ಮೋದಕೋಪಾಖ್ಯಾನ

 ಮೋದಕೋಪಾಖ್ಯಾನ


ಸಿ. ಪಿ. ರವಿಕುಮಾರ್


ನೀರಿಳಿಯದ ಗಂಟಲಿನಲ್ಲಿ ಕಡುಬು ತುರುಕಿದಂತೆ ಎನ್ನುವ ಮುದ್ದಣನ ಮಾತನ್ನು ಕೇಳಿದಾಗ ನಾನು ಕರಿಗಡುಬನ್ನು ಯಾರೋ ನನ್ನ ಗಂಟಲಿಗೆ ತುರುಕುತ್ತಿರುವ ದೃಶ್ಯ ಕಲ್ಪಿಸಿಕೊಂಡು ಭೀತನಾಗಿದ್ದೇನೆ. ಬಹುಶಃ ಮುದ್ದಣನು ಕಡುಬು ಎನ್ನುವ ಬದಲು ಮೋದಕ ಎನ್ನುವ ಪದವನ್ನು ಬಳಸಿದ್ದರೆ ಹೀಗೆ ಆಗುತ್ತಿರಲಿಲ್ಲ. ಮೋದಕವನ್ನು ತಿನ್ನಲು ಬೇರೆ ಯಾವ ವಿಧಾನವೂ ಇಲ್ಲ.  ಇಡೀ ಮೋದಕವನ್ನು ಬಾಯೊಳಗೆ ತುರುಕುವುದೇ ಏಕಮಾತ್ರ ವಿಧಾನ. ಮೋದಕದ ಗಾತ್ರವನ್ನು ನಮ್ಮ ಬಾಯಿಯ ಗಾತ್ರದಷ್ಟೇ ವಿರಚಿಸಿರುವುದು ಬೇರೇತಕ್ಕೆ  ಎಂದು ತಿಳಿದಿರಿ! ನೀವು ಗಮನಿಸಬೇಕಾದದ್ದು  ಮೋದಕವು ಇಡೀ ಮುಖಕ್ಕೆ ಎಕ್ಸರ್ಸೈಸ್ ನೀಡುತ್ತದೆ ಎಂಬ ವಿಷಯ. ಮೃದು ಕವಚವಿದ್ದರೂ ಮೋದಕವನ್ನು ಮೆಲ್ಲಲು ಹಲ್ಲುಗಳು ತಮ್ಮ ಕೆಲಸ ಮಾಡಲೇ ಬೇಕು.  ಗಲ್ಲಗಳು ಮತ್ತು ತುಟಿಗಳು ಒಳಗೂ ಹೊರಗೂ ಚಲಿಸಬೇಕು.   ಬಾಯಿ ಮುಚ್ಚಿದ್ದರೂ ಹೂರಣದಲ್ಲಿರುವ ಕೊಬ್ಬರಿ ಬೆಲ್ಲ ಏಲಕ್ಕಿ ಇತ್ಯಾದಿಗಳ ನಾಜೂಕು ಘಮವನ್ನು ನಮ್ಮ ನಾಸಿಕವು ಆಘ್ರಾಣಿಸಬೇಕು.  ಇನ್ನು   ಗಂಟಲಿನಲ್ಲಿ ತುರುಕುವ ಕೆಲಸವನ್ನು ನಾಲಗೆ ಮಾಡಬೇಕು. ಇಪ್ಪತ್ತೊಂದು ಮೋದಕ ತಿನ್ನುವಷ್ಟರಲ್ಲಿ ಮುಖಕ್ಕೆ ಎಷ್ಟು ವ್ಯಾಯಾಮ ಆಗುತ್ತದೆಂದು ಯೋಚಿಸಿ!


ಈಚೆಗೆ ಎಲ್ಲೆಲ್ಲೂ ಜನಪ್ರಿಯವಾದ ಮೋಮೋ ಎಂಬ ಖಾದ್ಯವು ನಮ್ಮ ಮೋದಕದ ಕಾಪಿಯೇ ಎಂದು ನನ್ನ ಬಲವಾದ ನಂಬಿಕೆ. ಹಿಂದೆ ನಮ್ಮ ದೇಶಕ್ಕೆ ಬಂದ ಹ್ಯೂ ಎನ್ ತ್ಸಾಂಗ್ ಮುಂತಾದ ಯಾತ್ರಿಗಳು ಇಲ್ಲಿ ಸಿಕ್ಕುವ ಮೋದಕದ ರುಚಿಯನ್ನು ಖಂಡಿತಾ ನೋಡಿರುತ್ತಾರೆ.  ತಾವು ಕಂಡದ್ದನ್ನು ಅವರು ಹಿಂದಿರುಗಿದಾಗ ಅಲ್ಲಿಯ ಬಾಣಸಿಗರಿಗೆ ಹೇಳದೇ ಇರುತ್ತಾರೆಯೇ!  ಬಾಣಸಿಗರು "ಅದರ ಹೆಸರೇನು?" ಎಂದು ಕೇಳಿದಾಗ "ಮೋ ... ಮೋ ... ಅಂತ ಏನೋ ಬರುತ್ತೆ" ಎಂದು ಪ್ರವಾಸಿಗರು ಉತ್ತರಿಸಿರಬಹುದು. ಇದೇ ಕಾರಣಕ್ಕೆ ಈ ಖಾದ್ಯಕ್ಕೆ ಮೋಮೋ ಎಂಬ ಹೆಸರು ಬಂದಿದೆ ಎಂದು ನಾನು ಮೇಜು ಕುಟ್ಟಿ ಹೇಳುತ್ತೇನೆ.  ಮೋಮೋ  ಎಂಬುದಕ್ಕೆ ಡಂಪಲಿಂಗ (dumpling) ಎಂಬ ಹೆಸರು ಬರಲು ಅದು ಅಮೃತಶಿಲೆಯ ಲಿಂಗದಂತೆ ಕಾಣುವುದೇ ಕಾರಣ ಎನ್ನುವುದರಲ್ಲಿ ಏನೂ ಸಂಶಯವಿಲ್ಲ.   ಚೈನಾದಲ್ಲಿ ಬೆಲ್ಲ ಏಲಕ್ಕಿ ಇವೆಲ್ಲ ಸಿಕ್ಕುತ್ತಿರಲಿಲ್ಲ ಎಂದು ತೋರುತ್ತದೆ. ಹೀಗಾಗಿ ಅವರ ಬಾಣಸಿಗರು ತಮಗೆ ತೋರಿದ ರೀತಿಯಲ್ಲಿ ತಮ್ಮ ಲೋಕಲ್ ಮೋದಕಗಳನ್ನು ಸೃಷ್ಟಿಸಿದರು. ಅಯ್ಯೋ! ಮೋದಕದಲ್ಲಿ ನಮ್ಮ ಭಾರತೀಯ ಬಾಣಸಿಗರು ನಿರೂಪಿಸಿದ ನಾಜೂಕು ನೆರಿಗೆಗಳನ್ನು ಹೇಗೆ ಹೇಗೋ ತಿರುಚಿದರು. ಅಷ್ಟೇ ಅಲ್ಲ, ಮೋದಕವನ್ನು ಎಣ್ಣೆಯಲ್ಲಿ ಕರಿದು ವಾಂಟಾನ್  ಎಂದೇನೋ ಒಂದು ಪದಾರ್ಥ ಸೃಷ್ಟಿಸಿದರು.  ಉದ್ದೇಶಪೂರ್ವಕವಾಗಿ ಮಾಡುವ ಕೀಟಲೆಗೆ ವಾಂಟನ್ ಎಂಬ ಗುಣವಾಚಕ ಬಳಸುವುದನ್ನು ಸುಮ್ಮನೇ ಎಂದುಕೊಂಡಿರಾ?


ಮೋದಕ ಎಂಬ ಹೆಸರು ಮೋದ ಎಂಬ ಪದದಿಂದ ಬಂದಿದೆ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಕೆಲವರು ಅಂದುಕೊಂಡಂತೆ ಮೋದಿಗೂ ಮೋದಕಕ್ಕೂ ಹೆಚ್ಚಿನ  ಸಂಬಂಧ ಇಲ್ಲ.  ಮೋದಿ ಅವರಿಗೆ ಮೋದಕವು ಪ್ರಿಯವೆಂಬ ಸಂಬಂಧ ಹೊರತಾಗಿ.  ಆಮೋದ, ಪ್ರಮೋದ ಇತ್ಯಾದಿ ಪದಗಳನ್ನು ನೀವು ಖಂಡಿತಾ ಕೇಳಿರುತ್ತೀರಿ.  ಯಾವುದು ಮೋದವನ್ನು ನೀಡುತ್ತದೆಯೋ ಅದು ಮೋದಕ.  ಮೋಹಕ ಎಂಬ ಪದವೇ ಮುಂದೆ ಮೋದಕ ಆಯಿತು ಎಂದು ಕೆಲವು ವಿದ್ವಾಂಸರು ಅಭಿಪ್ರಾಯ ಪಡುತ್ತಾರೆ. ನೋಡಲು ಕೂಡಾ  ಮೋದಕ ಮೋಹಕವಾಗಿರುವುದು ಇದಕ್ಕೆ ಕಾರಣ. ಗಣೇಶನ ಅಂಗೈಯಲ್ಲಿ  ಬಿರಿಯದ ಬಿಳಿ ಕಮಲದ ಮೊಗ್ಗಿನಂತೆ ಶೋಭಿಸುವ ಮೋದಕ ತನ್ನ ಅಂದದಿಂದ ಗಣೇಶನ ಸೌಂದರ್ಯವನ್ನು ಇಮ್ಮಡಿಗೊಳಿಸಿದೆ.  ಈಗಂತೂ ವಿಡಿಯೋ ಬಾಣಸಿಗರು ಮೋದಕದಲ್ಲಿ ನಾನಾ ವಿಧಗಳನ್ನು ಸೃಷ್ಟಿಸಿದ್ದಾರೆ.  ಖೋವಾ ತುಂಬಿದ ಮೋದಕ, ಕೇಸರಿ ಬಣ್ಣದ ಮೋದಕ, ಡ್ರೈ ಫ್ರೂಟ್ ಮೋದಕ ಇತ್ಯಾದಿ ಇತ್ಯಾದಿ.   ಖಾರ ಮೋದಕ ಯಾಕಿಲ್ಲ ಎಂದು ಯಾರೋ ನೆನ್ನೆ ಕೇಳುತ್ತಿದ್ದರು.  ಯಾಕಿಲ್ಲ! ಹಿಂದೊಮ್ಮೆ ಖಾರ  ಮೋದಕಗಳ ಹಾರವನ್ನು ಅರ್ಪಿಸುತ್ತಿದ್ದರು.   ವಡೆ ಮುಂತಾದ ಖಾರ ಪದಾರ್ಥಗಳ ಹಾರವನ್ನು ಹಾಕಿದವರಿಗೆ ಇಷ್ಟಾರ್ಥಗಳನ್ನು ಕರುಣಿಸುವ ದೇವರನ್ನು ಮೆಚ್ಚಿಸಲು ಖಾರಹಾರಪ್ರಿಯ ಎಂಬ ರಾಗವನ್ನೇ ಸಂಗೀತ ವಿದ್ವಾಂಸರು ಸೃಷ್ಟಿಸಿಲ್ಲವೇ!


ಈ ಸಲ ಗಣೇಶ ಚತುರ್ಥಿಗೆ ಕರಿಗಡುಬು ಎಂದು ಮನೆಯವರು ಘೋಷಿಸಿದಾಗ ನನಗೆ ನೀರಿಳಿಯದ ಗಂಟಲೊಳ್ ನೆನಪಾಗಿ ಮಾತೇ ಹೊರಡಲಿಲ್ಲ. ನಂತರ ಸಾವರಿಸಿಕೊಂಡು "ಅಬಕೀ ಬಾರ್ ಮೋದಕ, ಸರಕಾರ್" ಎಂದು ನಾನು ಪ್ರತಿಘೋಷಣೆ ಕೂಗಿಯೇ ಬಿಟ್ಟೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)