ಆರು ತಿಳಿಯರು ನಿನ್ನ ಆರಾ ಪರಾಕ್ರಮ!

 



ಆರಾ ಎಂದರೆ ನಮ್ಮ ಸುತ್ತಲೂ ಇರುತ್ತದೆ ಎನ್ನಲಾಗುವ ಅಗೋಚರ ಪ್ರಭೆ.  ದೇವರ ಚಿತ್ರಗಳಲ್ಲಿ ಸುತ್ತಲೂ ಚಿನ್ನದ ಬಣ್ಣದಲ್ಲಿ ಹೊಮ್ಮುತ್ತಿರುವ ಪ್ರಭೆಯನ್ನು ಚಿತ್ರಿಸುವುದು ಸಾಮಾನ್ಯ. ಮನುಷ್ಯರಷ್ಟೇ ಅಲ್ಲ, ಇತರ ಪ್ರಾಣಿಗಳಿಗೂ ಮತ್ತು ನಿರ್ಜೀವ ವಸ್ತುಗಳಿಗೂ ಆರಾ ಇರುತ್ತದೆ ಎಂದು ನಂಬುತ್ತಾರೆ.  ನಾಡಿ ಪಂಡಿತರು ನಾಡಿ ಹಿಡಿದು ನೋಡಿ ಬಾಡಿಯನ್ನು ಏನು ಬಾಧಿಸುತ್ತಿದೆ ಎಂದು ಔಷಧ ಕೊಡುವಂತೆ ಕೆಲವರು ಆರಾ ನೋಡಿ ಔಷಧ ನೀಡುವುದು ಕೂಡಾ ಇದ್ದಾರಂತೆ.  ಆರಾಂಕುಶಮಿಟ್ಟೊಡಂ ಎಂದು ಕವಿಯೊಬ್ಬನು ಹೇಳಿದ್ದು ತನ್ನ ಆರಾಗೆ ಯಾರಾದರೂ ಕುಶದಿಂದ (ಹುಲ್ಲಿನ ಕಡ್ಡಿ) ಚುಚ್ಚಿದರೂ ತನಗೆ ಬನವಾಸಿಯ ಹುಲ್ಲು ಕಾಡು ಮೇಡು ಎಲ್ಲವೂ ನೆನಪಿಗೆ ಬರುತ್ತದೆ ಎಂದು. ಕೆಲವರಿಗೆ ಆರಾ ವಿಷಯ ಗೊತ್ತಿಲ್ಲ ನೋಡಿ, ಅವರು ಕವಿ ಆರು ಅಂಕುಶಗಳನ್ನು ಇಟ್ಟಾಗ ಬನವಾಸಿಯ ನೆನಪು ಮಾಡಿಕೊಳ್ಳುವನೆಂದು ತಪ್ಪಾಗಿ ಅರ್ಥೈಸಿಬಿಡುತ್ತಾರೆ.  ಆರು ಅಂಕುಶ ಯಾಕೆ ಬೇಕು ಹೇಳಿ? ಒಂದು ಅಂಕುಶ ಇಟ್ಟರೂ ಆನೆಯನ್ನು ಕಂಟ್ರೋಲ್ ಮಾಡಬಹುದು ಎಂದು ಇವರಿಗೆ ಹೇಳುವವರು ಆರು?  ಆರಕ್ಕೆ ಏರಲಿಲ್ಲ, ಮೂರಕ್ಕೆ ಇಳಿಯಲಿಲ್ಲ ಎಂಬ ಗಾದೆಯನ್ನು ಗಮನಿಸಿ. ಇಲ್ಲಿ ಕೂಡಾ ಆರಾ ಪ್ರಸ್ತಾಪ ಇದೆ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಕೆಲವರು ತಮ್ಮ ಆರಾ ಹೆಚ್ಚಿಸಿಕೊಳ್ಳಲು ಫೋಟೋಶಾಪ್ ಇತ್ಯಾದಿ ಬಳಸಿದರೂ ಅವರ ಆರಾ ಹೆಚ್ಚಲಿಲ್ಲ.   ಸದ್ಯ ಆರಾ ತೀರಾ ಕಡಮೆಯಾಗಿ ಮೂರಾಬಟ್ಟೆ ಆಗಲಿಲ್ಲ ಎನ್ನುವುದು ಸಮಾಧಾನಕರ. 


ಪ್ರೋಗ್ರಾಮಿಂಗ್ ಭಾಷೆಗಳಲ್ಲಿ ಅರೇ ಎಂಬ ವಿಸ್ಮಯಕರ ವಿಷಯವೊಂದಿದೆ. ಇಂಟ್ ಉ [೧೦] ಎಂದು ಬರೆದರೆ ಹತ್ತು ಇಂಟಿಜರುಗಳ ಅರೇ. ಇದರೊಳಗಿನ ಇಂಟಿಜರುಗಳನ್ನು ಉ[೧] ಇತ್ಯಾದಿ ಬರೆದು ಆವಾಹಿಸಬೇಕು ಒಂದು, ಎರಡು, ಇವೆಲ್ಲ ಅರೇ ಬೆಟ್ಟುಗಳು.  ಉ[೨] ಎಂದಾಗ ಬೆರಳು ಎರಡನೇ ಇಂಟಿಜರ್ ಕಡೆ ತೋರುತ್ತಿದೆ.  ನೋಡಿ ಮೇಲೆ ತೋರಿಸಿದ ಉ ಅರೇಯಲ್ಲಿ ಹತ್ತೇ ಸಂಖ್ಯೆಗಳು ಇರುವುದರಿಂದ ಬೆಟ್ಟು ಇವನ್ನು ಬಿಟ್ಟು ಹನ್ನೊಂದನೇ ಸಂಖ್ಯೆಯನ್ನು ಆವಾಹಿಸಿದರೆ ಅನರ್ಥ ಕಟ್ಟಿಟ್ಟ ಬುತ್ತಿ. ಪ್ರೋಗ್ರಾಂ ಕೆಟ್ಟು ಕೂಡುವುದು.  ಹೀಗಾಗಿ ಅರೆಬರೆ ಜ್ಞಾನವಿದ್ದವರು ಹೇಗೆ ಮಿಕ್ಸಿಯಲ್ಲಿ ಚಟ್ನಿ ಅರೆಯಲು ಹೋಗಬಾರದೋ ಹಾಗೇ ಅರೆಬರೆ ಜ್ಞಾನವಿದ್ದವರು ಅರೇ ತಂಟೆಗೆ ಹೋದರೆ ಬರೆ ಹಾಕಿಸಿಕೊಳ್ಳುತ್ತಾರೆ.   


ಕೆಲವರು ಅರೇ ಬದಲು ಆರೆ ಎಂದು ಕರೆಯುತ್ತಾರೆ. ಇಲ್ಲಿ ಆ ಅನ್ನುವುದು ಕನ್ನಡದ ಆರು ಎಂಬಲ್ಲಿರುವ ಆ ಅಲ್ಲ. ಅತ್ತ  ಏ ಅಲ್ಲದ ಇತ್ತ ಅಲ್ಲದ ನಡುವಣ ಉಚ್ಚಾರಣೆಯನ್ನು ಕೇಳಿಯೇ ಆನಂದಿಸಬೇಕು. ನಾನು ಹಾಸ್ಟೆಲ್ ಜೀವಿಯಾಗಿ ಓದುತ್ತಿದ್ದ ಸಂದರ್ಭ. ಬೆಳಗ್ಗೆ ಹಾಸ್ಟೆಲಿನಲ್ಲಿ ಯಾರೋ ವಿದ್ಯಾರ್ಥಿ ರೇಡಿಯೋ ಹಚ್ಚಿದ್ದಾನೆ. ಎಲ್ಲರಿಗೂ ಆನಂದವಾಗಲಿ ಎಂಬ ಸದುದ್ದೇಶದಿಂದ ವಾಲ್ಯೂಮ್ ಗರಿಷ್ಠ ಮಟ್ಟದಲ್ಲಿ ಇಟ್ಟಿದ್ದಾನೆ. ದಿಲ್ ಪುಕಾರೇ ಆರೇ ಆರೇ ಆರೇ ಎಂಬ ಯುಗಳಗೀತೆ. ಆರೇ ಆರೇ ಎಂಬುದನ್ನು ಮೂರು ಮೂರು ಸಲ ಯಾಕೆ ಹೇಳಬೇಕೋ! ಕನ್ನಡ ಚಿತ್ರಗೀತೆಗಳಲ್ಲೂ ನೋಡಿ, ಬಾರೇ ಅಂತ ಒಂದು ಸಲ ಯಾರೂ ಕರೆಯೋದಿಲ್ಲ. ಬಾರೇ ಬಾರೇ ಎಂದು ಪದೇ ಪದೇ ಹೇಳಿದರೆ ಮಾತ್ರ ಚಂದದ ಚೆಲುವಿನ ತಾರೆ  ಹೊಳೆಯುವುದು.  ಇನ್ನು ಬೆಸುಗೆ ಬೆಸುಗೆ ಎಂದು ಹೇಳುತ್ತಾ ಹೇಳುತ್ತಾ ಜೀವನವೆಲ್ಲಾ ಸುಂದರ ಬೇಸಗೆ ಮಾಡಿಕೊಂಡವರ ಬೆಸುಗೆ ಎಣಿಕೆ ಇಟ್ಟವರು ಯಾರು?  ಆರೇ ಮೂರೇ ಎಂದು ಹೀಗೆಲ್ಲ ಯೋಚಿಸುತ್ತಿರುವಾಗ ಒಮ್ಮೆಲೇ ಅದೇನೋ ತಾಂತ್ರಿಕ ದೋಷದಿಂದ ಕ್ಯಾಸೆಟ್ ಪ್ಲೇಯರ್ ಮುಳ್ಳು ಎಲ್ಲೋ ಸಿಕ್ಕಿಹಾಕಿಕೊಂಡು ಆರೇ ಆರೇ ಆರೇ ಆರೇ ಎಂದು ಮೂರಲ್ಲ ಆರಲ್ಲ ಮೂವತ್ತಾರು ಸಲ ಪ್ರಸಾರವಾಗಿ ಹೋಯಿತು. ಸದ್ಯ ಅಷ್ಟರಲ್ಲಿ ಕಾಫಿಗೆ ಹೋಗಿದ್ದ ರೇಡಿಯೋ ಆಪರೇಟರ್ ಹಿಂದಿರುಗಿ ಹಾಡು ಮುಂದೆ ಸಾಗಿತು. ಆದರೇನು!  ಹೋಂವರ್ಕ್ ಎಂದು ನಾನು ಬರೆಯಲು ಹೊರಟಿದ್ದ ಪ್ರೋಗ್ರಾಂ ಆರೇ ಇಂಡೆಕ್ಸ್ ಔಟ್ ಆಫ್ ಬೌಂಡ್ ಎಂದು ಕೆಟ್ಟು ಕೂತಿತು. ಛೇ ಅಂದು ನಾನು ಈ ಹಾಡನ್ನು ಕೇಳಿರದೇ ಇದ್ದರೆ ಎಂದು ಎಂದೂ ಪೇಚಾಡುತ್ತಿರುತ್ತೇನೆ. 


ಆರಾ ವಿಷಯ ಹೇಳಲು ಹೊರಟು ಆರೇ ವಿಷಯಕ್ಕೆ ತಿರುಗಿದೆನಲ್ಲ!  ನಾನು ಹಿಂದೊಮ್ಮೆ ಭೇಟಿ ನೀಡಿದ ಒಂದು ಕಾಲೇಜಿನಲ್ಲಿ ಒಬ್ಬ ಪ್ರಾಧ್ಯಾಪಕರಿಗೆ ಆರಾಮಾಪನದಲ್ಲಿ ವಿಶೇಷ ಆಸಕ್ತಿ. ಅವರು ವಿಭಾಗದ ಮುಖ್ಯಸ್ಥರು ಕೂಡಾ. ಮನುಷ್ಯನ ದೇಹದಿಂದ ಹೊರಸೂಸುವ ಕ್ಷೀಣ ಚೈತನ್ಯದ ಅಲೆಗಳನ್ನು ಕೃತಕವಾಗಿ ಹಿಗ್ಗಿಸಿ ಈ ಚೈತನ್ಯದ ಮೊತ್ತ ಎಷ್ಟೆಂದು ಲೆಕ್ಕ ಹಾಕುವ ಒಂದು ಯಂತ್ರವನ್ನು ಈ ಪ್ರೊಫೆಸರ್ ನಿರ್ಮಿಸಿದ್ದರು. ಅದನ್ನು ನನಗೆ ತೋರಿಸಿ ನಿಮಗೆ ಒಪ್ಪಿಗೆ ಇದ್ದರೆ ನಿಮ್ಮ ಆರಾ ಮಾಪನ ಮಾಡುವೆ ಎಂದರು. ನಾನು ಮುಗುಳ್ನಕ್ಕೆ.  ಅವರು ತಮ್ಮ ಜೊತೆಗೆ ಇದ್ದ ಸಹಾಯಕ ಪ್ರಾಧ್ಯಾಪಕನನ್ನು "ಇವನ ಆರಾ ಮೊದಲು ಮಾಪನ ಮಾಡುತ್ತೇನೆ. ನಿಮಗೆ ಯಂತ್ರ ಹೇಗೆ ಕೆಲಸ ಮಾಡುತ್ತದೆ ಅನ್ನೋದು ತಿಳಿಯಲಿ" ಎಂದರು. ಅವರ ಸಹಾಯಕ ಪ್ರಾಧ್ಯಾಪಕನಿಗೆ ಇದು ರೂಢಿ ಇತ್ತೆಂದು ಕಾಣುತ್ತದೆ. ಆರಾ ಮಾಪನಕ್ಕಾಗಿ ತೂಡಬೇಕಾದ ಒಂದು ವಿಶೇಷ ಉಪಕರಣ ಅಳವಾಡಿತ ಡ್ರೆಸ್ ಹಾಕಿಕೊಂಡರು. ಅದರಿಂದ ಬರುವ ತಂತಿಗಳನ್ನು ಒಬ್ಬ ಲ್ಯಾಬ್ ಸಹಾಯಕ ಯಂತ್ರಕ್ಕೆ ಜೋಡಿಸಿದ. ಕೆಲವು ಇಂಗ್ಲಿಷ್ ಚಿತ್ರಗಳಲ್ಲಿ ಎಲೆಕ್ಟ್ರಿಕ್ ಚೇರ್ ಮೇಲೆ ಅಪರಾಧಿಯನ್ನು ಕೂಡಿಸಿ ಕೊಳ ತೊಡಿಸಿ ಸ್ವಿಚ್ ಒತ್ತುವ ದೃಶ್ಯ ತೋರಿಸುತ್ತಾರೆ. ನನಗೆ ಅಂಥದ್ದೆಲ್ಲ ಆಗಲೇ ನೆನಪಾಗಬೇಕೇ? ಆ ಕ್ಷಣದಲ್ಲಿ  ಆ ಸಹಾಯಕ ಪ್ರೊಫೆಸರ್  ಒಬ್ಬ ಅಸಹಾಯಕ ಪ್ರೊಫೆಸರ್ ರೀತಿ ಕಂಡರು. ಅವರು ನನ್ನ ಕಡೆ ನೋಡಿ ಕ್ಷೀಣವಾಗಿ ನಕ್ಕರು.  ನಾನು ಆದಷ್ಟೂ ಧೈರ್ಯ ತಂದುಕೊಂಡು ಮುಂದಿನ ವಿದ್ಯಮಾನವನ್ನು ನಿರೀಕ್ಷಿಸಿದೆ.  ಲ್ಯಾಬ್ ಸಹಾಯಕ ಸ್ವಿಚ್ ಒತ್ತಿದ. ಪುಣ್ಯಕ್ಕೆ ಯಾವ ಅವಘಡವೂ ಘಟಿಸಲಿಲ್ಲ. ಸಹಾಯಕ ಪ್ರೊಫೆಸರನ ಅಂದಿನ ಆರಾ ಎಷ್ಟೆಂದು ಲ್ಯಾಬ್ ಸಹಾಯಕ ಗುರುತು ಹಾಕಿಕೊಂಡ.  ಆರಾಮವಾಗಿದ್ದಾಗ ಆರಾ ಆರಕ್ಕೇರಿ ಮೂಡ್ ಕೆಟ್ಟಿದ್ದರೆ ಮೂರಕ್ಕೆ ಇಳಿಯುತ್ತದೋ ಏನೋ! ನಾನು ಅದನ್ನೆಲ್ಲ ಕೇಳುವ ಮುಂಚೆ ನನಗೂ ಶಿರಸ್ತ್ರಾಣಧಾರಣೆಯಾಯಿತು.  ಸ್ವಿಚ್ ಒತ್ತಿ ನನ್ನ ಆರಾ ಕೂಡಾ ಗುರುತು ಹಾಕಿಕೊಂಡು "ನಿಮ್ಮ ಆರಾ ಸ್ಟ್ರಾಂಗ್ ಆಗಿದೆ" ಎಂದು ಪ್ರೊಫೆಸರ್ ನನಗೆ ತಿಳಿಸಿದರು.  ಸ್ವಲ್ಪ ಹೊತ್ತಿನ ಹಿಂದೆ ನಾವು ಸೇವಿಸಿದ ಸ್ಟ್ರಾಂಗ್ ಕಾಫಿಯೇ ಕಾರಣವಿರಬಹುದು. ಒಂದು ರಿಜಿಸ್ಟರ್ ತಂದು "ನಮ್ಮ ಲ್ಯಾಬ್ ಕುರಿತು ನಿಮ್ಮ ಅನಿಸಿಕೆ ಬರೆಯಿರಿ" ಎಂದು ಕೇಳಿದರು. "ಸಫಲ್ ಹೋಗಿ ತೇರೀ ಆರಾ ..ಧನಾ" ಎಂದು ಬರೆಯಬೇಕೆಂದು ಬಹಳ ಮನಸ್ಸಾದರೂ ನಾನು ಮಾಮೂಲು ಶುಭಾಕಾಂಕ್ಷೆಗಳನ್ನು ಬರೆದು ಸುಮ್ಮನಾದೆ. ಅವರ ಆರಾಧನಾ ಅವರಿಗೆ ಧನವನ್ನು ತಂದುಕೊಟ್ಟಿರಬಹುದು ಎಂದು ಆಶಿಸುತ್ತೇನೆ.  ಜಹಾನ್ ಆರಾಳನ್ನು ನೆನೆದು ಈ ಆರಾಯಣಕ್ಕೆ ಮಂಗಳ ಹಾಡುತ್ತೇನೆ.


ಸಿ. ಪಿ. ರವಿಕುಮಾರ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)