸಮವಸ್ತ್ರಧಾರಿ ಪೊಲೀಸರು ಒಳಗೆ ಬಂದರು. ಅವರಿಬ್ಬರನ್ನೂ ಅವಳು ಬಲ್ಲಳು. ಹೆಚ್ಚೂ ಕಡಿಮೆ ಆ ತಾಲ್ಲೂಕಿನ ಎಲ್ಲಾ ಪೊಲೀಸರೂ ಅವಳಿಗೆ ಪರಿಚಿತರು. ಅವರು ಒಳಗೆ ಬರುತ್ತಲೇ ಅವಳು ಕುರ್ಚಿಯಲ್ಲಿ ಕುಸಿದು ಕುಳಿತಳು. ಅವರಿಬ್ಬರೂ ಹೆಣದ ಮುಂದೆ ಬಾಗಿ ನೋಡುತ್ತಿದ್ದರು. ಕೆಲವು ಕ್ಷಣಗಳ ನಂತರ ಅವಳೂ ಅಲ್ಲಿಗೆ ಬಂದಳು.
"ಸತ್ತುಹೋದನೇ?" ಎಂದು ಅವಳು ಕೂಗಿಕೊಂಡಳು.
"ನಿಸ್ಸಂದೇಹವಾಗಿ. ಇಲ್ಲಿ ಏನಾಯಿತು?"
ಅವಳು ಕತೆಯನ್ನು ಒಪ್ಪಿಸಿದಳು. ತಾನು ಕಿರಾಣಿ ಅಂಗಡಿಗೆ ಹೋಗಿದ್ದು, ಅಲ್ಲಿಂದ ಬಂದಾಗ ಗಂಡನ ದೇಹವನ್ನು ಈ ಸ್ಥಿತಿಯಲ್ಲಿ ನೋಡಿದ್ದು ಇದೆಲ್ಲವನ್ನೂ ಹೇಳುವಾಗ ಅವಳು ಅಳುತ್ತಿದ್ದಳು. ಅವಳು ಮಾತಾಡುತ್ತಿರುವಾಗಲೇ ನೂನನ್ ಎಂಬ ಒಬ್ಬ ಪೋಲೀಸ್ ಅಧಿಕಾರಿ ಪ್ಯಾಟ್ರಿಕ್ ನ ತಲೆಯ ಕೆಳಗೆ ಮಡುಗಟ್ಟಿದ ರಕ್ತವನ್ನು ಗಮನಿಸಿ ಅದನ್ನು ತನ್ನ ಸಹೋದ್ಯೋಗಿ ಒಮೇಲಿಗೆ ತೋರಿಸಿದ. ಒಮೇಲಿ ತಕ್ಷಣ ಮೇಲೆದ್ದು ಟೆಲಿಫೋನ್ ಕಡೆ ಧಾವಿಸಿದ.
ಸ್ವಲ್ಪ ಹೊತ್ತಿನಲ್ಲೇ ಇನ್ನಷ್ಟು ಜನ ಪೊಲೀಸರು ಅವಳ ಮನೆಗೆ ಬಂದರು. ಮೊದಲು ಒಬ್ಬ ಡಾಕ್ಟರ್. ಅನಂತರ ಇಬ್ಬರು ಪತ್ತೇದಾರರು. ಅವರಲ್ಲಿ ಒಬ್ಬನ ಹೆಸರು ಅವಳಿಗೆ ಗೊತ್ತು. ಸ್ವಲ್ಪ ಸಮಯದ ನಂತರ ಒಬ್ಬ ಪೋಲಿಸ್ ಛಾಯಾಚಿತ್ರಕಾರ ಬಂದು ಕೆಲವು ಚಿತ್ರಗಳನ್ನು ತೆಗೆದ. ಆನಂತರ ಇನ್ನೊಬ್ಬನು ಬಂದು ಬೆರಳಚ್ಚುಗಳನ್ನು ತೆಗೆದುಕೊಂಡ. ಅವರೆಲ್ಲರೂ ಶವದ ಪಕ್ಕ ನಿಂತು ಗುಸುಗುಸು ಮಾತಾಡಿಕೊಳ್ಳುತ್ತಿದ್ದರು. ಪತ್ತೇದಾರರು ಅವಳಿಗೆ ಪ್ರಶ್ನೆಗಳನ್ನು ಕೇಳುತ್ತಲೇ ಇದ್ದರು. ಆದರೆ ಎಲ್ಲರೂ ಅವಳನ್ನು ಕನಿಕರದಿಂದ ಕಂಡರು. ಅವಳು ತನ್ನ ಕತೆಯನ್ನು ಮತ್ತೆ ಹೇಳಿದಳು. ಈ ಸಲ ಅವಳು ಪ್ಯಾಟ್ರಿಕ್ ಮನೆಗೆ ಬಂದಾಗಿನಿಂದ ಪ್ರಾರಂಭಿಸಿದಳು. ತಾನು ಹೊಲಿಗೆ ಹಾಕುತ್ತಿದ್ದೆ. ಅವನು ದಣಿದು ಮನೆಗೆ ಬಂದಿದ್ದ. ಹೊರಗೆ ಊಟಕ್ಕೆ ಹೋಗಲೂ ಒಲ್ಲದಷ್ಟು ದಣಿದಿದ್ದ. ಅವಳು ಮನೆಯಲ್ಲೇ ಅಡಿಗೆ ಮಾಡುತ್ತೇನೆಂದು ಒಲೆ ಹೊತ್ತಿಸಿದಳು (ಒಲೆಯಲ್ಲಿ ಮಾಂಸ ಈಗಲೂ ಬೇಯುತ್ತಿದೆ). ಅವಳು ತರಕಾರಿ ತರಲೆಂದು ಕಿರಾಣಿ ಅಂಗಡಿಗೆ ಹೋದಳು. ಮರಳಿ ಬಂದಾಗ ಅವನು ಹೀಗೆ ಬಿದ್ದಿದ್ದ.
"ಯಾವ ಕಿರಾಣಿ ಅಂಗಡಿ?" ಒಬ್ಬ ಪತ್ತೇದಾರ ಕೇಳಿದ.
ಅವಳು ತಿಳಿಸಿದಳು. ಇನ್ನೊಬ್ಬ ಪತ್ತೇದಾರನ ಕಿವಿಯಲ್ಲಿ ಇವನು ಏನೋ ಉಸಿರಿದ. ಆತ ಕೂಡಲೇ ಮನೆಯಿಂದ ಹೊರಗೆ ಹೊರಟ. ಹದಿನೈದು ನಿಮಿಷಗಳ ನಂತರ ಅವನು ವಾಪಸಾದಾಗ ಒಂದು ಪುಟದಷ್ಟು ಟಿಪ್ಪಣಿಗಳನ್ನು ಬರೆದುಕೊಂಡು ಬಂದಿದ್ದ. ಅವನು ತನ್ನ ಜೊತೆಗಾರನಿಗೆ ಪಿಸುಗುಟ್ಟುತ್ತಿದ್ದ. "... ಸಹಜವಾ.ಗೇ ಇದ್ದಳಂತೆ ... ಸಂತೋಷವಾಗೇ ಇದ್ದಳಂತೆ ... ಊಟಕ್ಕೆ ಬಟಾಣಿ ... ಚೀಸ್ ಕೇಕ್ ... ಅವಳು ಈ ಕೆಲಸ ಮಾಡುವುದು ಅಸಾಧ್ಯ ..."
ಸ್ವಲ್ಪ ಹೊತ್ತಿನ ನಂತರ ಫೋಟೋಗ್ರಾಫರ್ ಮತ್ತು ಡಾಕ್ಟರ್ ನಿರ್ಗಮಿಸಿದರು. ಇನ್ನಿಬ್ಬರು ಬಂದು ಶವವನ್ನು ಸ್ಟ್ರೆಚರ್ ಮೇಲೆ ಮಲಗಿಸಿ ಕೊಂಡೊಯ್ದರು. ಆನಂತರ ಬೆರಳಚ್ಚುಗಾರ ಹೊರಟ. ಇಬ್ಬರು ಪತ್ತೇದಾರರು ಮತ್ತು ಪೋಲಿಸ್ ಪೇದೆಗಳು ಮಾತ್ರ ಉಳಿದುಕೊಂಡರು. ಅವರೆಲ್ಲರೂ ಅವಳನ್ನು ತುಂಬಾ ಸಜ್ಜನಿಕೆಯಿಂದ ಮಾತಾಡಿಸುತ್ತಿದ್ದರು. ಜಾಕ್ ನೂನನ್ 'ಇವತ್ತು ರಾತ್ರಿ ನೀವು ಬೇರೆಲ್ಲಾದರೂ ಕಳೆಯಲು ಇಷ್ಟ ಪಡುತ್ತೀರಾ? ನಿಮ್ಮ ಅಕ್ಕನ ಮನೆಗೆ? ನನ್ನ ಮನೆಯಲ್ಲಿ ನನ್ನ ಹೆಂಡತಿ ನಿಮ್ಮನ್ನು ಚೆನ್ನಾಗಿ ನೋಡಿಕೊಳ್ಳುತ್ತಾಳೆ' ಎಂದೆಲ್ಲಾ ಉಪಚರಿಸಿದ.
ಅವಳು ನಿರಾಕರಿಸಿದಳು. ಇಲ್ಲಿಂದ ಒಂದು ಗಜವನ್ನು ಕ್ರಮಿಸಲೂ ನನಗೆ ಮನಸ್ಸಿಲ್ಲ. ನನಗೆ ಸ್ವಲ್ಪ ತ್ರಾಣ ಬರುವವರೆಗೂ ನೀವು ಇಲ್ಲೇ ಇರುತ್ತೀರಾ? ನನಗೆ ಯಾಕೋ ಅಷ್ಟು ಮೈಯಲ್ಲಿ ಹುಷಾರಿಲ್ಲ.
ಜ್ಯಾಕ್ ನೂನನ್ 'ನೀವು ಸ್ವಲ್ಪ ಮಲಗಿ ವಿಶ್ರಾಂತಿ ತೆಗೆದುಕೊಂಡರೆ ಒಳ್ಳೆಯದು' ಎಂದ.
ಅದಕ್ಕೂ ಅವಳು ನಿರಾಕರಿಸಿದಳು. ನಾನು ಇಲ್ಲೇ ಇದೇ ಕುರ್ಚಿಯಲ್ಲೇ ಕೂತಿರುತ್ತೇನೆ. ಸ್ವಲ್ಪ ಹುಷಾರೆನ್ನಿಸಿದ ನಂತರ ಮೇಲೇಳುತ್ತೇನೆ.
ಅವರು ಇನ್ನು ಒತ್ತಾಯ ಮಾಡಲಿಲ್ಲ. ಅವಳನ್ನು ಅವಳ ಪಾಡಿಗೆ ಬಿಟ್ಟು ತಮ್ಮ ಕೆಲಸದಲ್ಲಿ ತೊಡಗಿದರು. ಮನೆಯನ್ನು ಹುಡುಕಾಡಿದರು. ಆಗೊಮ್ಮೆ ಈಗೊಮ್ಮೆ ಪತ್ತೇದಾರರು ಅವಳನ್ನು ಪ್ರಶ್ನೆ ಕೇಳುವರು. ಜ್ಯಾಕ್ ನೂನನ್ ಓಡಾಡುವಾಗ ಅವಳ ಮುಖವನ್ನು ಕಂಡು ಕನಿಕರದಿಂದ ಒಂದೆರಡು ಮಾತಾಡುವನು. ಅವಳ ಗಂಡನಿಗೆ ಯಾರೋ ತಲೆಯ ಹಿಂಭಾಗಕ್ಕೆ ಹೊಡೆದದ್ದರಿಂದ ಅವನ ಮೃತ್ಯುವಾಯಿತು ಎಂದು ಜ್ಯಾಕ್ ನೂನನ್ ಅವಳಿಗೆ ತಿಳಿಸಿ ಹೇಳಿದ. ಹೊಡೆಯಲು ಯಾವುದೋ ಭಾರವಾದ ಚೂಪಾಗಿಲ್ಲದ ಆಯುಧವನ್ನು ಬಳಸಲಾಗಿದೆ. ಬಹುಶಃ ಲೋಹದ ತುಂಡು. ಅವರು ಆಯುಧಕ್ಕಾಗಿ ಹುಡುಕಾಟ ನಡೆಸಿದ್ದಾರೆ. ಕೊಲೆಗಾರ ಆಯುಧವನ್ನು ತನ್ನ ಜೊತೆ ತೆಗೆದುಕೊಂಡು ಹೋಗಿರಬಹುದು. ಅಥವಾ ಅಲ್ಲೇ ಎಲ್ಲೋ ಎಸೆದು ಹೋಗಿರಬಹುದು, ಇಲ್ಲವೇ ಅಡಗಿಸಿರಬಹುದು.
"ಆಯುಧ ನಮಗೆ ಸಿಕ್ಕ ಕೂಡಲೇ ಕೊಲೆಗಾರನೂ ಸಿಕ್ಕಿ ಬೀಳುತ್ತಾನೆ. ಇದು ನಮ್ಮ ಅನುಭವ."
ಸ್ವಲ್ಪ ಹೊತ್ತಿನ ನಂತರ ಒಬ್ಬ ಪತ್ತೇದಾರ ಅವಳ ಬಳಿ ಬಂದು 'ನಿಮ್ಮ ಮನೆಯಲ್ಲಿ ಇರುವ ಯಾವುದಾದರೂ ವಸ್ತುವನ್ನು ಆಯುಧವಾಗಿ ಉಪಯೋಗಿಸಬಹುದೇ? ದೊಡ್ಡ ಸ್ಪಾನರ್ ಇರಬಹುದು, ದೊಡ್ಡ ಹೂದಾನಿ ಇರಬಹುದು ... ಇಂಥದ್ದು ಯಾವುದಾದರೂ ಕಳೆದಿದೆಯೇ ನೋಡುತ್ತೀರಾ? ' ಎಂದ.
'ನಮ್ಮ ಹತ್ತಿರ ಯಾವ ದೊಡ್ಡ ಹೂದಾನಿಯೂ ಇಲ್ಲ' ಎಂದು ಅವಳು ಉತ್ತರಿಸಿದಳು.
'ದೊಡ್ಡ ಸ್ಪಾನರ್?'
'ಅಂಥ ಸ್ಪಾನರ್ ಇದ್ದಂತೆ ಕಾಣೆ. ಆದರೆ ನಮ್ಮ ನೆಲಮಾಳಿಗೆಯಲ್ಲಿ ಇಂಥದನ್ನೆಲ್ಲಾ ಇಡುವುದು ರೂಢಿ' ಎಂದಳು.
ಶೋಧ ಮುಂದುವರೆಯಿತು. ಕೆಲವು ಪೋಲೀಸರು ಮನೆಯ ಹೊರಗೆ ಕೈದೋಟದಲ್ಲಿ ಹುಡುಕಾಡುತ್ತಿದ್ದರು ಎಂಬುದು ಅವಳ ಗಮನಕ್ಕೆ ಬಂತು. ಅವರ ಹೆಜ್ಜೆಯ ಸಪ್ಪಳ ಕೇಳುತ್ತಿತ್ತು. ಅವರು ಟಾರ್ಚ್ ಬೆಳಕಿನಲ್ಲಿ ಹುಡುಕಾಡುವುದು ಪರದೆಯ ಸಂದಿಯಿಂದ ಕಾಣುತ್ತಿತ್ತು. ಈಗಾಗಲೇ ತಡವಾಗಿತ್ತು. ಗಡಿಯಾರ ಒಂಬತ್ತು ತೋರಿಸುತ್ತಿತ್ತು. ಹುಡುಕಾಡುತ್ತಿದ್ದ ಮಂದಿಗೆ ದಣಿವಾಗತೊಡಗಿತ್ತು. ಹುಡುಕಾಟ ನಿಷ್ಪ್ರಯೋಜಕವಾಗುತ್ತಿದೆ ಎಂದು ಅವರಿಗೆ ಮೈ ಪರಚಿಕೊಳ್ಳುಯಂತೆ ಆಗುತ್ತಿತ್ತು.
ಸಾರ್ಜೆಂಟ್ ನೂನನ್ ಅವಳ ಮುಂದೆ ಹಾಡು ಹೋದಾಗ ಅವಳು "ಜ್ಯಾಕ್, ನನಗೆ ಕುಡಿಯಲು ಏನಾದರೂ ಕೊಡುತ್ತೀಯಾ?" ಎಂದು ಕೇಳಿದಳು.
"ಖಂಡಿತ. ಇಲ್ಲಿರುವ ವ್ಹಿಸ್ಕಿ ಕೊಡಲೆ?"
"ಹುಂ - ಸ್ವಲ್ಪ ಮಾತ್ರ. ನನಗೆ ಅದರಿಂದ ಸ್ವಲ್ಪ ಗೆಲುವಾಗುತ್ತದೆ."
ಅವನು ಅವಳಿಗೆ ಲೋಟದಲ್ಲಿ ಮದ್ಯವನ್ನು ನೀರಿಗೆ ಬೆರೆಸಿ ಕೊಟ್ಟ.
"ನೀನೂ ಒಂದು ಲೋಟದಲ್ಲಿ ಹಾಕಿಕೊಂಡು ಕುಡಿಯಬಾರದೇ? ನಿನ್ನನ್ನು ನೋಡಿದರೆ ತೀರಾ ದಣಿದಂತೆ ಕಾಣುತ್ತಿದೆ. ದಯವಿಟ್ಟು ತೆಗೆದುಕೋ. ನೀನು ನನ್ನನ್ನು ತುಂಬಾ ವಿಚಾರಿಸಿಕೊಂಡಿದ್ದಿ."
"ಕೆಲಸದ ಮೇಲೆ ಬಂದಾಗ ಕುಡಿಯುವುದು ತಪ್ಪು. ಆದರೆ ಒಂದು ಹನಿ ತೊಗೊಳ್ಳುತ್ತೇನೆ. ಇಲ್ಲದಿದ್ದರೆ ಕೆಲಸ ಮುಂದುವರೆಯುವುದು ಕಷ್ಟ."
ಉಳಿದವರೂ ಒಬ್ಬೊಬ್ಬರಾಗಿ ಒಳಗೆ ಬಂದರು. ಅವರನ್ನೂ ಒಂದು ಗುಟುಕು ವ್ಹಿಸ್ಕಿ ಕುಡಿಯುವಂತೆ ಅವಳು ಒಪ್ಪಿಸಿದಳು. ಅವರು ತಮ್ಮ ಕೈಗಳಲ್ಲಿ ವ್ಹಿಸ್ಕಿ ಲೋಟಗಳನ್ನು ಹಿಡಿದು ಮುಜುಗರ ಪಡುತ್ತಾ ನಿಂತಿದ್ದರು. ಅವಳಿಗೆ ಸಮಾಧಾನ ಹೇಳುತ್ತಿದ್ದರು. ಸಾರ್ಜೆಂಟ್ ನೂನನ್ ಅಡಿಗೆ ಮನೆಗೆ ಹೋದವನು ಕೂಡಲೇ ಹೊರಕ್ಕೆ ಬಂದು 'ಶ್ರೀಮತಿ ಮಲೋನಿ! ನಿಮ್ಮ ಒಲೆ ಇನ್ನೂ ಉರಿಯುತ್ತಿದೆ. ಅದರ ಒಳಗೆ ಮಾಂಸದ ಅಡುಗೆ ಇನ್ನೂ ಬೇಯುತ್ತಿದೆ.' ಎಂದ.
'ಅಯ್ಯೋ ದೇವರೇ! ಹೌದಲ್ಲ!'
'ನಾನು ಒಲೆ ಆರಿಸಿಬಿಡಲೇ?'
'ದಯವಿಟ್ಟು ಆ ಕೆಲಸ ಮಾಡಪ್ಪ.'
ಅವನು ಒಲೆ ಆರಿಸಿ ಹೊರಕ್ಕೆ ಬಂದಾಗ ತನ್ನ ದೊಡ್ಡ ದೊಡ್ಡ ಕಣ್ಣುಗಳಲ್ಲಿ ನೀರು ತುಂಬಿಕೊಂಡು ಅವನ ಕಡೆ ನಿಟ್ಟಿಸುತ್ತಾ ಅವಳು 'ಜ್ಯಾಕ್ ನೂನನ್' ಎಂದಳು.
'ಏನು?'
'ನೀವು ಎಲ್ಲರೂ ನನಗೊಂದು ಉಪಕಾರ ಮಾಡುತ್ತೀರಾ?'
'ಅದೇನು ಹೇಳಿ. ಪ್ರಯತ್ನ ಪಡೋಣವಂತೆ.'
'ಇಲ್ಲಿ ನೋಡು - ನೀವೆಲ್ಲರೂ ಪ್ಯಾಟ್ರಿಕ್ ನ ಗೆಳೆಯರು. ಅವನ ಕೊಲೆಗಾರನನ್ನು ಹಿಡಿಯಲು ಎಷ್ಟೊಂದು ಶ್ರಮ ಪಡುತ್ತಿದ್ದೀರಿ. ನಿಮಗೆಲ್ಲರಿಗೂ ಈಗ ಭಯಂಕರ ಹಸಿವಾಗಿರಬಹುದು. ನಿಮ್ಮ ಊಟದ ಹೊತ್ತು ಈಗಾಗಲೇ ಮೀರಿದೆ. ನಿಮ್ಮನ್ನು ಬರೀ ಹೊಟ್ಟೆಯಲ್ಲಿ ಕಳಿಸಿದರೆ ಪ್ಯಾಟ್ರಿಕ್ ನನ್ನನ್ನು ಕ್ಷಮಿಸಲಾರ. ದೇವರು ಅವನ ಆತ್ಮಕ್ಕೆ ಶಾಂತಿ ಕೊಡಲಿ. ಇಷ್ಟು ಹೊತ್ತು ನಿಮ್ಮನ್ನು ಹೀಗೆ ಏನೂ ಕೊಡದೆ ದುಡಿಸಿದ್ದು ಕೂಡಾ ಪಾಪವೇ. ನೀವು ಯಾಕೆ ಒಲೆಯಲ್ಲಿರುವ ಕುರಿ ಮಾಂಸವನ್ನು ಊಟ ಮಾಡಿ ಹೋಗಬಾರದು? ಇಷ್ಟು ಹೊತ್ತಿಗೆ ಅದು ಹದವಾಗಿ ಬೆಂದಿರುತ್ತೆ.'
'ಎಲ್ಲಾದರೂ ಉಂಟೆ?'
'ದಯವಿಟ್ಟು ಊಟ ಮಾಡಿಕೊಂಡು ಹೋಗಿ. ನಾನಂತೂ ಏನನ್ನೂ ಮುಟ್ಟಲಾರೆ. ಅವನಿಗಾಗಿ ಮಾಡಿದ ಅಡುಗೆಯನ್ನಂತೂ ಖಂಡಿತ ಇಲ್ಲ. ಆದರೆ ನೀವು ತಿನ್ನುವುದಕ್ಕೆ ಏನೂ ಅಡ್ಡಿ ಇಲ್ಲ. ನೀವು ತಿಂದು ಮುಗಿಸಿದರೆ ನನಗೆ ಉಪಕಾರ ಮಾಡಿದಂತೆ ಆಗುತ್ತದೆ. ಊಟದ ನಂತರ ನೀವು ನಿಮ್ಮ ಕೆಲಸ ಮುಂದುವರೆಸಬಹುದು.'
ಅವರೆಲ್ಲರೂ ಅನುಮಾನಿಸಿದರು. ಸಾಕಷ್ಟು ಸಂಕೋಚ ವ್ಯಕ್ತ ಪಡಿಸಿದರು. ಆದರೆ ಅವರಿಗೆ ಹಸಿವಾಗಿದ್ದು ನಿಜ. ಕೊನೆಗೆ ಅವರು ಒತ್ತಾಯಕ್ಕೆ ಮಣಿದು ಅಡಿಗೆ ಮನೆಗೆ ಹೋದರು. ಅವಳು ತಾನು ಕುಳಿತಿದ್ದ ಸ್ಥಳ ಬಿಟ್ಟು ಕದಲಲಿಲ್ಲ. ಅಡಿಗೆ ಮನೆಯಿಂದ ತೇಲಿ ಬರುತ್ತಿದ್ದ ಅವರ ಮಾತುಗಳನ್ನು ಕೇಳುತ್ತಾ ಕುಳಿತಿದ್ದಳು. ಆಹಾರವನ್ನು ಬಾಯಲ್ಲಿಟ್ಟುಕೊಂಡು ಅವರು ಮಾತಾಡುತ್ತಿದ್ದರು.
'ಚಾರ್ಲಿ, ಇನ್ನೂ ಸ್ವಲ್ಪ ತೊಗೋ.'
'ಬೇಡ, ಪೂರ್ತಿ ಮುಗಿಸಿಬಿಡೋದೇನು?'
'ಆಕೆ ಮುಗಿಸಿಬಿಡಿ ಅನ್ನುತ್ತಾಳಲ್ಲ. ನೀವು ತಿಂದು ಮುಗಿಸಿದರೆ ನನಗೆ ಉಪಕಾರ ಮಾಡಿದಂತೆ ಅಂತ ಪದೇ ಪದೇ ಹೇಳುತ್ತಿದ್ದಳು.'
'ಸರಿ, ಹಾಗಾದರೆ ಇನ್ನೂ ಸ್ವಲ್ಪ ಬಡಿಸು.'
'ಅವನು ಯಾರೋ ಭಾರೀ ದೊಡ್ಡ ಬ್ಯಾಟ್ ನಿಂದ ಪ್ಯಾಟ್ರಿಕ್ ತಲೆಗೆ ಹೊಡೆದಿರಬೇಕು, ಪಾಪ! ಡಾಕ್ಟರ್ ಹೇಳಿದ್ದು ತಲೆ ಬುರುಡೆ ಒಡೆದು ಛಿದ್ರವಾಗಿದೆ ಅಂತ. ಒಳ್ಳೆ ಗದೆಯಿಂದ ಹೊಡೆದ ಹಾಗೆ.'
'ಅದಕ್ಕೇ ಆಯುಧವನ್ನು ಹುಡುಕುವುದು ಕಷ್ಟವಾಗಬಾರದು.'
'ನಾನೂ ಅದನ್ನೇ ಹೇಳೋದು.'
'ಕೊಲೆಗಾರ ಯಾರೇ ಆಗಿರಲಿ, ಅಂಥ ದೊಡ್ಡ ಆಯುಧವನ್ನು ಎಷ್ಟು ದಿನ ಬಚ್ಚಿಟ್ಟುಕೊಳಲು ಸಾಧ್ಯ?'
ಒಬ್ಬ ಯಾರೋ ತೇಗಿದ.
'ನನಗೆ ಅನ್ನಿಸೋದು ಆಯುಧ ಇಲ್ಲೇ ಎಲ್ಲೋ ಇದೆ ಅಂತ.'
'ಇಲ್ಲೇ ಎಲ್ಲೋ ನಮ್ಮ ಮೂಗಿನ ಕೆಳಗೇ ಇದೆ ಅಂತ ನನಗಂತೂ ಅನ್ನಿಸುತ್ತೆ. ನೀನೇನಂತೀಯಾ ಜ್ಯಾಕ್?'
ಪಕ್ಕದ ಕೋಣೆಯಲ್ಲಿ ಮೇರಿ ಮಲೋನಿ ಮುಸಿಮುಸಿ ನಗಲಾರಂಭಿಸಿದಳು.
(ಮುಗಿಯಿತು)
ಕಥೆ ಓದಿದ ನಂತರ
ನೀವು ಓದಿದ್ದು ಪ್ರಸಿದ್ಧ ಲೇಖಕ ರೋಆಲ್ಡ್ ಡಾಲ್ ಬರೆದ 'ಲ್ಯಾಂಬ್ ಟು ದ ಸ್ಲಾಟರ್' ಎಂಬ ಇಂಗ್ಲಿಷ್ ಕತೆಯ ಅನುವಾದ. ಇದನ್ನು ಆಧರಿಸಿದ ಕಿರುಚಿತ್ರ ಕೂಡಾ ನಿಮಗೆ ಯೂ-ಟ್ಯೂಬ್ ಮೇಲೆ ಸಿಕ್ಕುತ್ತದೆ. ಕಥೆಯ ಮುಖ್ಯ ಪಾತ್ರಧಾರಿ ಮೇರಿ ಮಲೋನಿ. ಅವಳ ಪಾತ್ರದ ಬಗ್ಗೆ ನಿಮಗೆ ಏನನ್ನಿಸಿತು? ಲೇಖಕ ಈ ಕತೆಗೆ 'ಕಡಿಯಲು ತಂದ ಕುರಿ' ಎಂದೇಕೆ ಹೆಸರು ಕೊಟ್ಟಿದ್ದಾನೆ? ಇಲ್ಲಿ ಕಡಿಯಲು ತಂದ ಕುರಿ ಯಾರು?
==============================
Kannada translation of the story 'Lamb to the slaughter' by Roald Dahl.
Translated by C.P. Ravikumar
(c) 2014, C.P. Ravikumar
ಕಥೆ ಓದಿದ ನಂತರ
ನೀವು ಓದಿದ್ದು ಪ್ರಸಿದ್ಧ ಲೇಖಕ ರೋಆಲ್ಡ್ ಡಾಲ್ ಬರೆದ 'ಲ್ಯಾಂಬ್ ಟು ದ ಸ್ಲಾಟರ್' ಎಂಬ ಇಂಗ್ಲಿಷ್ ಕತೆಯ ಅನುವಾದ. ಇದನ್ನು ಆಧರಿಸಿದ ಕಿರುಚಿತ್ರ ಕೂಡಾ ನಿಮಗೆ ಯೂ-ಟ್ಯೂಬ್ ಮೇಲೆ ಸಿಕ್ಕುತ್ತದೆ. ಕಥೆಯ ಮುಖ್ಯ ಪಾತ್ರಧಾರಿ ಮೇರಿ ಮಲೋನಿ. ಅವಳ ಪಾತ್ರದ ಬಗ್ಗೆ ನಿಮಗೆ ಏನನ್ನಿಸಿತು? ಲೇಖಕ ಈ ಕತೆಗೆ 'ಕಡಿಯಲು ತಂದ ಕುರಿ' ಎಂದೇಕೆ ಹೆಸರು ಕೊಟ್ಟಿದ್ದಾನೆ? ಇಲ್ಲಿ ಕಡಿಯಲು ತಂದ ಕುರಿ ಯಾರು?
==============================
Kannada translation of the story 'Lamb to the slaughter' by Roald Dahl.
Translated by C.P. Ravikumar
(c) 2014, C.P. Ravikumar
Very Nice translation..
ಪ್ರತ್ಯುತ್ತರಅಳಿಸಿThank you for your compliments!
ಪ್ರತ್ಯುತ್ತರಅಳಿಸಿ