ಬಾ ಹತ್ತರ

 ಬಾ ಹತ್ತರ



ಮಿತ್ರರೊಬ್ಬರು ಕರೆ ಮಾಡಿ ಅವರು ಬೆಳಗಿನ ವಾಕಿಂಗ್ ಹೋಗುವಾಗ ಅರ್ಚಕರು "ಚೀತಾಯಾಪತಯೇ ನಮೋ" ಎಂದು ಮಂತ್ರ ಹೇಳಿದ್ದನ್ನು ವಿವರಿಸಿದರು. ಪ್ರಧಾನಿ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಚೀತಾಗಳನ್ನು ಕಾಡಿಗೆ ಬಿಡುಗಡೆ ಮಾಡಿದ ಸಂದರ್ಭದಲ್ಲಿ ಅರ್ಚಕರು ತಮ್ಮನ್ನು ತಾವೇ ಮರೆತು ಹಾಗೆ ಹೇಳಿರಬಹುದು ಎಂದು ನಾನು ತರ್ಕಿಸಿದೆ.

ಅಂದಹಾಗೆ ನನ್ನ ಮಿತ್ರರು ಹಾರ್ಡ್ ಆಫ್ ಹಿಯರಿಂಗ್.  ಎರಡೂ ಕಿವಿಯಲ್ಲಿ ಗಟ್ಟಿಯಾದ ಚಿನ್ನದ ಇಯರ್ ರಿಂಗ್ ಹಾಕಿಕೊಂಡ ಕಾರಣ ಈ ಹಿಯರಿಂಗ್ ಸಮಸ್ಯೆ ಇದೆ ಎಂದು ನನ್ನ ಸಂದೇಹ.  ಅವರಿಗೆ ಮಂತ್ರ ಸರಿಯಾಗಿ ಕೇಳಿಸಿತೋ ಬಿಟ್ಟಿತೋ! ರಿಟೈರ್ ಆದಮೇಲೆ ಸುಮ್ಮನೇ ಎಲ್ಲದಕ್ಕೂ ಆಕ್ಷೇಪ ತೆಗೆದು ದೂರುವುದು ಅವರ ಸ್ವಭಾವ.  


ಅವರು ಅಷ್ಟಕ್ಕೇ ಸುಮ್ಮನಿರದೆ "ನಾನು ಅಲ್ಲೇ ನಿಂತುಕೊಂಡು ಕೇಳಿಸಿಕೊಂಡೆ. ಇವತ್ತು ಶತನಾಮಾವಲಿಯಲ್ಲಿ ಎಪ್ಪತ್ತೆರಡು ಹೆಸರು ಮಾತ್ರ ಹೇಳಿ ಮಂಗಳಾರತಿ ಮಾಡಿದರು" ಎಂದು ದೂರಿದರು. ನನಗೆ ತಡೆಯಲಾಗದೆ "ನೀವು ತಪ್ಪು ಎಣಿಸದಿರಿ. ನೀವು ತಪ್ಪು ಎಣಿಸಿದಿರೋ ಏನೋ?" ಎಂದು ಅಡ್ಡಬಾಯಿ ಹಾಕಿದೆ. ಅದಕ್ಕೆ ಅವರು ಕುಪಿತರಾಗಿ "ಒಂದೊಂದು ಸಲ ನಮೋ ಅಂದಾಗಲೂ ನಾನು ನೆಲದ ಮೇಲೆ ಗೀಟು ಹಾಕುತ್ತಿದ್ದೆ ಕಣ್ರೀ. ನಾಲಕ್ಕು ಗೀಟು ಆದಮೇಲೆ ಐದನೇ ಗೀಟು ಕ್ರಾಸಾಗಿ ಹಾಕಿ ಐದರ ಗುಂಪು ಮಾಡುತ್ತಿದ್ದೆ. ಹದಿನಾಲ್ಕು ಗುಂಪುಗಳಾದ ಮೇಲೆ ಎರಡು ಗೀಟು ಹಾಕಿದ್ದೆ. ಅಷ್ಟಕ್ಕೇ ಅರ್ಚಕರು ನಿಲ್ಲಿಸಿ ಗಣಗಣ ಅಂತ ಗಂಟೆ ಬಾರಿಸಿ ಮಂಗಳಾರತಿ ಶುರು ಮಾಡಿದರು!" ಎಂದು ವಿವರಣೆ ಕೊಟ್ಟರು. ನಾನು ಸುಮ್ಮನಿರದೆ "ನೋಡಿ ಒಂದೊಂದು ಸಲ ಅರ್ಚಕರಿಗೆ ಕೂಡಾ ಸ್ತೋತ್ರಗಳು ಮರೆತು ಹೋಗುತ್ತವೆ. ಅದೇ ರೀತಿ ಸಂಗೀತ ಹಾಡುವವರಿಗೂ ಒಂದೊಂದು ಸಲ ಮುಂದಿನ ಸಾಲು ಏನು ಅಂತ ಮರೆತು ಹೋಗತ್ತೆ. ಆವಾಗ ಅವರು ಹಿಂದಿನ ಸಾಲನ್ನೇ ಪದೇ ಪದೇ ಹೇಳುತ್ತಿರುತ್ತಾರೆ. ಮೊನ್ನೆ ಒಂದು ಕಚೇರಿಯಲ್ಲಿ ಒಬ್ಬರು ವಾತಾಪಿ ಗಣಪತಿಂ ಭಜೇಹಂ ಹೇಳಲು ಪ್ರಾರಂಭಿಸಿದಾಗ ಹೀಗೇ ಆಯಿತು. ಪಾಪ ಎರಡನೇ ಸಾಲು ಮರೆತು ಅದೆಷ್ಟು ಸಲ ಅದೆಷ್ಟು ರೀತಿಯಲ್ಲಿ ವಾತಾಪಿ ಗಣಪತಿಂ ಭಜೇಹಂ ಅಂತ ಹೇಳಿದರೋ! ಕೊನೆಗೆ ಅದೇನೋ ಇದ್ದಕ್ಕಿದ್ದಂತೆ ಅವರಿಗೆ ಮುಂದಿನ ಸಾಲು ಫ್ಲ್ಯಾಷ್ ಆಗಿ Um ವಾರಣಾಸ್ಯಂ ವರಪ್ರದಂ ಅಂತ ಮುಂದುವರೆಸಿದರು. ಅಷ್ಟೇನೂ ವಯಸ್ಸು ಕೂಡಾ ಆಗಿಲ್ಲ. ಪಾಪ ಮರೆವು, ಏನು ಮಾಡ್ತೀರಿ?" ಎಂದು ಸಮಾಧಾನ ಮಾಡಿದೆ.


ಅವರು "ನಮ್ಮ ಅರ್ಚಕರಿಗೆ ಏನೇನೂ ಮರೆವಿಲ್ಲ. ನಾನು ಕೊಡದೇ ಮರೆತಿದ್ದ ದಕ್ಷಿಣೆಯನ್ನು ಜ್ಞಾಪಿಸಿ ಜ್ಞಾಪಿಸಿ ಕೊನೆಗೆ ಆಜ್ಞಾಪಿಸಿ ತೊಗೊಂಡೇ ತೀರಿದರು"


"ಅಯ್ಯೋ ಪಾಪ, ತೀರಿಹೋದರೇ?"


"ಅಯ್ಯೋ ಇಲ್ರೀ.  ಬಿಡ್ತು ಅನ್ನಿ."


"ಬಿಡ್ತು."


"ತೊಂಗೊಂಡೇ ತೀರುತ್ತೇನೆ ಅನ್ನೋಲ್ವಾ, ವಿಲ್ ಟೇಕೇ ಟೇಕ್ ಅನ್ನೋ ಹಾಗೆ?" ಎಂದು ತೇಕುತ್ತಾ ಉತ್ತರಿಸಿದರು. ಅವರಿಗೆ ದಮ್ಮು ಕಾಯಿಲೆ ಇದೆ. ಆ ದೇಖೇ ಜರಾ ಕಿಸ್ಮೇ  ಕಿತನಾ ಹೈ ದಂ ಎಂದು ಯಾರಾದರೂ ಸವಾಲು ಹಾಕಿದರೆ ಇವರಿಗೆ ಖಂಡಿತಾ ಪ್ರೈಜ್ ಬರತ್ತೆ. ದಂ ಲಗಾಕೇ ಐಸಾ ಅನ್ನುವ ಕಡೆ ಇವರು ಇದ್ದಾಗ ಎಳೆಯುವವರ ಉತ್ಸಾಹ ಏರುತ್ತದೆ.


ಅವರು ಅಷ್ಟಕ್ಕೇ ನಿಲ್ಲಿಸದೇ "ನೋಡಿ, ನನ್ನ ಹೆಂಡತಿ ಇವತ್ತು ಏನು ಹೇಳಿದಳು ಗೊತ್ತಾ?" ಎಂದು ಪ್ರಾರಂಭಿಸಿದಾಗ ಅವರ ಮುಖ ಸ್ವಲ್ಪ ಕೆಂಪೇರಿದ್ದನ್ನು ಗಮನಿಸಿದೆ.  ಅವರ ಪತ್ನಿ ಅವರಿಗೆ ಏನು ಹೇಳಿರಬಹುದು ಎಂದು ಯೋಚಿಸಿದೆ.  ಬರೋವಾಗ ಬಟಾಣಿ ತನ್ನಿ,  ಫೋನ್ ತೊಗೊಂಡು ಹೋಗೋದು ಮರೀಬೇಡಿ, ಇನ್ಹೇಲರ್  ತೊಗೊಂಡ್ರಾ. ನನ್ನ ಯಾವ ಊಹೆಯೂ ಸರಿಯಾಗಿರಲಿಲ್ಲ.  ಕೊನೆಗೆ ಅವರೇ "ಬಾ ಹತ್ತರ ಅಂದಳು ಕಣ್ರೀ!" ಎಂದು ಪಿಸುಮಾತಿನಲ್ಲಿ ನುಡಿದರು. ಈಗ ನನ್ನ ಕೆನ್ನೆ ಕೆಂಪಾಯಿತು.


"ಇದೇನೇ ಇವತ್ತು ಬಾ ಹತ್ತರ ಅಂತ ರೋಮಾನ್ಸ್ ಎಂದು ಕೇಳೇ ಬಿಟ್ಟೆ."


ಅಯ್ಯೋ ಇದನ್ನೆಲ್ಲಾ ಇವರು ನನಗೆ ಹೇಳಬೇಕಾ ಎಂದು ನಾನು ಚಡಪಡಿಸಿದೆ.


"ಅವಳು ನಗುತ್ತಾ ಅಲ್ರೀ ಬಾಹತ್ತರ ನಮ್ಮ ಪ್ರಧಾನಿಗೆ ಅನ್ನೋಣ ಅಂತಿದ್ದೆ. ನಿಮಗೆ ಬಾ ಹತ್ತರ ಅಂತ ಕೇಳಿತು, ಅಂದ್ಲು. ಛೀ!  ಪ್ರಧಾನಿಗೆ ಯಾಕೆ ಬಾ ಹತ್ತರ ಅನ್ನೋಕೆ ಹೋಗ್ತೀಯೇ! ಅವರಿಗೆ ವಯಸ್ಸೆಷ್ಟು ಗೊತ್ತಾ! ಅಂತ ರೇಗಿದೆ. ನಗುತ್ತಾ ಎಷ್ಟು ಹೇಳಿ ಅಂದಳು. ಅದಕ್ಕೆ ಬಾಹತ್ತರ ಅಂದೆ. ನಾಚಿಕೊಂಡು ಓಡಿಹೋದಳು."


ನನಗೆ ಬೇಂದ್ರೆ ನೆನಪಾದರು.  ಇದೆಲ್ಲ ಕೇಳಿ ನಾಚಿಕೆಯಾಗಿ ನಾನೂ ಓಡಿಬಂದೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)