ರಾತ್ರಿ ದುಸ್ಸಹವಾಗಿವೆ
ಮೂಲ ಹಿಂದಿ ಗೀತೆ - ಶೈಲೇಂದ್ರ ಕನ್ನಡಕ್ಕೆ - ಸಿ ಪಿ ರವಿಕುಮಾರ್ ಮಹಮ್ಮದ್ ರಫಿ ಹಾಡಿರುವ ಈ ಗೀತೆಯನ್ನು "ಗೈಡ್" ಚಿತ್ರದಲ್ಲಿ ಬಳಸಲಾಗಿದೆ. ಎಸ್.ಡಿ. ಬರ್ಮನ್ ಸಂಗೀತ ನಿರ್ದೇಶನದಲ್ಲಿ ಶೈಲೇಂದ್ರ ಬರೆದ ಹಾಡನ್ನು ರಫಿ ತಮ್ಮ ವಿಷಾದ ತುಂಬಿದ ಧ್ವನಿಯಲ್ಲಿ ಅದ್ಭುತವಾಗಿ ಹಾಡಿದ್ದಾರೆ. ಚಿತ್ರದಲ್ಲಿ ಬರುವ ಸನ್ನಿವೇಶ ಹೀಗಿದೆ - ಕಥಾನಾಯಕ ಒಂದು ಪ್ರಾಚೀನ ದೇವಾಲಯದಲ್ಲಿ ಒಬ್ಬ ಮಾರ್ಗದರ್ಶಿಯಾಗಿ ಕೆಲಸ ಮಾಡುತ್ತಿದ್ದಾನೆ. ಆ ಪಾಳುದೇವಾಲಯವನ್ನು ನೋಡಲು ಬಂದ ಒಬ್ಬ ವೃದ್ಧ ಚರಿತ್ರಕಾರನ ಚಿಕ್ಕವಯಸ್ಸಿನ ಹೆಂಡತಿಯಲ್ಲಿ ನಾಯಕ ಅನುರಕ್ತನಾಗುತ್ತಾನೆ. ಆಕೆಯೂ ತನ್ನ ಗಂಡನನ್ನು ತೊರೆದು ಇವನೊಂದಿಗೆ ಓಡಿಹೋಗಲು ಸಿದ್ಧಳಾಗುತ್ತಾಳೆ. ಆಕೆ ಒಳ್ಳೆಯ ನರ್ತಕಿ. ಕಥಾನಾಯಕ ತನ್ನ ಮಾತಿನ ಕೌಶಲದಿಂದ ಆಕೆಗೆ ಒಳ್ಳೆಯ ಏಜೆಂಟ್ ಆಗುತ್ತಾನೆ. ಆಕೆ ಪ್ರಸಿದ್ಧಿಯ ಮೆಟ್ಟಿಲೇರುತ್ತಾಳೆ. ಕ್ರಮೇಣ ಇವರಲ್ಲಿ ಒಡಕು ಉಂಟಾಗುತ್ತದೆ. ಒಂದೇ ಮನೆಯಲ್ಲಿದ್ದರೂ ಅವರ ನಡುವೆ ಒಂದು ಗೋಡೆ ಅಡ್ಡವಾಗುತ್ತದೆ. ಈ ಸಂದರ್ಭದಲ್ಲಿ ನಾಯಕ ಹಳೆಯದನ್ನು ನೆನೆದು ಹಾಡುವ ಗೀತೆ. ತೆರೆಯ ಮೇಲೆ ದೇವ್ ಆನಂದ್ ಇದನ್ನು ಅಭಿನಯಿಸಿದ್ದಾರೆ. ನೂಕಬಹುದು ದಿನಗಳನ್ನು , ರಾತ್ರಿ ದುಸ್ಸಹವಾಗಿವೆ ನೀನಂತೂ ಬರಲಿಲ್ಲ, ನಿನ್ನ ನೆನಪುಗಳು ಕಾಡುತ್ತಿವೆ ಯಾರ ಪ್ರೇಮದಲ್ಲಿ ನಾನು ಜಗವನ್ನು ತೊರೆದೆನೋ ಸುತ್ತಿಕೊಂಡಿತೋ ನನ್ನ ಬಾಳಿಗೆ ಅಪಮಾನ ಅವರಿಂದಲ...