ಕಪಿ ಮುಷ್ಠಿ - 1



(ಚಿತ್ರ - ವಿಕಿಪೀಡಿಯ)
 ಮೂಲ ಇಂಗ್ಲಿಷ್ ಕಥೆ - ಡಬ್ಲ್ಯು ಡಬ್ಲ್ಯು ಜೇಕಬ್ಸ್ 

ಕನ್ನಡ ಅನುವಾದ - ಸಿ ಪಿ ರವಿಕುಮಾರ್ 

ಲೇಬರ್ನ್ಯಾಮ್ ವಿಲ್ಲಾ ಎಂಬ ವಸತಿ ಸಮುಚ್ಚಯದಲ್ಲಿದ್ದ ಒಂದು ಪುಟ್ಟ ಮನೆಯಲ್ಲಿ  ಪರದೆಗಳನ್ನು ಎಳೆದು ಅಗ್ನಿಕುಂಡದಲ್ಲಿ ಬೆಂಕಿ ಹಚ್ಚಿದ್ದರಿಂದ ಹೊರಗೆ ಮಳೆ ಸುರಿಯುತ್ತಿದ್ದು ವಿಪರೀತ ಚಳಿಯಿದ್ದರೂ  ಒಳಗೆ ಬೆಚ್ಚಗಿತ್ತು. ಅಪ್ಪ ಮತ್ತು ಮಗ ಚದುರಂಗದ ಆಟದಲ್ಲಿ ಮಗ್ನರಾಗಿದ್ದರು. ಆಟದಲ್ಲಿ ಕ್ರಾಂತಿಕಾರಿ ಪ್ರಯೋಗಗಳನ್ನು ಮಾಡಲು ಹೋಗಿ ತನ್ನ ರಾಜನನ್ನು ಅನಗತ್ಯವಾದ ಸಂಕಟಗಳಲ್ಲಿ ಕೆಡವುತ್ತಿದ್ದ ಹಿರಿಯನನ್ನು ನೋಡಿ ಅಗ್ನಿಕುಂಡದ ಬಳಿ ಶಾಂತವಾಗಿ ಸ್ವೆಟರ್ ಹೆಣೆಯುತ್ತಾ ಕುಳಿತಿದ್ದ ಬೆಳ್ಳಗಿನ ತಲೆಗೂದಲಿನ ವೃದ್ಧೆಯೂ ತಮಾಷೆ ಮಾಡಿದಳು.

"ಅಬ್ಬಾ! ಹೊರಗೆ ಎಂಥ ಪ್ರಚಂಡ ಗಾಳಿ!" ಎಂದು ಮಿ॥ ವೈಟ್ ಉಧ್ಗರಿಸಿದ. ತನ್ನ ಆಟದ ನಡೆಯಲ್ಲಿ ತಾನು ತಪ್ಪು ಮಾಡಿದ್ದು ಅವನಿಗೆ ಅರಿವಾಗಿತ್ತು.  ಅದನ್ನು ಮಗ ಗಮನಿಸದಿರಲಿ ಎಂಬುದು ಅವನ ಸಂಭಾಷಣೆಯ ಒಳಗುಟ್ಟು.

"ಹೌದು, ಹೌದು!" ಎನ್ನುತ್ತಾ ಆಟದ ಮನೆಯನ್ನು ಸೂಕ್ಷ್ಮವಾಗಿ ದಿಟ್ಟಿಸುತ್ತಿದ್ದ ಮಗ ಒಮ್ಮೆಲೇ ಕಾಯಿ ಮುಂದೆ ನಡೆಸಿ "ಚೆಕ್!" ಎಂದು ಅರ್ಧಕ್ಕೇ ನಿಲ್ಲಿಸಿದ.

"ಆತ ಇಂಥ ಹವೆಯಲ್ಲಿ ಬರುತ್ತಾರೋ ಇಲ್ಲವೋ!"ಎನ್ನುವಾಗ ಅಪ್ಪನ ಧ್ವನಿಯಲ್ಲಿದ್ದ ಆಶಾಭಾವವು ಮಗ "ಮೇಟ್!" ಎಂದು ಆಟ ಪೂರೈಸಿದಾಗ ಇಲ್ಲವಾಗಿತ್ತು.

"ಹೀಗೆ ಊರಾಚೆ ಇರುವುದು ಎಂದರೆ ಇದೇ ಗೋಳು!" ಎನ್ನುವಾಗ ಅಪ್ಪನ ಧ್ವನಿಯಲ್ಲಿ ಅನಪೇಕ್ಷಿತವಾದ ಮೊನಚಿತ್ತು. "ನಮ್ಮ ಮನೆ ಎಂಥ ಕುಗ್ರಾಮದಲ್ಲಿದೆ ಅಂತ ಜನ ಏನೇನು ಮಾತಾಡಿಕೊಳ್ಳುತ್ತಿದ್ದಾರೋ! ದಾರಿಯಲ್ಲಿ ದೊಡ್ಡ ಕೆಸರಿನ ಕೆರೆ. ರಸ್ತೆಯಲ್ಲೆಲ್ಲಾ ಮಳೆ ನೀರು ಸೇರಿಕೊಂಡು ಅಧ್ವಾನವಾಗಿದೆ!"

"ಇರಲಿ ಬಿಡ್ರೀ, ಮುಂದಿನ ಆಟ ನೀವೇ ಗೆಲ್ಲಬಹುದು!" ಎಂದು ಹೆಂಡತಿ ಸಮಾಧಾನ ಪಡಿಸಿದಳು.  ಅಮ್ಮ ಮತ್ತು ಮಗ ಪರಸ್ಪರ ಮುಖ ನೋಡಿಕೊಂಡು ಅರ್ಥಪೂರ್ಣವಾಗಿ ಮುಗುಳ್ನಕ್ಕಾಗ ಮಿ॥ ವೈಟ್ ಗಮನಿಸದೇ ಇರಲಿಲ್ಲ. ಮನಸ್ಸಿನಲ್ಲಿ ಉದಿಸಿದ ಅಪರಾಧೀ ಭಾವನೆಯನ್ನು ಅವನು ತನ್ನ ಬಿಳಿ ಗಡ್ಡದಲ್ಲಿ ಬಚ್ಚಿಟ್ಟ.

ಹೊರಗೆ ಜೋರಾಗಿ ಗೇಟ್ ತೆರೆದ ಸದ್ದಾಯಿತು. ಅನಂತರ ಧಡಧಡ ಕಾಲ ಸಪ್ಪಳ ಕೇಳಿತು.

ಹರ್ಬರ್ಟ್ ವೈಟ್  "ಓ ಬಂದರು ಅಂತ ಕಾಣುತ್ತೆ!" ಎಂದ.  ವಯಸ್ಕನು ಲಗುಬಗೆಯಿಂದ ಎದ್ದು ಬಾಗಿಲನ್ನು ತೆರೆಯಲು ಅವಸರದಿಂದ ಹೋದ. ಇಂಥ ಹವೆಯಲ್ಲಿ ಬಂದದ್ದಕ್ಕೆ ಅವನು ಅತಿಥಿಗೆ ಸಂತಾಪ ಸೂಚಿಸುತ್ತಿದ್ದುದು ಕೇಳಿಸಿತು. ಬಂದವನೂ ಕೆಟ್ಟ ಹವಾಮಾನದ ಬಗ್ಗೆ ಹೇಳುತ್ತಿದ್ದ. ಶ್ರೀಮತಿ ವೈಟ್ ಲೊಚಗುಟ್ಟಿದಳು. ಪತಿಯು ಅತಿಥಿಯೊಂದಿಗೆ ಕೋಣೆಯೊಳಗೆ ಬಂದಾಗ ಅವಳು ಔಪಚಾರಿಕವಾಗಿ ಕೆಮ್ಮಿದಳು. ಬಂದ ಅತಿಥಿ ಎತ್ತರದ ಭೀಮಕಾಯದ ವ್ಯಕ್ತಿ. ಅವನ ಪುಟ್ಟ ಕಣ್ಣುಗಳು ಕೆಂಪು ಹವಳಗಳಂತೆ  ಹೊಳೆಯುತ್ತಿದ್ದವು.

"ಇವರು ಸಾರ್ಜೆಂಟ್ ಮೇಜರ್ ಮೋರಿಸ್," ಎಂದು ಮಿ॥ ವೈಟ್ ಅತಿಥಿಯನ್ನು ಪರಿಚಯಿಸಿದ.  ಅತಿಥಿ ಕೈ ಕುಲುಕಿ ತನಗೆ ತೋರಿಸಲಾದ ಅಗ್ನಿಕುಂಡದ ಬಳಿಯ ಸುಖಾಸನದಲ್ಲಿ ಕುಳಿತು ಎಲ್ಲಾ ಕಡೆ ತೃಪ್ತಿಯಿಂದ ನೋಡಿದ. ಮಿ॥ ವೈಟ್ ಈಗಾಗಲೇ ಅವನಿಗಾಗಿ ವ್ಹಿಸ್ಕಿಯ ಸೀಸೆ ಮತ್ತು ಲೋಟಗಳನ್ನು ಸಿದ್ಧ ಮಾಡಿಕೊಂಡಿದ್ದ. ಅಲ್ಲೇ ಇದ್ದ ಕೆಟಲ್ ನಲ್ಲಿ ಚಹಾಗಾಗಿ ನೀರು ಕುದಿಯಲು ಇಟ್ಟ.

ಮೂರನೇ ಲೋಟ ಒಳಗಿಳಿಸಿದ ಮೇಲೆ ಅತಿಥಿಯ ಕಣ್ಣುಗಳಲ್ಲಿ ಹೊಳಪು ಇಮ್ಮಡಿಸಿ ಅವನು ಮಾತಾಡತೊಡಗಿದ. ಉಳಿದವರು ಅವನನ್ನು ಆಸಕ್ತಿಯಿಂದ ನೋಡುತ್ತಿದ್ದರು. ದೂರದೇಶದಿಂದ ಮರಳಿಬಂದವನ ಬಗ್ಗೆ ಅವರಿಗೆ ಕುತೂಹಲವಿತ್ತು. ತಾನು ಕಂಡ ವಿಚಿತ್ರ ಜನರನ್ನು, ಚಿತ್ರವಿಚಿತ್ರ ದೃಶ್ಯಗಳನ್ನು, ಹಸಿ ಎನ್ನಿಸುವ ಅನುಭವಗಳನ್ನು, ಯುದ್ಧಗಳನ್ನು, ಪ್ಲೇಗ್ ಇತ್ಯಾದಿ ರೋಗಗಳನ್ನು ಕುರಿತು ಅತಿಥಿ ಮಾತಾಡಿದ.

"ಇಪ್ಪತ್ತೊಂದು ವರ್ಷಗಳಾದವು! ನಾನು ಹೊರಟಾಗ ಇವನು ಇನ್ನೂ ಇಷ್ಟುದ್ದದ ಪೋರ! ಈಗ ನೋಡಿ, ಹೇಗೆ ಬೆಳೆದಿದ್ದಾನೆ!"  ಎಂದ.

 ಶ್ರೀಮತಿ ವೈಟ್ "ದೇವರ ದಯೆ," ಎಂದಳು.

"ನನಗೂ ಇಂಡಿಯಾಗೆ ಹೋಗಬೇಕು ಅನ್ನಿಸುತ್ತೆ. ಅಲ್ಲಿ ಒಂದಿಷ್ಟು ಸುತ್ತಾಡಿ ಬರೋಣ ಅನ್ನಿಸುತ್ತೆ," ಎಂದ ಮಿ॥ ವೈಟ್.

ಅದಕ್ಕೆ ಅತಿಥಿ ತಲೆ ಅಲ್ಲಾಡಿಸುತ್ತಾ "ಅಯ್ಯೋ, ಸುಮ್ಮನಿರಿ, ನೀವು ಇಲ್ಲಿ ಸುಖವಾಗಿದ್ದೀರಿ!" ಎಂದು ಖಾಲಿ ಲೋಟವನ್ನು ಕೆಳಗಿಟ್ಟ.  ನಂತರ ನಿಟ್ಟುಸಿರು ಬಿಟ್ಟು  ಮತ್ತೊಮ್ಮೆ ತಲೆಯಾಡಿಸಿದ.

"ಅಲ್ಲಿನ ಹಳೆಯ ದೇಗುಲಗಳು, ಫಕೀರರು, ಆಟ ಆಡಿಸುವವರು ಇವರನ್ನೆಲ್ಲಾ ನನಗೂ ನೋಡಬೇಕು ಅನ್ನಿಸುತ್ತೆ. ಅವತ್ತು ನೀನು ನನಗೆ ಏನೋ ಹೇಳ್ತಿದ್ದೆಯಲ್ಲ, ಏನದು ಮೋರಿಸ್? ಅದೇನೋ ಮಂಗನ ಮುಷ್ಠಿಯ ವಿಷಯ?"

"ಅಯ್ಯೋ ಬಿಡು, ಅದೇನು ಕೇಳೋ ಅಂಥ ವಿಷಯವಲ್ಲ" ಎಂದು ಯೋಧ ಚುಟುಕಾಗಿ ಉತ್ತರಿಸಿದ.

"ಏನು, ಮಂಗನ ಮುಷ್ಠಿಯೇ?" ಶ್ರೀಮತಿ ವೈಟ್ ಕುತೂಹಲದಿಂದ ಕೇಳಿದಳು.

"ಅಯ್ಯೋ, ಮಾಟ ಮದ್ದು ಅಂತಾರಲ್ಲ, ಅದರ ವಿಷಯ," ಎಂದು ಸಾರ್ಜೆಂಟ್ ಮೇಜರ್ ವಿಷಯವನ್ನು ದೂರ ತಳ್ಳಲು ಪ್ರಯತ್ನಿಸಿದ. ಆದರೆ ಅವನ ಕೇಳುಗರಲ್ಲಿ ಈಗ ಆಸಕ್ತಿ ಹೆಚ್ಚಾಗಿತ್ತು. ಅವರು ಮುಂದೆ ಬಾಗಿ ಅವನು ಏನು ಹೇಳುತ್ತಾನೋ ಎಂದು ಮೌನವಾಗಿ ಕಾದರು. ಅತಿಥಿ ಎಲ್ಲೋ ನೋಡುತ್ತಾ ಖಾಲಿಯಾದ ಲೋಟವನ್ನೇ ತುಟಿಗಿಟ್ಟು ಅದನ್ನು ಕೆಳಗಿರಿಸಿದ. ಮಿ॥ ವೈಟ್  ಮೇಲೆದ್ದು ಲೋಟದಲ್ಲಿ ಮದ್ಯವನ್ನು ತುಂಬಿಸಿದ.


"ನೋಡುವುದಕ್ಕೆ ಅದೊಂದು ಸಾಮಾನ್ಯವಾದ ಮುಷ್ಠಿಯ ಹಾಗೇ ಕಾಣುತ್ತೆ, ಒಳ್ಳೆ ಒಣಗಿ ಹೋದ ಮಮ್ಮಿಯ ಹಾಗೆ," ಎಂದು ಸಾರ್ಜೆಂಟ್ ಮೇಜರ್ ತನ್ನ ಜೋಬಿನಲ್ಲಿ ತಡಕಾಡಿದ.  ಒಂದು ವಸ್ತುವನ್ನು ಜೋಬಿನಿಂದ ತೆಗೆದು ಮುಂದೆ ಚಾಚಿದ. ಅದನ್ನು ನೋಡಿ ಶ್ರೀಮತಿ ವೈಟ್ ಮುಖ ಸಿಂಡರಿಸಿ "ಅಯ್ಯಬ್ಬ!" ಎಂದಳು. ಅವಳ ಮಗ ಕುತೂಹಲದಿಂದ ಅದನ್ನು ಕೈಯಲ್ಲಿ ಎತ್ತಿಕೊಂಡು ಪರೀಕ್ಷಿಸಿದ.

"ಇದರ ವಿಶೇಷ ಏನು ಅಂದೆ?" ಮಿ॥ ವೈಟ್ ಕೂಡಾ ವಸ್ತುವನ್ನು ಕೈಯಲ್ಲಿ ಇಟ್ಟುಕೊಂಡು ನೋಡಿ ಮೇಜಿನ ಮೇಲಿಡುತ್ತಾ ಕೇಳಿದ.

"ಯಾರೋ ಒಬ್ಬ ಫಕೀರ ಅದಕ್ಕೆ ಮಂತ್ರ ಹಾಕಿದ್ದಾನೆ. ಅವನು ಯಾರೋ ಮಹಾ ಪುಣ್ಯಾತ್ಮನಂತೆ. ನಮ್ಮ ವಿಧಿ ನಮ್ಮನ್ನು ಆಳುತ್ತದೆ ಅನ್ನೋದನ್ನ ಜಗತ್ತಿಗೆ ತೋರಿಸಬೇಕು ಅನ್ನೋದು ಅವನ ಉದ್ದೇಶವಂತೆ. ವಿಧಿಯ ಜೊತೆ ಹುಡುಗಾಟ ಆಡುವವರು  ದುಃಖಕ್ಕೆ ಈಡಾಗುತ್ತಾರೆ. ಇದನ್ನ ತೋರಿಸೋದಕ್ಕೆ ಅವನು ಇದಕ್ಕೆ ಮಂತ್ರ ಹಾಕಿದ್ದಾನೆ. ಮೂವರು ಬೇರೆ ಬೇರೆ ವ್ಯಕ್ತಿಗಳ ಮೂರು ಮೂರು  ಆಸೆಗಳನ್ನು ಈಡೇರಿಸುವ ಶಕ್ತಿ ಇದಕ್ಕಿದೆ."

ಇದನ್ನು ಕೇಳಿದ ಮೂವರೂ ತಮ್ಮಷ್ಟಕ್ಕೆ ಮೆಲುನಗು ನಕ್ಕರೂ ಅವನು ಗಂಭೀರವಾಗಿ ಹೇಳುತ್ತಿದ್ದಾನೆ ಎಂದು ಅರಿವಾಗಿ ಸುಮ್ಮನಾದರು.

"ಹಾಗಾದರೆ ನೀವು ಯಾಕೆ ಮೂರು ವರ ಕೇಳಿಕೊಳ್ಳಬಾರದು, ಸರ್?" ಎಂದು ಹರ್ಬರ್ಟ್ ವೈಟ್ ತನ್ನ ಜಾಣತನ ಪ್ರದರ್ಶಿಸಿದ.

ನೀನೊಬ್ಬ ಅಧಿಕಪ್ರಸಂಗಿ ಎನ್ನುವಂತೆ ಯೋಧನು ಯುವಕನ ಕಡೆಗೆ ನೋಡಿದ. "ನಾನು ಕೇಳಿಕೊಂಡಿಲ್ಲ ಎಂದು ಯಾರು ಹೇಳಿದರು?" ಎಂದು ಮೆಲ್ಲನೆ ನುಡಿದಾಗ ಅವನ ಗಡಸು ಮುಖ ಬಿಳಿಚಿಕೊಂಡಿತ್ತು.

"ನಿಮ್ಮ ಇಚ್ಛೆಗಳು ಪೂರ್ತಿಯಾದವೇ?" ಶ್ರೀಮತಿ ವೈಟ್ ಕೇಳಿದಳು.

"ಹುಮ್," ಎಂದಾಗ ಅವನ ಗಟ್ಟಿಯಾದ ಹಲ್ಲಿಗೆ ಗಾಜಿನ ಲೋಟ ತಾಗಿತು.

"ನೀವಲ್ಲದೇ ಬೇರೆ ಯಾರಾದರೂ ಇದನ್ನು ಬೇಡಿಕೊಂಡಿದ್ದಾರಾ?" ಎಂದು ಆಕೆ ಮತ್ತೆ ಪ್ರಶ್ನಿಸಿದಳು.

"ಇದು ನನಗೆ ಯಾರಿಂದ ಸಿಕ್ಕಿತೋ ಅವನ ಮೂರೂ ಇಚ್ಛೆಗಳು ಪೂರ್ತಿಯಾದವಂತೆ. ಅವನ ಮೊದಲ ಎರಡು ಇಚ್ಛೆಗಳು ಏನೋ ನನಗೆ ಗೊತ್ತಿಲ್ಲ. ಮೂರನೆಯದು ಅವನ ಮರಣದ ಇಚ್ಛೆಯಾಗಿತ್ತು. ಹೀಗೆ ಇದು ನನ್ನ ಕೈಗೆ ಬಂತು."

ಅವನ ಧ್ವನಿಯಲ್ಲಿದ್ದ ಗಾಂಭೀರ್ಯಕ್ಕೆ ಕೆಲವು ಕ್ಷಣ ಸ್ತಬ್ಧತೆ ಆವರಿಸಿತು.

"ಮೋರಿಸ್, ನಿನ್ನ ಮೂರೂ ಇಚ್ಚೆಗಳು ಪೂರ್ತಿಯಾಗಿದ್ದರೆ ಇದರಿಂದ ನಿನಗೆ ಯಾವ ಉಪಯೋಗವೂ ಇಲ್ಲ. ಯಾಕೆ ಇಟ್ಟುಕೊಂಡಿದ್ದೀಯ?" ಎಂದು ಮಿ॥ ವೈಟ್ ಕೊನೆಗೂ ಮೌನವನ್ನು ಮುರಿದ.

ಗೊತ್ತಿಲ್ಲ ಎಂಬಂತೆ ಯೋಧ ತಲೆ ಅಲ್ಲಾಡಿಸಿದ. "ಏನೋ ಖಯಾಲಿ ಎನ್ನಬಹುದು" ಎಂದು ನಿಧಾನವಾಗಿ ಉತ್ತರಿಸಿದ.

"ನಿನಗೆ ಇನ್ನೂ ಮೂರು ವರಗಳು ಬೇಕೆನ್ನಿಸಿದರೆ ಅವುಗಳಿಗಾಗಿ ಬೇಡಿಕೊಳ್ಳುತ್ತೀಯಾ?" ಎನ್ನುತ್ತಾ ಮಿ॥ ವೈಟ್ ಆಸಕ್ತಿಯಿಂದ ಅತಿಥಿಯ ಕಡೆಗೆ ನೋಡಿದ.

"ಹೇಳಲಾರೆ, ಹೇಳಲಾರೆ" ಎಂದು ಅತಿಥಿ ಉತ್ತರಿಸಿದ. ನಂತರ ಮುಷ್ಟಿಯನ್ನು ಕೈಗೆತ್ತಿಕೊಂಡು ಅದನ್ನು ತೋರುಬೆರಳು ಮತ್ತು ಉಂಗುಷ್ಠದ ನಡುವೆ ಹಿಡಿದು ಒಮ್ಮೆಲೇ ಅದನ್ನು ಬೆಂಕಿಗೆ ಎಸೆದುಬಿಟ್ಟ. ಹೌಹಾರಿದ ಮಿ॥ ವೈಟ್ "ಅಯ್ಯೋ!" ಎಂದು ಕೂಗಿ ಅದನ್ನು ಬೆಂಕಿಯಿಂದ ಮೇಲಕ್ಕೆತ್ತಿಕೊಂಡ.

"ಅದು ಸುಟ್ಟು ಹೋದರೆ ಮೇಲು" ಎಂದು ಗಂಭೀರ ಧ್ವನಿಯಲ್ಲಿ ಯೋಧ ನುಡಿದ.

"ನಿನಗೆ ಬೇಡದಿದ್ದರೆ ನನಗೆ ಕೊಡು"

"ಇಲ್ಲ! ನಾನು ಕೊಡುವುದಿಲ್ಲ. ನಾನು ಅದನ್ನು ಬೆಂಕಿಗೆ ಎಸೆದಿದ್ದೇನೆ. ನೀನು ಅದನ್ನು ಇಟ್ಟುಕೊಂಡರೆ ಅದು ನಿನ್ನ ನಿರ್ಧಾರ.  ಮುಂದೆ ಆಗುವುದಕ್ಕೆ ನನ್ನನ್ನು ಹೊಣೆ ಮಾಡಬೇಡ. ನಾನು ಹೇಳುವುದು ಕೇಳು, ಅದನ್ನು ಬೆಂಕಿಗೆ ಹಾಕು!"

ಮಿ॥ ವೈಟ್ ತಲೆ ಅಲ್ಲಾಡಿಸಿ ತನ್ನ ಹೊಸ ಸಂಪಾದನೆಯನ್ನು ಸೂಕ್ಷ್ಮವಾಗಿ ನೋಡಿದ. "ಇಚ್ಛೆಯನ್ನು ಕೇಳುವುದು ಹೇಗೆ?" ಎಂದು ಪ್ರಶ್ನಿಸಿದ.

"ಬಲಗೈಯಲ್ಲಿ ಅದನ್ನು ಹಿಡಿದು ಕೈ ಮೇಲಕ್ಕೆತ್ತಿ ಗಟ್ಟಿಯಾಗಿ ನಿನ್ನ ಇಚ್ಛೆಯನ್ನು ಅರಿಕೆ ಮಾಡಿಕೊಳ್ಳಬೇಕು. ಇಲ್ಲಿ ನೋಡು, ಏನೇ ಮಾಡುವುದಕ್ಕೆ ಮುಂಚೆ ನಾನು ಕೊಟ್ಟ ಎಚ್ಚರಿಕೆ ನೆನಪಿರಲಿ!"

"ಒಳ್ಳೆಯ ಅರೇಬಿಯನ್ ನೈಟ್ಸ್ ಕತೆಯ ಹಾಗಿದೆಯಲ್ಲ!" ಎಂದು ತಮಾಷೆ ಮಾಡಿ ಶ್ರೀಮತಿ ವೈಟ್ ಮೇಲೆದ್ದು ರಾತ್ರಿಯ ಊಟ ಬಡಿಸುವ ತಯಾರಿ ನಡೆಸಿದಳು. "ನನಗೆ ಕೆಲಸ ಮಾಡಲು ನಾಲಕ್ಕು ಕೈ ಸಿಕ್ಕುವಂತೆ ವರ ಕೇಳಿಕೊಳ್ಳಬಹುದೇ?" ಎಂದಳು.

"ಅದಕ್ಕೇನು?" ಎನ್ನುತ್ತಾ ಮಿ॥ ವೈಟ್ ಜೋಬಿನಿಂದ ಮಾಂತ್ರಿಕ ವಸ್ತುವನ್ನು ಹೊರತೆಗೆದ. ಮೂವರೂ ಘೊಳ್ ಎಂದು ನಕ್ಕರು. ಆದರೆ ಯೋಧ ಮಾತ್ರ ಒಮ್ಮೆಲೇ ಮೇಲೆದ್ದು ಗೆಳೆಯನ ಕೈ ಹಿಡಿದುಕೊಂಡ. ಅವನ ಮುಖದಲ್ಲಿ ಭಯ ಮೂಡಿತ್ತು. "ಕೇಳಿಕೊಳ್ಳುವುದೇ ಆದರೆ ಹುಡುಗಾಟ ಬೇಡ - ಏನಾದರೂ ಅರ್ಥಪೂರ್ಣವಾದದ್ದು ಕೇಳಿಕೊಳ್ಳಬೇಕು" ಎಂದ.

ಮಿ॥ ವೈಟ್ ವಸ್ತುವನ್ನು ತನ್ನ ಜೋಬಿಗೆ ಸೇರಿಸಿ ಊಟದ ಮೇಜಿನ ಮುಂದೆ ಕುರ್ಚಿಗಳನ್ನು ಜೋಡಿಸಿ ಅತಿಥಿಯನ್ನು ಕರೆದ. ಊಟದ ನಡುವೆ ಮಾತುಕತೆಯಲ್ಲಿ ಮಾಂತ್ರಿಕ ವಸ್ತುವಿನ ವಿಷಯ ಎಲ್ಲರೂ ಮರೆತರು. ಭೋಜನ ಮುಗಿಸಿದ ನಂತರ ಎಲ್ಲರೂ ಮತ್ತೆ ಅಗ್ನಿಕುಂಡದ ಮುಂದೆ ಸೇರಿ ಸಾರ್ಜೆಂಟ್-ಮೇಜರನ ಇಂಡಿಯಾ ಅನುಭವಗಳನ್ನು ಸ್ವಾರಸ್ಯವಾಗಿ ಕೇಳುತ್ತಾ ಕುಳಿತರು.

ಕೊನೆಗೆ ಅತಿಥಿಯನ್ನು ಬೀಳ್ಕೊಟ್ಟು ಬಾಗಿಲು ಮುಚ್ಚುವಾಗ ಹರ್ಬರ್ಟ್ ವೈಟ್ "ಆತ ಹೇಳಿದ ಕತೆಗಳು ಬೊಗಳೆ! ಈ ಮಂಗನ ಮುಷ್ಠಿಯ ಕತೆಯೂ ಅಂಥದ್ದೇ ಬೊಗಳೆ! ಅದನ್ನು ಈ ಕಿವಿಯಲ್ಲಿ ಕೇಳಿ ಆ ಕಿವಿಯಿಂದ ಬಿಡುವುದು ಮೇಲು. ಓ! ಸಮಯದ ಕಡೆ ನೋಡಿ! ಎಂದ. ಅವನು ಹೊರಡಬೇಕಾದ ಕೊನೆಯ ರೈಲುಗಾಡಿಯ ಸಮಯ ಸಮೀಪಿಸುತ್ತಿತ್ತು.

"ಅವನಿಗೆ ಅದಕ್ಕೆ ಬದಲಾಗಿ ಏನಾದರೂ ಕೊಟ್ಟಿರಾ?" ಎಂದು ಶ್ರೀಮತಿ ವೈಟ್ ತನ್ನ ಗಂಡನ ಕಡೆ ಗಮನವಿಟ್ಟು ನೋಡಿದಳು.

"ಒಂದಿಷ್ಟು ಪುಡಿಗಾಸು, ಅಷ್ಟೆ. ಅದನ್ನೂ ಅವನು ಬೇಡ ಅಂದ. ನಾನೇ ಒತ್ತಾಯ ಮಾಡಿ ಕೊಟ್ಟೆ. ಮಾಟದ ವಸ್ತುವನ್ನು  ಎಸೆದು ಬಿಡು ಅಂತ ಮತ್ತೆ ಹೇಳಿದ."

  ಹರ್ಬರ್ಟ್ ಹುಸಿ ಭಯವನ್ನು ನಟಿಸುತ್ತ "ಮತ್ತಿನ್ನೇನು! ನಾವು ಶ್ರೀಮಂತಿಕೆಯ ಹೊಸ್ತಿಲಲ್ಲಿ ನಿಂತಿದ್ದೇವೆ! ನಾಳೆ ನಾವು ಹೆಸರು ಗಳಿಸಬಹುದು. ಸುಖದ ಸುಪ್ಪತ್ತಿಗೆಯಲ್ಲಿ ಓಲಾಡಬಹುದು! ಅಪ್ಪ,, ನೀನೊಬ್ಬ ಚಕ್ರವರ್ತಿಯಾಗಬೇಕು ಅಂತ ಕೇಳಿಕೋ. ಆಗ ನೀನು ಅಮ್ಮನ ಭಯದಲ್ಲಿ ಬದುಕಬೇಕಾಗಿಲ್ಲ!"ಎಂದ.

ಶ್ರೀಮತಿ ವೈಟ್ ಮುನಿಸು ನಟಿಸುತ್ತಾ  ಮಗನ ಹಿಂದೆ ಒಂದು ಸೌಟನ್ನು ಹಿಡಿದು ಧಾವಿಸಿ ಬಂದಳು. ಅವರು ಮೇಜಿನ ಸುತ್ತಲೂ ಒಂದೆರಡು ಸುತ್ತು ಓಡಿದರು.

ಮಿ॥ ವೈಟ್ ತನ್ನ ಜೋಬಿನಿಂದ ಮಾಂತ್ರಿಕ ವಸ್ತುವನ್ನು ತೆಗೆದು ಅದರತ್ತ ಅನುಮಾನದಿಂದ ನೋಡುತ್ತಾ "ನನಗೆ ಏನು ಕೇಳಿಕೊಳ್ಳಬೇಕೆಂದು ತಿಳಿಯುತ್ತಿಲ್ಲ. ನಮ್ಮ ಹತ್ತಿರ ಎಲ್ಲವೂ ಇದೆ ಎನ್ನಿಸುತ್ತಿದೆ" ಎಂದ.

"ಅಪ್ಪ, ಈ ಮನೆಯ ಸಾಲ ತೀರಿಸಬೇಕೆಂದು ಒದ್ದಾಡುತ್ತಿರುತ್ತೀಯ! ಹೋಗಲಿ, ಇನ್ನೂರು ಪೌಂಡ್ ಹಣ ಬೇಕೆಂದು ಕೇಳಿಕೊಳ್ಳಪ್ಪ, ಅಷ್ಟು ಸಾಕು."

ಸ್ವಲ್ಪ ನಾಚಿಕೊಳ್ಳುತ್ತ ಮಿ।। ವೈಟ್ ಬಲಗೈಯನ್ನು ಮೇಲೆತ್ತಿದ. ಮಗನು ಅಮ್ಮನತ್ತ ಕಣ್ಣು ಮಿಟುಕಿಸಿ ಪಿಯಾನೋ ಮುಂದೆ ಕುಳಿತು ಅಪ್ಪನ ಕಾರ್ಯಕ್ಕೆ  ಹಿನ್ನೆಲೆ ವಾದ್ಯದಂತೆ ಒಂದಷ್ಟು ಮನೆಗಳನ್ನು ನುಡಿಸಿದ.

"ಇನ್ನೂರು ಪೌಂಡ್ ಗಳು ನನಗೆ ಸಿಕ್ಕಲೆಂದು ನನ್ನ ಇಚ್ಛೆ" ಎಂದು ಮಿ॥ ವೈಟ್ ಗಟ್ಟಿಯಾಗಿ ಘೋಷಿಸಿದ. ಮಗ ಹಿನ್ನೆಲೆಯಾಗಿ ಪಿಯಾನೋ  ಮನೆಗಳನ್ನು ಗಟ್ಟಿಯಾಗಿ ಕುಕ್ಕಿದ.  ಆಗ ಮಿ॥ ವೈಟ್ ಕೂಗಿಕೊಂಡಿದ್ದು ಕೇಳಿ ಪಿಯಾನೋ ನುಡಿಸುವುದು ನಿಲ್ಲಿಸಿ ತಾಯಿ ಮತ್ತು ಮಗ ಅವನ ಕಡೆ ಧಾವಿಸಿದರು. ಅವನು ಮಂಗನ ಮುಷ್ಠಿಯನ್ನು ಕೆಳಕ್ಕೆಸೆದು ಅದರ ಕಡೆ ಅಸಹ್ಯ ಭಾವನೆಯಿಂದ ನೋಡುತ್ತಿದ್ದ.

"ಅನಿಷ್ಟದ್ದು ನನ್ನ ಕೈಯಲ್ಲಿ ಹೊರಳಿತು! ನಾನು ಮಾತಾಡಿದ ಕೂಡಲೇ ನನ್ನ ಕೈಯನ್ನು ಯಾರೋ ಹಾವಿನಂತೆ ತಿರುಚಿದಂತಾಯಿತು!"

"ದುಡ್ಡು ಎಲ್ಲೂ ಕಾಣಿಸುತ್ತಿಲ್ಲವಲ್ಲ!" ಎಂದು ಮಗ ಹಾಸ್ಯ ಮಾಡಿದ.  ಕೆಳಗೆ ಬಿದ್ದಿದ್ದ ವಸ್ತುವನ್ನು ಮೇಲೆತ್ತಿ "ಅದು ನಮಗೆ ಸಿಕ್ಕುವುದು ಅಷ್ಟರಲ್ಲೇ ಇದೆ!" ಎಂದ.

"ಅದು ಹೊರಳಿದ್ದು ನಿಮ್ಮ ಕಲ್ಪನೆ ಇರಬಹುದು," ಎಂದು ಶ್ರೀಮತಿ ವೈಟ್ ಗಂಡನ ಕಡೆ ಆತಂಕದಿಂದ ನೋಡಿದಳು.

ಅವನು ತಲೆ ಅಲ್ಲಾಡಿಸಿದ. "ಇರಲಿ, ಈಗ ಏನೂ ಆಗಿಲ್ಲವಲ್ಲ - ನನಗೆ ಆಘಾತವಾಗಿದ್ದು ಮಾತ್ರ ನಿಜ" ಎಂದ.

ಅವರು ಮತ್ತೆ ಬೆಂಕಿಯ ಮುಂದೆ ಕುಳಿತರು. ಗಂಡಸರು ತಮ್ಮ ಪೈಪ್ ಗಳನ್ನು ಹಚ್ಚಿ ಹೊಗೆಸೊಪ್ಪು ಸೇದಿದರು.   ಹೊರಗಡೆ ಗಾಳಿ ಬಲವಾಗಿ ಬೀಸುತ್ತಿತ್ತು. ಮುಂಬಾಗಿಲು ಗಟ್ಟಿಯಾಗಿ ಹೊಡೆದುಕೊಂಡಾಗ ಮಿ॥ ವೈಟ್ ಬೆಚ್ಚಿದ.  ಒಂದು ಬಗೆಯ ವಿಲಕ್ಷಣ, ವ್ಯಸನಪೂರ್ಣ ಮೌನ ಅಲ್ಲಿ ಆವರಿಸಿತು.  ವಯಸ್ಸಾದ ದಂಪತಿಗಳು ರಾತ್ರಿ ವಿರಮಿಸಲು ಮೇಲೆದ್ದರು.

"ಬೆಳಗ್ಗೆ ನೀವು ಎದ್ದಾಗ ನಿಮ್ಮ ಮಂಚಕ್ಕೆ ದುಡ್ಡು ಕಟ್ಟು ಹಾಕಿರುತ್ತೆ, ನೋಡುತ್ತಿರಿ!" ಎಂದು ಹರ್ಬರ್ಟ್ ಹಾಸ್ಯ ಮಾಡುತ್ತಾ ಅವರಿಗೆ ವಿದಾಯ ಹೇಳಿದ. "ನೀವು ಅನ್ಯಾಯದ ದುಡ್ಡನ್ನು ಎತ್ತಿಕೊಳ್ಳುವಾಗ ಕಪಾಟಿನ ಮೇಲೆ ಕೂತುಕೊಂಡು ಒಂದು ಗುಮ್ಮ ನಿಮ್ಮ ಕಡೆಗೇ ನೋಡುತ್ತಿರುತ್ತೆ!"

ಮಿ॥ ವೈಟ್ ಕತ್ತಲಿನಲ್ಲೇ ಸ್ವಲ್ಪ ಹೊತ್ತು ಕುಳಿತು ಬೆಂಕಿಯ ಕಡೆಗೆ ನೋಡುತ್ತಿದ್ದ. ಬೆಂಕಿಯ ಜ್ವಾಲೆಗಳಲ್ಲಿ ಅವನಿಗೆ ಮುಖಗಳು ಕಂಡವು. ಕೊನೆಯಲ್ಲಿ ಕಂಡ ಮಂಗದಂಥ ಮುಖ ಭಯಾನಕವಾಗಿತ್ತು. ಅವನು ಅದನ್ನೇ ಸ್ವಲ್ಪ ಹೊತ್ತು ನೋಡಿದ. ಅದು ಅಷ್ಟು ಸ್ಪಷ್ಟವಾಗಿ ಗೋಚರಿಸಿದ್ದು ಕಂಡು ಅವನಿಗೆ ದಿಗಿಲಾಯಿತು. ಮೇಲೆದ್ದು ಮೇಜಿನ ಮೇಲಿಂದ ಒಂದು ಲೋಟ ನೀರು ಸುರಿದುಕೊಂಡು ಬೆಂಕಿಗೆ ಎಸೆಯಲು ಮುಂದಾದ. ಕತ್ತಲಿನಲ್ಲಿ ಅವನು ತಡವರಿಸಿದಾಗ ಮೇಜಿನ ಮೇಲಿಟ್ಟ ಮಂಗನ ಮುಷ್ಠಿ ಅವನ ಕೈಗೆ ತಗುಲಿತು ಅವನು ಧಡಬಡಿಸಿ ಎದ್ದು  ಕೈಯನ್ನು ಕೋಟಿಗೆ ಒರೆಸಿಕೊಂಡ.  ಒಂದು ಸಣ್ಣ ನಡುಕ ಅವನ ಮೈಯಲ್ಲಿ ಹಾದು ಹೋಯಿತು. ಅವನು ನಿಧಾನವಾಗಿ ತನ್ನ ಮಲಗುವ ಕೊನೆಗೆ ತೆರಳಿದ.

(ಮುಂದಿನ ಬಾಗ ಇಲ್ಲಿ ಓದಿ )


(c) Kannada translation of Monkey's Paw - a short story by W.W. Jacobs

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)