ಅಮೋಂತಿಜಾದೋ ಮದ್ಯದ ಪೀಪಾಯಿ - 2

ಮೂಲ ಇಂಗ್ಲಿಷ್ ಕಥೆ - ಎಡ್ಗರ್ ಆಲೆನ್ ಪೋ

ಕನ್ನಡ ಅನುವಾದ - ಸಿ ಪಿ ರವಿಕುಮಾರ್ 


ಭಾಗ - ೨
(ಮೊದಲ ಭಾಗವನ್ನು ಇಲ್ಲಿ ಓದಿ)

ನನ್ನ ಬಂಗಲೆಯಲ್ಲಿ  ಒಬ್ಬ ನರಪಿಳ್ಳೆಯೂ ಇರಲಿಲ್ಲ. ಅವರೆಲ್ಲರೂ ಕಾರ್ನಿವಾಲ್ (ಉತ್ಸವ) ನೋಡಲು ತೆರಳಿದ್ದರು.  ಮನೆಯಿಂದ ಹೊರಡುವಾಗ "ನಾನು ಬರುವುದು ನಾಳೆ ಬೆಳಗ್ಗೆಯೇ,  ಜೋಪಾನ, ಯಾರೂ ಮನೆ ಬಿಟ್ಟು ಕದಲಬೇಡಿ" ಎಂದು ಹೇಳಿ ಹೊರಟಿದ್ದೆ.  ಹಾಗೆ ಹೇಳಿದರೆ ಇವರು ನಾನು ಬಾಗಿಲು ದಾಟಿದ ಕ್ಷಣವೇ ಮಂಗಮಾಯವಾಗುತ್ತಾರೆ ಎಂದು ನನಗೆ ಖಚಿತವಾಗಿ ಗೊತ್ತಿತ್ತು.  



ನೌಕರರು ಬಳಸುತ್ತಿದ್ದ ದೀವಟಿಗೆಗಳಲ್ಲಿ ಎರಡನ್ನು ಕೈಗೆತ್ತಿಕೊಂಡು ಒಂದನ್ನು ಫಾರ್ಚುನಾತೋಗೆ ಕೊಟ್ಟೆ. ಹಲವಾರು ಕೋಣೆಗಳ ಮೂಲಕ ಹಾಯುತ್ತಾ ತಗ್ಗಿದ ಬಾಗಿಲುಗಳ ಮುಂದೆ ಬಗ್ಗಿ ನಡೆಯುತ್ತಾ ನಾವು ಮದ್ಯಾಗಾರಕ್ಕೆ ಹೋಗಿ ಸೇರುವ ಮೇಲುಚಾವಣಿಯುಳ್ಳ ಓಣಿಗೆ ಬಂದೆವು.  ಕೆಳಗೆ ಹೋಗಲು ಹಾವಿನಂತೆ ಸುತ್ತಿಕೊಂಡಿರುವ ಮೆಟ್ಟಿಲುಗಳನ್ನು ಇಳಿಯುವಾಗ ಅವನಿಗೆ ಜಾಗರೂಕನಾಗಿರುವಂತೆ  ಪದೇ ಪದೇ ಎಚ್ಚರಿಸಿದೆ.  ಕೊನೆಗೂ ನಾವು ಮಾಂಟ್ರೆಸಾರ್ ಭವನದ ನೆಲಮಾಳಿಗೆಯನ್ನು ತಲುಪಿದೆವು.  ನಮ್ಮ ವಂಶದ  ಹಿರಿಯರನ್ನು  ಮಣ್ಣು ಮಾಡಿದ ನೆಲಮಾಳಿಗೆ ಅದು.  ಅಲ್ಲಿಯ ನೆಲದಲ್ಲಿ ತೇವವಿತ್ತು.



ನನ್ನ ಮಿತ್ರ ನಡೆದಾಗ ತೂರಾಡುತ್ತಿದ್ದ. ಅವನು ಹೆಜ್ಜೆ ಹಾಕಿದಾಗ ಟೋಪಿಯ ಗಂಟೆಗಳು ಘಲ್ ಘಲ್  ಸದ್ದು ಮಾಡುತ್ತಿದ್ದವು.

"ಎಲ್ಲಿದೆ ಪೀಪಾಯಿ?" ಎಂದು ಅವನು ಪ್ರಶ್ನಿಸಿದ.

"ಇನ್ನೂ ಸ್ವಲ್ಪ ಒಳಗೆ ಹೋಗಬೇಕು" ಎಂದು ನಾನು ಉತ್ತರಿಸಿದೆ.  ಗೋಡೆಯ ಕಡೆ ಬೆರಳು ಮಾಡಿ "ಈ ಗೋಡೆಗಳ ಮೇಲೆ ಜೇಡನ ಬಲೆಯ ಹಾಗೆ ನೇಯ್ದಿರುವ ಬೆಳ್ಳಗಿನ ವಸ್ತು ನೋಡಿದೆಯಾ?" ಎಂದು ಕೇಳಿದೆ.


ಕಂಠಪೂರ್ತಿ ಮದ್ಯಪಾನದಿಂದ ಬರುವ ಮತ್ತು ಅವನ ಕಣ್ಣುಗಳಲ್ಲಿತ್ತು. ನನ್ನ ಕಡೆ ತೇಲುಗಣ್ಣಿನಿಂದ ನೋಡಿ "ಯವಕ್ಷಾರವೋ" ಎಂದ.

"ಹೌದು, ಯವಕ್ಷಾರ. ನಿನಗೆ ಕೆಮ್ಮು ಎಷ್ಟು ದಿವಸಗಳಿಂದ ಇದೆ?" ಎಂದೆ.

ಇದಕ್ಕೆ ಉತ್ತರವೆನ್ನುವಂತೆ ಅವನು ಸಾಕಷ್ಟು ಹೊತ್ತು ಕೆಮ್ಮಿದ. ಅವನಿಗೆ ಸುಧಾರಿಸಿಕೊಳ್ಳಲು ಹಲವು ನಿಮಿಷಗಳೇ ಬೇಕಾದವು.  ಕೊನೆಗೆ "ಅಯ್ಯೋ, ಅದೇನೂ ಲೆಕ್ಕಕ್ಕಿಲ್ಲ" ಎಂದ.

ನಾನು ನಿರ್ಧಾರದ ಧ್ವನಿಯಲ್ಲಿ " ಇಲ್ಲ, ವಾಪಸು ಹೋಗೋಣ ನಡಿ. ನಿನ್ನ ಆರೋಗ್ಯ ಮುಖ್ಯ, ನೀನು ಶ್ರೀಮಂತ, ನಿನಗೆ ಸಮಾಜದಲ್ಲಿ ದೊಡ್ಡ ಸ್ಥಾನವಿದೆ, ಎಲ್ಲರಿಗೂ ನೀನು ಬೇಕಾದವನು, ಸುಖವಾಗಿದ್ದೀಯ. ಒಂದು ಕಾಲದಲ್ಲಿ ನಾನು ಇದ್ದ ಹಾಗೆ. ನಿನ್ನಂಥವರು ಬಾಳಬೇಕು ಕಣಯ್ಯಾ. ನನ್ನಂಥವರ ಮಾತು ಬೇರೆ. ನಾವು ವಾಪಸು ಹೋಗೋಣ - ನಿನಗೆ ಜಡ್ದಾದೀತು. ಏನಾದರೂ ಹೆಚ್ಚು-ಕಡಿಮೆಯಾದರೆ ನಾನು ಹೊಣೆಯಾದೇನು. ಇಷ್ಟಕ್ಕೂ ಲುಕ್ರೇಸಿ ... "

"ಸಾಕು, ಸಾಕು. ಕೆಮ್ಮಿಗೆ ಹೆದರಿದರೆ ಆಯಿತು! ಏನೂ ಆಗೋದಿಲ್ಲ.  ಒಂದು ಕೆಮ್ಮಿಗೆ ನಾನೇನು ಸಾಯೋದಿಲ್ಲ."

"ಅದು ಸರಿ ಅನ್ನು. ನಿನಗೆ ವೃಥಾ ಗಾಬರಿ ಮಾಡೋದು ಕೂಡಾ ನನ್ನ ಉದ್ದೇಶವಲ್ಲ. ಆದರೆ ನಿನ್ನ ಜಾಗೃತೆಯಲ್ಲಿ ನೀನಿರುವುದು ಒಳ್ಳೆಯದು. ಇಗೋ, ಈ ಮೆಡೋಕ್ ಒಂದಷ್ಟು ಹೊಟ್ಟೆಗೆ ಹೋದರೆ ಈ ಥಂಡಿಗೆ ಬೆಚ್ಚಗಿರುತ್ತೆ"



ಗೋಡೆಗೆ ಸೇರಿದಂತಿದ್ದ ಕಪಾಟುಗಳಲ್ಲಿ ಸಾಲುಸಾಲಾಗಿ ಜೋಡಿಸಿಟ್ಟಿದ್ದ ವೈನ್ ಸೀಸೆಗಳಲ್ಲಿ ಒಂದನ್ನು ಕೈಗೆತ್ತಿಕೊಂಡು ಅದರ ಕಂಠವನ್ನು ಮುರಿದು ಅವನ ಮುಂದೆ ಹಿಡಿದು "ತೊಗೋ," ಎಂದೆ.  ಅವನು ಅರೆಗಣ್ಣಿನ ನೋಟ ಬೀರುತ್ತಾ ಅದನ್ನು ತುಟಿಗಿಟ್ಟುಕೊಂಡ.  ನನ್ನ ಕಡೆ ನೋಡಿ ತಲೆಯಾಡಿಸಿದ. ಟೋಪಿಯ ಗಂಟೆಗಳು ಸದ್ದು ಮಾಡಿದವು.

"ಈ ಗೋರಿಗಳಲ್ಲಿ ಮಲಗಿರುವವರ ಸಲುವಾಗಿ ನಾನು ಕುಡಿಯುತ್ತೇನೆ," ಎಂದು ಅವನು ಮದ್ಯ ಹೀರಿದ.

"ನಿನ್ನ ಆರೋಗ್ಯದ ಸಲುವಾಗಿ ನಾನು ಕುಡಿಯುತ್ತೇನೆ" ಎಂದು ನಾನು ಉತ್ತರಿಸಿದೆ.

ಅವನು ಮತ್ತೆ ನನ್ನ ತೋಳನ್ನು ಆಶ್ರಯಿಸಿ ಮುಂದೆ ಹೆಜ್ಜೆ ಹಾಕಿದ.

"ಎಷ್ಟು ದೊಡ್ಡದಾಗಿದೆಯಯ್ಯಾ ಈ ಮದ್ಯಾಗಾರ!" ಎಂದ.

"ನಮ್ಮ ಮಾಂಟ್ರೆಸಾರ್ ವಂಶ ದೊಡ್ಡದು," ನಾನೆಂದೆ.

"ನಿಮ್ಮ ಕುಲದ ಲಾಂಛನ ಏನೋ ಮರೆತು ಹೋಗಿದೆ."



"ನೀಲಿ ಬಣ್ಣದ ಹಿನ್ನೆಲೆಯಲ್ಲಿ ಒಂದು ದೊಡ್ಡ ಮಾನವ ಪಾದ ಒಂದು ಹಾವನ್ನು ತುಳಿಯುತ್ತಿದೆ. ಹಾವಿನ ಕೋರೆಹಲ್ಲು ಪಾದಗಳಿಗೆ ಚುಚ್ಚಿದೆ."

"ಲಾಂಛನದ ಕೆಳಗೆ ಅಂಕಿತ?"

" ಬದುಕಿದವರಿಲ್ಲ ನನ್ನನ್ನು ಕೆಣಕಿ"

"ವಾಹ್! ಚೆನ್ನಾಗಿದೆ"  ಎಂದು ಅವನು ಮೆಚ್ಚುಗೆ ಸೂಸಿದ.


(ಮುಂದುವರೆಯುತ್ತದೆ)

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)