ಅಕ್ಕಿಯೊಳು ಅನ್ನವನು (ಹರಟೆ)

 ಅಕ್ಕಿಯೊಳು ಅನ್ನವನುಮೊದಲಾರು ಕಂಡವರು ಎಂದು ಹೋಗಿಹೋಗಿ  ಮಂಕುತಿಮ್ಮನನ್ನು ಕೇಳಿದರೆ ಅದು ತೀರಾ ಹೈ ಎಕ್ಸ್ಪೆಕ್ಟೇಶನ್ ಎನಿಸುವುದಿಲ್ಲವೇ? ಅನ್ನವನ್ನು ಅಕ್ಕಿಯಿಂದ ಮಾಡುತ್ತಾರೆ ಎಂದೇ ಎಷ್ಟೋ ಜನರಿಗೆ ತಿಳಿಯದು. ರೈಸ್ ಅಂಡ್ ಶೈನ್ ಎಂದಷ್ಟೇ ಸುಲಭವಾಗಿ ಸ್ವಿಗ್ಗಿಯವನು ಹುಗ್ಗಿಯನ್ನು ಅಥವಾ ಯೆಲ್ಲೋ ಕಲರ್ಡ್ ರೈಸ್ ಅನ್ನೂ ಮತ್ತು ಜೋಮಾಟೋದವನು ಟೊಮಾಟೋ ಭಾತ್ ಅಥವಾ ರೆಡ್ ಕಲರ್ಡ್ ರೈಸ್ ಅನ್ನೂ ತಂದುಕೊಡಬಲ್ಲ ಈ ಯುಗದಲ್ಲಿ ಅವೇಕ್ ಅರೈಸ್ ಸ್ಟಾಪ್ ನಾಟ್ ಅಂಟಿಲ್ ಯು ಫೈಂಡ್ ಎ ದರ್ಶಿನಿ ಎಂಬ ದಾರ್ಶನಿಕ ಮಾತುಗಳು ಸಪ್ಪೆ ಎನ್ನಿಸುವುದು ಸಹಜ. ಅಮೆರಿಕಾದಲ್ಲಿ ಮಕ್ಕಳಿಗೆ ಹಾಲು ಎಲ್ಲಿಂದ ಬರುತ್ತದೆ ಎಂದು ಕೇಳಿದಾಗ ಸೂಪರ್ ಮಾರ್ಕೆಟ್ ಕ್ಯಾನುಗಳಲ್ಲಿ ಎಂಬ ಉತ್ತರ ಬಂದದ್ದು ಹಳೆಯ ಸುದ್ದಿ. ಕ್ಯಾನಿನೊಳು ಹಾಲನ್ನು ಮೊದಲಾರು ಕಂಡವರು ಎಂದು ಕೇಳುವ ಅಗತ್ಯವೇ ಇಲ್ಲ. ಬೆಂಗಳೂರಿನ ಮಕ್ಕಳಿಗೂ ಹಾಲಿನ ಪ್ರಶ್ನೆ ಕೇಳಿದರೆ ಅದು ಪ್ಯಾಕೆಟ್ನಲ್ಲಿ ಬರುತ್ತದೆ ಎಂಬ ಉತ್ತರ ಬರಬಹುದು.  "ಅಜೀ ಕಹೋ ಕ್ಯಾ ಹಾಲ್ ಹೈ? ತುಮ್ ಭೀ ನ ಸಮಝೆ ಕಮಾಲ್ ಹೈ" ಎಂದು ಗೀತಾ ದತ್ ಬಹಳ ಹಿಂದೆಯೇ ಹಾಡಿದರು. ಇದರ ಅರ್ಥ ಹೀಗೆ. ಮಗು ಅಜ್ಜಿಯನ್ನು "ಅಜ್ಜೀ ಹಾಲು ಎಂದರೇನು?" ಎಂದು ಕೇಳುತ್ತಿದೆ.  ಅಜ್ಜಿಯು "ನಿನಗೆ ಗೊತ್ತಿಲ್ಲವೇ ಅದೊಂದು ಮ್ಯಾಜಿಕ್" ಎಂದು ಉತ್ತರಿಸುತ್ತಾಳೆ. ನೀರು ಕುಡಿದ ಹಸು ಹಾಲ್ ಎಫೆಕ್ಟ್ ಮೂಲಕ ಹಾಲಾಗಿ ಮಾರ್ಪಡಿಸಿ  ಕೊಟ್ಟ ಹಾಲನ್ನು ಹಾಲಿಗನು ಪ್ಲಸ್ ಎಚ್ ಟು ಓ ಮೂಲಕ ಹೆಚ್ ಮಾಡಿ ಸುರಿದ  ಪಯೋನೀರಲ್ಲಿ ಮ್ಯಾಜಿಕ್ ಕಂಡವಳು ಅಜ್ಜಿಯೇ. ಮಂಕುತಿಮ್ಮನಿಗೆ ಇದು ನೆನಪಿರಲಿ.

ಸರಿ, ಈಗ ಡಿವಿಜಿ ಅವರ ಕಗ್ಗಕ್ಕೆ ಹಿಂತಿರುಗೋಣ. ಅವರು ಮುಂದುವರೆದು ಮಂಕುತಿಮ್ಮನಿಗೆ "ಅಕ್ಕರದ ಬರಹಕ್ಕೆ ಮೊದಲಿಗನಾರು?" ಎಂದು ಅಕ್ಕರೆಯಿಂದ ಕೇಳುತ್ತಾರೆ. ಅಲ್ಲ ರೀ, ಆಗ ಬರಹ ತಂತ್ರಾಂಶ ಇರಲೇ ಇಲ್ಲವಲ್ಲ. ತಮ್ಮ ತಪೋಶಕ್ತಿಯಿಂದ ಅವರು ಮುಂದೊಮ್ಮೆ ಬರಹ ಎಂಬ ಒಂದು ಸಾಫ್ಟ್ವೇರ್ ಹುಟ್ಟುತ್ತದೆ ಎಂದು ತಿಳಿದು ಕೊಂಡಿದ್ದರೇನೋ! ಪಾಪ ಇದು ಮಂಕುತಿಮ್ಮನಿಗೆ ಹೇಗೆ ತಿಳಿದೀತು! ಬರಹವನ್ನು ಮೊದಲು ಬಳಸಿದ್ದು ಯಾರು ಎಂಬ ಪ್ರಶ್ನೆಗೆ ಉತ್ತರ ಬಹಳ ಕಷ್ಟ. ಬರಹ ಸೃಷ್ಟಿಸಿದ ಬ್ರಹ್ಮರಿಗೆ ಕೂಡಾ ಇದನ್ನು ದಾಖಲಿಸಿ ಇಡಬೇಕೆಂದು ಹೊಳೆಯಲಿಲ್ಲ. ಅವರನ್ನು ಕೇಳಿದರೆ ಆ ಸಾಫ್ಟ್ವೇರ್ ಟೆಸ್ಟ್ ಮಾಡಿದವರ ಹೆಸರನ್ನು ತಿಳಿಸಿ ಅವರೇ ಬರಹದ ಪ್ರಥಮ ಬಳಕೆದಾರರು ಎಂದು ಉತ್ತರಿಸಿದರು.  ಇದೆಲ್ಲ ಪಾಪ ಮಂಕುತಿಮ್ಮನಿಗೆ ಹೇಗೆ ತಿಳಿದಿರಲು ಸಾಧ್ಯ! ಅವನ ಮೊಮ್ಮಕ್ಕಳು ಈಗ ಐಟಿ ಕಂಪನಿಯಲ್ಲಿ ಉದ್ಯೋಗದಲ್ಲಿ ಇದ್ದಾರೆಂದು ತಿಳಿದು ಅವರಿಗೆ  ಫೋನ್ ಮಾಡಿದೆ. ಅವರು "ನಾವಾಡುವ ನುಡಿಯೇ ಕನ್ನಡ ನುಡಿ!" ಎಂದು ಹಾಡಿ ತಾವು ನುಡಿ ಸಾಫ್ಟ್ವೇರ್ ಬಳಸುವುದಾಗಿ ತಿಳಿಸಿದರು. ಓಹ್ ಅದು ಹೇಗೆ ಎಂದು ನಾನು ಪ್ರಶ್ನಿಸಲಾಗಿ "ಸರ್, ನಿಮ್ಮ ಪ್ರಶ್ನೆ ಸಾಧುವಾದದ್ದೆ. ನೋಡಿ ಒಂದು ದಿನ ನಾವು ನಮ್ಮ ಮನೆ ಹತ್ತಿರದಲ್ಲೇ ಇರೋ ಎಂ ತಿಮ್ಮಾಸ್ ರೆಸ್ಟೋರೆಂಟಿಗೆ ಹೋಗಿದ್ದಾಗ ಅಲ್ಲಿ ಸರ್ವ್ ಮಾಡಿದವರು ನಮಗೆ ನುಡಿ ಹೇಳಿಕೊಟ್ಟರು. ಸರ್ವರೊಳಗೊಂದು ನುಡಿ ಕಲಿತು ನಾವು ವಿದ್ಯೆಯ ಪರ್ವತವೇ ಆದೆವು" ಎಂದು ಉತ್ತರಿಸಿದರು. ನಂತರ ಎಂ ತಿಮ್ಮಾಸ್ ರೆಸ್ಟೋರೆಂಟ್ನಲ್ಲಿ ಸಿಕ್ಕುವ ವಿವಿಧ ತಿಂಡಿಗಳ ಬಗ್ಗೆ ಡಿವಿಜಿ ಅವರಷ್ಟೇ ಸ್ವಾರಸ್ಯವಾಗಿ ತಿಳಿಸಿಕೊಟ್ಟು ಆ ಸ್ಥಳದ ಮ್ಯಾಪನ್ನು ವಾಟ್ಸಾಪ್ ಮೂಲಕ ರವಾನಿಸಿದರು.


"ಲೆಕ್ಕವಿರಿಸಿಲ್ಲ ಜಗ ತನ್ನದೇ ಬಂಧುಗಳ" ಎಂದು ಡಿವಿಜಿ ಬೇಸರಿಸಿಕೊಂಡಿದ್ದಾರೆ.  ನಿಜ. ಬರಹ, ನುಡಿ ಇವನ್ನೆಲ್ಲ ತಯಾರಿಸಿದವರ ಹೆಸರನ್ನೂ ನಾವು ಬರೆದಿಟ್ಟುಕೊಂಡಿಲ್ಲವಲ್ಲ. ಯಾರು ಮೊದಲು ಕನ್ನಡ ಫಾಂಟ್ ಮಾಡಿದವರು? ಯಾರು ಕನ್ನಡಕ್ಕೆ ಯೂನಿಕೋಡ್ ಕೊಟ್ಟವರು?  ಹೀಗೆ ಒಂದು ಪಟ್ಟಿಯನ್ನೇ ಮಾಡಬಹುದು.  ಹಾಗೆ ನೋಡಿದರೆ ಲೆಕ್ಕ ಇರಿಸುವುದು ಇಂದು ಎಂದಿಗಿಂತ ಸುಲಭ.  ಎಲ್ಲೆಲ್ಲೂ ಕ್ಲೌಡ್ ಇರುವಾಗ ಲೆಕ್ಕ ಇರಿಸಲೇನು ಕಷ್ಟ?  ಕಷ್ಟ ಇರುವುದು ಬಂಧುಗಳ ಲೆಕ್ಕ ಇಡುವುದರಲ್ಲಿ.  ಬಂಧುಗಳು ಎನಗಿಲ್ಲ ಬದುಕಿನಲಿ ಸುಖವಿಲ್ಲ ಎಂದು ನೊಂದುಕೊಂಡು ಹೇಳಿದರೂ ಜಗತ್ತಿನಲ್ಲಿ ಬಂಧುಗಳ ಕೊರತೆ ಇಲ್ಲ. ಜಗತ್ತು ತನ್ನ ಬಂಧುಗಳ ಲೆಕ್ಕ ಇಡಲು ಹೊರಟರೆ ಬಹಳ ದೊಡ್ಡ ಪಟ್ಟಿಯೇ ಆಗುತ್ತದೆ. ಎಲ್ಲಿಂದ  ಪ್ರಾರಂಭಿಸಬೇಕು ಎನ್ನುವುದೇ ಒಂದು ದೊಡ್ಡ ವಿವಾದ. ಮನುವಿನಿಂದಲೋ, ಆಡಂ ಮತ್ತು ಈವ್ ನಿಂದಲೋ, ಆದಮ್ ಮತ್ತು ಹವ್ವಾನಿಂದಲೋ ಎಂದೇ ತಿಳಿಯದೇ ಡೇಟಾ ಬೇಸ್ ಇಡುವುದನ್ನು ಜಗತ್ತು ಬಿಟ್ಟುಬಿಟ್ಟಿದೆ.   


"ದಕ್ಕುವುದೆ ಜಸ ನಿನಗೆ ಮಂಕುತಿಮ್ಮ?"  ಇದೇನು ಕವಿ ಹೀಗೆ ಕೇಳುತ್ತಿದ್ದಾರೆ! "ನಿನಗೆ ಯಶಸ್ಸು ಸಿಕ್ಕುವುದೇ ಮಂಕುತಿಮ್ಮ?" ಎಂದಾಗ ಯಾವುದರಲ್ಲಿ ಯಶಸ್ಸು ಎಂಬುದನ್ನು ಕವಿ ಗುಪ್ತವಾಗಿ ಇಟ್ಟಿದ್ದಾರೆ. ಮಂಕುತಿಮ್ಮ ಇಷ್ಟೊಂದು ಯಶಸ್ಸು ಗಳಿಸುತ್ತಾನೆ ಎಂದು ಕವಿಗೆ ಗೊತ್ತಿರಲಿಲ್ಲ.  ಕಗ್ಗದಲ್ಲಿ ಇರುವ ಒಂದೊಂದು ಚೌಪದಿಗೂ ಪುಟಗಟ್ಟಲೆ ವ್ಯಾಖ್ಯಾನ ಬರೆದು ದಪ್ಪ ದಪ್ಪ ಪುಸ್ತಕಗಳನ್ನು ವಿಮರ್ಶಕರು ಪ್ರಕಟಿಸಿ ಬಿಟ್ಟಿದ್ದಾರೆ. ಯಾವುದೇ ಪ್ರಬಂಧ ತೆಗೆದುಕೊಳ್ಳಿ, ಅಲ್ಲಿ ಮಂಕುತಿಮ್ಮ ಇಲ್ಲದೇ ಇದ್ದರೆ ಅದು ಪ್ರಬಂಧವೇ ಅಲ್ಲ ಎನ್ನುವಂತಾಗಿದೆ. ಭಾಷಣದಲ್ಲಿ ತಿಮ್ಮನ ಪ್ರಸ್ತಾಪ ಬಾರದಿದ್ದರೆ ಅದು ಅಪೂರ್ಣ. ಅಂಥ ಭಾಷಣ ಯಾರಾದರೂ ಮಾಡಿದರೆ ಜನ ಚಪ್ಪಾಳೆ ಹೊಡೆಯುವುದು ಮರೆತು ತಿಮ್ಮನ ಸಾಲಿಗಾಗಿ ಕಾಯುತ್ತಾ ಕೂತಿರುತ್ತಾರೆ.  ಇನ್ನು "ಎಂ ತಿಮ್ಮಾಸ್ ರೆಸ್ಟೋರೆಂಟ್" ಯಶಸ್ಸು ಏನು ಕಡಿಮೆಯೇ? ರಸವತ್ತಾದ ಊಟ ಅಲ್ಲಿ ಸಿಕ್ಕುತ್ತದೋ ಇಲ್ಲವೋ, ಜಸವತ್ತಾದ ಹೆಸರಂತೂ ಇದೆ, ಬಿಡಿ.   ಒಂದೇ ಕೊರಗು ಎಂದರೆ ಅದಕ್ಕೆ ಮಂಕುತಿಮ್ಮಾಸ್ ಎಂದು ನಾಮಕರಣ ಮಾಡದೆ ಎಂ. ತಿಮ್ಮಾಸ್ ಎಂದು ಮೊಟಕು ಮಾಡಿರುವುದು.  ಎಂ ಎಂಬುದನ್ನು ಮ್ಯಾಕ್ ಡಾನಲ್ಡ್ ರೀತಿಯ ಎಂ ಬರೆಯಲು ಹಾಗೆ ಮಾಡಿದರೆ? ಅಥವಾ ಮಂಕು ಎಂಬ ಪದ ನೋಡಿ ಜನ ಬಾರದೇ ಹೋದಾರು ಎಂಬ ಭಯವೇ? "ದ ಮಂಕ್ ಹೂ ಸೋಲ್ಡ್ ಸಮ್ ವನ್ಸ್ ಫೆರಾರಿ ಅಂಡ್ ವೆಂಟ್ ಪರಾರಿ" ಪುಸ್ತಕದ ಜನಪ್ರಿಯತೆ ಕಂಡವರಿಗೆ ಮಂಕ್ ಪದವು ಖಂಡಿತಾ ಮಂಕಾಗಿ ಕಾಣುತ್ತಿರಲಿಲ್ಲ.  ಮೇಲೆ ಹೇಳಿದ ಪುಸ್ತಕದಲ್ಲಿ ಉಲ್ಲೇಖಗೊಂಡ ಮಂಕನು ನಮ್ಮ ತಿಮ್ಮನೇ ಎಂಬ ರಹಸ್ಯ ಬಯಲಾದೀತು ಎಂದು ಅವರು ಮಂಕನ್ನು ಎಂ ಮಾಡಿರಲು ಸಾಧ್ಯ.  ನಮ್ಮ ಕನ್ನಡಿಗರು ಅಭಿಮಾನ ಶೂನ್ಯರು ಎಂದು ಅನೇಕರು ಹೇಳುತ್ತಲೇ ಬಂದಿದ್ದಾರೆ. ಎಲ್ಲೂ "ಮಂಕುತಿಮ್ಮ ದರ್ಶಿನಿ"ಯಾಗಲಿ, "ತಿಮ್ಮನ ತಿಂಡಿ"ಯಾಗಲಿ ನಿಮ್ಮ ಕಣ್ಣಿಗೆ ಬಿದ್ದಿದೆಯೇ? ಇಲ್ಲ, ಇಲ್ಲ, ಇಲ್ಲ.  ಬೇಕಾದರೆ ಆಕ್ಟರ್ ಹೆಸರಿನಲ್ಲಿ ದರ್ಶನ ದರ್ಶಿನಿ, ಯಶ್ ದರ್ಶಿನಿ ಇತ್ಯಾದಿ ಹೆಸರು ಇಟ್ಟಾರು. ಹೋಗಲಿ ಆದದ್ದು ಆಯಿತು. ಇನ್ನು ಮುಂದಾದರೂ ತಿಮ್ಮನಿಗೆ ಪೂರ್ತಿ ಜಸವು ಸಿಕ್ಕಲಿ ಎಂದು ಹಾರೈಸುತ್ತಾ ನನ್ನ ನಾಲ್ಕು ಮಾತುಗಳನ್ನು ಮುಗಿಸುತ್ತೇನೆ.  


(ಡಿವಿಜಿ ಕ್ಷಮಿಸಲಿ.)


ಸಿ. ಪಿ. ರವಿಕುಮಾರ್

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)