ಮೂಷಕದ ಬೇಟೆ

 ಟೀಚರ್ - ಯಾವಾಗಲೂ ಟೀಗಾಗಿ ಅತ್ತಿತ್ತ ಚಲಿಸುತ್ತಿರುವವನೇ ಟೀಚರ್.  ಹೇಗೆ ನೀರಿನಲ್ಲಿ ಚಲಿಸುವ ಪ್ರಾಣಿಯು ಜಲಚರವೋ, ಆಕಾಶದಲ್ಲಿ ಚಲಿಸುವ ಪಕ್ಷಿಯು ಖೇಚರವೋ, ಟೀಗಾಗಿ ಓಡಾಡುವ ವ್ಯಕ್ತಿಗಳು ಟೀಚರರು.


ನಾನು ಐಐಟಿ ಸೇರಿದ ಹೊಸತರಲ್ಲಿ ಟೀ ಕುಡಿಯಲು ಪಕ್ಕದಲ್ಲಿದ್ದ ಜಿಯಾ ಸರಾಯ್ ಎಂಬ "ಹಳ್ಳಿ"ಗೆ ಹೋಗುತ್ತಿದ್ದೆ.  ದೆಹಲಿಯಲ್ಲಿ ಅತ್ಯಂತ ಆಧುನಿಕ ಎನ್ನಿಸಿಕೊಳ್ಳುವ ಏರಿಯಾಗಳ ನಡುವೆ ಇಂಥ ಹಳ್ಳಿಗಳು ಸಿಕ್ಕುತ್ತವೆ.  ಆಧುನಿಕ ಏರಿಯಾಗಳಿಗೆ ತರಕಾರಿಯ ಹಣ್ಣು ಇತ್ಯಾದಿಗಳನ್ನು ಪೂರೈಸಲು, ಮನೆಗೆಲಸಕ್ಕೆ ಆಳುಗಳನ್ನು ಪೂರೈಸಲು ಇಂಥ ಹಳ್ಳಿಗಳು ಬೇಕೆಂದು ದೆಹಲಿಯನ್ನು ಪ್ಲಾನ್ ಮಾಡಿದವರ ಮುಂದಾಲೋಚನೆ ಇರಬಹುದು. ಜಿಯಾ ಸರಾಯಿಯಲ್ಲಿದ್ದ ಲಕ್ಕಿ ರೆಸ್ಟೋರೆಂಟ್ ಐಐಟಿಯ ಸಂಶೋಧನಾ ವಿದ್ಯಾರ್ಥಿಗಳಿಗೆ ಮತ್ತೊಂದು ತಂಗುದಾಣವಾಗಿತ್ತು. ಹಳ್ಳಿಯಲ್ಲಿದ್ದ ಅನೇಕ ಪೀಜೀ ಹಾಸ್ಟೆಲುಗಳಲ್ಲಿ ತಂಗಿದ್ದ ಯುವಕ ಯುವತಿಯರು ಐಐಟಿಯ ಲೈಬ್ರರಿಯಲ್ಲಿ ಬಂದು ಓದಿಕೊಳ್ಳುವುದು ಸಾಮಾನ್ಯವಾಗಿತ್ತು.  ನನ್ನ ವಿದ್ಯಾರ್ಥಿಗಳೊಂದಿಗೆ ನಾನು ಲಕ್ಕಿ ರೆಸ್ಟೋರೆಂಟಿಗೆ ಹೋಗಿ ಚಹಾ ಕುಡಿಯುವುದು ವಾಡಿಕೆಯಾಗಿತ್ತು.  ಸಂಶೋಧನೆ ಕುರಿತು ವಿಚಾರ ವಿನಿಮಯ ನಡೆಸಲು ಕೂಡಾ ಲಕ್ಕಿ ರೆಸ್ಟೋರೆಂಟ್ ಸೂಕ್ತ ಸ್ಥಳವಾಗಿತ್ತು. 

ಮುಂದೆ ನಾನು ನಮ್ಮ ಡಿಪಾರ್ಟ್ಮೆಂಟ್ನನಲ್ಲಿರುವ ಟೀ ಕ್ಲಬ್ ಸದಸ್ಯನಾದ ಮೇಲೆ ಲಕ್ಕಿ ರೆಸ್ಟೋರೆಂಟಿಗೆ ಹೋಗುವುದು ನಿಂತಿತು.  ಎಲ್ಲ ಡಿಪಾರ್ಟ್ಮೆಂಟ್ಗಗಳಲ್ಲೂ ಇರುವ ಹಾಗೆ ಐಐಟಿಯ ಎಲೆಕ್ಟ್ರಿಕಲ್ ಡಿಪಾರ್ಟ್ಮೆಂಟಿನಲ್ಲಿ ಕೂಡಾ ಒಂದು ಟೀ ಕ್ಲಬ್ ಇತ್ತು. ಕ್ಲಾಸಿಗೆ ಹೋಗುವ ಮುನ್ನ ಚೈತನ್ಯಕ್ಕಾಗಿ ಅಥವಾ/ಮತ್ತು ಪಾಠ ಮುಗಿಸಿದ ಮೇಲೆ ಮರುಚೈತನ್ಯಕ್ಕಾಗಿ ಟೀಚರರಾಗಿ ಈ ಕ್ಲಬ್ಬಿಗೆ ಬರುವವರು ಹಲವು ಹತ್ತು ಜನ. ದೆಹಲಿಯ ಚಳಿಯಲ್ಲಂತೂ ಎಷ್ಟು ಟೀ ಕುಡಿದರೂ ಸಾಲದು.  ಯಾರಾದರೂ ಒಬ್ಬರು ಮುಂದಾಗಿ ಸೇರಿದ ಸಮಸ್ತರಿಗೂ ಟೀ ಮಾಡುವುದು ರೂಢಿ. ಹೀಗೆ ಕೂತಾಗ ಅಲ್ಲಿ ಚರ್ಚೆಯಾಗದ ವಿಷಯವೇ ಇಲ್ಲ.   ಕೆಲವರು ರಾಜಕೀಯ ಚರ್ಚಿಸುವರು. ಕೆಲವರು ತಮ್ಮ ಕ್ಲಾಸಿನಲ್ಲಿ ನಡೆದ ಸ್ವಾರಸ್ಯವನ್ನು ಹೇಳುವರು. ಕೆಲವೊಮ್ಮೆ ಗಂಭೀರ ವಿದ್ವತ್ಪೂರ್ಣ ಚರ್ಚೆಗಳು ನಡೆಯುವುವು.

ಟೀ ಮಾಡಲು ಬೇಕಾದ ಚಹಾ ಪುಡಿ ಇತ್ಯಾದಿಗಳಿಗಾಗಿ ಸದಸ್ಯರು ಆಗಾಗ ಹಣ ನೀಡುತ್ತಿದ್ದೆವು.  ಆದರೆ ಅಂಗಡಿಯಿಂದ ಎಲ್ಲವನ್ನೂ ತಂದು ಇಡುತ್ತಿದ್ದದ್ದು ನಮ್ಮ ಸಹೋದ್ಯೋಗಿ ವಿಶ್ವೇಶ್ವರನ್. ಅವರ ಹೆಸರನ್ನು ವಿಘ್ನೇಶ್ವರನ್ ಎಂದು ಅಪಾರ್ಥ ಮಾಡಿಕೊಂಡಿತೋ ಏನೋ ಒಂದು ಮೂಷಕವು ನಮ್ಮ ಟೀ ಕ್ಲಬ್ಬಿಗೆ ಅಯಾಚಿತ ಅತಿಥಿಯಾಗಿ ಬರತೊಡಗಿತು.  ಐಐಟಿಯಲ್ಲಿ ಇಲಿ ಮತ್ತು ನಾಯಿಗಳ ಕಾಟ ಇರುವುದು ನಿಮಗೆ ತಿಳಿದಿರಲಾರದು. ಕೆಲವರಂತೂ ಇಲಿನಾಯ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಎಂದರೆ ನಮ್ಮ ಐಐಟಿಯೇ ಎಂದುಕೊಂಡಿದ್ದಾರೆ. 

ನಾನು ಐಐಟಿ ಸೇರಿದ ಹೊಸತರಲ್ಲಿ ನನ್ನ ಆಫೀಸ್ ಬಾಗಿಲನ್ನು ತಟ್ಟಿದ ನಮ್ಮ ಡಿಪಾರ್ಟ್ಮೆಂಟಿನ ಒಬ್ಬ ಲ್ಯಾಬ್ ಟೆಕ್ನಿಷಿಯನ್ "ಸರ್ ಜೀ, ತೊಗೊಳ್ಳಿ ವೈಷ್ಣವದೇವಿ ಪ್ರಸಾದ" ಎಂದು ಕೊಟ್ಟುಹೋದ ಪ್ಯಾಕೆಟ್ಟನ್ನು ನನ್ನ ಮೇಜಿನ ಮೇಲಿಟ್ಟು ಹೋಗಿದ್ದೆ.  ಮರುದಿನ ನೆಲದ ಮೇಲೆಲ್ಲಾ ಪ್ರಸಾದದ ಚೂರುಗಳು ಕಂಡವು.  ಅದು ಪೈಪುಗಳ ಮೂಲಕ ಓಡಾಡುವ ಮೂಷಕದ ಕೆಲಸ ಎಂದು ನನ್ನ ಲ್ಯಾಬ್ ಅಸಿಸ್ಟೆಂಟ್ ನನಗೆ ತಿಳಿಸಿ ಹೇಳಿದ.  ಐಐಟಿಯ ಲ್ಯಾಬುಗಳಲ್ಲಿ ಕೆಲವು ವಿದ್ಯರ್ಥಿಗಳು ಇಡೀ ರಾತ್ರಿ ಕೆಲಸ ಮಾಡುವುದು ಸಾಧಾರಣ. ಇವರಿಗೆ ಲ್ಯಾಬ್ ರಾಟ್ ಅಥವಾ ಪ್ರಯೋಗಶಾಲೆಯ ಮೂಷಕ (ಪ್ರಮೋ) ಎಂದೇ ಹೆಸರು. ಇವರಿಗೆ ಹಸಿವಾದರೆ ಅದನ್ನು ತಣಿಸಲು ರಾತ್ರಿ ಇಡೀ ಪರಾಠಾ ಇತ್ಯಾದಿ ಮಾರುವ ಗಲ್ಲಿಗಳು ಹತ್ತಿರದಲ್ಲಿದ್ದವು ಎಂದು ಕೇಳಿದ್ದೇನೆ.  ಈ ಪ್ರೇಮಿಗಳು ಬಂದು ನನ್ನ ಪ್ರಸಾದವನ್ನು ಹಾರಿಸಿರಬಹುದೇ ಎಂದು ನನ್ನ ಅನುಮಾನವನ್ನು ನಾನು ಪಕ್ಕಕ್ಕೆ ಇಡಬೇಕಾಯಿತು.

ನನ್ನ ಅನುಮಾನವನ್ನು ಬಗೆಹರಿದ ದಿನವೂ ಬಂತು. ಮಾತಾವೈಷ್ಣವಿಯ ಪ್ರಸಾದವನ್ನು ನನಗೆ ಕೊಡದೆ ತಾನೇ ಭಕ್ಷಿಸಿದ ಮೂಷಕವು ಮುಂದೆ ಒಂದೆರಡು ಸಲ ನನಗೆ ದರುಶನ ಭಾಗ್ಯವನ್ನು ಕೊಟ್ಟಿತು.  

ಹೀಗೆ ಮಾತಾ ವೈಷ್ಣವದೇವಿಯ ಕೃಪೆಯಿಂದ ಪೋಷಿತವಾಗಿದ್ದ ಮೂಷಕವು ಈಗ ಟೀ ಕ್ಲಬ್ಬಿಗೂ ತನ್ನ ರಾಜ್ಯವನ್ನು ವಿಸ್ತರಿಸಿಕೊಂಡಿತ್ತು. ಈ ಸೀಮೋಲ್ಲಂಘನವನ್ನು ಒಪ್ಪಿಕೊಳ್ಳಲು ವಿಶ್ವೇಶ್ವರನ್ ತಯಾರಿರಲಿಲ್ಲ. ಅವರು ಒಂದು ಇಲಿಬೋನನ್ನು ತಂದಿರಿಸಿದರು. ಅದರಲ್ಲಿ ನಾನಾ ಬಗೆಯ ಖಾದ್ಯಗಳನ್ನು ತಂದಿಟ್ಟು ಪ್ರತಿದಿನವೂ ಬೋನನ್ನು ನೋಡುವರು. ಕೊನೆಗೆ ಒಂದು ದಿನ ವಡೆಯ ಚೂರಿಗೆ ಮೂಷಕವು ಬೋನಿಗೆ ಬಿತ್ತೆಂದು ಅವರು ವಿಜಯೋತ್ಸವ ಆಚರಿಸಿದರು. ಟೀ ಕ್ಲಬ್ಬಿನಲ್ಲಿ ಅದೊಂದು ವಿಶೇಷ ಸಂದರ್ಭವೇ ಆಗಿತ್ತು. ಆದರೇನು! ಬೋನಿಗೆ ಬಿದ್ದ ಇಲಿಯನ್ನು ಬಾನ್ ವಾಯೇಜಿಗೆ ಕಳಿಸಿದರೆ ಬೇನೆ ಬ್ಯಾನಾಗಿಬಿಡುವುದೇ? ಮುಂದೆಯೂ ಮೂಷಕಗಳ ಉಪಟಳ ಮುಂದುವರೆಯಿತು.  ವಿವಿಧ ಪ್ರೊಫೆಸರುಗಳು ಈ ಇಲಿಯ ಪ್ರಾಬ್ಲೆಮ್ ನಿವಾರಣೆಗಾಗಿ ಏನೇನು ಹೊಸಬಗೆಯ ತಂತ್ರಜ್ಞಾನಗಳನ್ನು ಸೂಚಿಸಿದರು ಎಂದು ನಾನು ಒಂದು ಕಾಲ್ಪನಿಕ ಪ್ರಬಂಧವನ್ನು ಬರೆದು ನಮ್ಮ ಟೀ ಕ್ಲಬ್ಬಿನ ಅಘೋಷಿತ ಪ್ರೆಸಿಡೆಂಟ್ ಆಗಿದ್ದ ಪ್ರೊ ದತ್ತರಾಯ್ ಅವರಿಗೆ ಸಲ್ಲಿಸಿದೆ. ಅವರು ಅದನ್ನು ಕೂಡಲೇ ಸ್ವೀಕರಿಸಿ ಇತರ ಟೀ ಕ್ಲಬ್ ಸದಸ್ಯರಿಗೆ ಹಂಚುವ ವ್ಯವಸ್ಥೆ ಮಾಡಿದರು!


#ನೆನಪುಗಳು

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)